ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ವಿಶೇಷ: ಕೆಡುಕನ್ನು ಸುಡುವ ಬಣ್ಣದ ಹಬ್ಬ

Last Updated 7 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಹೋಲಿಕಾ-ಕಾಮದಹನ, ಅಥವಾ ಹೋಳಿಹಬ್ಬ ಜಾನಪದವೂ ಶಾಸ್ತ್ರೀಯವೂ ಆಗಿರುವ ಒಂದು ಪರ್ವಾಚರಣೆ.

ತಾನೇ ದೇವರಂತೆ ಪೂಜೆಗೊಳಗಾಗಬೇಕು, ಯಾರೂ ಹರಿಯನ್ನು ಪೂಜಿಸಬಾರದು – ಎನ್ನುವ ಶಾಸನವನ್ನು ತಂದವನು ಅಸುರದೊರೆ ಹಿರಣ್ಯಕಶಿಪು. ಆದರೇನು, ಸ್ವತಃ ಅವನ ಮಗನಾದ ಪ್ರಹ್ಲಾದನೇ ಹರಿಯ ಭಕ್ತನೆಂದು ತಿಳಿದಾಗ ಖತಿಗೊಂಡ ರಾಜ ಪ್ರಹ್ಲಾದನನ್ನು ನಾನಾವಿಧದಲ್ಲಿ ಕೊಲ್ಲಲು ಎಳಸುತ್ತಾನೆ. ಯಾವ ವಿಧಾನದಿಂದಲೂ ಪ್ರಹ್ಲಾದ ಸಾಯದಿರಲಾಗಿ ಕೊನೆಗೆ ತನ್ನ ತಂಗಿಯಾದ ಹೋಲಿಕಾ ಎಂಬ ರಾಕ್ಷಸಿಯನ್ನು ಕರೆದು ಅವಳ ಮಡಿಲಲ್ಲಿ ಪ್ರಹ್ಲಾದನನ್ನು ಕೂರಿಸಿ ಬೆಂಕಿಯಿಕ್ಕುತ್ತಾನೆ. ಬೆಂಕಿಯಿಂದ ಸುಡಲಾಗದ ವಿಶಿಷ್ಟ ವಸ್ತ್ರವನ್ನು ಧರಿಸಿ ಸುರಕ್ಷಿತವಾಗಿರಬೇಕಿದ್ದ ಹೋಲಿಕಾ ಸುಟ್ಟುಹೋಗುತ್ತಾಳೆ, ಮತ್ತು ಉರಿದುಹೋಗಬೇಕಿದ್ದ ಪ್ರಹ್ಲಾದ ತನ್ನ ಹರಿಭಕ್ತಿಯಿಂದಾಗಿ ಬದುಕಿ ಬರುತ್ತಾನೆ. ದುಷ್ಟ ಉದ್ದೇಶಗಳಿರುವ ಹೋಲಿಕಾ ರಕ್ಕಸಿ ಉರಿದುಹೋದ ನೆನಹಿನಲ್ಲಿ ಆಚರಿಸುವ ಹಬ್ಬವಾದ್ದರಿಂದ ಹೋಲಿಕಾ/ಹೋಳಿ ಎಂಬ ಹೆಸರು ನಿಂತಿತು.

ಇನ್ನೊಂದೆಡೆ, ಒಮ್ಮೆ ಲೋಕಕಲ್ಯಾಣಕ್ಕಾಗಿ ಶಿವನ ಮೇಲೆ ಹೂಬಾಣಗಳನ್ನು ಪ್ರಯೋಗಿಸಬೇಕಾದ ಸಂದಿಗ್ಧಕ್ಕೆ ಸಿಲುಕುತ್ತಾನೆ ಮನ್ಮಥ. ಅದರಂತೆ ತಪೋನಿರತನಾಗಿದ್ದ ಶಿವನ ಮೇಲೆ ಮನ್ಮಥನು ಬಾಣವೆಸೆದಾಗ ಶಿವನ ಉರಿಗಣ್ಣಿಗೆ ಸಿಲುಕಿ ಮನ್ಮಥನ ಕಾಯ ಉರಿದುಹೋಗುತ್ತದೆ. ಹಾಗಾಗಿಯೇ ಶಿವನು ಕಾಮದಹನ, ಬಯಕೆಗಳ ಮೇಲೆ ಒಡೆತನ ಸಾಧಿಸಿದವನಾದ್ದರಿಂದ ಈಶ್ವರ. ಈ ಹಿನ್ನೆಲೆಯಲ್ಲಿ ಭಾರತೀಯ ಜನಪದರು ಆಚರಿಸುವ ಕಾಮದಹನದ ಆಚರಣೆಯನ್ನು ಕಾಣಬಹುದು. ಹಲವೆಡೆ ಇದು ಹೋಳಿ ಹಬ್ಬದ ಭಾಗವಾಗಿ ಆಚರಣೆಯಲ್ಲಿದೆ. ಹಾಗಾಗಿ ಹೋಲಿಕಾ–ಕಾಮದಹನ ಎಂದು ಒಟ್ಟಾಗಿ ಹೆಸರಿಸುವುದು ರೂಢಿ. ಹೋಲಿಕಾ ಸಂದರ್ಭದಲ್ಲಿಯೇ ರಾವಣನ ಪ್ರತಿಕೃತಿಯನ್ನು ಸುಡುವ ಆಚರಣೆಯೂ ಕೆಲವು ಪ್ರಾಂತಗಳಲ್ಲಿ ಇದೆ.

ಮಾರಿಜಾತ್ರೆ ಇರುವ ಊರಿನಲ್ಲಿ ಸಾಮಾನ್ಯವಾಗಿ ಊರಿನ ಮನೆಗಳಲ್ಲಿರುವ ಹಳೆಯ ಬಟ್ಟೆ, ಬೇಡದ ವಸ್ತುಗಳು, ಇನ್ನಿತರ ಬಳಸಿ ಬಿಟ್ಟ ದಿನಬಳಕೆಯ ವಸ್ತುಗಳನ್ನು ಒಟ್ಟುಗೂಡಿಸಿ ಊರಹೊರಗಿನ ಒಂದು ಜಾಗದಲ್ಲಿ ಸುಟ್ಟುಬಿಡುವುದು ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಆಚರಣೆಯಲ್ಲಿದೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಮನೆಗಳನ್ನು ಮತ್ತು ಊರನ್ನು ಶುದ್ಧಗೊಳಿಸಿಕೊಳ್ಳುವ ಅನಾದಿ ಸಂಪ್ರದಾಯವೂ ಹೌದು ಇದು.

ಹೀಗೆ ದುಷ್ಟತನ, ಕೊಳೆ, ಬೇಡದ ಸಂಗತಿ, ಕೆಡುಕು ಮತ್ತು ಕುಟಿಲ ವಸ್ತುಗಳನ್ನು ಬದುಕಿನಿಂದ ದೂರಮಾಡುವ ಹಲಬಗೆಯ ಸಂಪ್ರದಾಯಗಳು ನಮ್ಮ ನೆಲದಲ್ಲಿ ರೂಢಿಯಲ್ಲಿವೆ. ಹೋಲಿಕಾಪರ್ವ ಅದರಲ್ಲೊಂದು. ದುಷ್ಟತನದ ನಾಶದ ಬಳಿಕ ಬದುಕನ್ನು ಸಂಭ್ರಮಿಸುವ ಸಂಕೇತವಾಗಿ ಬಣ್ಣಗಳ ಓಕುಳಿಯಾಡುವುದು ಉತ್ತರದ ರಾಜ್ಯಗಳಲ್ಲಿ ಹೆಚ್ಚು ಪ್ರಸಿದ್ಧ. ದಕ್ಷಿಣದಲ್ಲಿಯಾದರೂ ವಿಶೇಷ ಸಂದರ್ಭಗಳಲ್ಲಿ ಬಣ್ಣಗಳೊಡನೆ ಆಡುವುದು ಇದ್ದೇ ಇದೆ. ಹಾಗಾಗಿ ಜೀವಿತದ ವೈವಿಧ್ಯವನ್ನು ಮತ್ತು ಬದುಕಿನ ಬಣ್ಣಗಳನ್ನು ಪ್ರತಿನಿಧಿಸುವ ಭೌತಿಕ ಬಣ್ಣಗಳ ಜೊತೆಗಾಡುವುದು ಭಾರತದಲ್ಲಿ ಪ್ರಾದೇಶಿಕ ಮಿತಿಯನ್ನು ಮೀರಿದ ಆಚರಣೆಯೆನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT