ಭಾನುವಾರ, ಆಗಸ್ಟ್ 14, 2022
26 °C

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–23

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗಡೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಲ್ಲಿ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
-ಬೊಂತಾದೇವಿ

ಒಬ್ಬ ಮನುಷ್ಯ, ಮತ್ತೊಬ್ಬ ಮನುಷ್ಯನನ್ನೇ ಶೂದ್ರನನ್ನಾಸಿ, ಊರ ಹೊರಗಿಟ್ಟು ಶೋಷಣೆ ಮಾಡಿದ್ದು, ನಮ್ಮ ದೇಶದ ಚರಿತ್ರೆಯಲ್ಲಿ ಒಂದು ಸಂಚಿನ ಕರಾಳ ಕೃತ್ಯ. ಸಮಾಜದ ಒಂದು ಜನವರ್ಗದವರನ್ನು ಕೀಳುಕುಲದವರೆಂದು ಮುಟ್ಟದ, ಹಾಗೂ ಅದೇ ಕಾರಣಕ್ಕಾಗಿ ಅವರಿಂದ ಮುಟ್ಟಿಸಿಕೊಳ್ಳದ ಜನವರ್ಗವು, ಈ ನೆಲಕ್ಕೆ ಅಸ್ಪೃಶ್ಯತೆಯ ಮಹಾರೋಗವನ್ನು ಅಂಟಿಸಿತಷ್ಟೇ ಅಲ್ಲ, ಸಮುದಾಯದ ಬಹುತೇಕ ಶ್ರಮಜೀವಿಗಳನ್ನು ನಿರಂತರ ಶೋಷಣೆ ಮಾಡುತ್ತ ಬಂತು. ಈ ದುಷ್ಕೃತ್ಯದ ಕೆಟ್ಟ ಪರಿಣಾಮ ನಮ್ಮ ರಾಷ್ಟ್ರದ ಮೇಲೆ ಈಗಲೂ ಆಗುತ್ತಿರುವುದಕ್ಕೆ ನಿರಂತರ ಉದಾಹರಣೆಗಳಿವೆ. ಇತಿಹಾಸದ ಪುಟಗಳಲ್ಲಿ ದಾಖಲಾಗದಿರುವ ಇಂಥ ಕ್ರೌರ್ಯದ ಮುಖಗಳನ್ನು ತಮ್ಮ ವಚನಗಳಲ್ಲಿ ಪ್ರತಿಫಲಿಸಿ, ಆ ಮೂಲಕ ಪ್ರತಿಭಟಿನೆ ತೋರಿಸಿದ್ದು ಶರಣರ ಧೈರ್ಯದ ಕೆಲಸ. ಬಿಸಿಕೋಪ ಮತ್ತು ತಣ್ಣನೆಯ ವ್ಯಂಗ್ಯ, ಎರಡರ ಮೂಲಕವೂ ವ್ಯಕ್ತವಾದ ಶರಣರ ಈ ಪ್ರತಿಭಟನೆ ವರ್ಣವ್ಯವಸ್ಥೆಯನ್ನು ಹುಟ್ಟುಹಾಕಿದ ದುಷ್ಟರಿಗೆ ಪಾಠ ಹೇಳುವ ಕ್ರಮದಲ್ಲಿರುವುದು ಗಮನಾರ್ಹ. ಬೊಂತಾದೇವಿಯ ಪ್ರಸ್ತುತ ವಚನ ಆ ಬಗೆಯದು. 

ಅತ್ಯಂತ ಸರಳವಾದ, ಆದರೆ ವೈಜ್ಞಾನಿಕ ಸತ್ಯದಿಂದ ಕೂಡಿದ ಪ್ರಶ್ನೆಯೊಂದನ್ನು ವಚನದ ಆರಂಭದಲ್ಲೇ ಹಾಕುವ ಬೊಂತಾದೇವಿಯು, ಉಚ್ಚವರ್ಣೀಯರ ಕಪ್ಪುಗುಣಕ್ಕೆ ಚಾಟಿಯೇಟು ಕೊಡುತ್ತಾಳೆ. ಪಂಚಭೂತಗಳಲ್ಲಿ ಒಂದಾದ ಬಯಲು ಎಲ್ಲಿದ್ದರೂ ಬಯಲೇ ಅಲ್ಲವೆ? ಹಾಗಿರುವಾಗ, ಊರ ಒಳಗೊಂದು ಬಯಲು, ಮತ್ತು ಊರ ಹೊರಗೊಂದು ಬಯಲು ಇರಲು ಸಾಧ್ಯವೇ? ಎಂಬುದೇ ಅವಳ ಪ್ರಶ್ನೆ. ಊರ ಒಳಗಿರುವವರು ಅಲ್ಲಿರುವ ಬಯಲನ್ನು ತಮ್ಮ ಜಾತಿಯ ಹೆಸರಿನಿಂದ, ಮತ್ತು ಊರ ಹೊರಗೆ ಇರುವ ಬಯಲನ್ನು ಅಲ್ಲಿ ಇಡಲಾದ ಜನರ ಹೆಸರಿಂದ ಕರೆಯಲುಂಟೆ? ಎಂಬುದು ಅವಳ ಮತ್ತೊಂದು ಪ್ರಶ್ನೆ. ಸಮಾಜದಲ್ಲಿ ಉಚ್ಚವರ್ಣೀಯರೆಂದು ಮೆರೆಯುತ್ತಿದ್ದ ಜಾತಿಯವರ ಹೆಸರು ಹೇಳಿಯೇ ಈ ಪ್ರಶ್ನೆ ಕೇಳಿದ ಬೊಂತಾದೇವಿಯ ಧೈರ್ಯ ಮೆಚ್ಚುವಂಥದ್ದು. ಯಾರೂ ಉತ್ತರಿಸಲಾಗದ ಈ ಪ್ರಶ್ನೆಗೆ, ಮತ್ತೆ ಅವಳೇ, ‘ಎಲ್ಲಿ ನೋಡಿದರೂ ಬಯಲು ಒಂದೇ ಅಲ್ಲವೆ?’ ಎಂದು ಸರಳ ಮತ್ತು ಸಹಜವಾಗಿ, ಆದರೆ ವ್ಯಂಗ್ಯದ ಧ್ವನಿಯಲ್ಲಿ ಪ್ರಶ್ನಿಸುತ್ತಲೇ ಉತ್ತರಿಸುತ್ತಾಳೆ. 

ಹಾಗಾದರೆ, ಈ ಎರಡು ಬಯಲು ಹೇಗಾದವು? ಈ ಪ್ರಶ್ನೆಗೂ ಬೊಂತಾದೇವಿಯ ಉತ್ತರ ಸಿದ್ಧವೇ ಇದೆ-ಇದು ನೀವೇ ನಿರ್ಮಾಣ ಮಾಡಿದ ಜಾತಿಯ ಗೋಡೆಯಿಂದಾಗಿರುವ ಕೆಟ್ಟ ಪರಿಣಾಮ ಎಂದು. ನಿಮ್ಮ ಸ್ವಾರ್ಥದ ದುಷ್ಟತನದಿಂದ ಹೀಗೆ ಊರ ಹೊರಗೆ ಮತ್ತು ಒಳಗೆಂಬ ಭಿತ್ತಿ ನಿರ್ಮಾಣವಾಗಿದ್ದು, ಆ ಗೋಡೆಯ ಒಳಗೆ ಅಥವಾ ಹೊರಗೆ ಎಲ್ಲಿ ನಿಂತು ಕರೆದರೂ, ನೋಡಿದರೂ, ದೇವರು ಓ ಎನ್ನುತ್ತಾನಲ್ಲವೆ? ಎಂದು ವರ್ಣವ್ಯವಸ್ಥೆಯ ನಿರ್ಮಾತೃಗಳಿಗೆ ವ್ಯಂಗ್ಯದೇಟು ಕೊಡುತ್ತಾಳೆ ಆಕೆ.

ಬಯಲು ಅಥವಾ ಆಕಾಶಕ್ಕೆ ಜಾತಿಯ ಬೇಲಿ ಹಾಕಲು ಸಾಧ್ಯವಿಲ್ಲ. ಮನಸ್ಸುಗಳಿಗೆ ಮತೀಯ ಗೋಡೆ ಹಾಕಿಕೊಂಡ ಸ್ವಾರ್ಥಿಗಳು ಮಾತ್ರ ಆ ಕೆಲಸ ಮಾಡಬಲ್ಲರು. ಅಖಂಡ ಮತ್ತು ಮುಕ್ತವಾದ ಸೃಷ್ಟಿಯ ಬೃಹತ್ ದೇವತ್ವವನ್ನೇ ಬಿಡಾಡಿ ಎಂದು ಅರ್ಥಪೂರ್ಣವಾಗಿ ಕರೆದ ಬೊಂತಾದೇವಿ, ಅದನ್ನೇ ತನ್ನ ಅಂಕಿತ ಮಾಡಿಕೊಂಡವಳು. ಕಾಶ್ಮೀರದ ಮಾಂಡವ್ಯಪುರದ ಅರಸನ ಮಗಳಾದ ನಿಜದೇವಿಯು, ಬಿಡಾಡಿಯೇ ಕೊಟ್ಟ ಕೌದಿ ಹೊತ್ತು ಬೊಂತಾದೇವಿಯಾಗಿ ಕಲ್ಯಾಣಕ್ಕೆ ಬರುವಾಗಲೇ ಬಯಲ ತತ್ವದ ವಿಸ್ತಾರವನ್ನು ಅರಿತವಳು. ಆ ಅರಿವಿನ ಬೆಳಕಿನಲ್ಲಿಯೇ ಅವಳು ಜಾತ್ಯಂಧರಿಗೆ, ‘ಬಯಲಿಗೆ ಜಾತಿಯ ಗೋಡೆ ಕಟ್ಟಬೇಡಿ’ ಎಂದು ಸೂಚಿಸುತ್ತಾಳೆ ಇಲ್ಲಿ. ಶರಣರ ಜಾತಿನಿರಸನ ಹೋರಾಟದ ಸಾಂದ್ರೀಕೃತ ರೂಪದಂತಿದೆ ಅವಳ ಈ ಕ್ರಾಂತಿಕಾರಿ ವಚನ.  
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು