ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದ ನಗರ

ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿಯೂ ಮಹಾಶಿವರಾತ್ರಿ ವೈಭವ; ಕಾಲಭೈರವನಿಗೆ ಮಹಾರುದ್ರಾಭಿಷೇಕ, ಜಪ, ಯಜ್ಞ, ಭಜನೆ
Last Updated 22 ಫೆಬ್ರುವರಿ 2020, 11:20 IST
ಅಕ್ಷರ ಗಾತ್ರ

‌ಕಲಬುರ್ಗಿ: ನಗರದ ಎಲ್ಲ ದೇವಸ್ಥಾನಗಳಲ್ಲಿಯೂ ಶುಕ್ರವಾರ ಮಹಾಶಿವರಾತ್ರಿಯ ಸಡಗರವೋ ಸಡಗರ. ಶಿವನ ದೇವಸ್ಥಾನಗಳಲ್ಲಂತೂ ನಸುಕಿನ 4 ಗಂಟೆಯಿಂದಲೇ ಭಕ್ತರು ನಂಜುಂಡನ ದರ್ಶನಕ್ಕಾಗಿ ಕಾದು ನಿಂತರು. ಬಹುಪಾಲು ಕಡೆ ಸರದಿ ಸಾಮಾನ್ಯವಾಗಿತ್ತು. ದಿನವಿಡೀ ಶಿವನ ದರ್ಶನ ಪಡೆದ ಜನ, ರಾತ್ರಿಯೆಲ್ಲ ಜಾಗರಣೆಯಲ್ಲಿ ತಲ್ಲೀನರಾದರು.

ನಸುಕಿನಲ್ಲೇ ಮನೆಗಳನ್ನು ಸ್ವಚ್ಛಗೊಳಿಸಿ, ರಂಗವಲ್ಲಿ ಹಾಕಿ ಶಿವಪೂಜೆ ಮಾಡಿದ ಗೃಹಿಣಿಯರು, ಕುಟುಂಬ ಸಮೇತರಾಗಿ ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು.‌ ಸರದಿಯಲ್ಲಿ ನಿಂತು ಮಹಾಶಿವನಿಗೆ ಮಹಾರುದ್ರಾಭಿಷೇಕ, ತ್ರಿದಳ ಬಿಲ್ವಾರ್ಚನೆ, ಅರಿಸಿನ– ಕುಂಕುಮ, ನೈವೇದ್ಯ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನಗಳಲ್ಲಿ ಕೂಡ ಗುರುವಾರ ರಾತ್ರಿಯಿಂದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ನಸುಕಿನಲ್ಲಿಶಿವನಾಮ ಜಪದೊಂದಿಗೆ ಅರ್ಚಕರು ಪೂಜಾ ಕೈಂಕರ್ಯ ಆರಂಭಿಸಿದರು. ಗಿರಿಜಾಪ್ರಿನಿಗೆ ಮಹಾರುದ್ರಾಭಿಷೇಕ, ಮಹಾಜಪ, ಮಂತ್ರ ಘೋಷಗಳನ್ನು ನೆರವೇರಿಸಲಾಯಿತು. ಪ್ರತಿ ಪೂಜಾ ಕಾರ್ಯವನ್ನು ಧ್ವನಿವರ್ಧಕದ ಮೂಲಕ ಸುತ್ತಲಿನ ಜನರಿಗೆ ಕೇಳಿಸಲಾಯಿತು. ಇದನ್ನು ಅನುಸರಿಸಿಯೇ ಬಹುಪಾಲು ಮಂದಿ ದೇವಸ್ಥಾನ ಆವರಣದಲ್ಲೇ ಜಪ‍ ಅನುಸರಿಸಿದರು.

ಸೂರ್ಯೋದಯದ ಹೊತ್ತಿಗೆ ಅಪಾರ ಸಂಖ್ಯೆಯ ಭಕ್ತರು ಶಿವ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಬಿಲ್ವಪತ್ರಿಪ್ರಿಯನಾದ ಮಹಾದೇವನಿಗೆ ಎಲ್ಲೆಡೆಯೂ ನೂರೊಂದು, ಸಾವಿದರೊಂದು, ಲಕ್ಷದೊಂದು... ಹೀಗೆ ವೈವಿಧ್ಯಮಯ ರೀತಿಯಲ್ಲಿ ಬಿಲ್ವದಳಗಳನ್ನು ಅರ್ಪಿಸಿದರು.

ರಾಮತೀರ್ಥದಲ್ಲಿ ಜನಜಾತ್ರೆ:

ಇಲ್ಲಿನ ಆಳಂದ ಚೌಕ್‌ದಲ್ಲಿ ರಿಂಗ್‌ ರಸ್ತೆಗೆ ಹೊಂದಿಕೊಂಡ ರಾಮತೀರ್ಥ ಮಂದಿರದಲ್ಲಿ ಇಡೀ ದಿನ ಜನಜಂಗುಳಿ ಇತ್ತು.ನಗರದ ಅತ್ಯಂತ ಪುರಾತನ ದೇವಸ್ಥಾನ ಎಂಬ ಕಾರಣಕ್ಕೆ ಇಲ್ಲಿಗೆ ನಡೆದುಕೊಳ್ಳುವವರ ಸಂಖ್ಯೆ ದೊಡ್ಡದು.ಬಾಬಾ ಅಮರನಾಥ ರಾಮತೀರ್ಥ ಮಹಾಶಿವರಾತ್ರಿ ಮಹೋತ್ಸವ ಸಮಿತಿಯು ಈ ಬಾರಿ 45ನೇ ಮಹಾಶಿವರಾತ್ರಿ ಆಯೋಜಿಸಿದೆ.

‌ಮದುವೆ ಆಗದವರು, ಮಕ್ಕಳಾಗದವರು ಇಲ್ಲಿನ ಶಿವನಿಗೆ ಹರಕೆ ಹೊರುವುದು ರೂಢಿ. ಅದೇ ರೀತಿ ಈ ಬಾರಿ ಕೂಡ ಅಪಾರ ಭಕ್ತರು ಮುಂಗಡ ಪಾವತಿಸಿ ತಮ್ಮ ಹರಕೆಗಳನ್ನು ತೀರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ನೂಗು ನುಗ್ಗಲಿನಲ್ಲೇ ದೇವರ ದರ್ಶನ ಪಡೆದರು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಲ್ಲಿಗೆ ಹೂ, ಚೆಂಡು ಹೂ, ಗುಲಭಿ, ದಾಸವಾಳ, ಸೇವಂತಿ ಹೂಗಳಿಂದ ಶಂಕರನಿಗೆ ಮಾಡಿದ ಅಲಂಕಾರ ಕಣ್ಮನ ಸೆಳೆಯಿತು. ಭಕ್ತರು ಸರದಿಯಲ್ಲಿ ನಿಂತು ಪುಷ್ಪಾಲಂಕೃತ ಶಿವನ ದರ್ಶನ ಪಡೆದು, ಭಕ್ತಿ ಕಾಣಿಕೆ ಸಲ್ಲಿಸಿದರು. ದೇವಸ್ಥಾಣದ ಆವರಣದಲ್ಲಿ ಪ್ರತಿ ವರ್ಷ ಜನಜಾತ್ರೆ ಸೇರುತ್ತದೆ. ಬಾಳೆ ಹಣ್ಣು, ದ್ರಾಕ್ಷಿ, ಖರ್ಜೂರ, ವಿಭೂತಿ, ಮಕ್ಕಳ ಆಟಿಗೆ, ಬಿಂಟೆಕ್ಸ್ ಆಭರಣ, ಬಳೆ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹೀಗೆ ವೈವಿಧ್ಯಮಯ ವ್ಯಾಪಾರ ಕೂಡ ಜೋರಾಗಿ ನಡೆಯಿತು.‌

ಶಿವಲಿಂಗದ ಮುಂದೆ ಸೆಲ್ಫಿ:

ಸೇಡಂ ರಸ್ತೆಯ ಗೀತಾ ನಗರದಲ್ಲಿರುವ ಅಮೃತ ಸರೋವರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿದ25 ಅಡಿ ಎತ್ತರದ ಶಿವಲಿಂಗ ಈ ಬಾರಿ ಆಕರ್ಷಣೆಯ ಕೇಂದ್ರಬಿಂದುವಾಯಿತು. ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಬಂದ ಭಕ್ತರು ಇದರ ಸೊಬಗು ನೋಡಿ ಬೆರಗಾದರು. ಉದ್ಯಾನದಲ್ಲಿ ನಿಂತು ಶಿವಲಿಂಗದೊಂದಿಗೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ.

ಇನ್ನೊಂದಡೆ, ದ್ವಾದಶ ಲಿಂಗಗಳ ದರ್ಶನವೂ ಗಮನ ಸೆಳೆಯಿತು. ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳ ಮಂದಿರದ ಮೂಲ ಸ್ವರೂಪದ ಆಕೃತಿಗಳನ್ನು ನಿರ್ಮಿಸಿ, ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಬಿದ್ದಾಪುರ ಕಾಲೊನಿಯ ಕಾಶಿ ವಿಶ್ವನಾಥ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ,ಖೂಬಾ ಪ್ಲಾಟ್‌ನಲ್ಲಿರುವ ಶಿವಾಲಯ, ಲೋಹಾರ್‌ ಗಲ್ಲಿ, ಗೋದುತಾಯಿ ಕಾಲೊನಿ, ಶಹಾಬಜಾರ್‌, ಕೈಲಾಸ ನಗರ, ಗಂಗಾನಗರ, ರೇವಣಸಿದ್ಧೇಶ್ವರ ಕಾಲೊನಿ ಸೇರಿದಂತೆ ಎಲ್ಲ ಮಂದಿರಗಳಲ್ಲೂ ಇಡೀ ದಿನ ಪೂಜಾ ಕೈಂಕರ್ಯ, ರಾತ್ರಿ ಜಾಗರಣೆ ಸಾಂಗವಾಗಿ ನೆರವೇರಿದವು. ಹಲವೆಡೆ ಶಿವ ಪುರಾಣ ಪಠಣ, ಗಾಯಣ, ಕೀರ್ತನೆ, ಶಿವಭಜನೆ, ಪಂಚಾಮೃತ ಪ್ರಸಾದ ವಿತರಣೆ ಮಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT