ಶುಕ್ರವಾರ, ಅಕ್ಟೋಬರ್ 29, 2021
20 °C

ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ!

ನವೀನ ಗಂಗೋತ್ರಿ Updated:

ಅಕ್ಷರ ಗಾತ್ರ : | |

Prajavani

ಮೂಲತಃ ಜಗತ್ತು ಎನ್ನುವ ಪದದ ಅರ್ಥವೇ ‘ಸಂಚಲಿಸುತ್ತಿರುವಂಥದು’ ಎನ್ನುವುದು. ಜಗತ್ತನ್ನೆಲ್ಲ ವ್ಯಾಪಿಸಿರುವ ಎಲ್ಲ ವಿಧದ ಸಂಚಲನದ ಹಿನ್ನೆಲೆಯಲ್ಲಿರುವುದು ಒಂದೇ ಸಂಗತಿ – ಅದು ಶಕ್ತಿ. ನಿಜವೆಂದರೆ ಜಗತ್ತಿನ ಸಂಚಲನಗಳೆಲ್ಲವೂ ಶಕ್ತಿಯದ್ದೇ ಬೇರೆ ಬೇರೆ ಬಗೆಯ ತೋರಿಕೆಗಳೇ ಆಗಿವೆ. ಜಗತ್ತೂ ಸೇರಿದಂತೆ ಎಲ್ಲ ಸಂಭವಗಳಿಗೂ ಮೂಲವಾದ್ದು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಎನ್ನುವ ಮೂರು ಬಗೆಯ ಶಕ್ತಿಗಳು. ಎಲ್ಲಕ್ಕೂ ಕಾರಣವಾಗಿರುವ ಈ ಮೂರು ಸ್ವರೂಪದ ಶಕ್ತಿಯನ್ನು ಆರಾಧಿಸುವುದು ನಮ್ಮಲ್ಲಿ ಪರಂಪರೆಯಾಗಿ ಬೆಳೆದುಬಂದಿದೆ. ನವರಾತ್ರಿಯ ಒಂಬತ್ತು ದಿನಗಳು ಶಕ್ತಿಯ ಆರಾಧನೆಗೆ ಮೀಸಲು.

ಶರದೃತು ಶುರುವಾಗುತ್ತಿದ್ದಂತೆ ಒದಗುವ ಈ ಮಹಾಪರ್ವದಲ್ಲಿ ಶಕ್ತಿರೂಪಿಣಿಯಾದ ಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯರನ್ನು ವಿಧಿವತ್ತಾಗಿ ಪೂಜಿಸಲಾಗುತ್ತದೆ. ಅದರಲ್ಲಿಯೂ ತಿಳಿವನ್ನೇ ಕೇಂದ್ರವಾಗಿ ಉಳ್ಳ ಭಾರತೀಯ ಸಂಪ್ರದಾಯದಲ್ಲಿ ಶಾರದೆಯೆಂಬ ತಿಳಿವಿನ ದೇವತೆಯ ಆರಾಧನೆಗೆ ಹೆಚ್ಚಿನ ಮಹತ್ತು. ಬಲ, ದ್ರವ್ಯ ಮತ್ತು ಅರಿವು – ಮಾನವಜೀವನದ ಈ ಮೂರು ಬಹುಮುಖ್ಯ ಸಂಗತಿಗಳಿಗೆ ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿಯರು ಸಂವಾದಿನಿಯರಾಗಿ ನಿಲ್ಲುತ್ತಾರೆ. ಒಂಬತ್ತು ದಿನಗಳ ಆರಾಧನಾ ಪದ್ಧತಿಯಲ್ಲಿ ಮೊದಲ ಮೂರು ದಿನಗಳನ್ನು ಆ ಶಕ್ತಿಯನ್ನು ದುರ್ಗೆಯನ್ನಾಗಿಯೂ, ಬಳಿಕದ ಮೂರು ದಿನಗಳನ್ನು ಲಕ್ಷ್ಮೀರೂಪದಲ್ಲಿಯೂ, ಮೂಲನಕ್ಷತ್ರದಿಂದ ಆರಂಭವಾಗುವ ಕೊನೆಯ ಮೂರು ದಿನಗಳನ್ನು ಶಾರದೆಯ ರೂಪದಲ್ಲಿಯೂ ಆರಾಧಿಸಲಾಗುತ್ತದೆ. ಶಕ್ತಿಯ ಈ ಮೂರು ಅಭಿವ್ಯಕ್ತಿಗಳಿಗೆ ತಂತ್ರಮಾರ್ಗದಲ್ಲಿ ಅದರದ್ದೇ ಆದ ಬೀಜಾಕ್ಷರಗಳೂ ಪೂಜಾವಿಧಾನಗಳೂ ಇವೆ.

ಶರತ್ಕಾಲದ ಚಂದ್ರನಿಗೂ ವೈಶಿಷ್ಟ್ಯವಿದೆ. ಬಿಳುಪಿಗೆ ಅನುಪಮವಾದ ಉದಾಹರಣೆ ಚಂದ್ರಮ. ಅದರಲ್ಲಿಯೂ ಶರತ್ಕಾಲದ ಚಂದ್ರನು ದೇವಿಯ ಮುಖಕ್ಕೆ ಉಪಮಾನವೂ ಹೌದು (ಶರಚ್ಚಂದ್ರನಿಭಾನನಾ). ಈ ಶರತ್ಕಾಲದ ಅಶ್ವಯುಜ ಮಾಸದ ಚಂದ್ರನು ಮೂಲನಕ್ಷತ್ರದಲ್ಲಿ ತೋರುವ ದಿನದಂದೇ ಶಾರದಾ ಸ್ಥಾಪನವನ್ನು (ಪೂಜಿಸುವುದಕ್ಕಾಗಿ ಪುಸ್ತಕಗಳನ್ನು ಪ್ರತಿಷ್ಠಾಪಿಸುವುದು) ಮಾಡಿ ಮೂರು ದಿನಗಳ ಕಾಲ ಪೂಜಿಸುವರು. ಬಿಳುಪು ಶಾರದೆಯ ವರ್ಣ. ಆಕೆಗೆ ಸಂಬಂಧಿಸಿದ್ದೆಲ್ಲವೂ ಶುಭ್ರ ಶುಭ್ರ. ಅದಕ್ಕಾಗಿಯೇ ಸಂಸ್ಕೃತದ ಮಹಾಕವಿ ದಂಡಿಯ ಮಾತಿನಲ್ಲಿ ಆಕೆ ‘ಸರ್ವಶುಕ್ಲಾ ಸರಸ್ವತೀ’ (ಎಲ್ಲ ಬೆಳ್ಮೆಯವಳೀಕೆ ಸರಸ್ವತಿ) ಎನ್ನಿಸಿಕೊಳ್ಳುತ್ತಾಳೆ. ಈಕೆ ನುಡಿಯ ಅಧಿದೇವತೆಯಾಗಿರುವುದರಿಂದ ಕನ್ನಡದ ರಸಋಷಿ ಕುವೆಂವು ಈಕೆಯನ್ನು ‘ನುಡಿವೆಣ್’ ಎಂದು ಬಣ್ಣಿಸುತ್ತಾರೆ. ವೈದಿಕ ವಾಙ್ಮಯದಲ್ಲಿ ಸರ್ವದಾ ಸರಸ್ವತೀ ಎಂದು ಗುರುತಿಸಲ್ಪಡುವ ಬುದ್ಧಿಯ ಅಧಿದೇವತೆ ಶುಭ್ರವಾಗಿ ಹರಿಯುವ ಸರಸ್ವತಿಯೆಂಬ ನದಿಯೂ ಹೌದು. ಇದೀಗ ಗುಪ್ತಗಾಮಿನಿಯಾಗಿರುವ ಸರಸ್ವತೀನದಿಯ ನೀರು ತ್ರಿವೇಣೀ ಸಂಗಮದದಲ್ಲಿ ತೋರುವಂತೆ ಕೊಂಚ ಬಿಳುಪಿನ ಬಣ್ಣದ್ದು! ತಿಳಿವಿನ ದೇವತೆ ಎನ್ನುವ ಕನ್ನಡದ ಅವತರಣಿಕೆಯಾದರೂ ತಿಳಿತನ (ಶುಭ್ರತೆ) ಎಂಬ ಗುಣದ ಮೂಲಕ ಶಾರದೆಯ ಶ್ವೇತವರ್ಣವನ್ನೇ ಹೇಳುತ್ತಿದೆಯಷ್ಟೆ. ತಿಳಿವು, ಅರಿವು, ಶುಭ್ರತೆ, ಶುಚಿತೆ – ಇವು ಶಾರದೆಯ ವಿಶೇಷಣಗಳು. ಶಾರದೆಯ ವಾಹನವಾದರೋ ಶುಚಿತೆಯನ್ನೇ ಧರ್ಮವನ್ನಾಗಿಸಿಕೊಂಡಿರುವ ಹಂಸಪಕ್ಷಿ. ಶಾರದೆಯ ಉಪಾಸನೆಯ ಮೂಲಕ ಜ್ಞಾನಾನುಭೂತಿನ ತುತ್ತತುದಿಬಿಂದುವಿಗೆ ಪರಮಹಂಸಪದವೆಂಬ ಹೆಸರು ಸಹ ನಿಂತಿದೆ.  ಭಾರತದಾದ್ಯಂತ ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಗೀತೆಯ ಸಾರವನ್ನು ಅದ್ವೈತ ತತ್ತ್ವದ ಮೂಲಕ ಪಸರಿಸಿದ ಶಂಕರಾಚಾರ್ಯರಾದರೂ ತಮ್ಮ ನಾಲ್ಕು ಪೀಠಗಳ ಪೈಕಿ ಮೊತ್ತಮೊದಲಿಗೆ ಸ್ಥಾಪಿಸಿದ್ದು ದಕ್ಷಿಣದ ಶೃಂಗೇರಿಯಲ್ಲಿ ಶಾರದಾಪೀಠವನ್ನೇ.  

ಕಶ್ಮೀರವು ಶಾರದೆಯ ಮೂಲಸ್ಥಾನ ಎಂಬ ಕುರಿತು ವಿಧವಿಧವಾದ ಪುರಾವೆಗಳು ಒದಗುತ್ತವೆ. ಬಹುತೇಕ ನಮಗೆಲ್ಲರಿಗೆ ಪರಿಚಿತವಾಗಿರುವ ‘ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ!’ ಎಂಬ ಶ್ಲೋಕವೂ ಸೇರಿದಂತೆ ಇನ್ನಿತರ ಸಾಹಿತ್ಯಪುರಾವೆಗಳು, ಕಶ್ಮೀರದಲ್ಲಿರುವ ಶಾರದಾಂಬೆಯ ದೇವಾಲಯ, ಕಾಶ್ಮೀರಪ್ರಾಂತದಲ್ಲಿ ವಿಕಸಿತಗೊಂಡ ಶಾರದಾಲಿಪಿ – ಹೀಗೆ ಜನಮಾನಸದ ನೆನಪುಗಳು ಹಾಗೂ ಭೌಗೋಳಿಕ ಪುರಾವೆಗಳು ಶಾರದೆಯು ಕಾಶ್ಮೀರದವಳು ಎನ್ನುತ್ತವೆ. ಇತಿಹಾಸದುದ್ದಕ್ಕೂ ಬೌದ್ಧಿಕ ಕೊಡುಗೆಗಳನ್ನಿತ್ತ ಹಲವಾರು ಮಹನೀಯರು ಕಾಶ್ಮೀರದಿಂದ ಬಂದರು ಎಂಬುದನ್ನು ಸಹ ಇಲ್ಲಿ ನೆನೆಯಬೇಕು.  ಶಾರದೋಪಾಸನವೆಂದರೆ ಈ ಪರಮೋದಾರವಾದ ಬೌದ್ಧಿಕಪರಂಪರೆಯ ಉಪಾಸನೆಯೂ ಹೌದು, ಅದನ್ನು ಕಾಯ್ದುಕೊಂಡು ಮುಂದುವರಿಸಿಕೊಂಡುಹೋಗಬೇಕಾದ ಸಂಕಲ್ಪದ ಹೊತ್ತೂ ಹೌದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು