ಇಂದಿನ ಜಾಗತಿಕ ವ್ಯವಸ್ಥೆಯನ್ನು ಅವಲೋಕಿಸಿದಾಗ, ಮನುಷ್ಯನಲ್ಲಿ ಮನುಷ್ಯತ್ವವೇ ಮಾಯವಾಗಿರುವಂತೆ ಕಾಣುತ್ತಿದೆ. ಇದು ಹೀಗೆ ಮುಂದುವರಿಯುತ್ತಾ ಸಾಗಿದರೆ, ಜಗತ್ತಿನ ಅಂತ್ಯಕ್ಕೆ ಯಾವ ಅಣುಬಾಂಬ್ನ ಅವಶ್ಯಕತೆಯೂ ಇಲ್ಲ. ಮನುಷ್ಯನಲ್ಲಿನ ಸಂಕುಚಿತ ಮನೋಭಾವ, ಸ್ವಾರ್ಥ, ನಾನು ಮಾತ್ರವೇ ಬದುಕಬೇಕೆಂಬ ದುರಾಸೆ... ಈ ಎಲ್ಲವೂ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೂ ಗಾಂಧೀಜಿ ಅವರ ರಾಮರಾಜ್ಯದ ಕನಸು ಕನಸಾಗಿಯೇ ಉಳಿಯುತ್ತದೆ. ತಾನಷ್ಟೇ ಬದುಕದೆಯೇ ಇತರರಿಗೂ ಬದುಕುವ ರೀತಿಯನ್ನು ತೋರಿಸಿದ ಮಹಾ ಸಂತರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಇಂಥ ಮಹಾನ್ ಸಂತರಲ್ಲಿ ಕೇರಳದ ನಾರಾಯಣಗುರುಗಳೂ ಒಬ್ಬರು.

‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂದು ಇಡೀ ಮನುಕುಲಕ್ಕೇ ಸಾರಿದವರು ಸಂತಶ್ರೇಷ್ಠ ನಾರಾಯಣಗುರುಗಳು. ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಜಾತೀಯ ವಿಷ ಭಾವನೆಗಳನ್ನು ಬಿತ್ತಿ, ‘ನಮ್ಮ ಧರ್ಮ’, ‘ನಮ್ಮ ಸಿದ್ಧಾಂತ’ ಎನ್ನುತ್ತಾ ಮತಭ್ರಾಂತಿಯಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ, ‘ಅವನವನ ಆತ್ಮಸುಖಕ್ಕಾಗಿ ಗೈಯುವ ಕರ್ಮಗಳೆಲ್ಲವೂ ಮತ್ತೊಬ್ಬರ ಹಿತವನ್ನು ಕಾಪಾಡಲಿ’ ಎಂಬ ನಾರಾಯಣಗುರುಗಳ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ. ತಾನು ಮಾಡುವ ಪ್ರತಿಯೊಂದು ಕರ್ಮದಿಂದ ಇತರರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬುದೇ ಗುರುಗಳ ಲಕ್ಷ್ಯ.

ಗುರುಗಳು ಸಮಾಜದ ಉದ್ಧಾರದ ಕಾರ್ಯವನ್ನು ಆರಂಭಿಸಿದ್ದು, ಅರವಿಪುರಂನಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆಯ ಮೂಲಕ. ಮನುಷ್ಯರಾಗಿ ಹುಟ್ಟಿದರೂ ಮನುಷ್ಯರಾಗಿ ಬಾಳುವ ಅವಕಾಶದಿಂದ ವಂಚಿತರಾದ ಶೋಷಿತ ಸಮುದಾಯಗಳ ಏಳಿಗೆಗಾಗಿ ಗುರುಗಳು ಶಿವನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟರು. ಸಾಂಪ್ರದಾಯಿಕ ಪದ್ಧತಿಗಳಿಗೆ ಸವಾಲಾಗಿ, ಸತತ ಮೂರು ಗಂಟೆಗಳವರೆಗೆ ಕಣ್ಣೀರಿನ ಅಭಿಷೇಕದಲ್ಲಿ ಶಿವನ ಪ್ರತಿಷ್ಠಾಪನೆ ಮಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಕ್ಷೇತ್ರಾರಾಧನೆ ಮುಖ್ಯವಾದುದು. ಜಾತೀಯ ಶ್ರೇಣೀಕೃತ ವ್ಯವಸ್ಥೆಯ ವಿರುದ್ಧ ಹೋರಾಡಿದ ಭಾರತದಲ್ಲಿ ಹುಟ್ಟಿದ ಹಲವು ಪಂಥಗಳು ಅಷ್ಟೊಂದು ಪರಿಣಾಮಕಾರಿ ಪ್ರಭಾವ ಬೀರಲಿಲ್ಲ. ಯಾಕೆಂದರೆ, ಭಾರತೀಯರು ಕ್ಷೇತ್ರಾರಾಧನೆಯಲ್ಲಿ ಅಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಇದನ್ನು ಅರಿತ ನಾರಾಯಣಗುರುಗಳು, ಕ್ಷೇತ್ರಾರಾಧನೆಯ ಮೂಲಕವೇ ಜನರಲ್ಲಿ ವಿಶ್ವಾಸ ಮೂಡಿಸಿದರು.

ಧರ್ಮದ ಹೆಸರಿನಲ್ಲಿ ದೇವಾಲಯ ಪ್ರವೇಶವನ್ನು ಯಾರಿಗೆಲ್ಲಾ ನಿರಾಕರಿಸಲಾಗಿದೆಯೋ ಅವರಿಗಾಗಿಯೇ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದಾಗಿ ಗುರುಗಳು ಹೇಳಿದರು. ದೇವರನ್ನು ಪೂಜಿಸುವುದಕ್ಕೆ ಎಲ್ಲರಿಗೂ ಅವಕಾಶವಿದೆ. ಇದಕ್ಕಾಗಿ ಮಧ್ಯವರ್ತಿಗಳ ಸಹಾಯಬೇಕಿಲ್ಲ. ದೇವರನ್ನು ನಾವು ನೇರವಾಗಿಯೇ ಪೂಜಿಸಬಹುದು ಎಂದವರು ಗುರುಗಳು. ಗುರುಗಳು ಇದೇ ರೀತಿ ಹಲವು ದೇವಸ್ಥಾನಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.

‘ಇನ್ನು ದೇವಾಲಯ ಪ್ರತಿಷ್ಠಾಪನೆ ಸಾಕು. ಸರಸ್ವತಿಯ ಆಲಯಗಳನ್ನು ಪ್ರತಿಷ್ಠಾಪನೆ ಮಾಡುವ’ ಎನ್ನುತ್ತಾ 1912ರಲ್ಲಿ ಶಿವಗಿರಿಯಲ್ಲಿ ಶಾರದೆಯನ್ನು ಗುರುಗಳು ಪ್ರತಿಷ್ಠಾಪಿಸಿದರು. ‘ಇನ್ನುಮುಂದೆ ಬರುವುದು ಸ್ಪರ್ಧಾತ್ಮಕ ಯುಗ. ಆದ್ದರಿಂದ ಮುಂದಿನ ಪೀಳಿಗೆಗೆ ಇಂಗ್ಲಿಷ್ ಶಿಕ್ಷಣ ನೀಡಿ’ ಎಂದು ಗುರುಗಳು ಉಪದೇಶಿಸಿದರು. ‘ದೇವಾಲಯದ ಪ್ರಾಂಗಣ ಸರಸ್ವತಿಯ ಮಂದಿರವಾಗಲಿ’ ಎನ್ನುವುದು ನಾರಾಯಣಗುರುಗಳ ಚಿಂತನೆಯಾಗಿತ್ತು.

ನಾರಾಯಣಗುರುಗಳು ಒಮ್ಮೆ ಶ್ರೀಲಂಕಾಕ್ಕೆ ಹೋಗಿದ್ದರು. ‘ನಮ್ಮ ಜನರು ತುಂಬಾ ಬಡತನದಲ್ಲಿ ಇದ್ದಾರೆ’ ಎಂದು ಆ ಸಂದರ್ಭದಲ್ಲಿ ಅಲ್ಲಿನ ಮುಖಂಡರು ಗುರುಗಳಿಗೆ ಹೇಳಿದರು. ಆಗ ಗುರುಗಳು ಒಂದು ಕ್ಷಣ ಯೋಚಿಸಿ, ‘ಇಲ್ಲಿ ರಾತ್ರಿ ಶಾಲೆ ತೆರೆಯಿರಿ’ ಎಂದರು. ಗುರುಗಳ ಮಾತಿಗೆ ಬೆಲೆಕೊಟ್ಟು, ಸುಮಾರು 30ಕ್ಕೂ ಹೆಚ್ಚು ರಾತ್ರಿ ಶಾಲೆಗಳನ್ನು ತೆರೆಯಲಾಯಿತು. ತಮ್ಮ ತಮ್ಮ ಹೆಸರು ಬರೆಯುವುದು, ಸಹಿ ಹಾಕುವಷ್ಟು ಶಿಕ್ಷಣವನ್ನು ಈ ಶಾಲೆಗಳಲ್ಲಿ ನೀಡಲಾಯಿತು. ಬಳಿಕ ಇಲ್ಲಿ ವಿದ್ಯಾಭ್ಯಾಸಪಡೆದ ಸುಮಾರು 2 ಸಾವಿರ ಜನರನ್ನು ಬ್ರಿಟಿಷರು ಕೆಲಸಕ್ಕೆ ಸೇರಿಸಿಕೊಂಡರು. ಇದು ನಾರಾಯಣಗುರುಗಳ ದೂರದರ್ಶಿತ್ವಕ್ಕೆ ಹಿಡಿದ ಕನ್ನಡಿ.

ಆಡಂಬರ, ಗಲಾಟೆಗಳಿಲ್ಲದೆಯೇ ಶೋಷಿತ ಸಮುದಾಯವನ್ನು ಸನ್ಮಾರ್ಗಕ್ಕೆ ತಂದವರು ನಾರಾಯಣಗುರುಗಳು. ವಿದ್ಯೆ ಮತ್ತು ಸಂಘಟನೆಯೇ ಶೋಷಿತ ಸಮುದಾಯಗಳ ವಿಮೋಚನೆಗೆ ತಾರಕ ಎಂಬುದನ್ನು ಗುರುಗಳು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಮೌಢ್ಯವನ್ನು ತಿರಸ್ಕರಿಸಿ ವೈಚಾರಿಕತೆಗೆ ಒತ್ತು ನೀಡಿದವರು ಗುರುಗಳು. ಈ ಮೂಲಕ ಜಗತ್ತಿನ ಯಾವ ಸಂತರೂ ಸಾಧಿಸಲಾಗದ ಸಾಮಾಜಿಕ ಪರಿವರ್ತನೆಯನ್ನು ಮೌನಕ್ರಾಂತಿಯಿಂದ ಮಾಡಿದವರು.

ನಾರಾಯಣಗುರುಗಳು ತಮ್ಮ ಜೀವಿತದ ಉದ್ದಕ್ಕೂ ಎಲ್ಲ ಧರ್ಮಗಳನ್ನೂ ಅತ್ಯಂತ ಗೌರವದಿಂದ ಕಂಡವರು. ಮನುಕುಲದ ಒಳಿತಿಗಾಗಿ ಸದಾ ಯತ್ನಿಸಿದ ಮಹಾಸಂತ ಇವರು. ‘ವಸುಧೈವ ಕುಟುಂಬಕಂ’ ಮಾತಿಗೆ ಅನ್ವರ್ಥವಾಗಿ ಬದುಕಿದವರು ನಾರಾಯಣಗುರುಗಳು. ಈ ಮಹಾನ್ ಸಂತನ ಉಪದೇಶಗಳನ್ನು ಜನರು ಸ್ವೀಕರಿಸಬೇಕು. ಆ ಮೂಲಕ ಲೋಕದಲ್ಲಿ ಶಾಂತಿ, ಸಮಾಧಾನ, ಸಮೃದ್ಧಿಯು ನೆಲೆಗೊಳ್ಳುವಂತಾಗಬೇಕು.

ಲೇಖಕ: ಪೀಠಾಧಿಪತಿ, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.