ಶನಿವಾರ, ಫೆಬ್ರವರಿ 4, 2023
17 °C

ವಾರ ಭವಿಷ್ಯ 16-10-2022ರಿಂದ 22-10-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ )

ಕಲಾವಿದರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ದೊರೆಯುತ್ತವೆ ಹಾಗೂ ಅವರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳು ಸಿಗುತ್ತವೆ. ಉನ್ನತ ವ್ಯಾಸಂಗ ಮಾಡುವವರು ವ್ಯಾಸಂಗದಲ್ಲಿ ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿದ್ದು ಮನಸ್ಸಿಗೆ ಆತಂಕವೆನಿಸುತ್ತದೆ. ಯತ್ನಿಸಿದ ಕೆಲವು ಕಾರ್ಯಗಳಲ್ಲಿ ಉತ್ತಮ ಫಲ ಕಾಣಬಹುದು. ಮಕ್ಕಳಿಂದ ಸ್ವಲ್ಪ ಅವಮಾನವನ್ನು ಎದುರಿಸಬೇಕಾಗಬಹುದು. ಸರ್ಕಾರಿ ಅಧಿಕಾರಿಗಳಿಗೆ ಗೌರವ ದೊರೆಯುತ್ತದೆ. ಸರ್ಕಾರಿ ಗುತ್ತಿಗೆದಾರರಿಗೆ ಅನಿರೀಕ್ಷಿತವಾಗಿ ಕೆಲವು ಗುತ್ತಿಗೆಗಳು ದೊರೆಯುತ್ತವೆ. ಕೊಟ್ಟ ಸಾಲ ವಾಪಸ್ಸು ಬರದಿರುವ ಸಾಧ್ಯತೆಗಳಿವೆ. ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ನಿಮಗೆ ಒಳಿತು.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಸ್ನೇಹಿತರ ಮತ್ತು ಬಂಧುಬಾಂಧವರ ಆರ್ಥಿಕ ಸಹಾಯದಿಂದ ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ಬೇರೆಯವರ ತಳುಕಿನ ಮಾತಿಗೆ ಬೆರಗಾಗಿ ಬಂಡವಾಳವನ್ನು ಹೂಡದಿರಿ. ವೃತ್ತಿಯಲ್ಲಿದ್ದ ಕಿರಿಕಿರಿ ದೂರವಾಗುತ್ತದೆ. ಆರ್ಥಿಕ ಸಂಪನ್ಮೂಲ ಒದಗಿಬರುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸುವ ಮುಂಚೆ ಅದರ ಬಗ್ಗೆ ಸರಿಯಾಗಿ ತಿಳಿಯಿರಿ. ಹಣದ ಒಳಹರಿವು ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ಬಿಚ್ಚುಮನಸ್ಸಿನ ಹೇಳಿಕೆಗಳಿಂದಾಗಿ ಮನೆಯಲ್ಲಿ ಕಸಿವಿಸಿ ಆಗಬಹುದು. ಸತ್ಯದರ್ಶನದಿಂದ ಈ ಕಸಿವಿಸಿಗಳು ದೂರವಾಗುತ್ತವೆ. ನವೀನ ರೀತಿಯ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ. ಪಾರಂಪರಿಕ ವೈದ್ಯರಿಗೆ ಬೇಡಿಕೆ ಬಂದು ಗೌರವವೂ ದೊರೆಯುತ್ತದೆ

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಕುಟುಂಬದವರೊಂದಿಗೆ ಸ್ನೇಹ ಮತ್ತು ಸಹನೆಯಿಂದಾಗಿ ಎದುರಾದ ಬಿಕ್ಕಟ್ಟುಗಳು ಮಂಜಿನಂತೆ ಕರಗುತ್ತವೆ. ದೂರದ ಸಂಬಂಧಿಗಳು ನಿಮ್ಮಿಂದ ಸಹಾಯ ಅರಸಿ ಬರುತ್ತಾರೆ. ಕೆಲಸಕಾರ್ಯಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು. ಸಂಗಾತಿಯ ಸಲಹೆಗಳು ಸಮಯೋಚಿತವಾಗಿ ಉಪಯೋಗಕ್ಕೆ ಬರುತ್ತವೆ. ವ್ಯವಹಾರದಲ್ಲಿ ನಿಮ್ಮ ವಿಚಾರವನ್ನು ಪ್ರತಿಪಾದಿಸುವ ಹವಣಿಕೆಯಲ್ಲಿ ಮನಃಸ್ತಾಪವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ವ್ಯವಹಾರದಲ್ಲಿ ಸಣ್ಣ ಮಾತುಗಳನ್ನು ಕೇಳಬೇಕಾಗುತ್ತದೆ. ಹೊಸ ವ್ಯಾಪಾರಗಳಿಗೆ ನಿಮಗೆ ಅವಕಾಶ ದೊರೆಯುತ್ತದೆ. ಕ್ಷೀರೋತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತಿರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ನಿಮ್ಮನ್ನು ಅರ್ಥಮಾಡಿಕೊಳ್ಳಲು ಆಗದವರಿಂದ ನಿಮಗೆ ಮುಜುಗರ ಆಗಬಹುದು. ತಂದೆಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಮಕ್ಕಳಿಂದ ಆರ್ಥಿಕ ಸಹಾಯ ಒದಗಿಬರುತ್ತದೆ. ಈ ರಾಶಿಯ ಹಿರಿಯರು ಸಲಹೆ ಸೂಚನೆಯನ್ನು ಕೊಡುವಾಗ ಯೋಗ್ಯರಿಗೆ ಕೊಡುವುದು ಉತ್ತಮ. ಇಲ್ಲವಾದಲ್ಲಿ ನಿಮಗೆ ಅವಮಾನವಾಗುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗಿಗಳಿಗೆ ಒಳ್ಳೆಯ ವಾರ. ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ ಒದಗಿ ಅಧ್ಯಯನದಲ್ಲಿ ಯಶಸ್ಸನ್ನು ಕಾಣಬಹುದು. ಗೃಹ ವಿನ್ಯಾಸಕಾರರಿಗೆ ಉತ್ತಮ ಬೇಡಿಕೆ ಬಂದು ಕೈತುಂಬಾ ಕೆಲಸವಿರುತ್ತದೆ. ಬೇರೆಯವರ ವಿವಾದಗಳನ್ನು  ಪರಿಹರಿಸುವಾಗ ಎಚ್ಚರವಾಗಿರಿ.

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಸಮಾಜದ ಒಳಿತಿಗಾಗಿ ಕೆಲವರು ಕೈಗೊಂಡ ಕೆಲಸಗಳನ್ನು ಮಾಡಿಮುಗಿಸುವರು. ಬಂಧುಗಳಲ್ಲಿ ಸ್ನೇಹ ಸಂಬಂಧಗಳು ವೃದ್ಧಿಸುವ ಸಾಧ್ಯತೆಗಳಿವೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರವಹಿಸಿ. ವಿದ್ಯಾರ್ಥಿಗಳಿಗೆ  ಸೂಕ್ತ ಮಾರ್ಗದರ್ಶನ ಖಂಡಿತ ದೊರೆಯುತ್ತದೆ. ಪ್ರಯಾಣ ಕಾಲದಲ್ಲಿ ಕಳ್ಳಕಾಕರ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದು. ಹಿರಿಯರ ಸಕಾಲಿಕ ಮಾರ್ಗದರ್ಶನಗಳು, ಎದುರಾಗಬಹುದಾದ ತೊಂದರೆಗಳಿಂದ ರಕ್ಷಿಸುತ್ತವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಕಲಾವಿದರುಗಳಿಗೆ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಆಸ್ತಿಯನ್ನು ಖರೀದಿ ಮಾಡುವ ಸಂದರ್ಭವಿದೆ. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ಸ್ವಂತ ಆರೋಗ್ಯದ ಕಡೆ ಗಮನವಿರಲಿ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ದೂರ ಪ್ರಯಾಣ ಅಥವಾ ಪ್ರವಾಸಕ್ಕಾಗಿ ನಿರ್ಧಾರ ಮಾಡುವಿರಿ. ವಿದ್ಯಾರ್ಥಿಗಳಿಗೆ ವ್ಯಾಸಂಗದ ಕಡೆ ಹೆಚ್ಚು ಗಮನ  ಹರಿಸಬೇಕಾದ ಅಗತ್ಯವಿರುತ್ತದೆ. ಪಾಲುದಾರರಿಂದ ಸ್ವಲ್ಪ ಕಷ್ಟ ಆಗುವ ಸಂದರ್ಭವಿರುವುದರಿಂದ ಸ್ವತಂತ್ರ ವ್ಯವಹಾರ ಒಳ್ಳೆಯದು. ಕುಟುಂಬದವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ನಿಂತು ಹೋಗಿದ್ದ ಕೆಲಸಗಳು ಈಗ ಆರಂಭವಾಗಬಹುದು. ನಿಮ್ಮ ಹೊಸ ವ್ಯವಹಾರಗಳ ಬಗ್ಗೆ ತಜ್ಞರ ಸಲಹೆ ಪಡೆದು ಅದರಂತೆ ನಡೆಯುವುದು ಉತ್ತಮ. ಗಳಿಸಿದ ಕೀರ್ತಿ ಸ್ಥಾನಮಾನಗಳನ್ನು ಜತನವಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮಕ್ಕಳ ಅಭಿವೃದ್ಧಿಗೆ ಬೇಕಾದ ಹಣಕಾಸು ಒದಗಿಬರುತ್ತದೆ. ಆರ್ಥಿಕ ಸಂಕಷ್ಟ ಎದುರಾದರೂ ಕಾಣದ ಕೈಗಳು ಅದನ್ನು ನಿವಾರಿಸಿ ಉಳಿಸುತ್ತವೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಧನಾದಾಯ ಉತ್ತಮವಾಗಿರುತ್ತದೆ. ಆದರೂ ಖರ್ಚು ಹೆಚ್ಚಿಗೆ ಬರುವುದರಿಂದ ಅದನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯವಿರುತ್ತದೆ. ಸಂತರು, ಗುರುಗಳಿಗೆ ಮನಸ್ಸಿಗೆ ನೆಮ್ಮದಿ ನೀಡುವ ಹೊಸ  ಮಾರ್ಗವೊಂದು ಗೋಚರಿಸುತ್ತದೆ. ದಿನಸಿ ವ್ಯಾಪಾರಿಗಳಿಗೆ ಲಾಭ ಹೆಚ್ಚಾಗುತ್ತದೆ. ಭೂಮಿ ಹಾಗೂ ಸ್ಥಿರಾಸ್ತಿ ವ್ಯಾಪಾರ ಮಾಡುವ ಮಧ್ಯವರ್ತಿಗಳಿಗೆ ಹೆಚ್ಚಿನ ಕಮಿಷನ್ ದೊರೆಯುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಸಾಕಷ್ಟು ವ್ಯಾಪಾರವಿರುತ್ತದೆ. ಕೆಲವೊಂದು ಜಟಿಲ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ತಾಯಿಯೊಂದಿಗೆ ನಿಮ್ಮ ಸಂಬಂಧ ಸ್ವಲ್ಪ ವ್ಯತ್ಯಾಸವಾಗಬಹುದು. ಸಂಗೀತಗಾರರಿಗೆ ಉತ್ತಮ ವೇದಿಕೆ ದೊರೆಯುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ ಜೇಷ್ಠ)  

ವಾಸ್ತು ವಿನ್ಯಾಸ ಮುಂತಾದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವವರಿಗೆ ವಿಪುಲವಾದ ಅವಕಾಶಗಳು ದೊರೆತು ಉತ್ತಮ ಆದಾಯದ ದಿನಗಳಾಗಿವೆ. ಸ್ನೇಹದ ವಿಚಾರದಲ್ಲಿ ಎಡವುವ ಸಾಧ್ಯತೆ ಇದೆ. ಹಾಗಾಗಿ ಅಪರಿಚಿತರಲ್ಲಿ ಸ್ನೇಹ ಮಾಡುವ ಮೊದಲು ಎಚ್ಚರ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಹೊಸ ವಾಹನ ಖರೀದಿ ಮಾಡುವ ಯೋಗವಿದೆ. ಗಣ್ಯರ ಭೇಟಿಯಿಂದಾಗಿ ನಿಮ್ಮ ಹೊಸ ವ್ಯವಹಾರಕ್ಕೆ ಉತ್ತಮ ತಿರುವು ಬರುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಪಾಲುದಾರಿಕೆಗಾಗಿ ಬಂಧುಗಳಿಂದ ಒತ್ತಡ ಬರಬಹುದು, ಆದರೆ ಸೇರಿಸಿಕೊಳ್ಳುವುದು ಅಷ್ಟು ಒಳಿತಲ್ಲ. ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಕಾಡಬಹುದು. ನಿಮ್ಮ ವೈರಿಗಳನ್ನು ಹುಡುಕಿ ಅವರದೇ ತಂತ್ರಗಳಿಂದ ಮಣಿಸುವಿರಿ. ಸಂಗಾತಿಯ ಕಡೆಗೆ ಹೆಚ್ಚಿನ ಗಮನ ಅಗತ್ಯ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಅನೇಕ ಯೋಜನೆಗಳನ್ನು ಒಮ್ಮೆಗೆ ಆರಂಭಿಸಬೇಡಿರಿ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಕೆಲವೊಂದು ಕೆಲಸಗಳಲ್ಲಿ ನಿಮ್ಮ ನಡೆಯಿಂದ ನಿಧಾನವಾಗಬಹುದು. ದೃಢನಿರ್ಧಾರದಿಂದ ವ್ಯವಹರಿಸಿದಾಗ ಒಳಿತಾಗುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಸಮಾಜದಿಂದ ಗೌರವ ಮತ್ತು ಸಹಾಯ ದೊರಕುತ್ತದೆ. ಕೆಲವರಿಗೆ ವಸ್ತ್ರಾಭರಣಗಳನ್ನು ಖರೀದಿ ಮಾಡುವ ಯೋಗವಿದೆ. ಸಾಹಸಿ ಪ್ರವೃತ್ತಿಯನ್ನು ಉದ್ಯೋಗ ಮಾಡುವವರಿಗೆ ಆದಾಯದ ಜೊತೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಬಹುದು.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)  

ರೈತಾಪಿ ವರ್ಗದವರಿಗೆ ಸೂಕ್ತ ಪರಿಕರಗಳು ದೊರೆತು ಸಂತಸ ಮೂಡುತ್ತದೆ. ಸಿದ್ಧಪಡಿಸಿದ ವಸ್ತ್ರಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಅಭಿವೃದ್ಧಿ ಇದೆ. ಸ್ಥಿತಪ್ರಜ್ಞರಾಗಿ ಕೆಲಸ ಮಾಡುವುದರಿಂದ ಮೇಲಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಆಳವಾಗಿ ಆಲೋಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಒಡಹುಟ್ಟಿದವರಿಂದ ನಿಮ್ಮ ವ್ಯವಹಾರಗಳಿಗೆ ಸಹಾಯವನ್ನು ನಿರೀಕ್ಷಿಸಬಹುದು. ಶೃಂಗಾರ ವಸ್ತುಗಳನ್ನು ಮಾರಾಟ  ಮಾಡುವವರ ವ್ಯವಹಾರ ವಿಸ್ತರಣೆಯಾಗಿ ಆದಾಯವೂ ಹೆಚ್ಚುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಯುವಕರು ಯೋಚಿಸಿ ಕಾರ್ಯಪ್ರವೃತ್ತರಾಗುವುದು ಒಳಿತು. ದುಡುಕಿನ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಅತ್ಯಂತ ಶುಭವಾರ. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಅತ್ಯಂತ ಲಾಭದಾಯಕ ವಾರವಾಗಿರುತ್ತದೆ. ಜನಪ್ರತಿನಿಧಿಗಳು ಅಥವಾ ಸಮಾಜದ ಗೌರವಾನ್ವಿತರು ತಮ್ಮ ಮಾತಿನಿಂದ ಸಾರ್ವಜನಿಕ ರಂಗದಲ್ಲಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವವರಿಗೆ ಸಾಕಷ್ಟು ಜನಸಹಾಯ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹಿರಿಯರಿಗೆ ಸಭೆ ಸಮಾರಂಭಗಳಲ್ಲಿ ಗೌರವ ಮತ್ತು ಸನ್ಮಾನ ದೊರೆಯುವ ಸಾಧ್ಯತೆ ಇದೆ. ಕೃಷಿಕರ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಆತ್ಮಗೌರವಕ್ಕೆ ಧಕ್ಕೆ ಬರದಂತೆ ಯೋಚಿಸಿ ಸಹವಾಸ ಮಾಡುವುದು ಒಳ್ಳೆಯದು. ಹಣದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳಿತು. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಬಂಧವಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಮುಜುಗರಕ್ಕೆ ಒಳಗಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಗಾತಿಯೊಡನೆ ಮನಬಿಚ್ಚಿ ಮಾತನಾಡುವುದು ಬಹಳ ಒಳ್ಳೆಯದು. ಬುದ್ಧಿವಂತಿಕೆಯಿಂದ ಜನರನ್ನು ಬಳಸಿಕೊಂಡು ಕೆಲಸ ಸಾಧಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ನಿಮಗೆ ಲಾಭವಿರುತ್ತದೆ. ಕೃಷಿಕರಿಗೆ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಹರಿದು ಬರುತ್ತವೆ. ಹರಳುಗಳನ್ನು ವ್ಯಾಪಾರ ಮಾಡುವವರಿಗೆ ವ್ಯಾಪಾರ ವೃದ್ಧಿಸಿ ಲಾಭ ಹೆಚ್ಚುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.