ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನವಮಿ | ಶ್ರೀರಾಮ; ಧರ್ಮದ ಮೂರ್ತರೂಪ

Last Updated 10 ಏಪ್ರಿಲ್ 2022, 1:12 IST
ಅಕ್ಷರ ಗಾತ್ರ

ರಾಮಾಯಣದ ಉದ್ದಕ್ಕೂ ಶ್ರೀರಾಮನ ಹಲವು ಗುಣಗಳ ವರ್ಣನೆಯಿದೆಯಷ್ಟೆ. ಅವುಗಳಲ್ಲಿ ಈ ಶ್ಲೋಕವೂ ಒಂದು; ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ; ರಾಷ್ಟ್ರವೇ ರಾಮ, ರಾಮನೇ ರಾ‌ಷ್ಟ್ರ – ಎಂಬ ತತ್ತ್ವವನ್ನು ಈ ಮಾತಿನಲ್ಲಿ ನೋಡಬಹುದು:

ನ ಹಿ ತದ್ಭವಿತಾ ರಾಷ್ಟ್ರಂ ಯತ್ರ ರಾಮೋ ನ ಭೂಪತಿಃ|

ತದ್ವನಂ ಭವಿತಾ ರಾಷ್ಟ್ರಂ ಯತ್ರ ರಾಮೋ ನಿವತ್ಸ್ಯತಿ||

‘ರಾಮನು ಯಾವ ರಾಷ್ಟ್ರದಲ್ಲಿ ರಾಜನಾಗಿಲ್ಲವೋ ಅದು ರಾಷ್ಟ್ರವೇ ಅಲ್ಲ; ರಾಮನಿರುವ ಕಾಡು ಕೂಡ ರಾಷ್ಟ್ರವೇ ಆಗುವುದು.’

ರಾಷ್ಟ್ರ ಎನ್ನುವುದು ವಿಶಾಲವಾದ ಒಂದು ವ್ಯವಸ್ಥೆ; ಆ ವ್ಯವಸ್ಥೆಯೆಲ್ಲವೂ ರಾಮನೇ ಹೌದು ಎಂಬ ಸಮೀಕರಣವನ್ನು ಈ ಮಾತಿನಲ್ಲಿ ನೋಡಬಹುದು. ಧರ್ಮ, ನೀತಿ, ನಿಯಮ, ಸುಖ, ಸಂತೋಷ, ಕಾನೂನು, ಕರ್ತವ್ಯ, ಕರುಣೆ, ದಂಡನೆ, ಸಂಪತ್ತು – ಹೀಗೆ ಹತ್ತು ಹಲವು ವಿವರಗಳ ಸಾಂಗತ್ಯದಿಂದ ರಾಷ್ಟ್ರವೊಂದು ನೆಲೆ ನಿಲ್ಲುತ್ತದೆ. ರಾಮನೇ ರಾಷ್ಟ್ರ– ಎಂದರೆ ಈ ಎಲ್ಲ ಗುಣಗಳ ಧಣಿ, ಗಣಿ ಅವನು ಎಂದಾಯಿತು.

ರಾಮಾಯಣದ ಆರಂಭ ಆಗುವುದೇ ಸಗುಣವಂತನ ಹುಡುಕಾಟದಿಂದ. ನಮ್ಮ ಕಾಲವೂ ಸೇರಿದಂತೆ ಎಲ್ಲ ಕಾಲದಲ್ಲೂ ತೋರಿಕೊಳ್ಳಬಹುದಾದ ಪ್ರಶ್ನೆ: ’ಗುಣವಂತನಾದ ಮಹಾಪುರುಷ ಯಾರು?’ ರಾಮಾಯಣದ ಆರಂಭವೇ ಈ ಪ್ರಶ್ನೆ. ಈ ಗುಣಗಳು ಯಾವುವು ಎಂದು ಉದ್ದವಾದ ಪಟ್ಟಿಯೂ ಅಲ್ಲಿದೆ. ಗುಣವಂತನಾದರಷ್ಟೆ ಸಾಲದು, ಅವನು ವೀರನೂ ಆಗಿರಬೇಕು; ಜೊತೆಗೆ ಧರ್ಮಜ್ಞನೂ ಕೃತಜ್ಞನೂ ಸತ್ಯವಾದಿಯೂ ದೃಢಸಂಕಲ್ಪನೂ ಸದಾಚಾರನಿಷ್ಠನೂ ಎಲ್ಲರ ಜೀವಿಗಳ ಹಿತವನ್ನು ಬಯಸುವವನೂ ವಿದ್ವಾಂಸನೂ ಕಾರ್ಯದಕ್ಷನೂ ನೋಡುವ ಜನರಿಗೆ ಆನಂದವನ್ನು ಉಂಟುಮಾಡುವವನೂ ಧೈರ್ಯಶಾಲಿಯೂ ಕೋಪವನ್ನು ಗೆದ್ದವನೂ ಕಾಂತಿವಂತನೂ ಆಸೆಯೆಯಿಲ್ಲದವನೂ ಯುದ್ಧಕ್ಕೆ ನಿಂತರೆ ದೇವತೆಗಳಿಗೂ ಭಯ ಹುಟ್ಟಿಸುವವನೂ ಆಗಿರಬೇಕು. ಈ ಎಲ್ಲ ಗುಣಗಳನ್ನು ಹೊಂದಿದವನು ನಿಜವಾದ ಗುಣವಂತ. ರಾಮಾಯಣ ಹುಟ್ಟಿದ್ದೇ ಇಂಥ ಗುಣವಂತನ ಹುಡುಕಾಟದಲ್ಲಿ. ಈ ಪ್ರಶ್ನೆಗೆ ಸಿಕ್ಕ ಉತ್ತರ: ಶ್ರೀರಾಮ.

ಇಷ್ಟು ಗುಣಗಳು ಮಾತ್ರವಲ್ಲ, ರಾಮನಲ್ಲಿ ಇನ್ನೂ ಹಲವು ಗುಣಗಳು ಮನೆಮಾಡಿದ್ದವು. ಅವನು ಯಾವಾಗಲೂ ಶಾಂತವಾಗಿರುತ್ತಿದ್ದ; ಜನರೊಡನೆ ಮೃದುವಾಗಿ ಮಾತನಾಡತಕ್ಕವನು; ಯಾರಾದರೂ ಅವನಿಗೆ ಚಿಕ್ಕ ಉಪಕಾರವನ್ನು ಮಾಡಿದರೂ ಅವನು ಅದರಿಂದ ಸಂತೋಷ ಪಡುತ್ತಿದ್ದ, ನೂರಾರು ಅಪಕಾರಗಳನ್ನು ಮಾಡಿದರೂ ಅವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ; ಜನರನ್ನು ಕಂಡಾಗ ಅವನೇ ಮೊದಲು ಮಾತನಾಡಿಸುತ್ತಿದ್ದ; ನಾನು ಶೂರ ಎಂಬ ಜಂಭ ಅವನಲ್ಲಿರಲಿಲ್ಲ; ಸುಳ್ಳು ಎಂಬುದು ಅವನ ಹತ್ತಿರವೂ ಸುಳಿಯುತ್ತಿರಲಿಲ್ಲ; ಶಾಸ್ತ್ರಗಳಲ್ಲಿ ನಿಷ್ಣಾತ; ದೊಡ್ಡವರೆಂದರೆ ಅವನಿಗೆ ಗೌರವ; ಪ್ರಜೆಗಳಿಗೆ ಅವನೆಂದರೆ ಪ್ರೀತಿ, ಅವನಿಗೆ ಪ್ರಜೆಗಳೆಂದರೆ ಪ್ರೀತಿ; ದೀನರಲ್ಲಿ ಅವನಿಗೆ ಅಪಾರ ದಯೆ; ಅವನು ಸದಾ ಆರೋಗ್ಯವಂತ; ಮಾತಿನಲ್ಲಿ ಚತರನೂ ಹೌದು; ವಿದ್ಯೆಯನ್ನು ಚೆನ್ನಾಗಿ ಸಂಪಾದಿಸಿದ್ದ; ಅವನ ಸ್ಮರಣಶಕ್ತಿಯೂ ಅದ್ಭುತವಾಗಿತ್ತು; ತನ್ನ ಸುಖವನ್ನಾಗಲೀ ದುಃಖವನ್ನಾಗಲೀ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ; ವಿನಯಶಾಲಿ; ಸಜ್ಜನರಿಗೆ ಆಶ್ರಯದಾತ; ರಾಜವ್ಯವಹಾರದ ಚರ್ಚೆಗಳನ್ನು ಗುಟ್ಟಾಗಿ ಕಾಪಾಡುತ್ತಿದ್ದ; ಸಂಪತ್ತನ್ನು ಯಾವಾಗ ಗಳಿಸಬೇಕು ಮತ್ತು ಯಾವಾಗ ದಾನ ಮಾಡಬೇಕು ಎಂದು ಅರಿತಿದ್ದವನು; ಅವನಿಗೆ ಕಲೆಗಳಲ್ಲಿ ಆಸಕ್ತಿಯೂ ಪ್ರಾವೀಣ್ಯವೂ ಇದ್ದಿತು; ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಅವನಿಗೆ ಆಲಸ್ಯ ಎಂಬುದೇ ಇರಲಿಲ್ಲ; ಪುರುಷಾರ್ಥಗಳಿಗೆ ವಿರೋಧ ಬರದಂತೆ ಅವನು ಸುಖವನ್ನು ಅನುಭವಿಸುತ್ತಿದ್ದ; ಅವನು ಯಾರನ್ನೂ ಅವಮಾನಪಡಿಸುತ್ತಿರಲಿಲ್ಲ; ಅಹಂಕಾರಿಯಲ್ಲ – ಇಂಥ ಇನ್ನೂ ಹಲವು ಗುಣಗಳನ್ನು ಮೈಗೂಡಿಸಿಕೊಂಡಿದ್ದವನು ರಾಮ.

ಅವನು ತನ್ನ ಬಂಧು–ಮಿತ್ರರೊಂದಿಗೆ ಹೊಂದಿದ್ದ ನಂಟನ್ನು ತಿಳಿಸುವ ವಿಶೇಷಣಗಳನ್ನೂ ವಾಲ್ಮೀಕಿಗಳು ರಾಮನಿಗೆ ಯಥೇಷ್ಟವಾಗಿ ಬಳಸಿದ್ದಾರೆ. ಶ್ರೀರಾಮನು ಕೌಸಲ್ಯಾನಂದವರ್ಧನ; ಎಂದರೆ ತಾಯಿಯಾದ ಕೌಸಲ್ಯೆಯ ಆನಂದವನ್ನು ಹೆಚ್ಚುಮಾಡುವವನು. ಅವನು ‘ಸೀತಾಪತಿ’; ದಶರಥನ ಮಗ; ಲಕ್ಷ್ಮಣ, ಭರತ, ಶತ್ರುಘ್ನರ ಅಣ್ಣ; ಗುಹನ ಮಿತ್ರ; ಸುಗ್ರೀವನ ರಕ್ಷಕ; ಹನುಮಂತನ ಸ್ವಾಮಿ; ವಿಶ್ವಾಮಿತ್ರರ ಶಿಷ್ಯ; ವಿಭೀಷಣನ ಆಶ್ರಯದಾತ; ಶಬರಿಯ ಮೋಕ್ಷಕಾರಕ; ಅಹಲ್ಯೆಯ ಪಾಪನಿವಾರಕ – ಹೀಗೆ ಅವನ ಸಂಪರ್ಕಕ್ಕೆ ಬಂದವರೆಲ್ಲರಿಗೂ ತನ್ನ ವ್ಯಕ್ತಿತ್ವದ ಬೆಳಕನ್ನು ಕಾಣಿಸಿದ ಪುರುಷೋತ್ತಮ ಶ್ರೀರಾಮ. ಈ ಎಲ್ಲ ಗುಣಗಳಿಗೂ ಮೂಲ ಯಾವುದು ಎಂಬುದನ್ನು ವಾಲ್ಮೀಕಿಗಳೇ ಸೂಚಿಸುತ್ತಾರೆ: ‘ಶ್ರೀರಾಮ ಎಂದರೆ ಧರ್ಮದ ಮೂರ್ತರೂಪ.’

ಹೀಗಾಗಿ ‘ರಾಮ’ ಎಂದರೆ ಧರ್ಮ. ರಾಮನಿದ್ದ ಕಡೆ ಧರ್ಮ ಗಟ್ಟಿಯಾಗಿ ನೆಲೆಯೂರಿದೆ ಎಂದೇ ಹೌದು. ಎಲ್ಲಿ ಧರ್ಮ ನಾಲ್ಕು ಕಾಲಿನಿಂದ ನಿಂತಿರುತ್ತದೆಯೋ ಅದೇ ದಿಟವಾದ ರಾಷ್ಟ್ರ ಎಂಬುದನ್ನು ರಾಮಾಯಣವು ಶ್ರೀರಾಮನ ವ್ಯಕ್ತಿತ್ವದ ಮೂಲಕ ಸಾರಿ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT