ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನೀಚನಿಗೆ ನೀಚನೇ ಮಿತ್ರ!

Last Updated 8 ಮಾರ್ಚ್ 2021, 2:28 IST
ಅಕ್ಷರ ಗಾತ್ರ

ವ್ಯಾಘ್ರಃ ತುಷ್ಯತಿ ಕಾನನೇ ಸುಗಹನಾಂ ಸಿಂಹೋ ಗುಹಾಂ ಸೇವತೇ

ಹಂಸೋsಹ್ನಾಯ ಚ ಪದ್ಮಿನೀಂ ಕುಸಮಿತಾಂ ಗೃಧ್ರಃ ಶ್ಮಶಾನಸ್ಥಲೀಮ್‌ ।

ಸಾಧುಃ ಸತ್ಕೃತಿಸಾಧುಮೇವ ಭಜತೇ ನೀಚೋಪಿ ನೀಚಂ ಜನಂ

ಯಾ ಯಸ್ಯ ಪ್ರಕೃತಿಃ ಸ್ವಭಾವಜನಿತಾ ಕೇನಾಪಿ ನ ತ್ಯಜ್ಯತೇ ।।

ಇದರ ತಾತ್ಪರ್ಯ ಹೀಗೆ:

‘ಹುಲಿಗೆ ಅಡವಿಯಲ್ಲಿ ಸಂತಸ; ಸಿಂಹ ಗಹನವಾದ ಗುಹೆಯನ್ನೇ ಆಶ್ರಯಿಸುತ್ತದೆ; ಅರಳಿದ ತಾವರೆಗಳಿರುವ ಕೊಳದಲ್ಲಿ ಹಂಸಕ್ಕೆ ಆಸೆ; ಹದ್ದಿಗೆ ಶ್ಮಶಾನವೇ ಇಷ್ಟ; ಸಾಧುವಾದವನು ತನ್ನಂತೆಯೇ ಒಳ್ಳೆಯ ಕೆಲಸಮಾಡುವ ಸಜ್ಜನನನ್ನೇ ಅದರಿಸುತ್ತಾನೆ; ನೀಚನಿಗೆ ನೀಚನೇ ಜೊತೆಯಾಗುತ್ತಾನೆ; ಯಾರಿಗೆ ಯಾವ ಸ್ವಭಾವವೋ ಅವರು ಅದನ್ನು ಎಂದೂ ಬಿಡಲಾರರು.’

ನಮ್ಮ ಆಸಕ್ತಿ, ಅಭಿರುಚಿ, ಪರಿಸರಗಳಿಗೆ ಹೊಂದುವಂಥವರ ಸಾಮೀಪ್ಯವನ್ನು ಬಯಸುವುದು ಸಹಜವಷ್ಟೆ. ನಮ್ಮ ಸ್ನೇಹಿತರ ಸ್ವಭಾವದಿಂದ ನಮ್ಮ ಗುಣವನ್ನೂ ಹೇಳಬಹುದು ಎಂಬುದನ್ನು ಧ್ವನಿಸುತ್ತಿದೆ, ಸುಭಾಷಿತ. ಇಂಥ ಆಯ್ಕೆಗಳ ಹಿಂದಿರುವ ನಮ್ಮ ಮುಖ್ಯವಾದ ಮನೋಧರ್ಮವಾದರೂ ಏನು? ನಾವು ಸಂತೋಷವಾಗಿರಬೇಕು, ಮುಕ್ತವಾಗಿರಬೇಕು ಎಂಬ ಆಸೆಯೇ ಅಲ್ಲವೆ? ಇಂಥ ಹಲವು ಸಾಂಗತ್ಯಗಳನ್ನು ಸುಭಾಷಿತ ಇಲ್ಲಿ ಗುರುತಿಸಿದೆ.

‘ಹುಲಿಗೆ ಅಡವಿಯಲ್ಲಿ ಸಂತಸ; ಸಿಂಹ ಗಹನವಾದ ಗುಹೆಯನ್ನೇ ಆಶ್ರಯಿಸುತ್ತದೆ; ಅರಳಿದ ತಾವರೆಗಳಿರುವ ಕೊಳದಲ್ಲಿ ಹಂಸಕ್ಕೆ ಆಸೆ; ಹದ್ದಿಗೆ ಶ್ಮಶಾನವೇ ಇಷ್ಟ; ಸಾಧುವಾದವನು ತನ್ನಂತೆಯೇ ಒಳ್ಳೆಯ ಕೆಲಸಮಾಡುವ ಸಜ್ಜನನನ್ನೇ ಅದರಿಸುತ್ತಾನೆ; ನೀಚನಿಗೆ ನೀಚನೇ ಜೊತೆಯಾಗುತ್ತಾನೆ; ಎಂದರೆ, ಯಾರಿಗೆ ಯಾವ ಸ್ವಭಾವವೋ ಅವರು ಅದನ್ನು ಎಂದೂ ಬಿಡಲಾರರು.‘

ನಾವು ಶಾಲೆಯಲ್ಲಿ ಓದಬೇಕಾದರೆ ನಾವು ಎಂಥವರನ್ನು ಸ್ನೇಹ ಮಾಡಿಕೊಳ್ಳುತ್ತೇವೆ. ನಮಗೆ ಕ್ರಿಕೆಟ್‌ ಇಷ್ಟವಿದ್ದರೆ ನಾವು ಕ್ರಿಕೆಟ್‌ಪ್ರಿಯರ ಸ್ನೇಹವನ್ನೇ ಬಯಸುತ್ತೇವೆ. ಇಂಥ ಮನೋಧರ್ಮ ನಮ್ಮ ಕಾಲೇಜು ದಿನಗಳಲ್ಲೂ ಮುಂದುವರೆಯುತ್ತದೆ; ನಾವು ಕೆಲಸಮಾಡುವ ಸ್ಥಳದಲ್ಲೂ ಮುಂದುವರೆಯುತ್ತದೆ. ಸಿನಿಮಾ ಇಷ್ಟಪಡುವವರದ್ದೇ ಒಂದು ಗುಂಪು; ಓದುವ ಅಭ್ಯಾಸ ಇರುವವರದ್ದೇ ಒಂದು ಗುಂಪು. ನಾವು ನಮ್ಮ ಹಿತ, ಅನುಕೂಲ, ಇಷ್ಟಗಳ ಪೂರೈಕೆಯ ಬಗ್ಗೆಯೇ ತುಂಬ ಗಮನಕೊಡುವಂಥದ್ದು ನಮ್ಮ ಸಹಜ ಸ್ವಭಾವ. ಹೀಗಾಗಿ ಇಂಥವು ಎಲ್ಲಿ ಸಿಗುತ್ತದೆಯೋ ಅಲ್ಲಿಯೇ ನಮ್ಮ ಸಾಮೀಪ್ಯ–ಸಾಂಗತ್ಯ ಹೆಚ್ಚು.

ನಮ್ಮ ರಾಜಕಾರಣಿಗಳನ್ನೇ ಗಮನಿಸಿ. ರಾಜಕಾರಣಿಗಳಿಗೆ ರಾಜಕಾರಣಿಗಳು, ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ಇಂಥವರೇ ಹೆಚ್ಚು ಆಪ್ತರು. ಅದೂ ಭ್ರಷ್ಟ ರಾಜಕಾಣಿಗಳಿಗೆ ತನ್ನಂತೆಯೇ ಇರುವ ಭ್ರಷ್ಟ ರಾಜಕಾರಣಿ, ಅಧಿಕಾರಿ, ವ್ಯಾಪಾರಿಗಳೇ ನಿಜವಾದ ಸ್ನೇಹಿತರು. ಏಕೆಂದರೆ ಭ್ರಷ್ಟಾಚಾರವೇ ಅವರ ಸ್ವಭಾವ, ಅದೇ ಅವರಿಗೆ ಇಷ್ಟ. ಅದನ್ನು ಅವರು ಎಂದಿಗೂ ಬಿಡಲಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT