ಶನಿವಾರ, ಆಗಸ್ಟ್ 13, 2022
22 °C

ಬ್ರಹ್ಮರ್ಷಿ ಶ್ರೀ ನಾರಾಯಣಗುರು

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಜಾತಿವೈಷಮ್ಯ, ಮೂಢನಂಬಿಕೆ, ಪ್ರಾಣಿವಧೆ, ಅಸ್ಪೃಶ್ಯತೆ – ಹೀಗೆ ಸಮಾಜದ ಹಲವು ಅನಾಚಾರಗಳ ವಿರುದ್ಧ ಹೋರಾಟ ಮಾಡಿದವರು ದಾರ್ಶನಿಕ ನಾರಾಯಣಗುರು. ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸ್ಪರ್ಶ ನೀಡಿದ ಅವರ ಕಾಣ್ಕೆ ಇಂದಿಗೂ ನಮಗೆ ಬೆಳಕಾಗಬಲ್ಲದು...

 

ಶ್ರೀ ನಾರಾಯಣಗುರು ಅವರ ಜೀವನದಲ್ಲಿ ನಡೆದ ಒಂದು ಪ್ರಸಂಗ ಹೀಗಿದೆ:

ಗುರುಗಳು ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು; ಅವರ ಸಹಪ್ರಯಾಣಿಕ ಒಬ್ಬ ನಂಬೂದರಿ. ಅವನು ಗುರುಗಳನ್ನು ಪ್ರಶ್ನಿಸಿದ:

‘ನಿಮ್ಮ ಹೆಸರೇನು?’

ಗುರುಗಳು ಉತ್ತರಿಸಿದರು: ‘ನಾರಾಯಣ’.

ನಂಬೂದರಿ: ‘ಜಾತಿ ಯಾವುದು?’

ಗುರುಗಳು: ‘ನೋಡಿದರೆ ಗೊತ್ತಾಗುವುದಿಲ್ಲವೆ?’

ನಂಬೂದರಿ: ‘ಇಲ್ಲ.’

ಗುರುಗಳು: ‘ನೋಡಿದರೆ ಗೊತ್ತಾಗದಿದ್ದಾಗ, ಹೇಳಿದರೆ ಹೇಗೆ ಗೊತ್ತಾಗುತ್ತದೆ?’

ನಾರಾಯಣಗುರುಗಳು ಅವತರಿಸಿದ ಕಾಲಘಟ್ಟದಲ್ಲಿದ್ದ ಸಮಾಜದ ಮಾನಸಿಕತೆ ಮತ್ತು ಅದನ್ನು ಬದಲಾಯಿಸಲು ಅವರು ಆರಿಸಿಕೊಂಡ ದಾರಿ – ಈ ಎರಡನ್ನೂ ಮೇಲಣ ಪ್ರಸಂಗ ಎತ್ತಿತೋರಿಸುವಂತಿದೆ.

ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು (1854–1928). 

ಅದ್ವೈತದರ್ಶನದ ಅಡಿಪಾಯದ ಮೇಲೆ ಸಮಾಜದಲ್ಲಿ ಸಮಾನತೆಯ ಆನಂದನಿಲಯವನ್ನು ನಿರ್ಮಿಸಲು ಜೀವನದುದ್ದಕ್ಕೂ ಶ್ರಮಿಸಿದವರು ಅವರು; ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳ ಸಮನ್ವಯದ ಮೂಲಕ ಅದ್ವೈತದರ್ಶನದ ಪುನರ್‌ ವ್ಯಾಖ್ಯೆಯನ್ನು ಮಾಡಿದರು; ಇದನ್ನೇ ಅವರು ಅಸ್ಪೃಶ್ಯತೆ ಎಂಬ ರೋಗವನ್ನು ಪರಿಹರಿಸಲು ಆರಿಸಿಕೊಂಡ ದಾರಿಯಲ್ಲಿ ಧರ್ಮ ಮತ್ತು ಅಧ್ಯಾತ್ಮ ಎಂಬ ಔಷಧಗಳಾಗಿ ಪ್ರಕಟಗೊಂಡವು. ’ಬ್ರಹ್ಮ ಸತ್ಯಂ ಜಗನ್ಮಿಥ್ಯಾ‘ ಎಂಬ ಸೂತ್ರಕ್ಕೆ ಸಮಾಜಮುಖಿಯಾದ ಕಾಣ್ಕೆಯನ್ನು ನೀಡಿದ ನಮ್ಮ ಕಾಲದ ಮಹಾದಾರ್ಶನಿಕ ನಾರಾಯಣಗುರು. ಸಮಾಜೋದ್ಧಾರದ ದೀಕ್ಷೆಯನ್ನೇ ಸತ್ಯಸಾಕ್ಷಾತ್ಕಾರಕ್ಕೆ ಒದಗುವ ತಪಸ್ಸು ಎಂದು ಸ್ವೀಕರಿಸಿದವರು; ಜೀವನ್ಮುಕ್ತಿಯ ವ್ಯಾಖ್ಯೆಯನ್ನು ನಮ್ಮ ಕಾಲಕ್ಕೂ ಹಿಗ್ಗಿಸಿದ ಮಹಾಭಾಷ್ಯಕಾರ ಅವರು.

 

ನಾರಾಯಣಗುರುಗಳು 1854ರ ಆಗಸ್ಟ್‌ 28ರಂದು, ಎಂದರೆ ಮಲಯಾಳಿ ಶಕವರ್ಷ 1030, ಸಿಂಹಮಾಸದ ಶತಭಿಷ ನಕ್ಷತ್ರದಲ್ಲಿ, ಚತುರ್ದಶಿ, ನಾಲ್ಕನೆಯ ಓಣಂನ ದಿನದಂದು ಜನಿಸಿದರು; ಹುಟ್ಟೂರು ಕೇರಳದ ತಿರುವನಂತಪುರದಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿರುವ ಚೆಂಬಳಂತಿ ಗ್ರಾಮ. ತಂದೆ ಮಾಡಾನ್‌ ಆಶಾನ್‌; ತಾಯಿ ಕುಟ್ಟಿಯಮ್ಮ. 

ನಾರಾಯಣ ಗುರುಗಳು ಸಂಸ್ಕೃತ, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಅಗಾಧ ಪಾಂಡಿತ್ಯವನ್ನು ಸಂಪಾದಿಸಿದ್ದವರು. ಶಂಕರಾಚಾರ್ಯರ ದರ್ಶನದಿಂದ ಪ್ರಭಾವಿತರಾಗಿದ್ದ ಅವರು, ಸಮಾಜಸುಧಾರಣೆಯ ಜೊತೆಗೆ ಹತ್ತಾರು ದಾರ್ಶನಿಕ ಕೃತಿಗಳನ್ನೂ ರಚಿಸಿದರು. ಸಮಾಜದ ಹಲವು ಅನಿಷ್ಟಗಳಿಗೆ ಧರ್ಮವೇ ಕಾರಣವಾಗಿರುವಾಗ, ಅದೇ ಧರ್ಮ ಅವುಗಳಿಗೆ ಪರಿಹಾರವನ್ನೂ ನೀಡಬಲ್ಲದು – ಎಂಬ ಅಪೂರ್ವ ಕಾಣ್ಕೆಯಿಂದ ಸಮಾಜದ ಕೊಳೆಯನ್ನು ಕಳೆಯಲು ತೊಡಗಿದ ಮಹಾಪುರುಷ ಅವರು.

ಇರುವುದು ಒಂದೇ ಸತ್ಯ; ಅದನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ: ಆತ್ಮ, ಬ್ರಹ್ಮ, ಪರಮಾತ್ಮ, ಚೈತನ್ಯ – ಹೀಗೆ ಯಾವುದೂ ಆಗಬಹುದು. ಏಕೆಂದರೆ ಆ ‘ತತ್ತ್ವ’ ನಾಮ–ರೂಪಗಳಿಗೆ ಅತೀತವಾದದ್ದು. ಆದರೆ ಎಲ್ಲರಲ್ಲೂ ಎಲ್ಲೆಲ್ಲೂ ಎಲ್ಲ ಕಾಲದಲ್ಲೂ ಇರುವಂಥ ಶಾಶ್ವತಸತ್ಯವೇ ಅದು – ಎನ್ನುವುದು ಅದ್ವೈತದ ಸಾರ. 

ಇರುವುದು ಒಂದೇ ತತ್ತ್ವವಾದುದರಿಂದ ಭೇದಭಾವಕ್ಕೆ ಅವಕಾಶವೇ ಇಲ್ಲ; ಜಾತಿ–ಮತಗಳ ಗೊಡವೆ ಆ ಶುದ್ಧತತ್ತ್ವಕ್ಕೆ ಇಲ್ಲ. ಎಲ್ಲರಲ್ಲೂ ಒಂದೇ ಪರಮಾತ್ಮವಸ್ತು ಇರುವಾಗ ಮನುಷ್ಯರಲ್ಲಿ ಒಬ್ಬರು ಮೇಲು, ಇನ್ನೊಬ್ಬರು ಕೀಳು ಎಂಬ ವಿಂಗಡಣೆಗೆ ಅವಕಾಶವಾದರೂ ಎಲ್ಲಿ? ಹೀಗಾಗಿ ಇಡಿಯ ಮನುಕುಲ ಆ ಚೈತನ್ಯದ ಸ್ವರೂಪವೇ ಹೌದು. ಸಮಾಜದಲ್ಲಿ ಜಾತಿಯ ಕಾರಣದಿಂದ ಶ್ರೇಷ್ಠ–ಕನಿಷ್ಠ ಎಂಬ ಗೋಡೆಗಳನ್ನು ಎಬ್ಬಿಸುವುದು ಅಧಾರ್ಮಿಕವೂ ಆಧ್ಯಾತ್ಮಿಕತೆಗೆ ವಿರೋಧವೂ ಹೌದು ಎಂದು ಘೋಷಿಸಿ, ಸಮಾಜೋದ್ಧಾರದ ದೀಕ್ಷೆಯನ್ನು ಹಿಡಿದು, ಸಮಾಜಸುಧಾರಣೆಗೆ ಅಧ್ಯಾತ್ಮಸ್ಪರ್ಶದ ಅಪೂರ್ವ ಕಾಂತಿಯನ್ನು ಒದಗಿಸಿದವರು ನಾರಾಯಣಗುರು.

ಅವರು ದಾರಿದ್ರ್ಯವನ್ನು ಅರ್ಥೈಸಿದ ರೀತಿಯೂ ಅನನ್ಯವಾಗಿದೆ. ಹಣವಿಲ್ಲದಿರುವುದೇ ಬಡತನವಲ್ಲ; ಅವಿದ್ಯೆ, ಕೆಟ್ಟ ಚಟಗಳು, ಕೆಟ್ಟ ಆಲೋಚನೆಗಳು ಕೂಡ ದಾರಿದ್ರ್ಯದ ಇನ್ನೊಂದು ರೂಪವೇ ಹೌದು ಎಂದು ಉಪದೇಶಿಸಿದರು. ಶಿವ ಎನ್ನುವುದು ಅಂತರಂಗ–ಬಹಿರಂಗದ ಒಳಿತಿಗೆ ಸಂಕೇತ ಎಂದು ಜನರಿಗೆ ಮನವರಿಕೆ ಮಾಡಿಸಿದರು. ಅವರು  ದೇವಾಲಯಗಳನ್ನೂ ಕಟ್ಟಿಸಿದರು; ಅಮೂರ್ತವಾದ ತಾತ್ವಿಕತೆಯನ್ನೂ ಬೋಧಿಸಿದರು. ಜನರ ಅಜ್ಞಾನಕ್ಕೆ ಕಾರಣವಾದ ಎಲ್ಲ ವಿವರಗಳ ವಿರುದ್ಧವೂ ಅವರು ಹೋರಾಟವನ್ನು ಮಾಡಿದರು. ಜಾತಿವೈಷಮ್ಯ, ಮೂಢನಂಬಿಕೆ, ಪ್ರಾಣಿವಧೆ, ಅಸ್ಪೃಶ್ಯತೆ – ಹೀಗೆ ಸಮಾಜದ ಎಲ್ಲ ಅನಾಚಾರಗಳಿಗೂ ಧಾರ್ಮಿಕತೆಯ ಹಿನ್ನೆಲೆಯಲ್ಲೇ ಪರಿಹಾರವನ್ನು ಕಂಡುಕೊಂಡರು. ದೇವಾಲಯಗಳು ಮನುಷ್ಯ–ಮನುಷ್ಯರ ನಡುವೆ ಸೌಹಾರ್ದವನ್ನೂ ಉಂಟುಮಾಡಬಲ್ಲದು, ಭೇದವನ್ನೂ ಸೃಷ್ಟಿಸಬಲ್ಲದು. ಹೀಗಾಗಿ ನಮಗೆ ಎಂಥ ದೇವಾಲಯಗಳು ಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು ಎಂದೂ ಎಚ್ಚರಿಸಿದರು. ದೇವಾಲಯಗಳ ಬಗ್ಗೆ ನೀತಿಸಂಹಿತೆಯನ್ನೇ ರೂಪಿಸಿದರು.

ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.

ಕೃತಿಪ್ರಪಂಚ

ನಾರಾಯಣಗುರುಗಳ ವಾಙ್ಮಯಪ್ರಪಂಚವೂ ವಿಶಾಲವಾಗಿದೆ. ಸ್ತೋತ್ರಗಳು, ದಾರ್ಶನಿಕ ಮೀಮಾಂಸೆ, ಅನುವಾದ – ಹೀಗೆ ಅವರ ಸಾಹಿತ್ಯಸೃಷ್ಟಿ ಹರಡಿದೆ. ಕೆಲವೊಂದು ಪ್ರಮುಖ ಕೃತಿಗಳು ಹೀಗಿವೆ: ವಿನಾಯಕಾಷ್ಟಕಮ್‌, ಶ್ರೀವಾಸುದೇವಾಷ್ಟಕಮ್‌, ಶ್ರೀಕೃಷ್ಣದರ್ಶನಮ್‌, ಗುಹಾಷ್ಟಕಮ್‌, ಷಣ್ಮುಖಸ್ತೋತ್ರಮ್, ಸುಬ್ರಹ್ಮಣ್ಯಕೀರ್ತನಮ್‌, ದೇವೀಸ್ತವಮ್‌, ಭದ್ರಕಾಳ್ಯಾಷ್ಟಕಮ್‌, ಶಿವಪ್ರಸಾದಪಂಚಕಮ್‌, ಚಿದಂಬರಾಷ್ಟಕಮ್‌, ಶಿವಶತಕಮ್‌, ಇಂದ್ರಿಯವೈರಾಗ್ಯ, ಸದಾಚಾರಮ್‌, ದತ್ತಾಪಹಾರಮ್‌, ಜಾತಿನಿರ್ಣಯಮ್‌, ಅನುಕಂಪಾದಶಕಮ್‌, ಬ್ರಹ್ಮವಿದ್ಯಾಪಂಚಕಮ್‌, ಅದ್ವೈತದೀಪಿಕಾ, ಆತ್ಮೋಪದೇಶಶತಕಮ್‌, ದರ್ಶನಮಾಲಾ, ಅರಿವು, ಅದ್ವೈತಜೀವಿತಮ್‌, ದೈವಚಿಂತನಮ್‌, ಆತ್ಮವಿಲಾಸಮ್‌, ವೇದಾಂತಸ್ತೋತ್ರಮ್‌, ಈಶಾವಾಸ್ಯೋಪನಿಷತ್‌ ಭಾಷ್ಯ, ತಿರುಕ್ಕುರಳ್‌ (ಅನುವಾದ)

ಬ್ರಹ್ಮವೊಂದೇ ಸತ್ಯ

‘ದರ್ಶನಮಾಲಾ‘ – ಇದು ನಾರಾಯಣಗುರುಗಳ ಅನನ್ಯ ಕೃತಿಗಳಲ್ಲೊಂದು; ಬ್ರಹ್ಮವನ್ನು ಹತ್ತು ವಿವಿಧ ನೆಲೆಗಳಲ್ಲಿ ಕಾಣುವ ಬಗೆಯನ್ನು ಇದು ವಿವರಿಸುತ್ತದೆ. ಇದರ ಕೊನೆಯ ಶ್ಲೋಕ ಹೀಗಿದೆ:

ಏಕಮೇವಾsದ್ವಿತೀಯಂ ಬ್ರಹ್ಮಾಸ್ತಿ ನಾನ್ಯನ್ನ ಸಂಶಯಃ |
ಇತಿ ವಿದ್ವಾನ್ನಿವರ್ತ್ತೇತ ದ್ವೈತಾನ್ನಾವರ್ತತೇ ಪುನಃ ||

ಇದರ ತಾತ್ಪರ್ಯ: ‘ಎರಡನೆಯದ್ದು ಇಲ್ಲದ್ದೂ, ಕೇವಲ ಒಂದೇ ಆಗಿರುವ, ಬ್ರಹ್ಮವಸ್ತುವೊಂದೇ ಇರುವಂಥದ್ದು, ಇದರಲ್ಲಿ ಸಂಶಯವಿಲ್ಲ. ಇಂಥ ಅರಿವನ್ನು ಪಡೆದ ಜ್ಞಾನಿಗೆ ದ್ವೈತಭಾವದಿಂದ ಮುಕ್ತಿ ದೊರೆಯುತ್ತದೆ; ಅವನಿಗೆ ಮತ್ತೆ ದ್ವೈತ ಕಾಡುವುದಿಲ್ಲ.‘

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು