ಮಂಗಳವಾರ, ಆಗಸ್ಟ್ 16, 2022
27 °C

ಸಚ್ಚಿದಾನಂದ ಸತ್ಯಸಂದೇಶ: ಆಸೆಯ ಬುದ್ಧಿಗೆ ಕಡಿವಾಣ ಬೇಕು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ದೇಹ ಮತ್ತು ಪ್ರಕೃತಿ ಬೇರೆಯಲ್ಲ. ಅಣು-ಪರಮಾಣುಜೀವಿಗಳಿಂದ ಈ ಸೃಷ್ಟಿ ರೂಪಿತವಾದಂತೆಯೇ ನಮ್ಮ ದೇಹವೂ ಕೋಟ್ಯಾಂತರ ಜೀವಾಣುಗಳಿಂದ ರಚಿತವಾಗಿದೆ. ಗಾಳಿ-ನೀರು-ಮಣ್ಣಿನಲ್ಲಿ ಲೀನವಾಗಿರುವ ಜೀವಾಣುಗಳೇ ಈ ಭೂಮಿಯ ಜೀವ ಚೈತನ್ಯ. ಅವುಗಳ ಉತ್ಪತ್ತಿ ನಿಂತಾಗ ಭೂಮಿಯಲ್ಲಿ ಹುಲ್ಲುಕಡ್ಡಿಯೂ ಬೆಳೆಯದೆ ನಿರ್ಜೀವವಾಗುತ್ತದೆ. ಹಾಗೆಯೇ ಮನುಷ್ಯನ ದೇಹದೊಳಗಿರುವ ಜೀವಾಣುಗಳು ಕಡಿಮೆಯಾದಂತೆ ನಮ್ಮ ಜೀರ್ಣಕ್ರಿಯೆ ನಿಷ್ಕ್ರಿಯವಾಗಿ, ದೇಹ ನಿಸ್ತೇಜವಾಗುತ್ತದೆ.

ತಾಯಿಯ ಗರ್ಭದಲ್ಲಿರುವ ಮಗುವಿಗೆ ಕರುಳಬಳ್ಳಿ ಮೂಲಕ ಜೀವಚೈತನ್ಯ ತುಂಬಿದಂತೆ, ಭೂತಾಯಿ ತನ್ನ ಮಡಿಲಿಗೆ ಬಂದ ಜೀವಿಗೆ ಗಾಳಿ-ನೀರು-ಆಹಾರದ ಮೂಲಕ ಜೀವಾಮೃತ ನೀಡುತ್ತಿರುತ್ತದೆ. ತಾಯ ಗರ್ಭದಿಂದ ಭೂತಾಯ ಮಡಿಲಲ್ಲಿ ಆಡುವವರೆಗೂ ಜೀವದ ಜೀವನಯಾತ್ರೆ ಸಾಗುತ್ತದೆ. ಭೂಮಿ ಮೇಲಿನ ಋಣಾನುಬಂಧದ ನಂತರ ಜೀವಾತ್ಮದ ಜೀವನಯಾತ್ರೆ ಕೊನೆಗೊಳ್ಳುವುದಿಲ್ಲ. ಅದು ನಿರಂತರವಾಗಿ ದಿಗಂತದತ್ತ ಮುಂದುವರೆಯುತ್ತಲೇ ಇರುತ್ತದೆ. ಏಕೆಂದರೆ, ಭೂಮಿ ಮೇಲಿನ ಜೀವ ಸಂಬಂಧ ಕಡಿದುಕೊಂಡಾಗ ಮತ್ತೊಂದು ಜೀವನಯಾತ್ರೆಗೆ ಜೀವಾತ್ಮ ಸಿದ್ಧವಾಗಲೇಬೇಕು. ಅದು ಮತ್ತೆ ಭೂಗರ್ಭದಲ್ಲೋ ಅಥವಾ ಮತ್ತೊಂದು ಗ್ರಹಕಾಯದ ಗರ್ಭದಲ್ಲೋ ಅನ್ನೋದು ಜೀವಾತ್ಮದ ಪಾಪ-ಪುಣ್ಯಗಳ ಲೆಕ್ಕಾಚಾರದಲ್ಲಾಗುತ್ತೆ. ಜೀವಾತ್ಮ ಪುಣ್ಯಾತ್ಮನಾದರೆ ಪರಮಾತ್ಮನಾಗಿ ಭೂಬಂಧನದಿಂದ ನಭೋಮಂಡಲದತ್ತ ಸಾಗುತ್ತಾನೆ. ಪಾಪಾತ್ಮನಾದರೆ ಭೂಬಂಧನದಲ್ಲೇ ಸಿಲುಕಿ ಮತ್ತೆ ಹಲವಾರು ಜೀವಿಗಳ ಅವತಾರ ಎತ್ತಿ ಕೊನೆಗೊಮ್ಮೆ ಮನುಷ್ಯರೂಪ ತಾಳುತ್ತಾನೆ.

ಮನುಷ್ಯಜನ್ಮ ಮುಕ್ತಿಗಿರುವ ಕೊನೆ ಯಾನ. ಇಲ್ಲಿ ಭಗವಂತ ಎಲ್ಲವನ್ನೂ ಮನುಷ್ಯನಿಗೆ ಮೀಸಲಿಟ್ಟಿರುತ್ತಾನೆ. ಅದನ್ನು ಹೇಗೆ ಉಪಯೋಗಿಸುತ್ತಾನೆ ಎಂಬುದರ ಮೇಲೆ ಅವನ ಭವಿಷ್ಯ ನಿರ್ಧರಿಸುತ್ತಾನೆ. ಇದಕ್ಕಾಗಿ ಮನುಷ್ಯನಿಗೆ ನಿತ್ಯ ಆಸೆಯ ತಿಮಿಂಗಿಲವನ್ನು ತಿನ್ನಿಸುತ್ತಲೇ ಇರುತ್ತಾನೆ. ಅವನ ಬಕಾಸುರ ಬುದ್ಧಿ ಮತ್ತು ಹೊಟ್ಟೆ ಎಷ್ಟರಮಟ್ಟಿಗೆ ಸಂಯಮದಿಂದ ಆಸೆ ಸ್ವೀಕರಿಸುತ್ತೆ ಎಂಬುದರ ಮೇಲೆ ಫಲಿತಾಂಶ ನಿಷ್ಕರ್ಷಿಸುತ್ತಾನೆ. ಭಗವಂತ ನಮಗೆ ಬ್ರಹ್ಮಾಂಡಹೊಟ್ಟೆ ಕೊಟ್ಟಿದ್ದಾನೆಂದು ಸಲ್ಲದೆಲ್ಲವನ್ನೂ ಕಬಳಿಸುತ್ತಾ ಹೋದರೆ ಹೇಗೆ ಹೊಟ್ಟೆ ಕೆಡುತ್ತದೋ, ನಮಗೆ ಅಗಾಧ ಬುದ್ಧಿ ಕೊಟ್ಟಿದ್ದಾನೆಂದು ಸಿಕ್ಕಸಿಕ್ಕದ್ದನ್ನೆಲ್ಲಾ ಕಲಿಯುತ್ತಾ ಹೋದರೆ ಬುದ್ಧಿ ಕೆಡುತ್ತದೆ. ಇದೇ ಪಾಪದ ಹೊರೆ.

ದೇಹಕ್ಕೆ ಎಷ್ಟು ತಿನ್ನಬೇಕು ಅನ್ನಿಸುತ್ತದೋ, ಅಷ್ಟೇ ತಿನ್ನಬೇಕು. ಮಿತಿಮೀರಿ ತಿನ್ನುತ್ತಾ ಹೋದರೆ ಅಪಾಯವಾಗುತ್ತದೆ. ಹಾಗೆಯೇ, ಬುದ್ಧಿ ಎಷ್ಟು ತಿಳಿಯಬೇಕೊ ಅಷ್ಟೇ ತಿಳಿಯಬೇಕು. ಮಿತಿಮೀರಿ ತಿಳಿದರೆ ಬುದ್ಧಿ ವಿಕಲ್ಪವಾಗುತ್ತದೆ. ಹುಟ್ಟಿದಾಗ ಮಗು ತಾಯ ಹಾಲನ್ನಷ್ಟೇ ಕುಡಿಯುತ್ತದೆ, ದೇಹ ಬೆಳೆದಂತೆ ಅಗತ್ಯಕ್ಕೆ ತಕ್ಕಂತೆ ಆಹಾರಪ್ರಮಾಣವನ್ನು ಬಯಸುತ್ತದೆ. ಬುದ್ಧಿಯೂ ಅಷ್ಟೇ, ದೇಹ ಬೆಳೆದಂತೆ ಅಗತ್ಯಕ್ಕೆ ತಕ್ಕಂತೆ ತಿಳಿವಳಿಕೆ ಬಯಸುತ್ತದೆ. ಆಸೆ ಮತ್ತು ಬುದ್ಧಿ – ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಮನುಷ್ಯನಿಗೆ ಆಸೆ ಬೆಳೆದಷ್ಟು ಬುದ್ಧಿ ಬೆಳೆಯುತ್ತದೆ. ಆ ಆಸೆ ಸದಾಸೆಯಾದರೆ, ಸುಬುದ್ಧಿ ಬರುತ್ತದೆ. ದುರಾಸೆಯಾದರೆ ದುರ್ಬುದ್ಧಿ ಬರುತ್ತದೆ. ಭಗವಂತನ ಪರೀಕ್ಷೆಯಲ್ಲಿ ಗೆಲ್ಲುವುದು ಕೆಲವೇ ಜನ. ಬಹಳಷ್ಟು ಜನ ಎಲ್ಲವನ್ನೂ ಕಬಳಿಸುವ ದುರಾಸೆ-ದುರ್ಬುದ್ಧಿಗಳಿಂದ ಸೋಲುತ್ತಾರೆ.

ಬ್ರಹ್ಮಾಂಡದ ಹೊಟ್ಟೆಯಲ್ಲಿರುವ ಗ್ರಹ-ನಕ್ಷತ್ರಗಳೆಲ್ಲಾ ಜೀವಕಾಯಗಳೇ. ಇವುಗಳಲ್ಲಿರುವಂತೆ ಮನುಷ್ಯನೊಳಗೂ ಜೀವಾಣುಗಳಿವೆ. ಜೀವಾಣುಗಳೊಳಗೂ ಜೀವಪರಮಾಣುಗಳಿವೆ. ಇಂಥ ಭಗವಂತನ ಜೀವಸೃಷ್ಟಿಗೆ ಪೂರಕವಾಗಿ ಜೀವಾತ್ಮ ಸ್ಪಂದಿಸಬೇಕು. ಹಾಳುಗೆಡವಲು ಕುಯುಕ್ತಿ ಮಾಡಬಾರದು. ಭಗವಂತನ ಮುಕ್ತಿದಾಯಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಜನ್ಮ ಕೊಟ್ಟ ತಾಯಿಗೂ, ಅನ್ನ ನೀಡಿದ ಮಣ್ಣಿಗೂ ಹಾನಿ ಮಾಡಬಾರದು. ಸದಾ ಒಳ್ಳೆಯದನ್ನೇ ಬಯಸುತ್ತಾ, ಒಳ್ಳೆಯದನ್ನೇ ಯೋಚಿಸಬೇಕು. ಆಗ ಮಾತ್ರ ಭಗವಂತ ಒಡ್ಡಿದ ಆಸೆಯ ಬಲೆಯಿಂದ ಜೀವಾತ್ಮ ಹೊರಬಂದು ‘ಸಚ್ಚಿದಾನಂದ’ನ ಮುಕ್ತಲೋಕದಲ್ಲಿ ವಿಹರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು