ಮಂಗಳವಾರ, ಡಿಸೆಂಬರ್ 7, 2021
23 °C

ಸಚ್ಚಿದಾನಂದ ಸತ್ಯಸಂದೇಶ | ನಂಬಿಕೆಯೇ ದಾಂಪತ್ಯದ ಜೀವಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕತೆ ಬೆಳೆದಂತೆ ಮಾನವರ ದಾಂಪತ್ಯಜೀವನ ಶಿಥಿಲವಾಗುತ್ತಿದೆ. ಸಣ್ಣಪುಟ್ಟ ಕಾರಣಗಳಿಗೂ ದಾಂಪತ್ಯಜೀವನ ಕೊನೆಗೊಳಿಸಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮದುವೆಯಾಗಿ ವರ್ಷಗಳಿರಲಿ, ಕೆಲ ತಿಂಗಳಲ್ಲೇ ವಿರಸ ಮೂಡಿಸಿಕೊಳ್ಳುವ ದಂಪತಿಗಳ ಸಂಖ್ಯೆಯೂ ಕಡಿಮೆ ಇಲ್ಲ. ಪ್ರೀತಿ-ನಂಬಿಕೆ ಕಳೆದುಕೊಂಡ ದಂಪತಿಗಳಲ್ಲಿ ಭುಗಿಲೇಳುತ್ತಿರುವ ಕಲಹ–ಕದನಗಳು ಆತಂಕಕಾರಿಯಾಗಿ ಬೆಳೆಯುತ್ತಿದೆ. ಇದರಿಂದ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ವಿಚ್ಛೇದನ ಪ್ರಕರಣಗಳಿಗೇ ಪ್ರತ್ಯೇಕ ನ್ಯಾಯಾಲಯ ನಿರ್ಮಿಸಬೇಕಾದ ಅನಿವಾರ್ಯ ಎದುರಾದರೂ ಅಚ್ಚರಿ ಇಲ್ಲ.

ಮಾನವರ ಸಂಬಂಧಗಳಲ್ಲಿ ಉಂಟಾಗುವ ಕೆಡುಕು, ಮಾನವರ ಭವಿಷ್ಯದ ಬೆಳವಣಿಗೆಗೆ ತೊಡಕಾಗುವ ಅಪಾಯ ಸಹ ಇದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ನಂಬಿಕೆ ಇದೆ. ಆದರೆ ತಿಳಿಗೇಡಿಗಳು ಸ್ವರ್ಗದಲ್ಲಿ ನಿಶ್ಚಯವಾದ ಮದುವೆಯನ್ನು ವಿಚ್ಛೇದನ ಎಂಬ ನರಕದಲ್ಲಿ ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಇಂಥ ಪ್ರವೃತ್ತಿ ಮಾನವರ ನೆಮ್ಮದಿಯ ಬದುಕಿಗೆ ಒಳ್ಳೆಯದಲ್ಲ. ದಾಂಪತ್ಯ ಅನ್ನೋದು ಕೇವಲ ಗಂಡು-ಹೆಣ್ಣಿನ ಸಂಬಂಧಗಳಿಗಷ್ಟೆ ಸೀಮಿತ ವಾಗಿಲ್ಲ. ಅದು ಸಂಸಾರದಾಚೆಗಿನ ಭವಿಷ್ಯದ ಸಂಬಂಧಗಳಿಗೂ ಸೇತುವೆಯಾಗಿರುತ್ತದೆ. ಇಂಥ ಸಂಬಂಧಗಳ ವಂಶವೃಕ್ಷದ ಬಿಳಲುಗಳನ್ನು ಸ್ವಾರ್ಥ-ಪ್ರತಿಷ್ಠೆಗಳಿಗಾಗಿ ಕಡಿಯಬಾರದು. ಈ ಸಂಸಾರಬಂಧಗಳು ಸಮಾಜಕ್ಕೂ ಕೊಂಡಿ ಬೆಸೆದಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆ ಮೂಲಕ ಮಾನವಕುಲದ ಉದ್ಧಾರಕ್ಕೂ ಸಂಸಾರ ಬಂಧಗಳು ಕಾರಣವಾಗಿರುತ್ತವೆ ಅನ್ನೋದನ್ನ ಮರೆಯಬಾರದು.

ಮೇಲ್ನೋಟಕ್ಕೆ ಇತ್ತೀಚಿನ ದಾಂಪತ್ಯಗಳ ಸಡಿಲಿಕೆಗೆ ಸ್ವಾರ್ಥ-ಪ್ರತಿಷ್ಠೆಗಳು ಕಾರಣ ಅಂತ ಗೊತ್ತಾದರೂ, ಆಂತರಿಕವಾಗಿ ತಪ್ಪುಗಳ ಪದರಗಳನ್ನು ಬಿಡಿಸಿ ನೋಡಿದರೆ, ಅಲ್ಲಿ ದಾಂಪತ್ಯಕ್ಕೆ ಅಗತ್ಯವಾದ ನಂಬಿಕೆಯ ಬೀಜ ಚಿಗುರದೆ ಕೊಳೆತಿರುವುದು ಗೋಚರವಾಗುತ್ತದೆ. ಯಾವುದೇ ಸಂಬಂಧಗಳು ಗಟ್ಟಿಯಾಗಿರಲು ನಂಬಿಕೆಯ ಬೇರು ಗಾಢವಾಗಿ ಮನಸ್ಸಿನಾಳದಲ್ಲಿ ಬೆಳೆದಿರ ಬೇಕು. ಆಗಷ್ಟೆ ದಾಂಪತ್ಯವೆಂಬ ಗಿಡ ಹೆಮ್ಮರವಾಗಿ ವಂಶವೃಕ್ಷವಾಗಿ ಬಹು ಕಾಲ ಬಾಳುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮಾನವರ ವಂಶವೃಕ್ಷ ಬೆಳೆದಿರುವುದೇ ಇಂಥ ವಿಶ್ವಾಸದ ಹಂದರದಲ್ಲಿ. ಯಾರದೋ ಮನೆಯಲ್ಲಿ ಬೆಳೆದ ಹೆಣ್ಣು, ಪರಿಚಯವೇ ಇಲ್ಲದವರ ಮನೆಗೆ ಬಂದು ಬದುಕು ಕಟ್ಟಿಕೊಳ್ಳುವುದು ಮಾನವ ಜೀವನ ಪಯಣದಲ್ಲಿ ಕಾಣುವ ಬಹು ಸುಂದರ ಕ್ಷಣಗಳು. ತನ್ನವರನ್ನು ಬಿಟ್ಟು, ತನ್ನವರಲ್ಲದವರನ್ನು ತನ್ನವರೆಂದು ಹೊಸ ಬದುಕು ಕಟ್ಟುವ ಹೆಣ್ಣನ್ನು ನಮ್ಮ ಸಂಸ್ಕೃತಿಯಲ್ಲಿ ಶಕ್ತಿದೇವತೆ ಎಂದು ಕರೆಯುತ್ತೇವೆ. ನಿಜಾರ್ಥದಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ಶಕ್ತಳೇ. ಆ ಶಕ್ತಿ ಆಕೆಗೆ ಇಲ್ಲದಿದ್ದರೆ, ಸಂಬಂಧವಿಲ್ಲದವರ ಮನೆಗೆ ಬಂದು ಸಂಬಂಧವನ್ನು ಶಾಶ್ವತವಾಗಿ ಗಟ್ಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಹೆಣ್ಣಿನ ಈ ತ್ಯಾಗವನ್ನು ಗಂಡು ಯಾವತ್ತೂ ಮರೆಯಬಾರದು. ತವರ ಮರೆತು, ಪರರ ಮನೆಯ ಬೆಳಗಲು ಬರುವ ಹೆಣ್ಣನ್ನು ತನ್ನ ಮನೆಯ ಸೇವಕಿ ಅಂದುಕೊಳ್ಳಬಾರದು. ಹಾಗೆಯೇ ತ್ಯಾಗಕ್ಕೆ ಹೆಸರಾದ ಹೆಣ್ಣು ತವರಿನ ಹೆಸರು ಳಿಸುವ ನಡವಳಿಕೆಯನ್ನೂ ರೂಢಿಸಿಕೊಳ್ಳಬೇಕು. ತವರಿನಲ್ಲಿ ಕಳೆದ ಸ್ವೇಚ್ಛೆಯ ಬದುಕಿನಿಂದ ಗಂಡನ ಮನೆಯ ಜವಾಬ್ದಾರಿಯ ಬದುಕಿಗೆ ಬಂದಿದ್ದೇನೆಂಬ ಪ್ರಜ್ಞೆ ಮೂಡಿಸಿಕೊಳ್ಳಬೇಕು. ತವರಿನಲ್ಲಿ ಮಗಳಾಗಿ ಕಲಿತ ಬದುಕಿನ ಪಾಠ ವನ್ನು, ಗಂಡನ ಮನೆಯಲ್ಲಿ ಪತ್ನಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಪರೀಕ್ಷೆಗೆ ಒಡ್ಡಿಕೊಳ್ಳಬೇಕು. ಇದಕ್ಕೆ ಗಂಡನ ಪೂರಕ ಬೆಂಬಲ ಅಗತ್ಯವಾಗಿ ಬೇಕು. ಆಗಷ್ಟೇ ವಿಚ್ಛೇದನದಂಥ ಪಿಡುಗು ನಿವಾರಣೆಯಾಗುವುದು. ಮನೆಮನಗಳಲ್ಲಿ ನೆಮ್ಮದಿಯ ಸೌಧ ನಿರ್ಮಾಣವಾಗುವುದು. ರಾಮ-ಸೀತೆಯರಂತೆ ಆದರ್ಶ ದಾಂಪತ್ಯ ಸಾಕಾರವಾಗುವುದು. ರಾಮಾಯಣ ಕೇವಲ ಕತೆಯಲ್ಲ, ಅದು ನಮ್ಮ ಬದುಕಿನ ಮಾರ್ಗದರ್ಶಿ. ದುರಾಸೆಯ ರಾವಣ-ಶೂರ್ಪನಖಿಯರ ಬಗ್ಗೆ ಎಚ್ಚರಿಸುತ್ತಾ, ಸಂಸಾರವನ್ನು ‘ಸಚ್ಚಿದಾನಂದ’ದಂತೆ ಸುಖಮಯವಾಗಿಸುವ ದೀಪಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು