ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಯ ಆಗಮನ ಸಾರುವ “ಗೊಬ್ಬಿ” ಹಾಡು

ಗೊಬ್ಬಿಯಾಳೇ... ಎಂದು ರಾಗವಾಗಿ ಹಾಡುತ್ತಿರುವ ಹಿರೇಕಟ್ಟಿಗೇನಹಳ್ಳಿ ಲಕ್ಷ್ಮಮ್ಮ
Last Updated 14 ಜನವರಿ 2020, 10:23 IST
ಅಕ್ಷರ ಗಾತ್ರ

ಶಿಡ್ಲಘಟ್ಟ: “ಗೊಬ್ಬಿಯಾಳೇ, ಯಾಡಾದಿಕೊಕನಾಡು ಮೇಮೊಚ್ಚೇದಮ್ಮ ...” (ಗೊಬ್ಬಿಯಾಳೇ, ವರ್ಷಕ್ಕೊಮ್ಮೆ ಬರುವೆವು ನಾವು...) ಎಂದು ರಾಗವಾಗಿ ಮಂಕರಿಯನ್ನು ಹಿಡಿದ ಮಹಿಳೆಯು ಹಾಡುತ್ತಿದ್ದರೆ, ಒಮ್ಮೆ ನಿಂತು ಕೇಳಬೇಕೆನಿಸುತ್ತದೆ. ಚಿಕ್ಕಬಳ್ಳಾಪುರ ಕೋಲಾರ ಎಂಬ ತೆಲುಗಿನ ಪ್ರಭಾವವಿರುವ ಜಿಲ್ಲೆಗಳಲ್ಲಿ ಕಂಡುಬರುವ ಜನಪದರ ಸುಗ್ಗಿ ಹಾಡು ಇದು.

ಕೈವಾರದ ಬಳಿಯ ಹಿರೇಕಟ್ಟಿಗೇನಹಳ್ಳಿಯಿಂದ ಶಿಡ್ಲಘಟ್ಟಕ್ಕೆ ಆಗಮಿಸಿದ್ದ ಲಕ್ಷ್ಮಮ್ಮ ಎಂಬ ಮಹಿಳೆ ತಲೆ ಮೇಲೊಂದು ಬಿದಿರಿನ ಮಂಕರಿ ಇಟ್ಟುಕೊಂಡು, ಅದರಲ್ಲಿ ಅಕ್ಕಿ ಮತ್ತು ರಾಗಿ ತುಂಬಿಸಿಕೊಂಡು, ಸಗಣಿಯ ಪಿಳ್ಳಾರಾಯನನ್ನು ಇಟ್ಟು ಅದಕ್ಕೆ ವಿವಿಧ ಹೂಗಳು, ಊದುಕಡ್ಡಿ ಇಟ್ಟು, ಮನೆ ಮನೆಯ ಬಳಿ ತೆರಳಿ ಪೂಜಿಸುತ್ತಾ, ದವಸ, ಧಾನ್ಯ ಸಂಗ್ರಹಿಸುತ್ತಿದ್ದರು.

ತೆರೆಮರೆಗೆ ಸರಿಯುತ್ತಿರುವ ಜಾನಪದ ಸೊಗಡಿನಲ್ಲಿ ಗೊಬ್ಬಿಯಾಳೋ ಮೌಖಿಕ ಸಾಹಿತ್ಯವೂ ಒಂದು. ವರ್ಷಕ್ಕೊಮ್ಮೆ ಹೊಸದಾಗಿ ತಯಾರಿಸಿರುವ ಬಿದಿರಿನ ಮಂಕರಿಯಲ್ಲಿ ಹೊಸ ರಾಗಿ, ಅಕ್ಕಿಯನ್ನು ತುಂಬಿಕೊಂಡು ಅದರಲ್ಲಿ ಸಗಣಿಯ ಪಿಳ್ಳಾರಾಯನನ್ನು ಇಟ್ಟು ಅದಕ್ಕೆ ಕಣಗಿಲೆ, ಎಕ್ಕದ ಹೂಗಳು, ತುಂಬೆ ಹೂಗಳು, ತಂಗಡಿ ಹೂಗಳಿಂದ ಸಿಂಗಾರ ಮಾಡುತ್ತಾರೆ.

ಗೊಬ್ಬಿಯಾಳೋ ಎಂಬ ಹಾಡುಗಾರಿಕೆಗೆ ಮನಸೋಲುವ ಮಕ್ಕಳು ಗುಂಪು ಕಟ್ಟಿಕೊಂಡು ಅವರನ್ನು ಹಿಂಬಾಲಿಸಿದರೆ, ಇವರು ಮನೆ ಮನೆಗೆ ಶುಭ ಹಾರೈಸುತ್ತಾರೆ. ಮನೆಗಳಲ್ಲಿನ ಹೆಣ್ಣು ಮಕ್ಕಳು, ಮಂಕರಿಯಲ್ಲಿನ ದೇವರಿಗೆ ಹೂಗಳನ್ನು ಇಟ್ಟು ಅರಿಶಿನ ಕುಂಕುಮ ನೀಡಿ ಪೂಜೆ ಸಲ್ಲಿಸುವುದರ ಜೊತೆಗೆ, ಬಿದಿರಿನ ಮಂಕರಿಯಲ್ಲಿ ದೇವರನ್ನು ಹೊತ್ತುಕೊಂಡಿರುವ ಮಹಿಳೆಗೂ ಅರಿಶಿನ ಕುಂಕುಮ ಇಟ್ಟು, ಬಾಗಿನ ನೀಡುವ ಮೂಲಕ ಗೌರವ ಸಮರ್ಪಣೆ ಮಾಡುವುದು ರೂಢಿಯಲ್ಲಿದೆ. ಅವರಿಗೆ ರಾಗಿ, ಅಕ್ಕಿ, ತರಕಾರಿ, ಹಣ ನೀಡಿ ಕಳುಹಿಸುತ್ತಾರೆ.

ಗೊಬ್ಬಿ ಎಂದರೆ ಹಸುವಿನ ಸಗಣಿಯಿಂದ ಗೋಳಾಕಾರದಲ್ಲಿ ಮಾಡಿ ಅದರ ಮೇಲೆ ಹೂವಿಟ್ಟು, ಮನೆಯ ಮುಂದೆ ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಇಡುವುದು. ಮನೆಮನೆಗಳಿಂದ ತರಕಾರಿ, ರಾಗಿ, ಅಕ್ಕಿ, ಧಾನ್ಯಗಳನ್ನು ಸಂಗ್ರಹಿಸಿಕೊಂಡು ಹೋಗುವ ಮಹಿಳೆಯರು ಸಂಕ್ರಾಂತಿಯಂದು ಗೊಬ್ಬಿಯ ಸುತ್ತ ಹೆಣ್ಣುಮಕ್ಕಳು ತಾಳ ತಪ್ಪದೆ ಚಪ್ಪಾಳೆ ತಟ್ಟುತ್ತಾ ಗೊಬ್ಬಿ ಹಾಡುಗಳನ್ನು ಹಾಡುತ್ತಾ ವಲಯಾಕಾರವಾಗಿ ಕುಣಿಯುತ್ತಾರೆ. ಪ್ರತಿವರ್ಷ ಧನುರ್ಮಾಸದಲ್ಲಿ ಪ್ರತಿದಿನ ಈ ರೀತಿ ಗೊಬ್ಬಿಯನ್ನಿಟ್ಟು ಗೊಬ್ಬಿ ಹಾಡುಗಳನ್ನು ಹಾಡುತ್ತ ಅವರು ಕುಣಿಯುತ್ತಾರೆ. ಇದರ ಜೊತೆಗೆ ಅನ್ನದಾನ ಸಹ ಮಾಡುತ್ತಾರೆ.

ಮಂಕರಿಯನ್ನು ಹೊತ್ತಿದ್ದ ಲಕ್ಷ್ಮಮ್ಮ ಮಾತನಾಡಿ, “ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ, ತಾಯಿಯವರು ಈ ಪದ್ಧತಿ ರೂಢಿಸಿಕೊಂಡಿದ್ದರು. ನಾವೂ ಅವರೊಂದಿಗೆ ಹಳ್ಳಿಗಳಿಗೆ ಹೋಗುತ್ತಿದ್ದೆವು. ಆಗ ಹಳ್ಳಿಗಳಲ್ಲಿ ನಮ್ಮ ತಾಯಿ, ನಮ್ಮ ಅಜ್ಜಿ ಹಾಡಲು ಆರಂಭಿಸುತ್ತಿದ್ದಂತೆ ತುಂಬಾ ಜನ ಮಹಿಳೆಯರು ಸೇರಿಕೊಂಡು ಹಾಡುತ್ತಿದ್ದರು. ತುಂಬಾ ಪರಿಚಯವಾಗಿದ್ದರು. ಒಂದು ವರ್ಷ ಬರಲಿಲ್ಲವೆಂದರೆ ಹಳ್ಳಿಗಳಲ್ಲಿ ಕೇಳೋರು ಯಾಕೆ ಬರಲಿಲ್ಲ ಅಂತ. ಈ ಪದ್ಧತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿದ್ದರು. ಅವರ ನಂತರ ಕೆಲ ವರ್ಷಗಳು ಯಾರೂ ಹೋಗುತ್ತಿರಲಿಲ್ಲ. ಸಂಪ್ರದಾಯ ಬಿಡಬಾರದು ಎಂದು ನಾವು ಹೋಗುತ್ತಿದ್ದೇವೆ. ಈಗಲೂ ಹಳಬರು ನಮ್ಮನ್ನು ತುಂಬಾ ಗೌರವದಿಂದ ನೋಡ್ತಾರೆ” ಎಂದರು.

“ವರ್ಷಕ್ಕೊಮ್ಮೆ ಗೊಬ್ಬಿಯಾಳೋ ಹಾಡುವವರು ಬಂದ್ರೆ ಎಲ್ಲರಿಗೂ ಒಳಿತು ಬಯಸಿ ದೇವರನ್ನು ಬೇಡಿಕೊಳ್ಳುತ್ತಾರೆ. ಇಂತಹವರು ಹಳ್ಳಿಗಳಿಗೆ ಬರುವುದರಿಂದಲೇ ನಾವೆಲ್ಲರೂ ಗೌರಮ್ಮನ ರಂಗೋಲೆ, ಗೊಬ್ಬಿಯಾಳೋ, ರಾಗಿ ಬೀಸುವಾಗ ಹಾಡುವ ಹಾಡುಗಳು, ನೆಲ್ಲುಕುಟ್ಟುವಾಗ ಹಾಡುವ ಹಾಡುಗಳನ್ನು ಕಲಿತಿದ್ದೇವೆ. ಈ ಪದ್ಧತಿ ಮುಂದುವರೆಸಬೇಕು. ಈಗಿನ ಹೆಣ್ಣು ಮಕ್ಕಳಿಗೆ ಈ ಸಂಸ್ಕೃತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು” ಎಂದು ಶಿಕ್ಷಕಿ ವೆಂಕಟರತ್ನಮ್ಮ ತಿಳಿಸಿದರು.

ಗೊಬ್ಬಿ ಕುಣಿತ

“ಗೊಬ್ಬಿ” ಎಂಬುದು ಸಂಕ್ರಾಂತಿಯ ಕಾಲದಲ್ಲಿ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಕಂಡುಬರುವ ಒಂದು ಜನಪ್ರಿಯ ಕುಣಿತ. ಗೊಬ್ಬಿಯ ಕುರಿತು ತೆಲುಗಿನ ಹಲವು ಪ್ರಾಚೀನ ಕಾವ್ಯಗಳಲ್ಲಿ ಉಲ್ಲೇಖಗಳಿವೆ. ಗೊಬ್ಬಿ ಎಂಬುದು ಒಂದು ರೀತಿಯ ನಮಸ್ಕಾರ ಹಾಗೂ ಇದು ಕುಣಿಯುತ್ತ ದೇವರಿಗೆ ಮಾಡುವ ನಮಸ್ಕಾರದ ಪ್ರಭೇದವೆಂದು ಪರಿಗಣಿಸಬಹುದು. ಗೊಬ್ಬಿ ಹಾಡುಗಳನ್ನು ಹಾಡುವಾಗ ಒಬ್ಬರಿಬ್ಬರು ಹಾಡಿದರೆ ಬೇರೆಯವರು “ಗೊಬ್ಬಿಯಲ್ಲೋ” ಎಂದು ಪಲ್ಲವಿಯನ್ನು ಹಾಡುತ್ತ ಚಪ್ಪಾಳೆ ತಟ್ಟುತ್ತಾರೆ. ಈ ಜನಪದ ಗೀತೆಗಳನ್ನು ಅನುಸರಿಸಿ ಅನ್ನಮಾಚಾರ್ಯರಂಥ ವಾಗ್ಗೇಯಕಾರರು ಗೊಬ್ಬಿ ಕೀರ್ತನೆಗಳನ್ನು ಬರೆದಿದ್ದಾರೆ.
-ಸ.ರಘುನಾಥ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT