ಭಾನುವಾರ, ಮಾರ್ಚ್ 7, 2021
22 °C

ಕಲಿಕೆಯೆಂಬ ಸರಸ್ವತೀ ಪೂಜೆ

ರಘು ವಿ. Updated:

ಅಕ್ಷರ ಗಾತ್ರ : | |

ಸರಸ್ವತಿಯು ವಿದ್ಯಾಧಿದೇವತೆ. ಅವಳು ವಿದ್ಯೆಯ ಎಲ್ಲ ಪ್ರಕಾರಗಳನ್ನು, ಅಂದರೆ ಶಿಲ್ಪ, ಸಾಹಿತ್ಯ, ಸಂಗೀತ ಎಲ್ಲವನ್ನು ಕರುಣಿಸುವವಳು ಎಂಬ ನಂಬಿಕೆಯಿದೆ. ಇದನ್ನು ಮತ್ತಷ್ಟು ವಿಸ್ತರಿಸಿ ಪ್ರಜ್ಞೆ, ವಿವೇಕ, ಕೌಶಲಗಳಿಗೂ ಇವಳೇ ಆಧಾರವೆನ್ನುತ್ತಾರೆ. ಇದು ನಿಜವೂ ಹೌದು. ಏಕೆಂದರೆ ಇವೆಲ್ಲ ಮನುಷ್ಯನನ್ನು ಉತ್ತಮಪಡಿಸುವಂತಹವೇ ಆದ್ದರಿಂದ ಇವೆಲ್ಲವೂ ಅವಳ ಕಕ್ಷೆಯೊಳಗೇ ಬರುವಂತಹವು. ಸರಸ್ವತಿಯನ್ನು ದೇವಿಯೆಂದು ಒಪ್ಪಿದ ಮೇಲೆ ಅವಳಿಗೂ ಶಾಸ್ತ್ರೋಕ್ತವಾದ ಪ್ರತಿಷ್ಠೆ, ಪೂಜೆ, ವಿಸರ್ಜನೆ ಎಲ್ಲ ಉಂಟು. ಭಾರತದ ಉದ್ದಗಲಕ್ಕೂ ಆಯಾ ಪ್ರಾಂತ್ಯ–ಸಂಸ್ಕೃತಿಗೆ ತಕ್ಕಂತೆ ಇದು ನಡೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾದ ಪೂಜೆ ಎಂದರೆ ಅಕ್ಷರದ ಆರಾಧನೆ. ಇದು ಕಲಿಕೆಯ ಝರಿ, ನಿರಂತರವಾಗಿ ಹರಿಯಬೇಕಾದ ಝರಿ; ಗುಪ್ತಗಾಮಿನಿಯಾದ ಸರಸ್ವತೀನದಿಯಂತೆ ಇದು ನಮ್ಮೊಳಗೆ ಹರಿಯುತ್ತಲೇ ಇರಬೇಕು. ಅದೇ ನಿಜವಾದ ಸರಸ್ವತೀಪೂಜೆ.

ಕಲಿಕೆಯೆಂಬುದು ಪ್ರಜ್ಞೆಯ ವಿಕಾಸಕ್ಕೆ ನಡೆಯುವ ತಯಾರಿ. ಹಟಮಾರಿ ಮಗುವಿನಂತೆ ರಚ್ಚೆ ಹಿಡಿದು ಬ್ರಹ್ಮನನ್ನು ಒಲಿಸಿಕೊಂಡ ರಕ್ಕಸರು ಕಲಿತದ್ದೇನನ್ನು? ಅವರು ವಿವೇಕದ ಹಾದಿಯ ಬದಲು ವಿನಾಶದ ಹಾದಿ ತುಳಿದದ್ದೇಕೆ? ಏಕೆಂದರೆ ಅವರಲ್ಲಿ ಸರಸ್ವತಿಯು ವಿವೇಕದ ಪ್ರಚೋದನೆ ನೀಡಲಿಲ್ಲ! ಹಸಿವು, ನಿದ್ರೆ, ಸುಖ ಮರೆತು ತಪಸ್ಸು ಮಾಡಿದ ಕುಂಭಕರ್ಣ ಕೊನೆಗೂ ಬೇಡಿದ ವರ - ‘ನಿದ್ರಾವತ್ವಂ’! [‘ಇಂದ್ರಾವತ್ವಂ’ ಎಂಬುದನ್ನು ಹೇಳಲು ಹೋಗಿ ನಾಲಗೆ ಹೊರಳದೆ – ಹೊರಳದಂತೆ ಮಾಡಿದ್ದು ಎಂದೂ ಹೇಳುತ್ತಾರೆ!] ನಿದ್ರೆ ಬೇಡಿದನಂತೆ. ಬದುಕಿನ ಸೂಕ್ಷ್ಮತೆಗಳನ್ನು ಅರಿಯುವ ಪ್ರಜ್ಞೆ ಇಲ್ಲದಿರುವುದೇ ಇಂತಹ ಎಡವಟ್ಟುಗಳಿಗೆ ಕಾರಣ. ಆಧುನಿಕ ಕಥೆಯೊಂದನ್ನು ನೆನಪಿಸಿಕೊಳ್ಳಬಹುದು:

ಹಳ್ಳಿಯ ಕಮ್ಮಾರನೊಬ್ಬ ಅತ್ಯಂತ ಕಡಿಮೆ ಸಂಬಳ ಪಡೆಯಲು ಒಪ್ಪಿದ ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ಸೇರಿಸಿಕೊಂಡ. ಕೆಲಸದ ಮೊದಲನೇ ದಿನವೇ ಆ ಹೊಸಬನಿಗೆ ಹೇಳಿದ, ‘ನೋಡು, ನಾನು ಕುಲುಮೆಯಿಂದ ಕೆಂಪಗೆ ಕಾದ ಕಬ್ಬಿಣವನ್ನು ತೆಗೆದು ಅಡಿಗಲ್ಲ ಮೇಲೆ ಇಟ್ಟ ಬಳಿಕ ತಲೆ ಅಲ್ಲಾಡಿಸುತ್ತೇನೆ; ಆಗ ನೀನು ಅದರ ಮೇಲೆ ಸುತ್ತಿಗೆಯಿಂದ ಬಲವಾದ ಏಟು ಹಾಕು.’

ಆ ಹೊಸಬ ತಾನು ‘ಅರ್ಥ’ ಮಾಡಿಕೊಂಡಂತೆ ಆ ಕೆಲಸ ನಿರ್ವಹಿಸಿದ. ಪರಿಣಾಮವಾಗಿ ಮರುದಿನ ಆ ಹೊಸಬನೇ ಹಳ್ಳಿಯ ಕಮ್ಮಾರನಾಗಿದ್ದ!

ಅಪಾಯವಿರುವುದು ನಾವು ಅರ್ಥಮಾಡಿಕೊಳ್ಳುವ ಕ್ರಮದಲ್ಲಿ. ನಾವು ಕೇಳಿದ್ದು, ಕಂಡಿದ್ದು ನಮ್ಮ ಹಿನ್ನೆಲೆಗೆ ತಕ್ಕಂತೆ ಅರಿವಿನ ವಿಸ್ತಾರ ಪಡೆಯುತ್ತದೆ. ಹೀಗಾಗಿ ವಾಸ್ತವದ ಅತ್ತಬದಿಯ ಚಿತ್ರಣ ನಮಗೆ ದೊರಕುವುದೇ ಅಪರೂಪ. ಹಾಗೆ ಒಟ್ಟೂ ಸ್ವರೂಪ ಕಾಣುವ ಶಕ್ತಿ ಪಡೆದಾಗ ಮಾತ್ರ ನಾವು ಪೂರ್ಣಪ್ರಜ್ಞರು, ದೇವಿ ಸರಸ್ವತಿಯ ಕೃಪೆ ಪಡೆದವರು ಎನಿಸಿಕೊಳ್ಳುತ್ತೇವೆ. ಮಹಾಭಾರತದ ಯುದ್ಧದಲ್ಲಿ ಮಹಾಸೈನ್ಯಗಳ ನಡುವೆ ನಿಂತಾಗ ಅರ್ಜುನ ಕಂಡದ್ದು ಬಂಧು-ಬಾಂಧವರನ್ನು, ಗುರುಗಳನ್ನು, ಮಾನವ ಸಂಬಂಧಗಳನ್ನು. ಆದರೆ ಶ್ರೀಕೃಷ್ಣ ಕಂಡದ್ದು ಧರ್ಮ ಅಧರ್ಮದ ಪ್ರತೀಕಗಳನ್ನು. ತನ್ನ ಬೋಧನೆಯ ಬಲದಿಂದ ಅರ್ಜುನನ ಅರಿವಿನ ವಿಸ್ತಾರವನ್ನು ಹೆಚ್ಚಿಸಿ ಅವನ ಮೌಢ್ಯವನ್ನು ತೊಲಗಿಸಿದ ಶ್ರೀಕೃಷ್ಣ. ಹೀಗೆ ಯುದ್ಧವು ಅರ್ಜುನನಿಗೆ ಒಂದು ಕ್ರಿಯೆಯಾಗದೆ ಪ್ರಜ್ಞಾಪೂರ್ವಕ ಯಜ್ಞವಾಯಿತು, ಕೃಷ್ಣನ ಮಾರ್ಗದರ್ಶನದಿಂದ.

 ಸರಸ್ವತಿ ಶ್ವೇತಾಂಬರಧರೆಯಾಗಿ ಹಂಸದ ಮೇಲೆಯೇ ಬರಬೇಕೆಂದೇನಿಲ್ಲ. ಅವಳು ಸೂಟು–ಬೂಟು ಧರಿಸಿದ ನಮ್ಮ ಪ್ರೊಫೆಸರ್ ಆಗಿ ಕಾರಿನಿಂದ ಇಳಿಯಬಹುದು. ಮುಕ್ತರ, ಪ್ರಾಜ್ಞರ ರೂಪದಲ್ಲಿ ಅವಳು ಬರಬಹುದು. ಇಂತಹವರ ಸಂಪರ್ಕದಿಂದ ನಾವು ಉದ್ಧಾರವಾಗಬಹುದು. ನರೇಂದ್ರ ಶ್ರೀ ರಾಮಕೃಷ್ಣರನ್ನು ಭೇಟಿಯಾಗದಿದ್ದರೆ ವಕೀಲನೋ ದೇಶಸೇವಕನೋ ಅಥವಾ ಸಮಾಜಮುಖಂಡನೋ ಆಗಿರುತ್ತಿದ್ದನೇ ಹೊರತು ಜಗತ್ತೇ ಗೌರವಿಸುವ ವಿವೇಕಾನಂದನಾಗುತ್ತಿರಲಿಲ್ಲ. ವಿವೇಕಾನಂದರ ಪಾಲಿಗೆ ಶ್ರೀರಾಮಕೃಷ್ಣರೇ ಸರಸ್ವತಿ. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಗಿಳಿದು ನರೇಂದ್ರನು ವಿವೇಕಾನಂದನಾದ. ಅಧ್ಯಯನ, ಶ್ರವಣ, ಮನನ ನಿದಿಧ್ಯಾಸನಗಳೇ ಸರಸ್ವತಿಯ ಆರಾಧಕನ ಪೂಜಾಕ್ರಮ. ಇಂತಹ ನಿರಂತರ ಪ್ರಯತ್ನದಿಂದ ಜ್ಞಾನವನ್ನು ಪಡೆದವನೇ ವಿವೇಕಾನಂದನಾಗುವುದು. ಈ ಬಾರಿಯ ಸರಸ್ವತಿಯ ಪೂಜೆಯ ಸಂದರ್ಭದಲ್ಲಿ ನಾವು ಜ್ಞಾನಸಾಧನೆಯ ಸೋಪಾನಗಳನ್ನು ಏರೋಣ, ನಿಜಸರಸ್ವತಿಯ ಆರಾಧಕರಾಗೋಣ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.