ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಮಾತೆಗೆ ನಲಿವಿನ ಪೂಜೆ

Last Updated 21 ಅಕ್ಟೋಬರ್ 2020, 8:19 IST
ಅಕ್ಷರ ಗಾತ್ರ

ನಮಸ್ತೇ ಶಾರದಾದೇವಿ

ಕಾಶ್ಮೀರಪುರವಾಸಿನಿ |

ತ್ವಾಮಹಂ ಪ್ರಾರ್ಥಯೇ ನಿತ್ಯಂ

ವಿದ್ಯಾಂ ಬುದ್ಧಿಂ ಚ ದೇಹಿ ಮೇ ||

(ಕಾಶ್ಮೀರಪುರದಲ್ಲಿ ವಾಸಿಸುತ್ತಿರುವ ಶಾರದಾದೇವಿಯೇ ನಿನಗೆ ನಮಸ್ಕಾರ. ನನಗೆ ವಿದ್ಯೆಯನ್ನೂ ಬುದ್ಧಿಯನ್ನೂ ಕೊಡು ಎಂದು ನಿತ್ಯವೂ ನಿನ್ನನ್ನು ಪ್ರಾರ್ಥಿಸುತ್ತೇನೆ.)

ನವರಾತ್ರಿಯಲ್ಲಿ ಆಚರಿಸುವ ಮುಖ್ಯವಾದ ಆರಾಧನೆಗಳಲ್ಲಿ ಸರಸ್ವತೀಪೂಜೆಯೂ ಒಂದು. ಒಂಬತ್ತು ದಿನಗಳಲ್ಲಿ ಮೂರು ದಿನಗಳನ್ನು ಶಕ್ತಿದೇವತೆಯನ್ನು ಸರಸ್ವತೀಸ್ವರೂಪದಲ್ಲಿಯೇ ಆಚರಿಸಲಾಗುತ್ತದೆ. ಮೂಲಾನಕ್ಷತ್ರದಲ್ಲಿ ಸರಸ್ವತಿಯನ್ನು ಆವಾಹಿಸಿಪೂಜೆಮಾಡುವುದು ಕ್ರಮ.

ಸರಸ್ವತಿ ಎಂದರೆ ವಿದ್ಯೆಗೆ ಒಡತಿ;ಅರಿವಿನತಾಯಿ; ತಿಳಿವಳಿಕೆಯ ಮೂಲ.

ಸರಸ್ವತಿಯ ಪೂಜೆಯನ್ನು ನಾವು ನವರಾತ್ರಿಯಲ್ಲಿ ಹೇಗೆ ಮಾಡುತ್ತಿದ್ದೇವೆ? ನಮ್ಮ ಇದುವರೆಗೂ ಓದುತ್ತಬಂದಿರುವ ಪುಸ್ತಕಗಳಿಗೇ ಪೂಜೆಯನ್ನು ಸಲ್ಲಿಸುವುದು ಪದ್ಧತಿ.

ಇಲ್ಲೊಂದು ಪ್ರಶ್ನೆ ಏಳುತ್ತದೆ. ಸರಸ್ವತಿಯ ಪೂಜೆಯ ದಿನ ಪುಸ್ತಕವನ್ನು ಓದುವುದು ಹೆಚ್ಚು ಸಾರ್ಥಕವಾಗಬಹುದು. ಆದರೆ ಪುಸ್ತಕಗಳನ್ನು ಓದುವುದಕ್ಕೆ ಅವಕಾಶ ಇಲ್ಲದಂತೆ ಪೂಜೆಗೆ ಅವನ್ನು ಬಳಸುವುದರ ಉದ್ದೇಶವಾದರೂ ಏನು?

ನಮ್ಮ ಸಂಸ್ಕೃತಿಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ; ಮಾತ್ರವಲ್ಲ, ಅದಕ್ಕೊಂದು ಬಲವಾದ ಕ್ರಮವನ್ನೂ ರೂಪಿಸಲಾಗಿದೆ. ನಾವು ವಿದ್ಯೆಯನ್ನು ಮೂರು ಹಂತಗಳಲ್ಲಿ ದಕ್ಕಿಸಿಕೊಳ್ಳಬೇಕು ಎಂಬುದು ಈ ಕ್ರಮಗಳಲ್ಲಿ ಒಂದು; ಶ್ರವಣ, ಮನನ ಮತ್ತು ನಿದಿಧ್ಯಾಸನ – ಇವೇ ಆ ಮೂರು ಹಂತಗಳು.

ಶ್ರವಣ. ಇದು ಮೊದಲನೆಯ ಹಂತ. ಇಲ್ಲಿ ನಾವು ಓದುವುದು, ಕೇಳುವುದು – ಇಂಥ ಪ್ರಕ್ರಿಯೆಗಳ ಮೂಲಕ ಅರಿವಿನಆಕರಗಳನ್ನು ನಮ್ಮಲ್ಲಿ ತುಂಬಿಸಿಕೊಳ್ಳುತ್ತೇವೆ. ಹೀಗೆ ತುಂಬಿಸಿಕೊಂಡುದನ್ನು ನಮ್ಮ ವಿಚಾರಶಕ್ತಿಯಿಂದ ವಿಶ್ಲೇಷಣೆಗೆ ಒಳಪಡಿಸಬೇಕು; ಅವುಗಳ ಸಾರ್ಥಕತೆ–ನಿರರ್ಥಕತೆಗಳ ಬಗ್ಗೆ ಮೌಲ್ಯಮಾಪನವನ್ನು ನಡೆಸಬೇಕು. ಇದೇ ಮನನ; ಎರಡನೆಯ ಹಂತ. ಮೂರನೆಯ ಹಂತವೇ ನಿದಿಧ್ಯಾಸನ; ಎಂದರೆ ನಮಗೆ ಒಗ್ಗುವಂಥ ತಿಳಿವಳಿಕೆ ಯಾವುದೆಂದುನಮ್ಮ ವಿಚಾರಶಕ್ತಿಯಿಂದ ನಿರ್ಧಾರ ಮಾಡಿಕೊಂಡ ಮೇಲೆ ಅದನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವುದು.

ನವರಾತ್ರಿಯ ಸಂದರ್ಭದಲ್ಲಿ ನಾವು ಪುಸ್ತಕಗಳಿಗೆ ’ವಿಶ್ರಾಂತಿ’ಯನ್ನು ಕೊಡುತ್ತಿರುವ ಸಾಂಕೇತಿಕತೆ ಏನು ಎಂದರೆ ನಾವು ಇದುವರೆಗೂ ಓದಿರುವುದನ್ನು ಮನನ ಮಾಡಬೇಕೆಂದು. ನಮ್ಮ ಅಧ್ಯಯನದಲ್ಲಿ ಮನನ ಎನ್ನುವುದು ತುಂಬ ಮುಖ್ಯವಾದ ವಿವರ ಎನ್ನುವುದನ್ನು ಸರಸ್ವತಿಯಪೂಜೆಎತ್ತಿಹಿಡಿಯುತ್ತಿದೆ.

ನಮ್ಮ ಸಂಸ್ಕೃತಿಯಲ್ಲಿ ಕಾಶ್ಮೀರವನ್ನು ಶಾರದೆಯ ನೆಲೆ ಎಂದು ಕಾಣಲಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ; ಭಾರತೀಯ ವಿದ್ಯಾಪರಂಪರೆಗೆ ಕಾಶ್ಮೀರ ನೀಡಿರುವ ಕೊಡುಗೆ ಅಪೂರ್ವವಾದುದು. ಕಾಶ್ಮೀರವನ್ನು ’ಶಾರದಾಪೀಠ’ ಎಂದೇ ಕರೆಯವುದು ವಾಡಿಕೆ. ಅಲ್ಲಿಯೇ ಸರ್ವಜ್ಞಪೀಠ ಇರುವುದು ಎಂಬುದೂ ನಮ್ಮ ನಂಬಿಕೆ. ಎಲ್ಲ ವಿದ್ಯೆಗಳ ಶಿಖರವೇ ಸರ್ವಜ್ಞತ್ವ. ಅದರ ನೆಲೆ ಕಾಶ್ಮೀರ ಎಂಬುದು ಈ ನಂಬಿಕೆಯ ಹಿಂದಿರುವ ಧ್ವನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT