ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪಾಡ್ಯಮಿ: ದಾನಕ್ಕೆ ದೊರೆತ ವರ

Last Updated 15 ನವೆಂಬರ್ 2020, 21:05 IST
ಅಕ್ಷರ ಗಾತ್ರ

ಬಲಿರಾಜ ನಮಸ್ತುಭ್ಯಂ ವಿರೋಚನಸುತ
ಪ್ರಭೋ |
ಭವಿಷ್ಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ ||


‘ಹೇ ವಿರೋಚನನ ಮಗನಾದ ಬಲಿರಾಜನೇ, ನಿನಗೆ ನಮಸ್ಕಾರಗಳು. ಹೇ ರಾಕ್ಷಸರ ರಾಜನೇ, ಮುಂದೆ ನೀನು ಇಂದ್ರನಾಗುವವನು. ನಮ್ಮ ಈ ಪೂಜೆಯನ್ನು ಸ್ವೀಕರಿಸಿ, ನಮಗೂ ವಿಷ್ಣುವಿನ ಸಾನ್ನಿಧ್ಯವನ್ನು ಉಂಟುಮಾಡು.’

ಬಲಿಪಡ್ಯಾಮಿ, ದೀಪಾವಳಿಯ ಮೂರನೆಯ ದಿನ; ಬಲಿಯನ್ನು ಪಾತಾಳಕ್ಕೆ ಕಳುಹಿಸಿ ಲೋಕವನ್ನು ಸಂರಕ್ಷಿಸಿದ ಸುದಿನ ಇದು. ಆದ್ದರಿಂದ ಭಗವಂತನ ಲೀಲೆ-ಕೀರ್ತನೆಗಳನ್ನು ಸ್ಮರಿಸಬೇಕು. ಬಲಿಯು ಭಕ್ತಪ್ರಹ್ಲಾದನ ವಂಶಜ. ಈತ ಅನೇಕ ದೈವೀಗುಣಗಳನ್ನು ಹೊಂದಿ, ಅನೇಕ ದಾನಧರ್ಮಗಳನ್ನು, ಯಜ್ಞಯಾಗಾದಿಗಳನ್ನು ಮಾಡಿದ. ಆದರೆ ಇದೇ ಅವನಿಗೆ ಮದವನ್ನುಂಟು ಮಾಡಿತು. ಆ ಮದದಿಂದ ತ್ರಿಲೋಕಗಳನ್ನು ವಶಪಡಿಸಿಕೊಂಡ. ಅಲ್ಲಿನವರನ್ನು ಬೀದಿಗೆ ಕಳುಹಿಸಿದ. ಭಗವಂತನನ್ನೇ ಮರೆತ.

ಭಗವಂತನಾದ ಮಹಾವಿಷ್ಣುವು ವಾಮನರೂಪದಲ್ಲಿ ಬಲಿಚಕ್ರವರ್ತಿಯಲ್ಲಿಗೆ ಬಂದು ಅವನಿಂದ ದಾನವನ್ನು ಕೇಳುತ್ತಾನೆ. ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೊಡುವಂತೆ ಕೇಳುತ್ತಾನೆ. ಮೊದಲ ಹೆಜ್ಜೆಯಿಂದ ಇಡಿಯ ಭೂಮಿಯನ್ನೂ, ಎರಡನೆಯ ಹೆಜ್ಜೆಯಿಂದ ಆಕಾಶವನ್ನೂ ಆಕ್ರಮಿಸುತ್ತಾನೆ, ವಾಮನರೂಪದಲ್ಲಿದ್ದ ವಿಷ್ಣು. ಮೂರನೆಯ ಹೆಜ್ಜೆಗೆ ಸ್ಥಳವನ್ನು ಕೇಳಿದಾಗ ಬಲಿ ತನ್ನ ತಲೆಯನ್ನೇ ತೋರಿಸುತ್ತಾನೆ. ಆಗ ಬಲಿಯ ತಲೆಯ ಮೇಲೆ ಹೆಜ್ಜೆಯನ್ನಿಟ್ಟು ಅವನನ್ನು ಪಾತಾಳಲೋಕಕ್ಕೆ ತಳ್ಳುತ್ತಾನೆ, ಶ್ರೀಹರಿ. ಆದರೆ ’ದಾನದ ಹೆಸರಿನಲ್ಲಿ ನನ್ನ ಪತಿದೇವನಿಗೆ ನೀನು ಮೋಸ ಮಾಡಿದ್ದು ಸರಿಯೇ?’ ಎಂದು ಬಲಿಯ ಪತ್ನಿ ವಿಂಧ್ಯಾವಳಿ ಪ್ರಶ್ನಿಸುತ್ತಾಳೆ. ಭಗವಂತನು ಅದಕ್ಕೆ ಉತ್ತರವಾಗಿ, ‘ನನ್ನ ಅನುಗ್ರಹಕ್ಕೆ ಪಾತ್ರರಾದವರಿಗೆ ಎಲ್ಲ ರೀತಿಯ ಅಜ್ಞಾನ-ಮದಗಳಿಂದ ಪಾರುಮಾಡುತ್ತೇನೆ. ಅದನ್ನೇ ನಿನ್ನ ಪತಿಗೂ ಈಗ ಅನುಗ್ರಹಿಸಿದ್ದೇನೆ. ನಿಮ್ಮನ್ನು ಅನುಗ್ರಹಿಸಲಿಕ್ಕಾಗಿಯೇ ಈ ಪರೀಕ್ಷೆ. ಆಡಿದ ಮಾತಿನಂತೆ ನಡೆದ ನಿನ್ನ ಪತಿಯ ಸತ್ಯನಿಷ್ಠೆಗಾಗಿ ಸುತಲ ಲೋಕದ ಆಧಿಪತ್ಯವನ್ನು ಕೊಡುತ್ತಿದ್ದೇನೆ. ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಯನ್ನು ಅನುಗ್ರಹಿಸುತ್ತಾನೆ. ಮುಖ್ಯವಾಗಿ ಅವನಿಗೆ ನನ್ನ ದರ್ಶನಭಾಗ್ಯವನ್ನು ಸದಾಕಾಲ ಕರುಣಿಸುತ್ತಿದ್ದೇನೆ’ ಎನ್ನುತ್ತಾನೆ.

ನಾವೂ ಅಹಂ-ಮಮಕಾರಗಳನ್ನು ತ್ಯಜಿಸಿ ಭಗವಂತನಲ್ಲಿ ಶರಣಾದರೆ ಅವನ ಕೃಪೆಗೆ ಪಾತ್ರರಾಗಬಹುದು ಎಂದು ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕು.

ಬಲಿಚಕ್ರವರ್ತಿಯು ಬಲಿಪಾಡ್ಯಮಿಯಂದು ತನ್ನ ರಾಜ್ಯವಾದ ಈ ಭೂಲೋಕವನ್ನು ಸಂದರ್ಶಿಸಲು ಆಗಮಿಸುತ್ತಾನೆ ಎಂಬ ನಂಬಿಕೆಯಿದೆ. ಇದು ಮಹಾವಿಷ್ಣುವೇ ಅವನಿಗೆ ನೀಡಿದ ವರ.

ದಕ್ಷಿಣ ಭಾರತದವರಿಗೆ ಯುಗಾದಿ ಹೊಸ ವರ್ಷವಿದ್ದಂತೆ, ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಹೊಸ ವರ್ಷ ಪ್ರಾರಂಭವಾಗುತ್ತದೆ. ಭಾರತದ ಹೆಸರಾಂತ ಚಕ್ರವರ್ತಿಯಾಗಿದ್ದ ವಿಕ್ರಮನು ರಾಜ್ಯಾಭಿಷೇಕಗೊಂಡ ದಿನವೂ ಹೌದು. ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿ ಭಕ್ತರನ್ನು ರಕ್ಷಿಸಿದ ದಿನವೂ ಇದೇ ಎಂದು ಪ್ರತೀತಿ. ಆದ್ದರಿಂದ ಅಂದು ಗೋವರ್ಧನಪೂಜೆ ಮಾಡುವ, ಗೋವುಗಳ ಪೂಜೆ ಮಾಡುವ ಸಂಪ್ರದಾಯವೂ ರೂಢಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT