ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ugadi Festival 2024 | ಯುಗಾದಿ: ನೋವು ನಲಿವುಗಳ ಹಬ್ಬ

Published : 8 ಏಪ್ರಿಲ್ 2024, 23:30 IST
Last Updated : 8 ಏಪ್ರಿಲ್ 2024, 23:30 IST
ಫಾಲೋ ಮಾಡಿ
Comments

ಜೀವನದಲ್ಲಿ ಸಿಹಿ–ಕಹಿ – ಎರಡೂ ಸಹಜ; ಹೀಗಾಗಿ ಎರಡನ್ನೂ ಸಮಾನವಾಗಿ, ಸಮಚಿತ್ತದಿಂದ ಸ್ವೀಕರಿಸಬೇಕು ಎಂಬುದೇ ಯುಗಾದಿಯ ಸಂದೇಶ. ಆದರೆ ಈ ಸಲ ಸದ್ಯ ನಮ್ಮ ಪಾಲಿಗೆ ‘ಕಹಿ’ಯೇ ಹೆಚ್ಚಾಗುವಂತಿದೆ. ರಾಜ್ಯಕ್ಕೆ ಬರ ಎದುರಾಗಿದೆ. ಎಲ್ಲೆಲ್ಲೂ ಬಿಸಿಲಿನ ಧಗೆ; ಜೊತೆಗೆ ಜಗತ್ತಿನಾದ್ಯಂತ ದ್ವೇಷದ ಹೊಗೆ. ಈ ಆತಂಕಗಳನ್ನು ಎದುರಿಸುವ ಬಗೆಯನ್ನೂ ಯುಗಾದಿಯ ಸಂದೇಶದಲ್ಲಿಯೇ ಕಾಣಬಹುದೆನ್ನಿ! ಬದಲಾವಣೆಯು ಸೃಷ್ಟಿಯ ನಿರಂತರ ನಿಯಮ; ಎಲೆಯೊಂದು ಚಿಗುರುವುದು, ಕೊಂಬೆಯಲ್ಲಿ ಹೂವೊಂದು ಕೊನರುವುದು, ಹೂವಾಗಿರುವುದು ಕಾಯಾಗುವುದು, ಕಾಯಿ ಹಣ್ಣಾಗುವುದು, ಹಣ್ಣು ಮಣ್ಣು ಸೇರುವುದು, ನಳನಳಿಸುತ್ತಿದ್ದ ಮರ ಬೋಳಾಗುವುದು, ಮಣ್ಣಿನಲ್ಲಿ ಸೇರಿದ ಜೀವರಸದಿಂದ ಮತ್ತೆ ಆ ಮರ ಚಿಗುರುವುದು, ಹೂವಾಗಿ ಅರಳುವುದು, ಹೂವು ಕಾಯಾಗುವುದು, ... – ಇದು ನಿಸರ್ಗದ ನಿತ್ಯನಿಯಮ. ಯುಗಾದಿಯ ಸಂದೇಶವೂ ಇದೇ ಹೌದು. ಬರ, ಧಗೆ, ಹಗೆ – ಇವೆಲ್ಲವೂ ಬದಲಾವಣೆಯನ್ನು ಕಾಣಲೇಬೇಕು; ಒಣಗಿದ ಮರದಲ್ಲಿ ಚಿಗುರು ಮೂಡುವಂತೆ ಆತಂಕದ ಮನದಲ್ಲಿ ನೆಮ್ಮದಿಯೂ ಮೂಡಲೇಬೇಕು. ಇದೇ ಜೀವನಚಕ್ರ. ಇಂಥ ಭರವಸೆಯನ್ನು ಪ್ರಕೃತಿಯು ಪ್ರತಿ ಕ್ಷಣವೂ ಕೊಡುತ್ತಲೇ ಇರುತ್ತದೆ. ಇದರ ಸಾಂಕೇತಿಕತೆಯನ್ನೇ ಯುಗಾದಿಯ ಹಬ್ಬದಲ್ಲಿ ನಾವು ಕಾಣುವುದು, ಕಾಣಬೇಕಾದದ್ದು ಕೂಡ.

ಚೈತ್ರಮಾಸದ ಮೊದಲನೆಯ ದಿನ, ಶುಕ್ಲ ಪ್ರತಿಪದೆಯಂದು ಯುಗಾದಿಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಬ್ರಹ್ಮನು ಇಡಿಯ ಜಗತ್ತನ್ನು ಸೃಷ್ಟಿಸಿದ ಎಂಬುದು ನಮ್ಮ ನಂಬಿಕೆ. ಇಂಥ ಒಕ್ಕಣೆಯನ್ನು ನಾವು ಪುರಾಣಗಳಲ್ಲಿ ಕಾಣುತ್ತೇವೆ. ಬ್ರಾಹ್ಮಪುರಾಣದಲ್ಲಿ ಇಂಥದೊಂದು ಮಾತನ್ನು ಕಾಣಬಹುದು:

ಚೈತ್ರೇ ಮಾಸಿ ಜಗದ್‌ ಬ್ರಹ್ಮಾ

ಸಸರ್ಜ ಪ್ರಥಮೇsಹನಿ ।

ಶುಕ್ಲಪಕ್ಷೇ ಸಮಗ್ರಂ ತು

ತದಾ ಸೂರ್ಯೋದಯೇ ಸತಿ ।।

‘ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನ ಸೂರ್ಯೋದಯದೊಡನೆ ಬ್ರಹ್ಮನು ಸಂಪೂರ್ಣ ಜಗತ್ತನ್ನು ಸೃಷ್ಟಿಸಿದನು’ – ಎಂಬುದು ಇದರ ತಾತ್ಪರ್ಯ.

ಸೃಷ್ಟಿ ಎಂದರೆ ಕಾಲದ ಆರಂಭವೂ ಹೌದು. ಕಾಲದಲ್ಲಿಯೇ ನಮ್ಮ ಪ್ರಪಂಚ ಹರಡಿರುವುದು; ನಮ್ಮ ಜೀವನವೂ ಹರಡಿರುವುದು. ಹೀಗಾಗಿ ಕಾಲಕ್ಕೂ ನಮಗೂ ನೇರ ನಂಟು. ಕಾಲದ ವ್ಯಾಪ್ತಿಯಲ್ಲಿಯೇ ಸೃಷ್ಟಿ–ಪ್ರಲಯ, ಹಗಲು–ಇರುಳು, ಕತ್ತಲು–ಬೆಳಕು, ಹುಟ್ಟು–ಸಾವುಗಳು ಇರುವಂಥದ್ದು. ಇವೇ ನಮ್ಮ ಸುಖ–ದುಃಖಗಳೂ ನೋವು–ನಲಿವುಗಳೂ. ಇವು ನಿರಂತರವಾಗಿ ಸುತ್ತುತ್ತಲೇ ಇರುತ್ತವೆ. ಸೃಷ್ಟಿಯಾಗಿರುವ ವಿಶ್ವ ಅದು ಒಂದು ದಿನ ಪ್ರಳಯವಾಗಲೇ ಬೇಕು; ಪ್ರಳಯವಾದದ್ದು ಮತ್ತೆ ಕಾಣಿಸಿಕೊಳ್ಳುತ್ತದೆ ಕೂಡ. ಈ ಸತ್ಯ ನಮ್ಮಲ್ಲಿ ಗಟ್ಟಿಯಾಗಿ ಮನೆಮಾಡಿದಾಗ ಜೀವನವೂ ನಿತ್ಯವೂ ವಸಂತವಾಗಬಹುದು, ಚೈತ್ರಮಾಸದಂತೆ ನಮ್ಮ ಪ್ರಕೃತಿಯೂ ನಳನಳಿಸಬಹುದು – ಎಂಬ ಧ್ವನಿ ಯುಗಾದಿಯ ಆಚರಣೆಯಲ್ಲಿದೆ. 

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ – ಎಂಬ ಮಾತೊಂದಿದೆ. ನಾವು ಯಾವುದನ್ನಾದರೂ ಹೆಚ್ಚಿನ ಕಾಲ ಪಡೆಯಲು ಉದ್ದೇಶಿಸಿದ್ದಾದರೆ, ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಬಹಳ ಬೇಗ, ಸರಿಯಾದ ಸಮಯದಲ್ಲಿ ಆರಂಭಿಸಬೇಕು ಎಂಬುದು ಈ ಮಾತಿನ ತಾತ್ಪರ್ಯ. ನಾವು ವರ್ಷ ಪೂರ್ತಿ ಸಂತೋಷವಾಗಿರಬೇಕು ಎಂದರೆ ವರ್ಷದ ಆರಂಭದಲ್ಲಿ ಇದಕ್ಕೆ ಪ್ರಯತ್ನಗಳೂ ಆರಂಭವಾಗಬೇಕಷ್ಟೆ. ಹೀಗೆ ಇಡೀ ವರ್ಷ ನಮ್ಮ ಪಾಲಿಗೆ ಹಬ್ಬವಾಗಬೇಕಾದರೆ ವರ್ಷದ ಮೊದಲನೆಯ ದಿನವೇ ಹಬ್ಬವಾಗಬೇಕು. ಈ ಹಬ್ಬವಾದರೂ ಕೇವಲ ಮೈಮರೆತು ಕುಣಿದು ಕುಪ್ಪಳಿಸುವುದಕ್ಕೆ ಸೀಮಿತವಾದುದಲ್ಲ, ಜೀವನದ ಗಹನ ಸತ್ಯವನ್ನು ಮೈಗೂಡಿಸಿಕೊಳ್ಳುವ ಸಂಕಲ್ಪವಾಗತಕ್ಕದ್ದು. ಇದನ್ನೇ ನಾವು ಯುಗಾದಿಯ ಆಚರಣೆಯಲ್ಲಿ ಕಾಣುವುದು. ಜೀವನದಲ್ಲಿ ಸೋಲು–ಗೆಲುವು, ಸುಖ–ಕಷ್ಟ, ಸಿಹಿ–ಕಹಿ ಅನಿವಾರ್ಯ; ಆದರೆ ಯಾವುದು ಎದುರಾದರೂ ಅದನ್ನು ಧೈರ್ಯದಿಂದ, ಸಮಾಧಾನದಿಂದ, ಸಂತೋಷದಿಂದ, ವಿವೇಕದಿಂದ ಎದುರಿಸಬೇಕು. ಆಗ ಜೀವನವೇ ಹಬ್ಬವಾಗುತ್ತದೆ, ಸಂತೋಷದ ಚಿಲುಮೆಯಾಗುತ್ತದೆ. ಇದೇ ಯುಗಾದಿ; ಎಂದರೆ, ಇದೇ ನಮ್ಮ ಯುಗದ ಆದಿಯಾಗಬೇಕು; ಜೀವನದ ಮೊದಲ ಕ್ಷಣವಾಗಬೇಕು. ಯುಗಾದಿಯ ದಿನ ಭವಿಷ್ಯವನ್ನು ಕೇಳುವುದಾದರೂ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ನಮ್ಮಲ್ಲಿ ಇದೆ ಎಂದು ಎಚ್ಚರಿಸುವ ಉದ್ದೇಶದಿಂದಲೇ ಹೌದು. ಬೇವು–ಬೆಲ್ಲಗಳನ್ನು ಸೇವಿಸುತ್ತ ನಾವು ಇಂದು ಪ್ರಾರ್ಥಿಸಿಕೊಳ್ಳುವುದು – ನೂರು ವರ್ಷಗಳ ಆರೋಗ್ಯಪೂರ್ಣ ಜೀವನಕ್ಕಾಗಿ, ಎಲ್ಲ ಸಂಪತ್ತುಗಳ ಪ್ರಾಪ್ತಿಗಾಗಿ ಎಂಬುದನ್ನು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT