ಮಂಗಳವಾರ, ನವೆಂಬರ್ 12, 2019
28 °C

ಎಲ್ಲಿಯವರೆಗೂ ಈ ದ್ವೇಷ?

Published:
Updated:
Prajavani

ಎರಡು ಕೋಳಿಗಳು ತಿಪ್ಪೆಯ ಒಡೆತನಕ್ಕಾಗಿ ಕುಸ್ತಿಯಲ್ಲಿ ತೊಡಗಿದವು. ಹೋರಾಟ ಜೋರಾಗಿಯೇ ನಡೆಯಿತು. 

ಕೊನೆಗೆ ಒಂದು ಕೋಳಿ ಗೆದ್ದಿತು. ಗೆದ್ದ ಕೋಳಿ ಸಂಭ್ರಮದಿಂದ ಮನೆಯ ಮೇಲೆ ಹಾರಿ ಕುಳಿತು, ಲೋಕವೆಲ್ಲ ನನ್ನನ್ನು ನೋಡುತ್ತಿದೆ ಎಂದು ಸಂಭ್ರಮಿಸಿತು. ಸೋತ ಕೋಳಿ ಎಲ್ಲೋ ಒಂದು ಬಿಲದಲ್ಲಿ ಮುದುರಿ ಕುಳಿತುಕೊಂಡಿತು. 

ಅಷ್ಟರಲ್ಲಿ ಆಕಾಶದಲ್ಲಿ ರಣಹದ್ದುವೊಂದು ಆಹಾರದ ಹುಡುಕಾಟದಲ್ಲಿ ಹಾರಾಡುತ್ತಿತ್ತು. ಮನೆಯ ಮೇಲಿದ್ದ ಕೋಳಿ ಈಗ ಅದರ ಕಣ್ಣಿಗೆ ಬಿತ್ತು. ಕೂಡಲೇ ಅದರತ್ತ ವೇಗವಾಗಿ ಹಾರುತ್ತ, ಬಂದು ತನ್ನ ಚೂಪಾದ ಕೊಕ್ಕಿನಿಂದ ಹಿಡಿದು ಹಾರಿಹೋಯಿತು.

ಗೆಲುವಿನ ಸಂಭ್ರಮದಲ್ಲಿದ್ದ ಕೋಳಿ ಕ್ಷಣದಲ್ಲಿ ರಣಹದ್ದುವಿಗೆ ಆಹಾರವಾಗಿತ್ತು!

ಇತ್ತ, ಬಿಲ ಸೇರಿದ್ದ ಕೋಳಿ ರಣಹದ್ದುವಿನ ಬೇಟೆಯನ್ನು ದೂರದಿಂದಲೇ ಗಮನಿಸಿತ್ತು. ಈಗ ಅದರ ಶತ್ರುವಿನ ನಾಶವಾಗಿತ್ತು. ಹೀಗಾಗಿ ಅದು ಬಿಲದಿಂದ ಧೈರ್ಯವಾಗಿ ಹೊರಗೆ ಬಂದಿತು. ತಿಪ್ಪೆಯ ಯಾಜಮಾನ್ಯವನ್ನು ವಹಿಸಿಕೊಂಡಿತು.

* * *

ಇದೊಂದು ಈಸೋಪನ ಕಥೆ.

ಮೇಲಣ ಕಥೆಯ ಸಂದರ್ಭದಲ್ಲಿ ಕುಮಾರವ್ಯಾಸನ ಪದ್ಯವೊಂದು ನೆನಪಾಗುತ್ತದೆ:

ಕರಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು 
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ

ಸ್ವಜಾತಿಯವರು, ಎಂದರೆ ಒಂದೇ ವರ್ಗಕ್ಕೆ ಸೇರಿದವರು ಸೌಹಾರ್ದದಿಂದ ಇರುವುದಿಲ್ಲ ಎನ್ನುವುದು ಈ ಪದ್ಯದ ತಾತ್ಪರ್ಯ. ‘ಅಧಿಕಾರಿಗಳು ಅಧಿಕಾರಿಗಳೊಡನೆ, ಸೇವಕರು ಸೇವಕರೊಡನೆ, ಸಾಮಂತರಾಜರು ಸಾಮಂತರೊಡನೆ, ಮಂತ್ರಿಗಳು ಮಂತ್ರಿಗಳೊಡನೆ, ತರುಣಿಯರು ತರುಣಿಯರೊಡನೆ ಸ್ನೇಹ–ಸೌಹಾರ್ದದಿಂದ ಇರುವುದಿಲ್ಲ, ಪರಸ್ಪರ ದ್ವೇಷ–ಮತ್ಸರಗಳು ಮಸೆಯುತ್ತಿರುತ್ತವೆ’ ಎನ್ನುತ್ತಿದ್ದಾನೆ, ಕುಮಾರವ್ಯಾಸ. ಅವನ ಈ ಅಭಿಪ್ರಾಯ ಇಂದಿಗೂ ಸಲ್ಲುವುದೆನ್ನಿ!

ಆ ಎರಡು ಕೋಳಿಗಳು ಅನ್ಯೋನ್ಯವಾಗಿರಬಹುದಿತ್ತು. ಆದರೆ ತಿಪ್ಪೆಯ ಒಡೆತನಕ್ಕಾಗಿ ಸದಾ ಜಗಳದಲ್ಲಿ ಇರುತ್ತಿದ್ದವು. ಹೋಗಲಿ, ಗೆದ್ದ ಕೋಳಿಯಾದರೂ ಗೆಲುವನ್ನು ಅನುಭವಿಸಿತೆ? ವಿಧಿಯಾಟದಲ್ಲಿ ಅದು ಹದ್ದಿನ ಬಾಯಿಗೆ ಸಿಕ್ಕಿತು. 

ಎಲ್ಲರ ಜೀವನವೂ ಅನಿರೀಕ್ಷಿತ ದುರಂತಗಳ ನಿರೀಕ್ಷೆಯಲ್ಲೇ ಇರುತ್ತದೆ. ಯಾವ ಕ್ಷಣ ಯಾರಿಗೆ ಏನಾಗುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಶಾಶ್ವತವಾದ ಜೀವನವನ್ನು ಅರ್ಥಪೂರ್ಣವಾಗಿ ಜೀವಿಸಬೇಕೆ ಹೊರತು, ದ್ವೇಷ–ಅಸೂಯೆ–ಮತ್ಸರಗಳೆಂಬ ಕಲ್ಮಶಗಳಿಂದ ಜೀವನಸೌಂದರ್ಯವನ್ನು ಕೆಡಿಸಿಕೊಳ್ಳಬಾರದಲ್ಲವೆ?

ಕುಮಾರವ್ಯಾಸ ಒಂದೇ ಗುಂಪಿನವರಲ್ಲಿರುವ ಅರಿಷಡ್ವರ್ಗಗಳ ಬಗ್ಗೆ ಹೇಳುತ್ತಿದ್ದಾನೆ. ಆದರೆ ಇದು ಅನ್ವಯವಾಗುವುದು ಒಟ್ಟು ಮನುಷ್ಯಜಾತಿಗೇ ಹೌದು. ಇಂದು ಒಬ್ಬ ಮನುಷ್ಯನನ್ನು ಕಂಡರೆ ಇನ್ನೊಬ್ಬನಿಗೆ ಸಹಿಸಲಾಗದಂಥ ದ್ವೇಷವನ್ನು ತುಂಬಿಕೊಂಡಿದ್ದಾನೆ. ಹೀಗಾಗಿಯೇ ಅಕ್ಕಪಕ್ಕದವರನ್ನು ಅವನು ಸಹಜೀವಿಗಳನ್ನಾಗಿಯೂ ಸ್ನೇಹಿತರನ್ನಾಗಿಯೂ ನೋಡದೆ ಶತ್ರುಗಳಂತೆಯೇ ನೋಡುತ್ತಿದ್ದಾನೆ. ಆದರೆ ಈ ಶತ್ರುತ್ವ, ದ್ವೇಷ, ಅಸೂಯೆ, ಮತ್ಸರಗಳು ಎಲ್ಲಿಯವರೆಗೆ – ಎಂದು ಯೋಚಿಸಬೇಕಲ್ಲವೆ? 

ಪ್ರತಿಕ್ರಿಯಿಸಿ (+)