ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ನಿರ್ವಹಣೆಗೆ ಮನದಲ್ಲಿ ಬೇಕು ಅನುರಾಗ

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೇ?
Last Updated 23 ಏಪ್ರಿಲ್ 2021, 20:32 IST
ಅಕ್ಷರ ಗಾತ್ರ

ಕಳೆದ ವರ್ಷ, ತಮಿಳುನಾಡು ಸರ್ಕಾರವು ಮದ್ರಾಸಿನ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ರಾಜ್ಯದಲ್ಲಿನ 11,999 ದೇವಸ್ಥಾನಗಳಲ್ಲಿ ವರಮಾನ ಇಲ್ಲದಿರುವುದರಿಂದ ಯಾವುದೇ ರೀತಿಯ ಪೂಜೆ ಅಥವಾ ಧಾರ್ಮಿಕ ಆಚರಣೆ ನಡೆಯುತ್ತಿಲ್ಲ ಎಂದು ಉಲ್ಲೇಖಿಸಿದೆ. ಸುಮಾರು 34,000 ದೇವಸ್ಥಾನಗಳಲ್ಲಿ ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ನೇಮಿಸಲಾಗಿದೆ. ಇನ್ನು 37,000 ದೇವಸ್ಥಾನಗಳು ವಾರ್ಷಿಕವಾಗಿ ₹10,000ಕ್ಕಿಂತ ಕಡಿಮೆ ವರಮಾನವನ್ನು ಹೊಂದಿವೆ. ಮುಂದಿನ ಕೆಲ ವರ್ಷಗಳಲ್ಲಿ ಸುಮಾರು 12,000 ದೇವಸ್ಥಾನಗಳು ನಶಿಸಿ ಹೋಗಲಿವೆಯೆಂದು ಅಂದಾಜು ಮಾಡಲಾಗಿದೆ.

ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ 1,200 ದೇವತಾ ಮೂರ್ತಿಗಳು ಕಳೆದುಹೋಗಿವೆ, ಅಂದರೆ ಕಳವಾಗಿವೆ. ಇದು ಕೇವಲ ಸಾಮಾಜಿಕ ಮಾಧ್ಯಮಗಳ ಚರ್ಚೆಯಲ್ಲ. ಇದು ನಮ್ಮ ಮುಂದಿರುವ ಕಟುಸತ್ಯ. ನಾವು ಹೀಗೆ ಮುಂದುವರಿದರೆ, ಮುಂದಿನ ನೂರು ವರ್ಷಗಳಲ್ಲಿ, ಕೆಲವು ಮುಖ್ಯ ದೇವಸ್ಥಾನಗಳನ್ನು ಹೊರತುಪಡಿಸಿ, ಉಳಿದೆಲ್ಲ ದೇವಸ್ಥಾನಗಳು ನಶಿಸಿಹೋಗುತ್ತವೆ. ಇದೀಗ, ದೇವಸ್ಥಾನಗಳು ಸರ್ಕಾರದ ನಿಯಂತ್ರಣದಲ್ಲಿವೆ, ಮತ್ತು ದೇವಸ್ಥಾನಗಳ ಬಗ್ಗೆ ಯಾವುದೇ ಭಾವನೆ ಇಲ್ಲದವರು ಅದನ್ನು ನಿರ್ವಹಿಸುತ್ತಿದ್ದಾರೆ, ಆದ್ದರಿಂದ ಸ್ವಾಭಾವಿಕವಾಗಿ ಅವರು ಅದನ್ನು ಸರಿಯಾಗಿ ನಿರ್ವಹಿಸುವುದಿಲ್ಲ.

ಮೊದಲನೆಯದಾಗಿ, ದೇವಸ್ಥಾನವು ವ್ಯಕ್ತಿನಿಷ್ಠ ವಿಚಾರವಾಗಿದೆ. ನೀವು ಕೇವಲ ಉದ್ಯೋಗಿಗಳೊಂದಿಗೆ ದೇವಸ್ಥಾನವನ್ನು ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಹೃದಯದಲ್ಲಿ ಅನುರಾಗ ಮತ್ತು ಭಕ್ತಿ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ತಮ್ಮ ಪೂಜಾ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತದ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಹಣಕಾಸು, ನೈತಿಕ ಅಥವಾ ಭದ್ರತಾ ಸಮಸ್ಯೆಗಳ ಸಂದರ್ಭದಲ್ಲಿ, ಅವುಗಳನ್ನು ನಿರ್ಬಂಧಿಸಲು ಮತ್ತು ನಿಯಂತ್ರಿಸಲು
ಸರ್ಕಾರಕ್ಕೆ ಅನುಮತಿ ನೀಡುವ ಷರತ್ತು ಇದ್ದರೂ, ಸರ್ಕಾರವೇ ಅಧಿಕಾರ ವಹಿಸಿಕೊಳ್ಳಬಹುದು ಅಥವಾ ಆಡಳಿತ ನಡೆಸಬಹುದು ಎಂದು ಎಲ್ಲಿಯೂ ಹೇಳಿಲ್ಲ. ಆದಾಗ್ಯೂ, ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ (ಎಚ್‌ಆರ್ ಮತ್ತು ಸಿಇ) ಕಾಯ್ದೆಯು ಈ ಉಲ್ಲೇಖದಿಂದಲೇ ಪ್ರಾರಂಭವಾಗುತ್ತದೆ - ದೇವಾಲಯಗಳ ಅಧಿಕಾರ ಮತ್ತು ಆಡಳಿತ. ಇದು ಮೂಲಭೂತವಾಗಿ ಸಂವಿಧಾನಕ್ಕೆ ವಿರುದ್ಧವಾದರೂ, ಈ ಕಾನೂನು ದಶಕಗಳಿಂದಲೂ ಮುಂದುವರಿದಿದೆ.

ಭಕ್ತರು ದೇವಸ್ಥಾನಗಳ ಪೂರ್ಣ ಸಾಮರ್ಥ್ಯವನ್ನು ಹೊರತರಬಲ್ಲರು. ಪ್ರಸ್ತುತವಾಗಿ, 44,000 ದೇವಸ್ಥಾನಗಳು ಸುಮಾರು ಐದು ಲಕ್ಷ ಎಕರೆಗಳ ಭೂಮಿಯ ಸಮೇತವಾಗಿ ತಮಿಳುನಾಡು ಸರಕಾರದ ನಿರ್ವಹಣೆಯಲ್ಲಿವೆ. ಆದರೆ, ಈ ಎಲ್ಲದರಿಂದ ವಾರ್ಷಿಕವಾಗಿ ಕೇವಲ ₹128 ಕೋಟಿ ಆದಾಯ ಬರುತ್ತದೆ. ಇದಕ್ಕೆ ಹೋಲಿಸಿ ನೋಡುವುದಾದರೆ, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು 85 ಗುರುದ್ವಾರಗಳನ್ನು ನಿರ್ವಹಿಸುತ್ತದೆ, ಆದರೆ ಅದರ ಬಜೆಟ್ ವಾರ್ಷಿಕವಾಗಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಾಗಿವೆ. ಜನಸಂಖ್ಯೆಯ ಶೇ 87ರಷ್ಟು ಇರುವ ಸಮುದಾಯಕ್ಕೆ ಸೇರಿದ 44,000 ದೇವಸ್ಥಾನಗಳಿಂದ ಕೇವಲ ₹128 ಕೋಟಿ ಬರುತ್ತದೆ ಎಂದರೆ ಅದು ಭಯಂಕರವಾದ ಕಳಪೆ ನಿರ್ವಹಣೆಯನ್ನು ತೋರಿಸುತ್ತದೆ.

ಒಂದು ಸಾಮಾನ್ಯವಾದ ವಾದವೆಂದರೆ, ದೇವಸ್ಥಾನಗಳನ್ನು ಸಮುದಾಯಕ್ಕೆ ಮರಳಿಸಿದರೆ, ಅವರು ಈಗಿರುವುದಕ್ಕಿಂತ ಚೆನ್ನಾಗಿ ನಿರ್ವಹಿಸುತ್ತಾರೆಯೇ? ಅವರು ಅದನ್ನು ಇನ್ನಷ್ಟು ಹಾಳುಮಾಡಬಹುದು ಎನ್ನುವುದು. ಇದರರ್ಥ, ಜನಸಂಖ್ಯೆಯ ಶೇ 87ರಷ್ಟಿರುವ ಸಮುದಾಯದಲ್ಲಿ ದೇವಸ್ಥಾನಗಳನ್ನು ನಿರ್ವಹಿಸಲು ಇರಬೇಕಾದ ಬದ್ಧತೆ ಮತ್ತು ಅರ್ಹತೆಯಿರುವ ಒಂದಷ್ಟು ಜನರಿಲ್ಲ ಎಂದಾಯಿತು. ಇದು ಹಾಸ್ಯಾಸ್ಪದ.

ನೀವು ದೇವಸ್ಥಾನಗಳನ್ನು ಭಕ್ತರ ಕೈಗೆ ಕೊಟ್ಟರೆ, ಅವರು ಅದನ್ನು ಅದ್ಭುತವಾಗಿ, ಚೈತನ್ಯಯುತವಾಗಿ ನಿರ್ವಹಿಸುತ್ತಾರೆ. ದೇವಸ್ಥಾನಗಳನ್ನು ನಡೆಸಲು ಉಪಯೋಗಿಸಬಹುದಾದ ಅನೇಕ ಮಾದರಿಗಳಿವೆ. ಉದಾಹರಣೆಗೆ, ಗುರುದ್ವಾರಗಳನ್ನು ನಡೆಸುತ್ತಿರುವ ರೀತಿಯನ್ನು ನೋಡಿ - ಲಂಗರುಗಳು ನೀಡುತ್ತಿರುವ ಆಹಾರದ ಪ್ರಮಾಣ, ಮತ್ತು ಅಗತ್ಯವಿರುವ ಸಮಯದಲ್ಲಿ ಅವರು ಜನರನ್ನು ತಲುಪುತ್ತಿರುವ ರೀತಿ. ಭೂಮಿಯಿಂದ ಬರುವ ಆದಾಯವನ್ನು ಸೇರಿಸಿಕೊಂಡು ದೇವಸ್ಥಾನಗಳು ಎಷ್ಟು ದೊಡ್ಡ ಬಜೆಟ್ ಅನ್ನು ಹೊಂದಿಸಿಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಿ. ಅವು ಇನ್ನೂ ಎಷ್ಟೋ ಮಾಡಬಲ್ಲವು. ಹಾಗೂ, ಈ ದೇವಸ್ಥಾನಗಳಲ್ಲಿ ಕಳೆದ ಕೆಲವು ಸಾವಿರ ವರ್ಷಗಳಲ್ಲಿ ಜನರು ಕಷ್ಟಪಟ್ಟು ಹೂಡಿದ ಸಂಪತ್ತು ಮತ್ತು ಶ್ರಮ ಸಣ್ಣದಲ್ಲ.

ದೇವಸ್ಥಾನವು ಕೇವಲ ಒಂದು ಮತಧರ್ಮದ ಕುರಿತಾದುದಷ್ಟೇ ಅಲ್ಲ. ದೇವಸ್ಥಾನವೆಂದರೆ, ಕಲೆ, ಇತಿಹಾಸ, ಸಂಸ್ಕೃತಿ. ವಾಸ್ತುಶಿಲ್ಪ, ಕೆತ್ತನೆ, ಕಲೆ ಮತ್ತು ವಿನ್ಯಾಸದ ದೃಷ್ಟಿಯಿಂದ ನೋಡಿದರೆ ದೇವಸ್ಥಾನಗಳಲ್ಲಿ ನಡೆದಿರುವ ಕೆಲಸ ಅತ್ಯದ್ಭುತವಾದದ್ದು. ಜಗತ್ತಿನಲ್ಲೆಲ್ಲೂ ಈ ರೀತಿಯ ಕಟ್ಟಡಗಳಿಲ್ಲ, ಆದರೆ ನಾವು ನಮ್ಮ ಭಾವಶೂನ್ಯತೆಯಿಂದ ಅವುಗಳನ್ನು ನಶಿಸಿಹೋಗಲು ಬಿಡುತ್ತಿದ್ದೇವೆ. ಇದೀಗ ಅದನ್ನು ಸರಿಪಡಿಸುವ ಸಮಯ ಬಂದಿದೆ.

ದೇವಸ್ಥಾನಗಳ ಕುರಿತು ಸಂವೈಧಾನಿಕ ಹಕ್ಕನ್ನು ಚಲಾಯಿಸಿ ಸಮುದಾಯವು ಎದ್ದು ನಿಂತು ‘ನೀವು ದೇವಸ್ಥಾನಗಳನ್ನು ನಮ್ಮ ಕೈಗೆ ಒಪ್ಪಿಸದಿದ್ದರೆ, ನಾವು ನಿಮಗೆ ಓಟು ಹಾಕುವುದಿಲ್ಲ’ ಎಂದು ರಾಜಕೀಯ ಪಕ್ಷಗಳಿಗೆ ಹೇಳಬೇಕು. ಹಸ್ತಾಂತರ ಪ್ರಕ್ರಿಯೆ ಆತುರಾತುರವಾಗಿ ಒಮ್ಮೆಲೆ ಆಗಬೇಕೆಂದಿಲ್ಲ. ಅದೊಂದು ಸಂಕೀರ್ಣ ಪ್ರಕ್ರಿಯೆಯಾಗಿದೆ ಮತ್ತು ಸೂಕ್ತ ರೀತಿಯಲ್ಲಿ ನಡೆಯಬೇಕು. ಮುಖ್ಯವಾದ ಸಂಗತಿಯೆಂದರೆ ಮೊದಲು ಆ ದಿಸೆಯಲ್ಲಿ ಒಂದು ಇಚ್ಛಾಶಕ್ತಿಯನ್ನು ತೋರಬೇಕು. ಒಂದು
ಆಯೋಗವನ್ನು ರಚಿಸಿ ಅದರ ಮೂಲಕ ನಮ್ಮ ದೇವಸ್ಥಾನಗಳನ್ನು ಸಮುದಾಯಕ್ಕೆ ಹಂತ ಹಂತವಾಗಿ ಹಸ್ತಾಂತರಗೊಳಿಸಲು ಪ್ರಕ್ರಿಯೆಯೊಂದನ್ನು ವಿಕಾಸಗೊಳಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ, 74 ವರ್ಷಗಳ ಸ್ವತಂತ್ರ ಭಾರತದಲ್ಲಿ, ಜನರಿಗೆ ತಮ್ಮ ಮತಧರ್ಮವನ್ನು ತಮಗೆ ಬೇಕಾದಂತೆ ಅನುಸರಿಸುವ ಸ್ವಾತಂತ್ರ್ಯವಿಲ್ಲದಿದ್ದರೆ, ಅದೆಂತಹ ಸ್ವಾತಂತ್ರ್ಯ? 75ನೇ ಸ್ವಾತಂತ್ರ್ಯ ದಿನಕ್ಕೆ ಮೊದಲು ನಾವು ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು.

(ಲೇಖಕ: ಯೋಗಿ, ಈಶ ‍ಪ್ರತಿಷ್ಠಾನದ ಸ್ಥಾಪಕ, ದೇವಸ್ಥಾನಗಳನ್ನು ಸರ್ಕಾರದ ಕೈಯಿಂದ ಮುಕ್ತಗೊಳಿಸಬೇಕು ಎಂಬ ಅಭಿಯಾನ ಆರಂಭಿಸಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT