ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸರಸ್ವತಿ ಪೂಜೆ: ವಿದ್ಯೆ– ಸತ್ತ್ವಗುಣದ ಬೆಳಕು

Published 19 ಅಕ್ಟೋಬರ್ 2023, 20:12 IST
Last Updated 19 ಅಕ್ಟೋಬರ್ 2023, 20:12 IST
ಅಕ್ಷರ ಗಾತ್ರ

ಸರಸ್ವತಿ ವಿದ್ಯಾಧಿದೇವತೆ; ನಮಗೆ ಬೇಕಾದ ಎಲ್ಲ ವಿಧದ ವಿದ್ಯೆಗಳನ್ನೂ ದಯಪಾಲಿಸುವವಳು. ಅವಳು ‘ಕಾಮರೂಪಿಣಿ’; ತನಗೆ ಬೇಕಾದ ರೂಪವನ್ನು ಧರಿಸಬಲ್ಲವಳು ಎಂದರ್ಥ. ಎಂದರೆ, ವಿದ್ಯೆ ನಮಗೆ ಯಾವ ರೂಪದಲ್ಲಿಯೂ ಒದಗಬಹುದು. ಬರಿ ವಿದ್ಯೆಯನ್ನಷ್ಟೆ ಗಳಿಸಿದರೆ ಪ್ರಯೋಜನವಿಲ್ಲ; ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವವಳೂ ಸರಸ್ವತಿಯೇ.

ನವರಾತ್ರಿಯ ಪರ್ವಕಾಲದಲ್ಲಿ ಜಗನ್ಮಾತೆಯನ್ನು ಮೂರು ರೂಪಗಳಲ್ಲಿ ಆರಾಧಿಸಲಾಗುತ್ತದೆ; ಇವು ಶಕ್ತಿಯ ಮೂರು ತತ್ತ್ವಗಳೇ ಹೌದು. ಲಕ್ಷ್ಮಿ, ಸರಸ್ವತಿ ಮತ್ತು ದುರ್ಗೆ – ಇವೇ ಆ ಶಕ್ತಿತತ್ತ್ವಗಳ ವಿಗ್ರಹರೂಪಗಳು. ನಮಗೆ ಬೇಕಾದ ಶಕ್ತಿಯ ಎಲ್ಲ ಆಯಾಮಗಳನ್ನೂ ಇವು ಪ್ರತಿನಿಧಿಸುತ್ತವೆ. ಲಕ್ಷ್ಮಿಯು ನಮಗೆ ಬೇಕಾದ ಹೊರಗಿನ, ಎಂದರೆ ವಸ್ತುರೂಪದ ಶಕ್ತಿಗೆ ಸಂಕೇತ. ಸರಸ್ವತಿಯು ನಮಗೆ ಬೇಕಾದ ಒಳಗಿನ, ಎಂದರೆ ಬೌದ್ಧಿಕ ಸ್ವರೂಪದ ಶಕ್ತಿಗೆ ಸಂಕೇತ. ದುರ್ಗೆಯು ನಮಗೆ ಬೇಕಾದ ದೈಹಿಕ ಶಕ್ತಿಗೆ ಸಂಕೇತ.

ನಮ್ಮ ನಡೆ–ನುಡಿ, ಕಲೆ–ಸಾಹಿತ್ಯ, ಸಿದ್ಧಿ–ಬುದ್ಧಿ – ಇವೆಲ್ಲವೂ ಸರಸ್ವತಿಯ ಅಧೀನ. ಈ ಎಲ್ಲ ವಿವರಗಳನ್ನೂ ‘ವಾಕ್‌ತತ್ತ್ವ’ ಒಂದರಲ್ಲಿಯೇ ಒಂದಾಗಿಸಿ ಒಕ್ಕಣಿಸಲಾಗಿದೆ. ವಾಕ್‌, ಎಂದರೆ ಮಾತಿಲ್ಲದೆ ಜಗತ್ತಿನ ವ್ಯಾಪಾರವೇ ನಡೆಯದು. ಆದುದರಿಂದಲೇ ಯಾವುದೇ ವಿದ್ಯೆಯ ಆರಂಭದಲ್ಲಿ ಸರಸ್ವತಿಯನ್ನು ಪ್ರಾರ್ಥಿಸಿಕೊಳ್ಳುವುದು. 

ಪರಂಪರೆಯಲ್ಲಿ ಸರಸ್ವತಿಯನ್ನು ಬಿಳಿಯ ಬಣ್ಣದವಳು ಎಂದು ಸ್ತುತಿಸಲಾಗಿದೆ. ಬಿಳಿಯ ಬಣ್ಣವು ಸತ್ತ್ವಗುಣಕ್ಕೆ ಸಂಕೇತ. ಶುಭ್ರತೆ, ಸ್ವಚ್ಛತೆ, ಪಾವಿತ್ರ್ಯ, ದೋಷರಹಿತ ಗುಣಗಳನ್ನು ಇದು ಎತ್ತಿಹಿಡಿಯುತ್ತದೆ. ವಿದ್ಯೆ ನಮಗೆ ಕೊಡಬೇಕಾದ ಹಾಗೂ ಕೊಡುವ ಸಂಸ್ಕಾರದ ಸ್ವರೂಪವನ್ನು ಇದು ಹೇಳುತ್ತಿದೆ. ವಿದ್ಯೆ ನಮಗೆ ವಿವೇಕವನ್ನು ಕೊಡಬೇಕು; ಅದೇ ಸ್ವಚ್ಛತೆ. ಅದೇ ರಾಗ ಮತ್ತು ದ್ವೇಷಗಳಿಂದ ಮುಕ್ತವಾದ ತಿಳಿವಳಿಕೆ; ಅದೇ ವಿವೇಕ. ಇಂಥ ವಿವೇಕವನ್ನು ದಕ್ಕಿಸಿಕೊಂಡವನು ಸ್ವಾರ್ಥದಿಂದಲೂ ಕ್ರೋಧದಿಂದಲೂ ನಡೆದುಕೊಳ್ಳಲಾರ; ಧರ್ಮ–ಅಧರ್ಮ, ಒಳಿತು–ಕೆಡಕು, ಬೆಳಕು–ಕತ್ತಲೆ, ವಿದ್ಯೆ–ಅವಿದ್ಯೆಗಳ ವ್ಯತ್ಯಾಸ ಅವನಿಗೆ ಸ್ಪಷ್ಟವಾಗಿರುತ್ತದೆ. ಹೀಗಾಗಿ ಅವನ ನಡೆವಳಿಕೆಯಲ್ಲಿ ಉದ್ವೇಗವೂ ಇರದು, ಉನ್ಮಾದವೂ ಇರದು; ಸಮಾಧಾನವೇ ಅವನ ಸ್ಥಾಯಿಭಾವ ಆಗಿರುತ್ತದೆ. 

ಇಂದು ನಾವು ಹಲವು ‘ವಿದ್ಯೆ’ಗಳನ್ನು ಸಂಪಾದಿಸುತ್ತಿದ್ದೇವೆ. ಆದರೆ ನೆಮ್ಮದಿಯನ್ನು ಮಾತ್ರ ಕಾಣುತ್ತಿಲ್ಲ. ಇಡಿಯ ಜಗತ್ತು ರಾಗ–ದ್ವೇಷಗಳಲ್ಲಿ ಮುಳುಗಿದೆ; ಎಲ್ಲೆಲ್ಲೂ ಅಶಾಂತಿ. ಇದಕ್ಕೆ ಕಾರಣವೇ ಅವಿದ್ಯೆ. ನಾವು ವಿದ್ಯೆಯ ದಿಟವಾದ ಅರ್ಥದಿಂದ ದೂರ ಸರಿದಿದ್ದೇವೆ. ಹೀಗಾಗಿ ನಾವು ಸಂಪಾದಿಸುತ್ತಿರುವ ವಿದ್ಯೆಯು ಸತ್ತ್ವಗುಣಪ್ರಧಾನವಾಗಿಲ್ಲ; ರಜಸ್ಸು–ತಮಸ್ಸುಗಳೇ ಪ್ರಧಾನವಾಗುತ್ತಿವೆ. ವಿದ್ಯೆ ಎಂದರೆ ಕೇವಲ ಬಹಿರಂಗದ ವಿವರಗಳ ಮಾಹಿತಿ ಮಾತ್ರವೇ ಅಲ್ಲ; ಅಂತರಂಗದ ದ್ರವ್ಯದ ಸಂಪಾದನೆ ಕೂಡ. ಸರಸ್ವತಿಯು ಲೌಕಿಕ–ಅಲೌಕಿಕ – ಎರಡೂ ವಿದ್ಯೆಗಳಿಗೂ ಒಡತಿ. ನಾವಿಂದು ಲೌಕಿಕದಲ್ಲಿಯೇ ಮುಳುಗಿ, ನಮ್ಮ ಅಲೌಕಿಕ ಸ್ವರೂಪವನ್ನು ಮರೆಯುತ್ತಿದ್ದೇವೆ. ಹೀಗಾಗಿಯೇ ಪರಸ್ಪರ ಭೇದ, ವೈರ, ಕ್ರೌರ್ಯ. ಸರಸ್ವತಿಯ ಆರಾಧನೆ ಎಂದರೆ ಅಂತರಂಗ–ಬಹಿರಂಗದ ಸಾಮರಸ್ಯ. ಈ ಸಾಮರಸ್ಯದಿಂದಲೇ ಒಳಗೂ ಹೊರಗೂ ಸೌಹಾರ್ದವನ್ನು ಸಾಧಿಸಲಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT