ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–18

Last Updated 16 ನವೆಂಬರ್ 2020, 1:58 IST
ಅಕ್ಷರ ಗಾತ್ರ

ಎನ್ನ ಕಷ್ಟ ಕುಲದಲ್ಲಿ ಹುಟ್ಟಿಸಿದೆಯಯ್ಯಾ,
ಎಲೆ ಲಿಂಗ ತಂದೆ.
ಕೆಟ್ಟೆನಯ್ಯಾ, ನಿಮ್ಮ ಮುಟ್ಟಿಯೂ ಮುಟ್ಟದಿಹನೆಂದು.
ಎನ್ನ ಕೈ ಮುಟ್ಟದಿರ್ದಡೆ, ಮನ ಮುಟ್ಟಲಾಗದೆ?
ಅಭಿನವ ಮಲ್ಲಿಕಾರ್ಜುನಾ.

-ಡೋಹರ ಕಕ್ಕಯ್ಯ

ಭರತವರ್ಷದ ಚರಿತ್ರೆಯಲ್ಲಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶವನ್ನು ನಿಷಿದ್ಧಗೊಳಿಸಿದ್ದು ಒಂದು ಕಪ್ಪು ಅಧ್ಯಾಯ. ಈ ಕುಕೃತ್ಯ ಅಮಾನವೀಯವಷ್ಟೇ ಅಲ್ಲ; ಮನುಷ್ಯತ್ವವೇ ಹೇಸಿಗೆ ಪಡುವಷ್ಟು ಕ್ರೂರವಾದದ್ದು. ದೇವಾಲಯದೊಳಗೆ ಹೋಗಿ, ದೇವರನ್ನು ಕಾಣುವ ದಲಿತರ ಮನುಷ್ಯಸಹಜ ಹಸಿವು-ಹಂಬಲಗಳಿಗೆ ವರ್ಣಾಶ್ರಮಧರ್ಮ ಬಾಗಿಲು ಮುಚ್ಚಿದ್ದನ್ನು ಬಲವಾಗಿ ವಿರೋಧಿಸಿದ ಶರಣರು, ನಿಮ್ಮ ಸ್ಥಾವರ ದೇವರು ಅಲ್ಲಿಯೇ ಇರಲೆಂದು ಖಡಾಖಂಡಿತವಾಗಿ ಸಾರಿ, ಮನುಷ್ಯನಲ್ಲೇ ಇರುವ ದೇವತ್ವವನ್ನು ತೋರಿಸಿಕೊಟ್ಟರು. ಮನುಷ್ಯತ್ವವೇ ಇಲ್ಲದ ಮೂಲಭೂತವಾದಿಗಳಿಗೆ ಅದೂ ಅಪಥ್ಯವಾದಾಗ, ಅಸ್ಪೃಶ್ಯರೇ ಎದ್ದು ನಿಂತು, ಜನ್ಮಜನ್ಮಾಂತರದಲ್ಲೂ ಅವರು ನೆನಪಿಟ್ಟುಕೊಳ್ಳುವಂಥ ಪಾಠವನ್ನು ಕಲಿಸಿದರು. ಡೋಹರ ಕಕ್ಕಯ್ಯನ ಪ್ರಸ್ತುತ ವಚನ ಅಂಥ ತಣ್ಣನೆಯ, ಕ್ರಾಂತಿಯ ಕಿಡಿಯಂತಿದೆ.

ಈ ವಚನಕ್ಕಿರುವ ದೃಶ್ಯಸಾಧ್ಯತೆಯನ್ನು ಅರಿಯಲು ಡೋಹರ ಕಕ್ಕಯ್ಯನ ಜೊತೆ ನಾವೂ ದೇವಾಲಯದ ಎದುರೇ ನಿಲ್ಲಬೇಕು. ಅಂದರೆ ಆತ ದೇವರೊಂದಿಗೆ ನಡೆಸುವ ನೇರ ಸಂಭಾಷಣೆಯ ಭಾಷೆ, ಭಾವ, ಉದ್ದೇಶ, ಗುರಿ ಎಲ್ಲವೂ ನಮಗೆ ಸ್ಪಷ್ಟವಾಗುತ್ತವೆ.

ಆರಂಭದಲ್ಲಿಯೇ ಕಕ್ಕಯ್ಯ, ‘ನೀನೇ ನನ್ನನ್ನು ಅಸ್ಪೃಶ್ಯ ಕುಲದಲ್ಲಿ ಹುಟ್ಟಿಸಿದೆ’ ಎಂದು ನೇರವಾಗಿ ದೇವರ ಮೇಲೆಯೇ ಆರೋಪ ಹೊರಿಸುತ್ತಾನೆ. ಈ ರೀತಿ ನೀನೇ ಹುಟ್ಟಿಸಿದ ಕಾರಣಕ್ಕಾಗಿ ಮತ್ತು ನಿನ್ನವರೆ ವಿಧಿಸಿದ ಕಟ್ಟಳೆಗಳ ಕಾರಣಕ್ಕಾಗಿ ನಾನು ದೇವಾಲಯ ಪ್ರವೇಶಿಸುವಂತಿಲ್ಲ. ಆದರೆ, ನನ್ನ ಹಂಬಲ ಮುಟ್ಟದೆ ಇರುವ ಸ್ಥಿತಿ ತಲುಪಿದಾಗ ನಿನ್ನನ್ನು ಮನಸ್ಸಿನಿಂದ ಮುಟ್ಟಿಬಿಟ್ಟಿದ್ದೇನೆಂದೂ, ಇದೇ ನಾನು ಮಾಡಿರುವ ತಪ್ಪೆಂದೂ, ಅದಕ್ಕಾಗಿಯೇ ನಾನು ‘ಕೆಟ್ಟೆನಯ್ಯಾ’ ಎಂದೂ ಆತ ವ್ಯಂಗ್ಯಾತ್ಮಕವಾಗಿ ಗೋಗರೆಯುತ್ತಾನೆ.

‘ಎನ್ನ ಕೈ ಮುಟ್ಟದಿರ್ದಡೆ, ಮನ ಮುಟ್ಟಲಾಗದೆ?’ ಎಂಬ ಕಕ್ಕಯ್ಯನ ಪ್ರಶ್ನೆ, ವರ್ಣಾಶ್ರಮ ಧರ್ಮದ ಕರಾಳ ಇತಿಹಾಸವನ್ನೇ ಕಿತ್ತು, ಮೊಗಚಿ ಎಸೆದು ಬಿಡುತ್ತದೆ. ದೇವಾಲಯದ ಪ್ರವೇಶವಿಲ್ಲದ ಕಾರಣ ನಾನು ನಿನ್ನನ್ನು ದೈಹಿಕವಾಗಿ ಮುಟ್ಟಲು ಆಗಿಲ್ಲ. ಆದರೆ, ಹಾಗೆಂದ ಮಾತ್ರಕ್ಕೇ ನಾನು ನಿನ್ನನ್ನು ಮನಸ್ಸಿನಿಂದ ಮುಟ್ಟಲು ಸಾಧ್ಯವಿಲ್ಲವೆ? ಎಂಬ ನೇರ ಪ್ರಶ್ನೆ ಆತನದು. ವಸ್ತುಸ್ಥಿತಿ ಹೀಗಿರುವಾಗ ನಾನು ಈಗಾಗಲೇ ನನ್ನ ಮನಸ್ಸಿನಿಂದ ನಿನ್ನನ್ನು ಮುಟ್ಟಿಬಿಟ್ಟಿದ್ದೇನೆ, ಈಗ ಏನು ಮಾಡುತ್ತಿ? ಎಂದು ಕೇಳಿದಂತಿದೆ. ಇದು ದೇವರಿಗೆ ಕೇಳಿದ ಪ್ರಶ್ನೆಯಾದರೂ, ಅದರ ಗುರಿ ಇರುವುದು ವರ್ಣಾಶ್ರಮ ಧರ್ಮದ ಜನಕರತ್ತ. ಮನಸ್ಸಿನ ಮುಟ್ಟಿವಿಕೆಯ ಶ್ರೇಷ್ಠತೆಯನ್ನೇ ಎತ್ತಿ ಹಿಡಿಯುವ ಈ ಮಾತು, ದೈಹಿಕ ಮುಟ್ಟುವಿಕೆಯು ಮೈಲಿಗೆ ಎನ್ನುವವರಿಗೆ ಬಾರಿಸಿದ ಚಾಟಿಯೇಟಲ್ಲವೆ?

ಅಸ್ಪೃಶ್ಯರನ್ನು ಮುಟ್ಟಿಸಿಕೊಳ್ಳದ ಅಮಾನವೀಯತೆಯ ಎದುರು ಹರಿಶ್ಚಂದ್ರ ಕಾವ್ಯದಲ್ಲಿ ಹೊಲತಿಯರು ಪ್ರಶ್ನೆ ಹಾಕಿದರು. ಅದಕ್ಕೂ ಹಿಂದೆಯೇ ಡೋಹರ ಕಕ್ಕಯ್ಯ ಎತ್ತಿದ ಈ ಪ್ರಶ್ನೆಗಳಿಗೆ ಈಗಲೂ ಯಾರಾದರೂ ಉತ್ತರಿಸುವವರಿದ್ದಾರೆಯೇ? ಮನಸ್ಸಿಂದ ಭಕ್ತಿಯನ್ನು ಮಾಡಬೇಕು ಅನ್ನುತ್ತೀರಿ, ನಾನು ಮಾಡಿದ್ದು ಅದನ್ನೇ ಅಲ್ಲವೆ? ಹಾಗಿದ್ದರೆ ಇದು ಭಕ್ತಿಯಲ್ಲವೆ? ದೈಹಿಕ ಮುಟ್ಟುವಿಕೆ ಮಾತ್ರ ಭಕ್ತಿಯೆ? ಹಾಗಾದರೆ ಅಸ್ಪೃಶ್ಯರು ದೇವರನ್ನು ಮುಟ್ಟಿದರೆ ಅದು ಅಪವಿತ್ರವೆ? ಅವರನ್ನು ಹುಟ್ಟಿಸಿದ್ದೂ ದೇವರೇ ಅಲ್ಲವೆ? ಮನೋಸ್ಪರ್ಶ ಆದ ಮೇಲೆ ದೇಹಸ್ಪರ್ಶಕ್ಕೆ ಯಾವ ಬೆಲೆ? ಇದರಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ? ಯಾವುದು ಎಡಬಿಡಂಗಿತನ?-ಹೀಗೆ, ಅನೇಕ ಪ್ರಶ್ನೆಗಳನ್ನು ಮುಂದಿಡುತ್ತದೆ ವಚನ. ಈಗಲೂ ಇಂಥ ಎಲ್ಲ ಪ್ರಶ್ನೆಗಳನ್ನು ಕೇಳುವ ನಾಚಿಗೆಗೇಡಿ ಸ್ಥಿತಿ ಇರುವುದರಿಂದ, ಡೋಹರ ಕಕ್ಕಯ್ಯನ ಈ ವಚನದಲ್ಲಿರುವ ಪ್ರಶ್ನೆಗಳು, ಉತ್ತರಾಪೇಕ್ಷಿಗಳಾಗಿ ಕ್ರಾಂತಿಕಾರಿ ಇತಿಹಾಸದ ಪುಟಗಳಲ್ಲಿ ದಾಖಲಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT