ಮಂಗಳವಾರ, ಆಗಸ್ಟ್ 16, 2022
29 °C

ವಚನ ವಾಣಿ| ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–22

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ
ಒದೆಯುವುದಲ್ಲದೆ ಉಣಲೀಸುವುದೆ?
ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು. 
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
ಅರಿವಿನ ಮಾರಿತಂದೆ

ವೈರಾಗ್ಯದ ಕಡುವಿರೋಧಿಗಳಾಗಿದ್ದ ಕಲ್ಯಾಣದ ಶರಣರು, ಮನುಷ್ಯನ ಹಿತಮಿತ ಮತ್ತು ಸದಾಶಯದ ಆಸೆ-ಆಕಾಂಕ್ಷೆಗಳ ಈಡೇರಿಕೆಗೆ ಆದ್ಯತೆ ಕೊಟ್ಟರು. ಮಾನವ ಸಜಹ ಬಯಕೆಗಳನ್ನು ಸನ್ಮಾರ್ಗದಲ್ಲಿ ಈಡೇರಿಸಿಕೊಳ್ಳುವ ಸ್ಪಷ್ಟ ಹಾಗೂ ಖಚಿತ ನಿಯಮಗಳನ್ನು ರೂಪಿಸಿಕೊಂಡಿದ್ದ ಅವರು, ಇಂಥ ಸನ್ಮಾರ್ಗ ಬಿಟ್ಟು, ಅನ್ಯ ಮತ್ತು ಅನ್ಯಾಯದ ದಾರಿಗಳಲ್ಲಿ ಸುಖಪಡಲು   ಹೊರಡುವವರಿಗೆ ನೈತಿಕ ನಿರ್ಬಂಧಗಳನ್ನೂ ವಿಧಿಸಿದರು. ಒಟಾರೆ, ವ್ಯಕ್ತಿಯ ಬದುಕು ಸುಂದರವಾಗಬೇಕು, ನೆಮ್ಮದಿಯಿಂದ ಕೂಡಿರಬೇಕು, ಸಂತೋಷದ್ದಾಗಬೇಕು ಮತ್ತು ಅಂಥ ವ್ಯಕ್ತಿಗಳಿಂದಲೇ ಕೂಡಿದ ಹೊಸ ಸಮಾಜವೊಂದು ನಿರ್ಮಾಣವಾಗಬೇಕು ಎಂಬುದೇ ಅವರ ಮುಖ್ಯ ಆಶಯವಾಗಿತ್ತು. ಈ ಆಶಯದ ಈಡೇರಿಕೆಗೆ ಅರಿವು ಮುಖ್ಯವೆಂದು ತೀರ್ಮಾನಿಸಿದ್ದ ಅವರು, ಅಂಥ ಅರಿವಿನ ಅನುವಿಡಿದ ಕ್ರಿಯೆಗೂ ಸಮಾನ ಸ್ಥಾನ ಕೊಟ್ಟರು. ಅರಿವಿನ ಮಾರಿತಂದೆಯೆ ಪ್ರಸ್ತುತ ವಚನವು ಜ್ಞಾನ ಮತ್ತು ಕ್ರಿಯೆಗಳ ಇಂಥ ಸಮಾನ ಮತ್ತು ಸಮನ್ವಯದ ಮಾರ್ಗವನ್ನೇ ಸೋದಾಹರಣವಾಗಿ ಕಟ್ಟಿಕೊಡುತ್ತದೆ.

ಮನುಷ್ಯನ ಬಯಕೆಗಳನ್ನು ಕರುವಿಗೆ ಸಮೀಕರಿಸುವ ಮಾರಿತಂದೆಯು, ಕರುವಿನ ಸ್ವಭಾವದಂತೆ, ಅವನ ಬಯಕೆಗಳೂ ಮುಗ್ಧತೆಯಿಂದ ಕೂಡಿರಬೇಕು, ಮಿತವಾಗಿರಬೇಕು, ಶುದ್ಧವಾಗಿರಬೇಕು ಮತ್ತು ವಿಕಾರರಹಿತವಾಗಿರಬೇಕೆಂದು ಸೂಚಿಸುತ್ತಾನೆ. ಈ ಬಯಕೆಗಳೆಲ್ಲ ಅರಿವಿನ ಬೆಳಕಲ್ಲಿ ಶುದ್ಧಗೊಳ್ಳಬೇಕೆಂಬ ನೆಲೆಯಲ್ಲಿಯೇ ಅವನು ಅರಿವನ್ನು ಹಾಲಿಗೆ ಹೋಲಿಸುತ್ತಾನೆ. ಇಂಥ ಅರಿವಿನಿಂದ ಕೂಡಿದ ಬಯಕೆಗಳನ್ನು ಈಡೇರಿಸಿಕೊಳ್ಳುವ ಸನ್ಮಾರ್ಗವೇ ಕ್ರೀಯೆ. ಇದನ್ನು ಹಸುವಿಗೆ ಸಾರೂಪ್ಯೀಕರಿಸುತ್ತಾನೆ ಆತ. ಹಸುವಿನ ಸ್ವಭಾವದÀಂತೆ ಮನುಷ್ಯನ ಕ್ರಿಯೆ ಶುದ್ಧವಾಗಿರಬೇಕೆಂದೇ ಅವನ ಅಭೀಪ್ಸೆ. ಹೀಗೆ ಶುದ್ಧ ಅರಿವಿನಿಂದ ಕೂಡಿದ ಬಯಕೆಗಳನ್ನು, ಶುದ್ಧ ಕ್ರಿಯೆಯೆ ಮೂಲಕ ಮತ್ತು ಅಷ್ಟೇ ಶುದ್ಧ ಮಾರ್ಗದಲ್ಲಿ ಈಡೇರಿಸಿಕೊಳ್ಳುವ ಬಗೆಯನ್ನೇ ಈ ವಚನದಲ್ಲಿ ಸೂಚಿಸುತ್ತಾನೆ ಮಾರಿತಂದೆ. ಈ ಮೂರನ್ನೂ ಅರಿತು ನಡೆಯುವ ಮನುಷ್ಯ, ದೇವರಿಗೆ ಸಮ ಎಂಬುದೇ ಅವನ ಪ್ರತಿಪಾದನೆ.   

ಒಂದು ವೇಳೆ ಇಂಥ ಅರಿವಿನ ಸನ್ಮಾರ್ಗ ಬಿಟ್ಟು, ಅಡ್ಡ ದಾರಿಗಳಲ್ಲಿ ಬಯಕೆಗಳನ್ನು ತೀರಿಸಿಕೊಳ್ಳಲು ಹೊರಟರೆ ಏನಾಗಬಹುದು? ಹಾಲು ಬತ್ತಿದ ಹಸುವಿನ ಕೆಚ್ಚಲಿಗೆ ಕರುವನ್ನು ಬಿಟ್ಟರೆ, ಅದು ಝಾಡಿಸಿ ಒದೆಯುವ ದೇಶಿ ದೃಷ್ಟಾಂತದ ಮೂಲಕ, ಅದರ ಪರಿಣಾಮವನ್ನು ಸ್ಪಷ್ಟವಾಗಿ ಮನಗಾಣ ಸುತ್ತಾನೆ ಮಾರಿತಂದೆ. ಈ ದೃಷ್ಟಾಂತದಲ್ಲಿ ಆತ ಕರು, ಹಾಲು ಮತ್ತು ಹಸು-ಈ ಮೂರನ್ನೂ ಬಯಕೆ, ಅರಿವು ಮತ್ತು ಕ್ರಿಯೆಗಳಿಗೆ ಸಮೀಕರಿಸಿ, ಒಳ್ಳೆಯ ಬಯಕೆ ಇರಬೇಕು, ಅರಿವು ಎಚ್ಚರದಿಂದ ಇರಬೇಕು ಮತ್ತು ಅರಿವಿನ ಅನುವಿಡಿದೇ ಕ್ರಿಯೆ ನಡೆಯಬೇಕು ಎಂದು ಅರ್ಥಪೂರ್ಣವಾಗಿ ಸೂಚಿಸುತ್ತಾನೆ. ಈ ಸಮೀಕರಣ ತಪ್ಪಿದರೆ, ಹಾಲು ಬತ್ತಿದ ಹಸುವಿನ ಮೊಲೆಗೆ ಬಾಯಿ ಹಾಕುವ ಕರು ಒದೆ ತಿನ್ನುವಂತೆ, ಅಡ್ಡಮಾರ್ಗಗಳಲ್ಲಿ ಹೊರಡುವ ಮನುಷ್ಯನೂ ಅಂಥದೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅರ್ಥಪೂರ್ಣವಾಗಿ ಧ್ವನಿಸುತ್ತಾನೆ ಮಾರಿತಂದೆ.

ಮನುಷ್ಯನ ಎಲ್ಲ ಕ್ರಿಯೆ ಮತ್ತು ನಡವಳಿಕೆಗಳಿಗೆ ಜ್ಞಾನ ಅಥವಾ ಅರಿವಿನ ಬೆಳಕೇ ಆಧಾರ. ಅದೇ ಇಲ್ಲವಾದರೆ ಎಲ್ಲವೂ ಕತ್ತಲೆಯೆ. ಅಂಥ ಅರಿವು ನಷ್ಟ ಮಾಡಿಕೊಳ್ಳದೆ, ಅದನ್ನು ಬೆಳಗಿಸಿಕೊಂಡು, ಆ ಬೆಳಕಿನಲ್ಲಿಯೇ ಎಲ್ಲ ಕ್ರಿಯೆಗಳನ್ನು ಮಾಡುತ್ತ, ವ್ಯಕ್ತಿಯು ಮೊದಲು ಮನುಷ್ಯನಾಗಲಿ, ಅನಂತರ ದೇವರಾಗಲಿ ಎಂಬುದೇ ಅರಿವಿನ ಮಾರಿತಂದೆಯ ಹೃದಯದಾಳದ ಅಪೇಕ್ಷೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು