ಆಷಾಢ ಕಳೆದು ಶ್ರಾವಣ ಬರುವ ಹೊತ್ತಿಗೆ ದಕ್ಷಿಣ ಭಾರತದ ಬಹುತೇಕ ಭೂಪ್ರದೇಶದಲ್ಲಿ ಮಳೆಗಾಲವು ಉಚ್ಛ್ರಾಯ ಹಂತದಲ್ಲಿರುತ್ತದೆ. ಕೃಷಿ ಚಟುವಟಿಕೆಗಳ ಜೊತೆಯಲ್ಲಿಯೇ ಹಬ್ಬಗಳ ಸಾಲು ಸಾಲು ಮೆರವಣಿಗೆಯೂ ಇರುವ ಮಾಸ ಶ್ರಾವಣ. ಶ್ರಾವಣ ಎನ್ನುವುದು ಕೇಳುವ ಮತ್ತು ಕೇಳಿಸುವ ಕ್ರಿಯೆಯನ್ನು ಹೇಳುವ ಒಂದು ಶಬ್ದವೂ ಹೌದು. ಅದಾದ ಕಾರಣದಿಂದಲೇ ಒಳ್ಳೆಯದನ್ನು ಕೇಳುವುದು ಮತ್ತು ಒಳ್ಳೆಯದನ್ನು ಕೇಳಿಸುವುದು ಶ್ರಾವಣಮಾಸದ ಬಹುಮುಖ್ಯ ಆಚರಣೆಯಾಗಿರುತ್ತದೆ.

ಶ್ರಾವಣದ ಪೂರ್ಣಿಮೆ ಅಥವಾ ಪೂರ್ಣಿಮೆಯ ಮುಂಚಿನ ಶ್ರಾವಣ ಶುಕ್ರವಾರದಂದು ನಮ್ಮ ದಕ್ಷಿಣ ಭಾರತದ ಬಹುತೇಕ ಎಲ್ಲ ರಾಜ್ಯಗಳ ಸ್ತ್ರೀಯರು ಆಚರಿಸುವ ವರಮಹಾಲಕ್ಷ್ಮೀ ವ್ರತವೂ ಹಾಗೊಂದು ಕೇಳುವ, ಕೇಳಿಸುವ ಆಚರಣೆ. ಈ ವರ್ಷ ಶುಕ್ರವಾರವೇ ಪೂರ್ಣಿಮೆ ಬಂದಿರುವುದು ವಿಶೇಷ.

ಹಬ್ಬಗಳಾಗಿ ಆಚರಣೆಯಾಗುವ ವ್ರತಗಳಲ್ಲಿ ಬಹುತೇಕ ‘ಶ್ರವಣ’ (ಕೇಳುವುದು) ಮತ್ತು ‘ಶ್ರಾವಣ’ (ಕೇಳಿಸುವುದು) ಮುಖ್ಯವಾಗಿರುತ್ತದೆ. ಅಂದರೆ ವ್ರತಕ್ಕೊಂದು ಕಥೆಯಿರುತ್ತದೆ. ಕಥೆ ಎಂದಾದಮೇಲೆ ಅಲ್ಲಿ ಹೇಳುವವರು ಮತ್ತು ಕೇಳುವವರು ಇರಬೇಕಷ್ಟೆ. ನಮ್ಮ ಎಲ್ಲ ವ್ರತಕಥೆಗಳೂ ಹೇಳುವ ಮತ್ತು ಕೇಳಿಸಿಕೊಳ್ಳುವ ಪರಂಪರೆಯಲ್ಲಿ ಬಂದವಾಗಿವೆ.

ನಮ್ಮ ಎಣಿಕೆಗೆ ನಿಲುಕದ ಕಾಲದಿಂದಲೂ ಆ ಕಥೆಗಳನ್ನು ಹೇಳಿಕೊಂಡು ಕೇಳಿಕೊಂಡು ಬರಲಾಗಿದೆ. ಹಾಗಾಗಿಯೇ ಹೇಳುವವರು ಮತ್ತು ಕೇಳುವವರು ಆ ಕಥೆಯ ಭಾಗವಾಗಿಯೇ ಇರುತ್ತಾರೆ. ವರಮಹಾಲಕ್ಷ್ಮೀ ಕಥೆಯೂ ಹಾಗೊಂದು ಕಥಾಕಥನಪರಂಪರೆಯ ಅನನ್ಯ ಭಾಗವಾಗಿರುವ ಕಥೆ; ಮತ್ತು ಆ ಕಥೆಯನ್ನು ವಿಧಿವತ್ತಾಗಿ ಕೇಳುವುದಕ್ಕಾಗಿಯೇ ಇರುವುದು ವರಮಹಾಲಕ್ಷ್ಮೀ ವ್ರತ.

ನೈಮಿಷಾರಣ್ಯದಲ್ಲಿ ಋಷಿಮುನಿಗಳೆಲ್ಲ ಕಥೆ ಹೇಳೆಂದು ಕೇಳಿಕೊಂಡಾಗ ಸೂತಮುನಿಗಳು ಹೇಳಿದ ಒಂದು ಕಥೆ ವರಮಹಾಲಕ್ಷ್ಮೀ ಕಥೆ. ಸೂತಮುನಿಗಳು ಹೇಳುವಂತೆ ಈ ಕಥೆಯನ್ನು ಪರಮೇಶ್ವರನು ಪಾರ್ವತೀ ದೇವಿಗೆ ಅರುಹುತ್ತಾನೆ. ‘ಲೋಕದಲ್ಲಿ ಎಲ್ಲ ಸುಖಗಳನ್ನು ಕೊಡಮಾಡಿ, ಕಷ್ಟವನ್ನು ಪರಿಹರಿಸಿ, ಸೌಭಾಗ್ಯ–ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು?’ ಎನ್ನುವ ಮಡದಿಯ ಪ್ರಶ್ನೆಗೆ ಪರಮೇಶ್ವರನು ಹೇಳುವ ಕಥೆ ಮಹಾಲಕ್ಷ್ಮಿಯದ್ದು! ಶೈವ–ವೈಷ್ಣವ ಧಾರೆಗಳ ಏಕಸೂತ್ರತೆಗೂ ಇದು ಉದಾಹರಣೆಯಾಗಬಲ್ಲದು.

ಲಕ್ಷ್ಮೀ ಎನ್ನುವಾಕೆ ಭಾರತೀಯರ ಬದುಕಿನ ಸಮೃದ್ಧಿಯ ದೇವತೆ. ಇಲ್ಲಿ ಸಮೃದ್ಧಿ ಎನ್ನುವುದು ಹಣದ ಸುತ್ತಲೂ ಹೆಣೆದುಕೊಂಡಿರುವ ನಮ್ಮ ಕಾಲದ ಕಲ್ಪನೆಗಿಂತ ವಿಸ್ತಾರವಾದದ್ದು. ಬದುಕಿನಲ್ಲಿ ಸೌಖ್ಯವೆನ್ನುವುದು ಹಣಮಾತ್ರದಿಂದ ಒದಗುವಂಥದಲ್ಲ. ಅದು ಲೌಕಿಕ ಬದುಕಿನಲ್ಲಿ ನಮಗಿರುವ ಕರ್ತವ್ಯ ಮತ್ತು ಬಾಧ್ಯತೆಗಳನ್ನು ನೆರವೇರಿಸುವುದಕ್ಕೆ ಅನುಕೂಲವಾದ ಸ್ಥಿತಿಯನ್ನೂ ಒಳಗೊಂಡಿರುತ್ತದೆ. ಲಕ್ಷ್ಮೀಆ ಬಗೆಯ ಸಮೃದ್ಧಿಯ ದೇವತೆ.

ವ್ರತದ ಕಥೆಯನ್ನೂ, ವ್ರತವನ್ನು ಆಚರಿಸಬೇಕಾದ ವಿಧಾನವನ್ನೂ ಪಾರ್ವತೀದೇವಿಗೆ ಶ್ರೀಪರಮೇಶ್ವರನು ಅರುಹುತ್ತಾನೆ. ಅದನ್ನೇ ಸೂತಮಹರ್ಷಿಗಳು ಉಳಿದ ಋಷಿಗಳಿಗೆ ಅರುಹುತ್ತಾರೆ. ಅದನ್ನೇ ನಾವು ಸಾಮಾನ್ಯ ಮಾನವರು ಇಂದಿಗೂ ಪ್ರತಿವರ್ಷವೂ ಕೇಳಿಸಿಕೊಳ್ಳುತ್ತ, ಕೇಳಿಸುತ್ತ ಪರಂಪರೆಯನ್ನು ಜೀವಂತವಾಗಿ ಇಟ್ಟಿದ್ದೇವೆ. ಒಂದು ಧಾರ್ಮಿಕ ಆಚರಣೆಯಾಗುತ್ತಲೇ ಕಥಾ–ಕಥನ ಪರಂಪರೆಗೆ ವರಮಹಾಲಕ್ಷ್ಮೀ ವ್ರತವೂ ಸೇರಿದಂತೆ ಉಳಿದ ವ್ರತಗಳು ಕೊಡಮಾಡಿರುವ ಕಾಣಿಕೆ ಗಮನೀಯವಾದ್ದು.

ಈ ಬಾರಿಯ ವರಮಹಾಲಕ್ಷ್ಮೀ ವ್ರತವು ನಾಡಿಗೂ ಕಾಡಿಗೂ ಮನುಷ್ಯನ ಬದುಕಿಗೂ ಸಮೃದ್ಧಿಯನ್ನು ತರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.