ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ-27: ಕಂಬವಾದ ಶಿವ

ಅಕ್ಷರ ಗಾತ್ರ

ಮೊದಲಿನಿಂದ ಕೊನೆಯವರೆವಿಗೂ ಓಂಕಾರದ ಆಕಾರವುಳ್ಳ ಮತ್ತು ಐದು ಮಂಡಲಗಳಿಂದ ಕೂಡಿದ ಮತ್ತು ಐದು ಮಂಗಳಸ್ವರೂಪವೂ ಆದಂತಹ ರಥವನ್ನೇರಿದ ಶಿವನೊಂದಿಗೆ ಪಾರ್ವತಿ ತನ್ನ ಪುತ್ರರ ಜೊತೆ ಯುದ್ಧ ನಡೆಯುವ ಸ್ಥಳಕ್ಕೆ ಬಂದಿದ್ದಳು. ಶಿವ ಯುದ್ಧ ನಡೆಯುವ ಸ್ಥಳಕ್ಕೆ ಬಂದಾಗ ಬ್ರಹ್ಮ ಮತ್ತು ವಿಷ್ಣು ಇಬ್ಬರು ಭಯಂಕರವಾಗಿ ಕಾದಾಡುತ್ತಿದ್ದರು. ಪರಶಿವ ನೀಡಿದ ಪರಮಾಸ್ತ್ರಗಳನ್ನೆ ಹಿಡಿದು ಯುದ್ಧ ಮಾಡುತ್ತಿದ್ದರು. ಅವರಿಗೆ ಶಿವನ ಪರಮಾಸ್ತ್ರಗಳ ಭೀಕರತೆ ಅರಿವಿಲ್ಲದೆ, ಪರಸ್ಪರ ಪ್ರಯೋಗಿಸಿಬಿಟ್ಟಿದ್ದರು. ಕಾದಾಟದಲ್ಲಿ ಯಾರೊಬ್ಬರೂ ಗೆಲ್ಲುತ್ತಲೂ ಇರಲಿಲ್ಲ, ಸೋಲುತ್ತಲೂ ಇರಲಿಲ್ಲ. ಆದರೆ, ಅದರ ದುಷ್ಪರಿಣಾಮ ಜಗತ್ತಿನ ಮೇಲೆ ಬೀಳುತ್ತಿತ್ತು. ಆದ್ದರಿಂದ ‘ಯುದ್ಧವನ್ನು ನಿಲ್ಲಿಸಿ, ಮತ್ತೆಂದೂ ಬ್ರಹ್ಮ-ನಾರಾಯಣರು ಕಿತ್ತಾಡದಂತೆ ನೋಡಿಕೊಳ್ಳುತ್ತೇನೆ’ ಎಂದು ತನ್ನ ಹಿಂಬಾಲಿಸಿ ಬಂದಿದ್ದ ದೇವತೆಗಳಿಗೆ ಪರಮೇಶ್ವರ ಅಭಯ ನೀಡಿದ.

ವಿಷ್ಣು-ಬ್ರಹ್ಮರು ಯುದ್ಧ ಮಾಡುತ್ತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲೇ ಶಿವ ತನ್ನ ಗಣಗಳು ಬಾರಿಸುತ್ತಿದ್ದ ರಣವಾದ್ಯವನ್ನು ನಿಲ್ಲಿಸುವಂತೆ ಸೂಚಿಸಿ, ನಿಶ್ಶಬ್ದವಾಗಿರುವಂತೆ ಹೇಳಿದ. ಯುದ್ಧಭೂಮಿಯಲ್ಲಿ ಈಶ್ವರ ಗೂಢವಾಗಿ ಆಕಾಶದಲ್ಲಿ ನಿಂತು, ಬ್ರಹ್ಮ-ವಿಷ್ಣು ಯುದ್ಧವನ್ನು ಸ್ವಲ್ಪಕಾಲ ನೋಡಿದ. ಅವರಿಬ್ಬರು ಒಬ್ಬರನ್ನೊಬ್ಬರು ಕೊಲ್ಲಲು, ಮಾಹೇಶ್ವರಾಸ್ತ್ರ ಮತ್ತು ಪಾಶುಪತಾಸ್ತ್ರಗಳನ್ನು ಪರಸ್ಪರ ಪ್ರಯೋಗಿಸಿ ಕಾದಾಡುತ್ತಿದ್ದರಿಂದ ಅಪಾಯಕಾರಿ ಅಸ್ತ್ರಗಳ ಜ್ವಾಲೆಯು ಮೂರು ಲೋಕಗಳನ್ನು ದಹಿಸಲು ಪ್ರಾರಂಭಿಸಿತ್ತು. ಹೀಗೆ ಅಕಾಲದಲ್ಲಿ ಜಗತ್ತು ನಾಶವಾಗುತ್ತಿರುವುದನ್ನು ನೋಡಿದ ನಿರಾಕಾರನಾದ ಉರಿಗೋಪದಿಂದ ಈಶ್ವರನು ಮಹಾ ಅಗ್ನಿರೂಪವಾದ ಸ್ತಂಭ(ಕಂಬ)ರೂಪನಾಗಿ ಯುದ್ಧ ಮಾಡುತ್ತಿದ್ದ ಬ್ರಹ್ಮ ಮತ್ತು ವಿಷ್ಣು ಮಧ್ಯದಲ್ಲಿ ನಿಂತ. ಶಿವ ಕಂಬವಾಗಿ ಆವಿರ್ಭವಿಸಿದ ಕೂಡಲೇ, ಲೋಕವನ್ನು ದಹಿಸುತ್ತಿದ್ದ ಮಾಹೇಶ್ವರಾಸ್ತ್ರ ಮತ್ತು ಪಾಶುಪತಾಸ್ತ್ರಗಳು ಮಹಾಗ್ನಿರೂಪವಾದ ಆ ಸ್ತಂಭದಲ್ಲಿ ಶಾಂತವಾಗಿ ಬಿದ್ದು ಮಾಯವಾದವು.

ಈ ರೀತಿಯಾಗಿ ಅಸ್ತ್ರಗಳನ್ನು ಶಾಂತಗೊಳಿಸಿದ ಅತ್ಯಾಶ್ಚರ್ಯವಾದ ಕಂಬವನ್ನು ನೋಡಿ, ಬ್ರಹ್ಮ-ವಿಷ್ಣು ಇಬ್ಬರೂ ಆಶ್ಚರ್ಯಚಕಿತರಾದರು. ತಮ್ಮ ಪರಮಾಸ್ತ್ರವನ್ನೆ ನಿಷ್ಕ್ರಿಯಗೊಳಿಸಿದ, ಅದ್ಭುತ ಆಕಾರವುಳ್ಳ ಈ ಸ್ತಂಭ ಯಾವುದು? ಇದು ಇಲ್ಲಿಗೆ ಹೇಗೆ ಬಂದಿತು? ಅಂತ ಪರಿಶೀಲಿಸಿದರು. ಅಗ್ನಿಸ್ವರೂಪವಾದ ಈ ಕಂಬವು ತಿಳಿವಳಿಕೆಗೆ ನಿಲುಕದಂತಹ ಸ್ವರೂಪವುಳ್ಳದಾಗಿದೆ. ಇದು ಇಲ್ಲಿ ಆವಿರ್ಭವಿಸಿದುದೇತಕ್ಕೆ? ಈ ಕಂಬದ ತಲೆ–ಬುಡ ನಮಗೆ ಕಾಣಿಸುತ್ತಲೇ ಇಲ್ಲವಲ್ಲಾ ಅಂತ ಪೇಚಾಡಿದರು. ಆಲೋಚಿಸಿದಷ್ಟು ನಿಗೂಢವಾಗುತ್ತಿದ್ದ ಕಂಬದ ರಹಸ್ಯ ಬಯಲಿಗೆಳೆಯುತ್ತೇವೆಂಬ ಗರ್ವದಿಂದ ಬ್ರಹ್ಮ ಮತ್ತು ವಿಷ್ಣು ಸ್ತಂಭದ ಆದಿ ಮತ್ತು ತುದಿಯನ್ನು ಪರೀಕ್ಷಿಸಲು ಹೊರಟರು.

‘ನಾವು ಇಬ್ಬರೂ ಸೇರಿ ಒಂದೇ ಕಡೆ ಹೊರಟರೆ ರಹಸ್ಯ ತಿಳಿಯಲಾಗದು. ಆದುದರಿಂದ ನಾನು ಕಂಬದ ಬುಡದತ್ತ ಹೋಗಿ ನೋಡುತ್ತೇನೆ’ ಎಂದು ವಿಷ್ಣುವು ವರಾಹಸ್ವರೂಪವನ್ನು ಧರಿಸಿ, ಬುಡದ ಕಡೆ ಹೊರಟ. ಬ್ರಹ್ಮ ಹಂಸರೂಪವನ್ನು ಧರಿಸಿ ಆ ಕಂಬದ ಮೇಲಿನ ತುದಿಯನ್ನು ನೋಡಲು ತೆರಳಿದ. ವರಾಹರೂಪವನ್ನು ಧರಿಸಿ ಹೊರಟ ಹರಿಯು ಪಾತಾಳಲೋಕವನ್ನು ಭೇದಿಸಿ ಬಹಳ ದೂರ ಹೋದ. ಆದರೂ ಆ ಸ್ತಂಭದ ಮೂಲ ನೆಲೆಯೇ ಅವನಿಗೆ ಕಾಣಿಸಲಿಲ್ಲ. ಆಳಕ್ಕೆ ಇಳಿದಷ್ಟು ಕಂಬದ ಬುಡ ವಿಸ್ತಾರವಾಗುತ್ತಲೇ ಇತ್ತು. ಇದರಿಂದ ತುಂಬಾ ಬಳಲಿಬೆಂಡಾದ ವರಾಹರೂಪಿಯಾದ ವಿಷ್ಣು, ತಾನು ಯುದ್ಧಮಾಡುತ್ತಿದ್ದ ಭೂಮಿಗೆ ಸುಸ್ತಾಗಿ ಹಿಂತಿರುಗಿದ.

ಅತ್ತ ಬ್ರಹ್ಮ ಹಂಸರೂಪದಿಂದ ಆಕಾಶಮಾರ್ಗದಲ್ಲಿ ಹೋಗುತ್ತಾ ಇದ್ದರೂ ಕಂಬದ ಮೇಲ್ತುದಿ ಕಾಣಲೇ ಇಲ್ಲ. ಹೀಗೆ ಬ್ರಹ್ಮ ಆಕಾಶದೆತ್ತರಕ್ಕೆ ಸಾಗುತ್ತಿದ್ದಾಗ ಮೇಲಿಂದ ಕೆಳಗೆ ಬೀಳುತ್ತಲಿದ್ದ ಅದ್ಭುತವಾದ ಕೇದಗೆ ಹೂವೊಂದನ್ನು ನೋಡಿದ. ಆ ಪುಷ್ಪವು ಸ್ವಲ್ಪವೂ ಬಾಡದೆ, ತುಂಬಾ ಸುವಾಸನೆಯುಳ್ಳದ್ದಾಗಿತ್ತು. ಕೇದಗೆಯ ಸೌಂದರ್ಯ ಮತ್ತು ಸುವಾಸನೆಗೆ ಬ್ರಹ್ಮ ಮನಸೋತು, ತಾನು ಕಂಬದ ತುದಿ ಹುಡುಕಲು ಬಂದ ಕಾರ್ಯವನ್ನೇ ಮರೆತುಬಿಟ್ಟ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT