ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ನಾವೆಲ್ಲಾ ವಾಲ್ಮೀಕಿಯಂತಾಗಬೇಕು

Last Updated 15 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ವ್ಯಕ್ತಿಯ ಗುಣದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತೆ. ವ್ಯಕ್ತಿಯ ಗುಣ ಕೆಟ್ಟದಾಗಿದ್ದರೆ, ಅವನ ವ್ಯಕ್ತಿತ್ವವೂ ಕೆಟ್ಟದ್ದಾಗಿರುತ್ತೆ. ಮಾಡುವ ಕೆಲಸ ಒಳ್ಳೆಯದಾಗಿರಬೇಕಾದರೆ ನಾವು ಒಳ್ಳೆಯವರಾಗಿರಬೇಕು. ಒಳ್ಳೆಯ ಕವಿತೆ ಬರೆಯಬೇಕಾದರೂ ಕವಿಯ ಮನಸ್ಸು ಒಳ್ಳೆತನದಿಂದಿರಬೇಕು. ಕವಿಯ ಮನಸ್ಸು ಕೆಟ್ಟರೆ, ಉತ್ತಮ ಕವಿತೆ ಹುಟ್ಟಲಾರರು. ಹಾಗೆಯೇ, ಒಬ್ಬ ವಿಜ್ಞಾನಿ ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ, ಒಳ್ಳೆಯ ಸಂಶೋಧನೆಯಾಗುತ್ತೆ. ಇದು ಕವಿ, ವಿಜ್ಞಾನಿಗಳಿಗಲ್ಲದೆ, ಒಬ್ಬ ಋಷಿಗೂ ಗುಣಮೌಲ್ಯಗಳು ಅನ್ವಯವಾಗುತ್ತದೆ. ನಿರ್ಮಲ ಮನಸ್ಸಿನಿಂದ ಧ್ಯಾನಿಸಿದರೆ, ಒಳ್ಳೆಯ ಫಲ ಸಿಗುತ್ತೆ. ಇಲ್ಲದಿದ್ದರೆ, ತಪಃಭಂಗವಾಗಿ ವೈಫಲ್ಯ ಅನುಭವಿಸಬೇಕಾಗುತ್ತದೆ. ಬೇಡನಾಗಿದ್ದ ವಾಲ್ಮೀಕಿ ‘ರಾಮಾಯಣ’ ಬರೆಯುವಷ್ಟು ಪಾರಂಗತನಾಗಿದ್ದು ಅವನೊಳಗಿನ ಕ್ರೌರ್ಯ ಅಳಿದಾಗ. ಬೇಡನಾಗಿ ಅದೆಷ್ಟೋ ಪಕ್ಷಿ-ಪ್ರಾಣಿಗಳನ್ನು ಕೊಂದಿದ್ದ ವಾಲ್ಮೀಕಿಗೆ, ಮತ್ತೊಬ್ಬ ಬೇಡ ಕ್ರೌಂಚಪಕ್ಷಿಯನ್ನು ಕೊಂದಾಗ ಬಹಳ ನೋವಾಗುತ್ತದೆ. ವಾಲ್ಮೀಕಿ ಶೋಕದಿಂದ ಆಡಿದ ಶ್ಲೋಕವೇ ಕಾವ್ಯಮಯವಾಗಿ ‘ರಾಮಾಯಣ‘ದಂಥ ಮಹಾಕಾವ್ಯಕ್ಕೆ ಪ್ರೇರಣೆಯಾಗುತ್ತದೆ.

ಕರುಣೆ-ಮಮತೆ ಇಲ್ಲದವನಿಗೆ ಪರೋಪಕಾರಬುದ್ಧಿ ಬರುವುದಿಲ್ಲ. ಕೆಟ್ಟ ಜನರಿಗೆ ಬುದ್ಧಿಯೇ ಇರುವುದಿಲ್ಲ ಅಂತ ವಿಜ್ಞಾನವೂ ಹೇಳುತ್ತೆ, ಸಮಾಜವೂ ಒಪ್ಪಿಕೊಳ್ಳುತ್ತೆ. ಬುದ್ಧಿ ಕಡಿಮೆ ಇರುವುದರಿಂದಲೇ ಮೃಗಗಳು ಕ್ರೂರವಾಗಿ ವರ್ತಿಸುತ್ತವೆ. ಹಾಗೇ, ಬುದ್ಧಿ ಕಡಿಮೆ ಇರುವ ಮನುಷ್ಯರಲ್ಲೇ ಸ್ವಾರ್ಥ-ದ್ವೇಷ-ಮೋಸಗಳು ಹೆಚ್ಚಾಗಿರುತ್ತವೆ. ಜ್ಞಾನ-ವಿವೇಕ ಇರುವ ಮನುಷ್ಯರಲ್ಲಿ ದಯೆ-ಔದಾರ್ಯಗಳು ಹೆಚ್ಚಿರುತ್ತವೆ. ಬಹುಮುಖ್ಯವಾಗಿ ಕಷ್ಟದಲ್ಲಿರುವವರ ಬಗ್ಗೆ ಅನುಕಂಪ ಸ್ಫುರಿಸುತ್ತದೆ. ವಿಶ್ವದ ಮೊದಲ ಮಹಾಕಾವ್ಯ ರಾಮಾಯಣ ಹುಟ್ಟಿದ್ದು, ಕ್ರೌಂಚಪಕ್ಷಿಯ ಮೇಲಾದ ಕ್ರೌರ್ಯವನ್ನು ಖಂಡಿಸಿದಾಗ. ಮನುಷ್ಯನಲ್ಲಿರುವ ಕೆಟ್ಟತನಗಳನ್ನು ಕೆಡವಿ, ಅವನ ಮನದಲ್ಲಿ ಒಳ್ಳೆತನ ಉದ್ದೀಪಿಸಲು ವಾಲ್ಮೀಕಿ 24 ಸಾವಿರ ಶ್ಲೋಕಗಳ ಮಹಾಕಾವ್ಯವನ್ನು ಬರೆದು ಆದಿಕವಿ ಅನ್ನಿಸಿಕೊಳ್ಳುತ್ತಾನೆ. ಅಂದರೆ ಒಳ್ಳೆಯ ಸಾಹಿತ್ಯ ಹುಟ್ಟುವುದು ಒಳ್ಳೆಯ ಸಾಹಿತಿಯಿಂದಲೇ ಅನ್ನುವುದು ರಾಮಾಯಣ ಕಾಲದಿಂದಲೂ ನಿರೂಪಿತವಾಗಿದೆ. ಆದರೆ, ಇಂಥ ಒಳ್ಳೆತನ ಸುಮ್ಮನೆ ಹುಟ್ಟುವುದಿಲ್ಲ. ಅದಕ್ಕೂ ಬೇಕು ಸಾಕಷ್ಟು ಪರಿಶ್ರಮ ಅನ್ನುವುದು ಸಹ ವಾಲ್ಮೀಕಿ ಜೀವನವೃತ್ತಾಂತ ಸಾಕ್ಷೀಕರಿಸುತ್ತದೆ.

ಬೇಡನಾಗಿದ್ದಾಗ ಕ್ರೂರನಾಗಿ ಪ್ರಾಣಿಪಕ್ಷಿಗಳನ್ನು ಕೊಲ್ಲುತ್ತಿದ್ದ ರತ್ನಾಕರ, ನಾರದಮುನಿಯ ಸಲಹೆಯಂತೆ ಪಾಪಕೃತ್ಯ ಬಿಟ್ಟು, ಪುಣ್ಯ ಸಂಪಾದಿಸಲು ತಪಸ್ಸಿಗೆ ಕುಳಿತುಕೊಂಡಾಗ, ಅವನ ಮೈಮೇಲೆ ಹುತ್ತ ಬೆಳೆಯುತ್ತದೆ. ಧೃತಿಗೆಡದೆ ಏಕಾಗ್ರಚಿತ್ತನಾಗಿ ತಪಸ್ಸು ಮಾಡಿ ತನ್ನ ಮನದೊಳಗಿದ್ದ ಕ್ರೌರ್ಯದ ಪಾಪವನ್ನು ತೊಳೆದುಕೊಳ್ಳುತ್ತಾನೆ. ಯೋಚನೆಯ ಹುತ್ತದಿಂದ (ವಲ್ಮೀಕ) ಸುಜ್ಞಾನ ಪಡೆದು ಹೊರಬಂದು, ವಾಲ್ಮೀಕಿ ಹೆಸರಿನಲ್ಲಿ ಸಾತ್ವಿಕ ಜೀವನ ನಡೆಸುತ್ತಾನೆ. ತಪಸ್ಸಿನಿಂದ ವಾಲ್ಮೀಕಿ ಮನಸ್ಸು ಅದೆಷ್ಟು ಉತ್ತಮವಾಗಿರುತ್ತದೆಂದರೆ, ಕ್ರೌಂಚಪಕ್ಷಿಯ ಸಾವಿಗೆ ಮರುಗುತ್ತಾನೆ. ಕೊಂದ ಬೇಡನನ್ನು ಶಪಿಸುತ್ತಾನೆ. ಇಂಥ ಒಳ್ಳೆಯ ಮನಸ್ಸು ವಾಲ್ಮೀಕಿಗೆ ಇದ್ದಿದ್ದರಿಂದಲೇ ರಾಮಾಯಣದಂಥ ಅತ್ಯುನ್ನತ ಮಹಾಕಾವ್ಯವನ್ನು ಬರೆಯಲು ಸಾಧ್ಯವಾಯಿತು. ದೌರ್ಜನ್ಯ ನಡೆಸುವವರಿಗೆ ಎಂಥ ಫಲ ಸಿಗುತ್ತ್ತೆ ಎಂಬುದನ್ನು ‘ದುರ್ಜನ-ಸಜ್ಜನ’ರ ಕಥಾಹಂದರದಲ್ಲಿ ಅರ್ಥಪೂರ್ಣವಾಗಿ ನಿರೂಪಿಸುವ ಪ್ರೌಢಿಮೆ ಸಿದ್ಧಿಸಿತು.

ನಾವು ಅಷ್ಟೇ, ಬೇಡ ಮನಃಸ್ಥಿತಿಯಿಂದ ವಾಲ್ಮೀಕಿಯ ಸಾತ್ವಿಕ ಮನಃಸ್ಥಿತಿಗೆ ಬರಬೇಕು. ಒಳ್ಳೆಯ ಮನಸ್ಸು ಮೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ವಾಲ್ಮೀಕಿಯ ತಪಸ್ಸಿನಂತೆ ಕಠಿಣ ಪರಿಶ್ರಮದಿಂದ ಮನಸ್ಸನ್ನು ಹದವಾಗಿ ಪರಿಷ್ಕರಿಸಬೇಕು. ಕಾಡಿನಲ್ಲಿ ಒಂಟಿ ಸಲಗದಂತೆ ಅಲೆವ ಮನಸ್ಸನ್ನು ಪರಹಿತವೆಂಬ ಖೆಡ್ಡಾದಲ್ಲಿ ಪಳಗಿಸಬೇಕು. ‘ಪರೋಪಕಾರಕ್ಕೆ ಇದೇ ಈ ಶರೀರ’ ಎಂಬ ತ್ಯಾಗದ ಪಾಕದಲ್ಲಿ ಪರಿಪಕ್ವವಾಗಿಸಬೇಕು. ಪಾಪ-ಪುಣ್ಯಗಳ ಯೋಚನೆಯ ಹುತ್ತದಲ್ಲಿ ವಾಲ್ಮೀಕಿಯಂತೆ ಉತ್ತಮಗೊಳ್ಳಬೇಕು. ನಾಲ್ಕು ಜನರಿಗೆ ಮಾಡುವ ಉಪಕಾರದಲ್ಲಿ ಉತ್ತಮ ಬದುಕಿದೆ ಎಂಬುದು ಮನದಟ್ಟಾದಾಗ ನಮಗೆ ‘ಸಚ್ಚಿದಾನಂದ’ದ ಅನುಭವವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT