ಶುಕ್ರವಾರ, ಸೆಪ್ಟೆಂಬರ್ 17, 2021
21 °C

ವಾರ ಭವಿಷ್ಯ:18-10-2020 ರಿಂದ 24-10-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕಕ್ಕೆ 8197304680

**
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕೆಲಸದ ಒತ್ತಡದ ನಡುವೆ ಬಿಡುವು ದೊರೆತು ಮನಸ್ಸಿಗೆ ಶಾಂತಿ ಎನಿಸುತ್ತದೆ. ಉದ್ಯೋಗದಲ್ಲಿದ್ದ ಜಂಜಾಟಗಳು ದೂರವಾಗುತ್ತವೆ. ಅನವಶ್ಯಕ ಖರ್ಚುಗಳನ್ನು ಹತೋಟಿಗೆ ತಂದು ಆರ್ಥಿಕ ಸಮಸ್ಯೆಯನ್ನು ತಹಬಂದಿಗೆ ತರುವಿರಿ.ವ್ಯವಹಾರದಲ್ಲಿ ಸಾಮಾನ್ಯ ಆದಾಯ ನಿರೀಕ್ಷಿಸಬಹುದು. ಆಭರಣ ವ್ಯಾಪಾರಿಗಳು ಉತ್ತಮ ಆದಾಯ ನಿರೀಕ್ಷಿಸಬಹುದು. ಹೊಸ ವಾಹನನು ಖರೀದಿಸುವ ಯೋಗವಿದೆ. ನಿಂತಿದ್ದ ಸರ್ಕಾರಿ ಮಟ್ಟದ ಕೆಲಸಗಳನ್ನು ಈಗ ಮಾಡಿಕೊಳ್ಳಬಹುದು. ಸಂಕಷ್ಟಗಳಲ್ಲಿ ಹಿರಿಯರಿಂದ ಧನಸಹಾಯ ನಿರೀಕ್ಷಿಸಬಹುದು.

**
ವೃಷಭರಾಶಿ(ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಈ ಹಿಂದೆ ಕೂಡಿಟ್ಟಿದ್ದ ಸಂಪನ್ಮೂಲಗಳನ್ನು ಬಳಸಿ ವ್ಯವಹಾರ ಮುಂದುವರಿಸುವಿರಿ. ಯಂತ್ರೋಪಕರಣಗಳ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ದೊರೆತು ಆನಂದಿಸುವಿರಿ. ವಿದೇಶಿ ಕಂಪನಿಗಳ ಸಹಭಾಗಿತ್ವ ದೊರೆತು ನಿಮ್ಮ ವ್ಯವಹಾರವು ಹೊಸ ತಿರುವು ಪಡೆಯುತ್ತದೆ. ಮಕ್ಕಳ ಅಭಿವೃದ್ಧಿಯು ಸಂತಸ ತರುತ್ತದೆ. ಸಂಘ-ಸಂಸ್ಥೆಗಳಿಂದ ನಿಮ್ಮ ಕೆಲಸಗಳಿಗೆ ಪೂರಕ ಸಹಾಯ ದೊರೆಯುತ್ತದೆ. ತಂದೆಯೊಂದಿಗಿನ ಮುಸುಕಿನ ಗುದ್ದಾಟ ಕೊನೆಗೊಳ್ಳುತ್ತದೆ. ಕೃಷಿ ಉತ್ಪನ್ನ ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ನಿಮ್ಮ ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು.

**
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉದ್ಯೋಗದಲ್ಲಿ ಮುನ್ನಡೆ ಕಂಡರೂ ಸ್ವಲ್ಪ ಆದಾಯದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಹಿರಿಯರೊಂದಿಗೆ ಇದ್ದ ಕಿರಿಕಿರಿ ಹಾಗೂ ಮನಸ್ತಾಪಗಳು ದೂರವಾಗಿ ಅನುಬಂಧ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಇರುತ್ತದೆ. ವಿದೇಶದ ಪ್ರಯಾಣವು ವ್ಯವಹಾರದಲ್ಲಿ ಒದಗಿ ಬಂದರೂ ಈಗ ಅದನ್ನು ಬಳಸಿಕೊಳ್ಳಲು ಆಗುವುದಿಲ್ಲ. ವಿದೇಶಿ ಕಂಪನಿಗಳ ಅವಕಾಶಗಳನ್ನು ಬಳಸಿಕೊಂಡು ವ್ಯವಹಾರದಲ್ಲಿ ಮೇಲೆ ಬರಬಹುದು. ನಿವೇಶನಗಳ ತಕರಾರುಗಳು ಪರಿಹಾರದತ್ತ ಸಾಗುತ್ತವೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆ ಇದೆ.

**
ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಬಹುಮುಖ ಕಾರ್ಯಗಳ ಒತ್ತಡದಿಂದ ಗೊಂದಲವಾಗಿ ಕೆಲಸದಲ್ಲಿ ತಪ್ಪಾಗುವ ಸಾಧ್ಯತೆ ಇದ್ದು, ಎಚ್ಚರದಿಂದ ಕೆಲಸ ಮಾಡಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಸಾಕುಪ್ರಾಣಿಗಳಿಂದ ಸ್ವಲ್ಪ ಕಿರಿಕಿರಿಯಾಗಿ ಬೇಸರವಾಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿದರೆ, ಉತ್ತಮ ಫಲಿತಾಂಶ ಪಡೆಯಬಹುದು. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರಲಿದೆ. ಆದಾಯ ವೆಚ್ಚಗಳ ನಡುವಿನ ವ್ಯತ್ಯಾಸ ಕಂಡು ಸಂಗಾತಿಯು ಕೋಪಗೊಳ್ಳಬಹುದು. ಪಿತ್ರಾರ್ಜಿತ ಆಸ್ತಿಗಳನ್ನು ಅಪೇಕ್ಷೆ ಪಡುತ್ತಿದ್ದವರಿಗೆ ಈಗ ಅದು ದೊರೆಯುವ ಸೂಚನೆ ಇದೆ.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಭೂಮಿಯ ತಕರಾರಿನ ವಿಷಯದಲ್ಲಿ ಪಂಚಾಯಿತಿಯಿಂದ ನ್ಯಾಯ ದೊರೆಯುತ್ತದೆ. ಇದರಲ್ಲಿ ನಿಮಗೆ ಸ್ವಲ್ಪ ನಷ್ಟವೆನಿಸಿದರೂ ಸಹನೆಯಿಂದ ಇರಿ, ಭೂಮಿಯ ಮೇಲಿನ ಹಕ್ಕು ನಿಮಗೆ ಈಗ ದೊರೆಯುತ್ತದೆ. ವೃತ್ತಿಯಲ್ಲಿ ಯಶಸ್ಸು ಕಾಣುವಿರಿ. ಲಲಿತಕಲೆಗಳನ್ನು ತಿಳಿದಿರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಯೋಗವಿದೆ. ಹಣಕಾಸಿನ ಸ್ಥಿತಿ ತುಸು ಉತ್ತಮವಾಗಿ ಇರುತ್ತದೆ. ಮಕ್ಕಳ ಬಗ್ಗೆ ಉತ್ತಮ ವಾರ್ತೆಗಳನ್ನು ಕೇಳುವಿರಿ. ಮಕ್ಕಳಿಂದ ನಿಮಗೆ ಧನ ಸಹಾಯ ಒದಗುವ ಸಾಧ್ಯತೆ ಇದೆ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಕೆಲವು ನಿರೀಕ್ಷಿತ ಕೆಲಸಗಳು ಕೈಗೂಡುವ ಸಂದರ್ಭವಿದೆ. ಕಠಿಣ ಪರಿಶ್ರಮದಿಂದ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಉತ್ತಮ ಸಫಲತೆ ಕಾಣುವ ಎಲ್ಲ ಲಕ್ಷಣಗಳಿವೆ. ಹೊಸ ಯೋಜನೆಯನ್ನು ರೂಪಿಸುವ ಮುನ್ನ ಅದರ ಬಗ್ಗೆ ಸರಿಯಾಗಿ ವಿಮರ್ಶಿಸುವುದು ಅಗತ್ಯ. ಮರಮುಟ್ಟುಗಳ ವ್ಯಾಪಾರಿಗಳಿಗೆ ಸ್ವಲ್ಪ ಕಾನೂನಿನ ತೊಡಕು ಎದುರಾಗ ಬಹುದು. ಮಕ್ಕಳಿಂದ ನಿಮಗೆ ಬೇಸರ ಆಗಬಹುದು. ಅಕಾಲ ಭೋಜನದಿಂದ ಆರೋಗ್ಯದಲ್ಲಿ ವ್ಯತ್ಯಾಸ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ನೆಂಟರು ಪಡೆದ ಸಾಲಕ್ಕೆ ಜಾಮೀನು ಕೊಡುವುದು ತಪ್ಪಾಗಬಹುದು.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಎಡರು- ತೊಡರುಗಳು ಇದ್ದರೂ ನಿರೀಕ್ಷಿತ ಪ್ರಗತಿ ಕಾಣುವಿರಿ. ಬಂಧುಗಳ ವಿಷಯಗಳಲ್ಲಿ ನೀವು ಅತಿಯಾಗಿ ಮೂಗು ತೂರಿಸುವುದರಿಂದ ಗೌರವಕ್ಕೆ ಧಕ್ಕೆ ತಂದುಕೊಳ್ಳುವುದಲ್ಲದೆ ನೆಮ್ಮದಿ ಸಹ ಕಳೆದುಕೊಳ್ಳುವಿರಿ. ಲೇವಾದೇವಿಗಾರರು ಬಹಳ ಎಚ್ಚರ ವಹಿಸಿ. ಸಂಸಾರದಲ್ಲಿ ಸ್ವಲ್ಪ ಕಾವೇರಿದ ವಾತಾವರಣ ಇರುತ್ತದೆ. ಹರಿತ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ವಹಿಸಿ. ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಸರ್ಕಾರಿ ಕೆಲಸದಲ್ಲಿರುವ ಕೆಲವು ಉದ್ಯೋಗಿಗಳಿಗೆ ಬಯಸಿದ ಜಾಗಕ್ಕೆ ವರ್ಗಾವಣೆ ಸಾಧ್ಯತೆ ಇದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ವ್ಯವಹಾರದಲ್ಲಿ ಚೇತರಿಕೆ ಕಾಣುತ್ತದೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಪ್ರಸಂಶೆಯ ಜೊತೆಗೆ ವರ್ಗಾವಣೆ ಸಹ ಇರುತ್ತದೆ. ಸಂಗೀತಗಾರರು ಪ್ರಸಿದ್ಧಿಗೆ ಬರುವರು. ಆದಾಯದ ಹೊಸ ಮೂಲಗಳು ಗೋಚರಿಸಲಿವೆ. ಇವುಗಳನ್ನು ಸರಿಯಾಗಿ ಬಳಸಿಕೊಂಡು ಆದಾಯ ವೃದ್ಧಿಸಿಕೊಳ್ಳಿರಿ. ಸೈನ್ಯದಲ್ಲಿರುವವರಿಗೆ ಹೊಸ ಅಧಿಕಾರದ ಜೊತೆಗೆ ಹೊಸ ಹೊಸ ಜವಾಬ್ದಾರಿಗಳು ಬರುತ್ತವೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಸಂಗಾತಿಯ ಶ್ರಮದಿಂದ ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

**
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಿಹಿ ಸುದ್ದಿಯೊಂದು ಕೇಳಿ ಸಂತಸವಾಗಲಿದೆ. ವ್ಯಾಪಾರ ಮತ್ತು ವ್ಯವಹಾರಗಳ ಪ್ರಗತಿ ಕಂಡು ನೆಮ್ಮದಿ ಹೊಂದುವಿರಿ. ಆರ್ಥಿಕ ಸಮಸ್ಯೆ ಪರಿಹಾರವಾಗಿ ಸಂಸಾರದಲ್ಲಿ ನೆಮ್ಮದಿ ಮೂಡುತ್ತದೆ. ಮನೆ ಕಟ್ಟುವ ಆಲೋಚನೆಯು ಗರಿಗೆದರುತ್ತದೆ. ಕೃಷಿಯ ಕ್ಷೇತ್ರದಲ್ಲಿ ಹೊಸ ರೀತಿಯ ಪದ್ಧತಿಯಲ್ಲಿ ಬೆಳೆ ಬೆಳೆಯುವ ಆಸಕ್ತಿ ಹೊಂದುವಿರಿ ಮತ್ತು ಇದಕ್ಕೆ ಬೇಕಾದ ವಿಷಯಗಳನ್ನು ಕಲೆ ಹಾಕುವಿರಿ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನಗಳು ನಿಧಾನವಾದರೂ ಬಂದೇ ಬರುತ್ತವೆ. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಅಭಿವೃದ್ಧಿ ಇದೆ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ಯೋಗ್ಯ ಪ್ರತಿಫಲ ದೊರೆತು ಉತ್ತಮ ಅವಕಾಶ ನಿಮ್ಮದಾಗುವ ಸಂದರ್ಭವಿದೆ. ರಾಜಕೀಯ ಮುಖಂಡರಿಗೆ ಅವರಾಡಿದ ಮಾತಿನಿಂದ ಅವರಿಗೇ ಮುಖಭಂಗ ಆಗುವ ಸಾಧ್ಯತೆಯಿದೆ. ಪತ್ತೇದಾರಿ ಕೆಲಸ ಮಾಡುವವರಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ವಿದ್ಯಾರ್ಥಿಗಳು ಸಾಧನೆಗಾಗಿ ಹೆಚ್ಚಿನ ಪರಿಶ್ರಮ ಪಡಬೇಕು. ಕ್ರೀಡಾಪಟುಗಳಿಗೆ ಸಾಧಿಸಲು ಉತ್ತಮ ಸಹಕಾರ ದೊರೆಯುತ್ತದೆ. ಹೈನುಗಾರಿಕೆ ವೃತ್ತಿಯವರಿಗೆ ಪ್ರಗತಿ ಇರುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಧನ ಆಗಮನದ ನಿರೀಕ್ಷೆಯಲ್ಲಿದ್ದ ನಿಮಗೆ ಯಾವುದೋ ಮೂಲದಿಂದ ಹಣ ಒದಗಿಬರುತ್ತದೆ. ಹಿರಿಯರಿಂದ ಹಣಕಾಸಿನ ಸಹಾಯ ದೊರಕುತ್ತದೆ. ಉದ್ಯೋಗಿಗಳಿಗೆ ವೃತ್ತಿಯಲ್ಲಿ ಆತಂಕದ ಕ್ಷಣಗಳು ಎದುರಾಗಿ ಉದ್ಯೋಗ ನಷ್ಟದ ಭೀತಿ ಆಗಬಹುದು. ಸರ್ಕಾರಿ ಸಂಸ್ಥೆಗಳಿಂದ ಸಾಲ ಪಡೆದು ಹಳೆಯ ಸಾಲಗಳನ್ನು ತೀರಿಸುವುವಿರಿ. ಶೀತ ಬಾಧೆ ಕಾಡಬಹುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ. ಅನಿರೀಕ್ಷಿತವಾಗಿ ಉತ್ತಮ ವ್ಯವಹಾರಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಮನೆಪಾಠ ಮಾಡುವವರಿಗೆ ಗಳಿಕೆ ಹೆಚ್ಚುತ್ತದೆ. ಮನೆಯಲ್ಲಿ ಮದುವೆಯ ಬಗ್ಗೆ ಮಾತುಕತೆ ನಡೆಯುತ್ತದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಪಾಲುದಾರಿಕೆ ವ್ಯವಹಾರಗಳಲ್ಲಿ ನೀವು ಕೈ ಹಾಕದಿರುವುದು ಒಳ್ಳೆಯದು. ಹಣಕಾಸಿನ ಸಂಸ್ಥೆಗಳಿಗೆ ಯಾವುದೇ ರೀತಿಯ ಜಾಮೀನು ನೀಡದಿರುವುದು ಉತ್ತಮ. ಅತ್ಯಂತ ಪರಾಕ್ರಮದಿಂದ ನಿಮ್ಮ ಶತ್ರುಗಳನ್ನು ಎದುರಿಸುವಿರಿ. ಹಿರಿಯರ ಸಲಹೆಗಳು ಈ ವಿಚಾರದಲ್ಲಿ ನಿಮಗೆ ಅನುಕೂಲ ತರುತ್ತವೆ. ಸ್ವಲ್ಪ ಆಲಸಿ ಮನೋಭಾವ ಇರಲಿದೆ. ಒಡವೆ ವಸ್ತುಗಳನ್ನು ಖರೀದಿಸುವಾಗ ಎಚ್ಚರ ಇರಲಿ, ಮೋಸ ಹೋಗುವ ಸಾಧ್ಯತೆಗಳಿವೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಉತ್ತಮವಾಗಿರುತ್ತದೆ. ರಾಜಕಾರಣಿಗಳಿಗೆ ಹೊಸ ಅವಕಾಶಗಳ ದೊರೆತು ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.