ಶನಿವಾರ, ಸೆಪ್ಟೆಂಬರ್ 25, 2021
29 °C

ವಾರ ಭವಿಷ್ಯ: 25-7-2021ರಿಂದ 31-7-2021ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಗೃಹ ನಿರ್ಮಾಣ ಯೋಜನೆಯಲ್ಲಿ ಸ್ನೇಹಿತರು ಹಾಗೂ ಕುಟುಂಬದವರ ಸಲಹೆಯನ್ನು ಪರಿಗಣಿಸುವುದು ಉತ್ತಮ. ಇದರಿಂದ ಸ್ವಲ್ಪ ಹಣ ಉಳಿಯುತ್ತದೆ. ನಿಮ್ಮ ಕಾರ್ಯದೊತ್ತಡದಲ್ಲಿ ಕುಟುಂಬದ ಕಡೆ ಗಮನಹರಿಸುವುದು ಖಂಡಿತ ಅವಶ್ಯಕ. ಉದ್ವೇಗಗೊಳ್ಳದೇ ಶಾಂತ ರೀತಿಯಿಂದ ವ್ಯವಹರಿಸಿದಲ್ಲಿ ಕೆಲಸಕಾರ್ಯಗಳಲ್ಲಿ ಸುಲಭ ಜಯವನ್ನು ಕಾಣಬಹುದು. ಹಿರಿಯರ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರೊಂದಿಗೆ ಸುದೀರ್ಘ ಮಾತುಕತೆ ಮಾಡಿ ಒಂದು ಒಪ್ಪಂದಕ್ಕೆ ಬರುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಶೋಧನಾ ನಿರತರಿಗೆ ಅಚ್ಚರಿಯ ಫಲಿತಾಂಶವೆಂಬಂತೆ ಹೊಸ ಹುದ್ದೆಯೊಂದು ದೊರೆಯುತ್ತದೆ.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ1 2)
ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿ ದೈವ ಪೂಜೆಯ ಜೊತೆಗೆ ಇತರೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಯಾರೊಬ್ಬರನ್ನೂ ಹಂಗಿಸಿ ಮಾತನಾಡುವುದು ಖಂಡಿತ ಬೇಡ. ಸಾರಿಗೆ ವ್ಯವಹಾರವನ್ನು ಮಾಡುವವರಿಗೆ ಈಗ ಕೆಲಸಗಳು ದೊರೆಯುತ್ತವೆ. ಕೆಲವೊಂದು ಹಳೆಯ ವ್ಯವಹಾರಗಳಲ್ಲಿ ತೊಡಗಿಸಿದ್ದ ಹಣ ಈಗ ನಿಮ್ಮ ಕಷ್ಟಕ್ಕೆ ಒದಗುತ್ತದೆ. ದೈವದರ್ಶನಕ್ಕಾಗಿ ಕುಟುಂಬಸಮೇತ ಹೋಗಿಬರುವಿರಿ. ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಣೆ ಆಗುತ್ತದೆ. ತಾಯಿಯೊಂದಿಗೆ ಕಾವೇರಿದ  ಮಾತುಗಳು ಆಗಬಹುದು. ವೃತ್ತಿಯಲ್ಲಿ ವೇತನ ಏರಿಕೆಯನ್ನು ಕಾಣಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉದ್ಯಮವನ್ನು ಸರಿದಾರಿಗೆ ತಂದು ಮುನ್ನಡೆಸುವಲ್ಲಿ ನಿಪುಣತೆಯನ್ನು ತೋರುವಿರಿ. ಭೂಮಿಯ ಕ್ರಯ ಮತ್ತು ವಿಕ್ರಯಗಳನ್ನು ಮಾಡುವವರಿಗೆ ಲಾಭವಿರುತ್ತದೆ. ರಾಜಕೀಯದಲ್ಲಿರುವ ಕೆಲವು ವ್ಯಕ್ತಿಗಳಿಗೆ ಕಾರ್ಯಕರ್ತರುಗಳ ಅಸಹಕಾರಎದುರಾಗಿ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸೂಕ್ತ ಸಂಬಂಧ ಒದಗಿಬರುವ ಸಾಧ್ಯತೆಯಿದೆ. ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ಚೆನ್ನಾಗಿ ನಡೆದು ಲಾಭ ಬರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ವಿದೇಶಕ್ಕೆ ಹೋಗಬೇಕೆಂದು ಆಶಿಸುತ್ತಿದ್ದವರು ಸ್ವಲ್ಪ ದಿನ ತಮ್ಮ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಅತಿಯಾದ ಆತ್ಮಗೌರವವಿರುತ್ತದೆ. ಕೃಷಿಕಾರ್ಮಿಕರಿಗೆ ಉತ್ತಮ ಆದಾಯವಿರುತ್ತದೆ. ಕುಟುಂಬದ ಗೌರವವನ್ನು ಕಾಪಾಡಬೇಕಾದ ಅನಿವಾರ್ಯ ಎದುರಾಗಿ ಅದನ್ನು ಸಮರ್ಥವಾಗಿ ನಿರ್ವಹಿಸುವಿರಿ. ನಿಮ್ಮ ಎಲ್ಲಾ ವ್ಯವಹಾರಗಳ ಅಂಕಿಅಂಶಗಳನ್ನು ಗೋಪ್ಯವಾಗಿಡುವುದು ಉತ್ತಮ. ಜಾಮೀನು ನೀಡುವ ವಿಷಯಗಳಲ್ಲಿ ಎಚ್ಚರಿಕೆ ಇರಲಿ. ಇದು ನಿಮಗೆ ಸಂಕಷ್ಟವನ್ನು ತಂದೊಡ್ಡಬಹುದು. ಸತ್ಕಾರ್ಯಕ್ಕಾಗಿ  ದೇಣಿಗೆ ಕೊಡುವಾಗ ಪರಿಶೀಲಿಸಿ ಕೊಡಿರಿ. ಸ್ವಂತ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇರಲಿ. ಕಲಾಕೃತಿಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಉತ್ತಮ ಮಾತುಕತೆಯಿಂದ ಬಂಧುಗಳೊಡನೆ ಸಂಬಂಧಗಳನ್ನು ಸುಧಾರಣೆ ಮಾಡಿಕೊಳ್ಳುವಿರಿ. ಬಹುದಿನದ ಆಸೆಯೊಂದು ಈಡೇರುವ ಸಾಧ್ಯತೆ ಇದೆ. ವಾಹನಗಳ ಮಾರಾಟ ಮಾಡುವವರಿಗೆ ವ್ಯವಹಾರ ನಿಧಾನವಾಗಿ ಚೇತರಿಕೆಯನ್ನು ಕಾಣಬಹುದು. ನ್ಯಾಯಾಲಯದ ವಿಚಾರಗಳಿಗಾಗಿ ಆಗುತ್ತಿದ್ದ ಅಲೆದಾಟಗಳು ಕಡಿಮೆಯಾಗುತ್ತವೆ. ವ್ಯವಹಾರಗಳಲ್ಲಿ ನೂತನ ಪಾಲುದಾರರು ದೊರೆತು ವ್ಯವಹಾರ ವಿಸ್ತರಿಸುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದೇ ಇರುತ್ತದೆ. ಹೆಚ್ಚಿನ ಶ್ರಮದಿಂದ ಹೆಚ್ಚಿನ ಆದಾಯವನ್ನು ಗಳಿಸಿ ಸಂತಸಪಡುವಿರಿ. ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವವರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಇರುವುದು ಒಳಿತು. ಸಂಗಾತಿಯೊಂದಿಗೆ ತಾಳ್ಮೆಯಿಂದ ಇರುವುದು ಉತ್ತಮ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಅಪರೂಪದ ಬಂಧುಗಳ ಆಗಮನದಿಂದ ಸಂತಸವಾಗುತ್ತದೆ ಮತ್ತು ಅವರಿಂದ ಉಡುಗೊರೆಗಳು ಸಹ ದೊರೆಯುತ್ತವೆ. ಉದ್ಯೋಗದಲ್ಲಿರುವ ಹಿರಿಯ ಅಧಿಕಾರಿಗಳಿಗೆ ಆಯಕಟ್ಟಿನ ಜಾಗಗಳಲ್ಲಿ ಸ್ಥಾನ ದೊರೆತು ಬದಲಿ ಆದಾಯದ ಸೂಚನೆ ಇರುತ್ತದೆ.  ಮನೆಯ ಅನುಕೂಲಕ್ಕಾಗಿ ನವೀಕರಣ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಿರಿ. ಕೃಷಿ ಕಾರ್ಮಿಕರಿಗೆ ಬರಬೇಕಾಗಿದ್ದ ಬಾಕಿ ಹಣಕ್ಕೆ ಅಡೆತಡೆಗಳು ಇದ್ದರೂ ಬಂದೇ ಬರುತ್ತದೆ. ಲೇವಾದೇವಿ ಮಾಡುವವರಿಗೆ ಬರುವ ಹಣ ನಿಲ್ಲುವ ಸಾಧ್ಯತೆಗಳಿವೆ. ಭೂ ಸಂಬಂಧಿ ವ್ಯವಹಾರಗಳನ್ನು ಮಾಡುವವರಿಗೆ ಸರ್ಕಾರದ ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಆದಾಯಕ್ಕಿಂತ ಹೆಚ್ಚು ಖರ್ಚು ಬರುವುದರಿಂದ ಖರ್ಚಿಗೆ ಕಡಿವಾಣವನ್ನು ಹಾಕಲೇಬೇಕಾಗಿದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಬೇಡಿಕೆಯ ಈಡೇರಿಕೆಗಾಗಿ ಬಹಳ ಪ್ರಯಾಸಪಡುವಿರಿ. ಸ್ವಲ್ಪಮಟ್ಟಿನ ಒತ್ತಡಗಳ ನಡುವೆ ಕೆಲಸ ನಿರ್ವಹಿಸುವುದರಿಂದ ದೇಹಕ್ಕೆ ಆಯಾಸವಾಗುತ್ತದೆ. ನೀವು ತೆಗೆದುಕೊಂಡ ನಿರ್ಧಾರಗಳು ಚ್ಯುತಿಬಾರದೆ ಮುನ್ನಡೆಯುವುವು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಚಿನ್ನದ ಗಟ್ಟಿಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಕೃಷಿಕರಿಗೆ ಆದಾಯ ಕಡಿಮೆ ಆಗುವ ಸಂದರ್ಭವಿದೆ. ಆಮದು ಮತ್ತು ರಫ್ತುಗಳ ವ್ಯವಹಾರ ಮಾಡುವವರಿಗೆ ವ್ಯವಹಾರದಲ್ಲಿ ನಿಧಾನಗತಿಯ ಅಭಿವೃದ್ಧಿ ಇರುತ್ತದೆ. ಬಾಯಿಹುಣ್ಣು ಅಥವಾ ಹಲ್ಲಿನ ತೊಂದರೆ ಹೆಚ್ಚು ಬಾಧಿಸಬಹುದು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚು  ಪ್ರಗತಿಯನ್ನು ಕಾಣಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಕುಟುಂಬದ ಉನ್ನತಿಗಾಗಿ ಹೊಸ ಹೊಸ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ. ಜೊತೆಗೆ ಹೊಸದಾದ ಜವಾಬ್ದಾರಿಯೊಂದು ಹೆಗಲೇರುತ್ತದೆ. ನಿರುದ್ಯೋಗಿಗಳಿಗೆ ಪರಿಚಿತರ ಸಹಾಯದಿಂದ ಉದ್ಯೋಗ ದೊರೆಯುತ್ತದೆ. ನಿಮ್ಮ ಏಳಿಗೆ ಕೆಲವು ಬಂಧುಗಳಿಗೆ ಇರುಸುಮುರುಸು ತರುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಶತ್ರುಗಳನ್ನು ಮಣಿಸಲು ನೀವು ಹೂಡುವ ತಂತ್ರ ಫಲ ಕೊಡುತ್ತದೆ. ತಾಯಿಯೊಂದಿಗೆ ಕಾವೇರಿದ ಮಾತುಗಳಾದರೂ ವಾತ್ಸಲ್ಯಕ್ಕೆ ಕೊರತೆ ಇರುವುದಿಲ್ಲ. ನಿಮ್ಮ ಹಣ ಅಥವಾ ಒಡವೆಗಳನ್ನು ಜೋಪಾನವಾಗಿ ನೋಡಿಕೊಳ್ಳಿರಿ, ಕಳವಾಗುವ ಸಂದರ್ಭವಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚು ಗೌರವ ದೊರೆಯುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಕಾರ್ಯಯೋಜನೆಯ ಯಶಸ್ಸಿನಿಂದಾಗಿ ಸಂತಸವಾಗುತ್ತದೆ. ಸಂಬಂಧಿಕರಿಂದ ಸಂತಸದ ಸುದ್ದಿಯನ್ನು ಕೇಳುವಿರಿ. ದಿನದ ಕೆಲಸಕಾರ್ಯಗಳಲ್ಲಿ ಇದ್ದ ಅಡಚಣೆಗಳು ದೂರಾಗುತ್ತವೆ. ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಸಮಾಧಾನದ ನಡೆಯಿಂದ ಎಲ್ಲರ ಗಮನಸೆಳೆಯುವಿರಿ. ಆಸ್ತಿ ಖರೀದಿಯ ಮಾತುಗಳು ಒಂದು ಹಂತ ತಲುಪಿ ಮನಸ್ಸಿಗೆ ನಿರಾಳವೆನಿಸುತ್ತದೆ. ಹಣದ ಒಳಹರಿವು ಹೇಳಿಕೊಳ್ಳುವಷ್ಟು ಇರುವುದಿಲ್ಲ. ಕೃಷಿ ವಿಜ್ಞಾನಿಗಳು ಬೇರೆ ರೀತಿಯ ಸಂಶೋಧನಾ ಕಾರ್ಯಕ್ಕೆ  ಆಯ್ಕೆಯಾಗುವರು. ಪಾಲುದಾರಿಕೆಯ ವ್ಯವಹಾರದಲ್ಲಿ ನಿಮ್ಮ ಪಾಲಿನ ಲಾಭಾಂಶ ಬಂದು ನಿಮಗೆ ಅನುಕೂಲವಾಗುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ನಿಧಾನಗತಿಯನ್ನು ಕಾಣಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಿತೈಷಿಗಳೊಂದಿಗೆ ಜಂಟಿಯಾಗಿ ಮಾಡಿದ ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಹಿರಿಯರಿಂದ ಸಕಾಲದಲ್ಲಿ ಉತ್ತಮ ಸಲಹೆಗಳು ದೊರೆತು ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಈ ಹಿಂದೆ ನಿಂತಿದ್ದ ವಿದ್ಯೆಗಳನ್ನು ಈಗ ಮುಂದುವರೆಸಬಹುದು. ಬಾಯಿ ಮಾತನ್ನು ನಂಬಿ ಹಣ ಕೊಡುವುದು ಬೇಡ, ಇದು ನಿಮಗೆ ಬಹಳ ದುಬಾರಿಯಾಗಬಹುದು. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಅಂತಹ ಯಶಸ್ಸು ಇರುವುದಿಲ್ಲ. ಸರ್ಕಾರಿ ಕೆಲಸಗಳಲ್ಲಿ  ಬಹಳಷ್ಟು ಯಶಸ್ಸನ್ನು ಕಾಣುವಿರಿ. ನಿಮ್ಮ ಸಂಗಾತಿಯ ಬಂಧುಗಳೊಂದಿಗೆ ವೈಮನಸ್ಯ ಮೂಡುವ ಸಾಧ್ಯತೆಯಿದೆ. ಹೊಸದಾಗಿ ಯಾವುದೇ ವ್ಯವಹಾರಗಳನ್ನು ಆರಂಭಿಸುವುದು ಅಷ್ಟು ಒಳಿತಲ್ಲ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಅಧಿಕಾರವನ್ನು ಪಡೆಯುವ ಸಲುವಾಗಿ ಛಲದಿಂದ ಮುನ್ನುಗ್ಗುವಿರಿ. ಸಮಾನಮನಸ್ಕರ ಸಹಾಯದಿಂದ ನಿಮಗೆ ಮುನ್ನಡೆ ಇರುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಹಣದ ಹರಿವು ಇರುತ್ತದೆ. ಯುವಕರಿಗೆ ಉದ್ಯೋಗದಲ್ಲಿನ ಸಮಸ್ಯೆಗಳನ್ನು ಯಥೋಚಿತವಾಗಿ ಬಗೆಹರಿಸಿಕೊಳ್ಳಲು ಅವಕಾಶ ಒದಗುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವುದು ಅತಿಮುಖ್ಯ. ಹೊಸ ಜೀವನದ ಶೈಲಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ನಿರೀಕ್ಷಿತ ಮೂಲದಿಂದ ಧನಾದಾಯ ಇಲ್ಲದಿದ್ದರೂ ಅನಿರೀಕ್ಷಿತ ಮೂಲದಿಂದ ಹಣ ಒದಗುತ್ತದೆ. ನ್ಯಾಯಾಲಯದಲ್ಲಿನ ಮೊಕದ್ದಮೆಗಳು ಮಂದಗತಿಯಲ್ಲಿ ಸಾಗುತ್ತವೆ. ಸಿದ್ಧಪಡಿಸಿದ ಆಹಾರಗಳನ್ನು ತಯಾರಿಸುವವರಿಗೆ ವ್ಯವಹಾರದ ವಿಸ್ತರಣೆ ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಯತ್ನಿಸಿದ ಕಾರ್ಯಗಳಲ್ಲಿ ಬಂಧುಮಿತ್ರರ ಸಹಕಾರದಿಂದ ಸಾಫಲ್ಯ ದೊರೆಯುತ್ತದೆ. ರಾಜಕಾರಣಿಗಳಿಗೆ ಉತ್ತಮ ಕೆಲಸ ಮಾಡಲು ಜನರಿಂದ ಪ್ರೇರೇಪಣೆ ದೊರೆಯುತ್ತದೆ. ಅನಪೇಕ್ಷಿತ ವಿಷಯಗಳ ಬಗ್ಗೆ ಚಿಂತಿಸುವುದನ್ನು ಬಿಡುವುದು ಒಳ್ಳೆಯದು. ನಿಮ್ಮ ಮುಂದಿನ ಯೋಜನೆಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸೂಕ್ತ ರೀತಿಯ ಆಲೋಚನೆ ಮಾಡುವುದು ಒಳಿತು. ಕೆಲವು ರಾಜಕಾರಣಿಗಳಿಗೆ ಕುಟುಂಬದವರಿಂದ ನೋವು ಉಂಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಬಹಳ ಯಶಸ್ಸು ಇರುತ್ತದೆ. ಹಣದ ಹರಿವು ಅಷ್ಟೇನೂ ಇರುವುದಿಲ್ಲ. ಸಂಗಾತಿಗೆ ಪಿತ್ರಾರ್ಜಿತ ಆಸ್ತಿ ಒದಗುವ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.