ಶನಿವಾರ, ಮಾರ್ಚ್ 25, 2023
31 °C

ವಾರ ಭವಿಷ್ಯ 7-11-2021ರಿಂದ 13-11-2021ರವರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ದೈನಂದಿನ ಚಟುವಟಿಕೆಯಲ್ಲಿ ಬಹಳ ಉತ್ಸಾಹ ಮೂಡುತ್ತದೆ. ಸಾಲ ಕೊಟ್ಟವರು ಮರು ಪಾವತಿಗಾಗಿ ತಗಾದೆ ಮಾಡಬಹುದು. ದ್ವೇಷಕ್ಕೆ ಮುಂದಾಗದೆ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಬಿಡುವಿಲ್ಲದ ಕೆಲಸಗಳಿಂದಾಗಿ ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನದ ಅವಕಾಶಗಳು ಒದಗಿಬರುತ್ತವೆ. ಸಂಗಾತಿಯ ಸಲಹೆಗಳು ಬಹಳ ಉತ್ತಮವಾಗಿರುತ್ತವೆ ಹಾಗೂ ಅವರಿಂದ ಸಹಾಯ ದೊರೆಯುತ್ತದೆ. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ. ಬೇರೆಯವರ ಬಗ್ಗೆ ಮಾತನಾಡುವ ಮುಂಚೆ ಅವರ ವ್ಯಕ್ತಿತ್ವದ ಬಗ್ಗೆ ತಿಳಿದು ಮಾತನಾಡಿರಿ ಇಲ್ಲವಾದಲ್ಲಿ ನೀವೇ ಮುಜುಗರ ಪಡಬೇಕಾದೀತು.        

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಕೆಲವರೊಂದಿಗೆ ಅತಿಯಾಗಿ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ ಇದೆ. ನಿಮ್ಮ ನಿಷ್ಠೆ ಪ್ರಾಮಾಣಿಕತೆಯಿಂದ ಒಳ್ಳೆಯ ಹೆಸರನ್ನು ಪಡೆಯುವಿರಿ. ಪಾಲುದಾರಿಕೆಯ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ವ್ಯವಹಾರದಲ್ಲಿ ಸಂಬಂಧ ಹಳಸದಂತೆ ಎಚ್ಚರವಾಗಿರಿ.  ದೈನಂದಿನ ಕೆಲಸಗಳು ಯಶಸ್ವಿಯಾಗಿ ನಡೆಯುತ್ತವೆ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳಿಂದ ಆರ್ಥಿಕ ಸಹಕಾರ ಒದಗಿಬರುತ್ತದೆ. ತಾಯಿ ಮಗನ ಸಂಬಂಧ ಬಹಳಷ್ಟು ಗಟ್ಟಿಯಾಗುತ್ತದೆ. ಹಣಕಾಸಿನ ಸ್ಥಿತಿಯು ಮಧ್ಯಮವಾಗಿರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯನ್ನು ಕಾಣಬಹುದು. ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸುವವರಿಗೆ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದು.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಕೆಲಸಕಾರ್ಯಗಳಲ್ಲಿ ನಿಮ್ಮ ದ್ವಂದ್ವ ನಿರ್ಧಾರಗಳಿಂದ ಹಿನ್ನಡೆಯಾಗಬಹುದು. ಒಟ್ಟಿನ ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಯಂತ್ರೋಪಕರಣಗಳ ದುರಸ್ತಿಗಾಗಿ ಹಣ ಖರ್ಚಾಗುವುದು. ಕೆಲವು ವಿದ್ವಾಂಸರಿಗೆ ಗೌರವಾದರ ದೊರೆಯುವ ಸಾಧ್ಯತೆ ಇದೆ. ಸಾಹಸ ಕ್ರೀಡಾ ಚಟುವಟಿಕೆಯಲ್ಲಿರುವ ಮಹಿಳೆಯರಿಗೆ ಸಾಧನೆಯ ಹಾದಿ ತೆರೆಯುತ್ತದೆ. ರೈತರು ನವೀನ ರೀತಿಯ ಕೃಷಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರುವರು. ಷೇರು ಮಾರುಕಟ್ಟೆ ವ್ಯವಹಾರಗಳಲ್ಲಿ ಆಸಕ್ತಿಯನ್ನು ತೋರುವಿರಿ. ವಿದೇಶಿ ವ್ಯವಹಾರಗಳಲ್ಲಿ ಹಿನ್ನಡೆಯಾಗುತ್ತದೆ. ಆರ್ಥಿಕ ಸ್ಥಿತಿಯು ಅವಶ್ಯಕತೆಯನ್ನು ಪೂರೈಸುವಷ್ಟು ಇರುತ್ತದೆ. ಸ್ವಂತ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುವಿರಿ. ಕೃಷಿಕ್ಷೇತ್ರದಲ್ಲಿ ಇರುವವರೆಗೆ ಬಿಡುವಿಲ್ಲದ ಕೆಲಸಗಳು ಇರುತ್ತವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಇದ್ದ ತೊಡಕುಗಳು ನಿವಾರಣೆಯಾಗುತ್ತದೆ. ಮಹಿಳೆಯರಿಗೆ ಅವರ ಕೆಲಸ ಕಾರ್ಯಗಳಲ್ಲಿ ಸ್ನೇಹಿತೆಯರಿಂದ ಉತ್ತಮ ಸಹಕಾರ ದೊರೆಯುತ್ತದೆ. ಹಿರಿಯರ ಆರೋಗ್ಯ ಸ್ಥಿರತೆಗಾಗಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಿರಿ. ಆರ್ಥಿಕ ಸ್ಥಿತಿಯು ಉತ್ತಮ ರೀತಿಯಲ್ಲಿ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನಿಮಿತ್ತ ಅಲೆದಾಟವಿರುತ್ತದೆ. ಅಕ್ಕಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಿರುತ್ತದೆ. ಪುಸ್ತಕ ಗ್ರಂಥಗಳ ಖರೀದಿಗಾಗಿ ಹಣ ವ್ಯಯ ಮಾಡುವಿರಿ.

ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಕಳೆದು ಹೋದ ದಿನಗಳ ಬಗ್ಗೆ ಚಿಂತಿಸುವುದರಿಂದ ಪ್ರಯೋಜನವಿಲ್ಲ. ಇರುವುದನ್ನು ಸರಿಯಾಗಿ ಅರಿತು ನಡೆಯಿರಿ. ಯಾವುದೋ ಸತ್ಯವನ್ನು ಹೊರತೆಗೆಯಲು ಹೋಗಿ ನೀವೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುವಂತಹ ಸಾಧ್ಯತೆಗಳಿವೆ. ಹೀಗಾಗಿ ಎಚ್ಚರವಹಿಸಿರಿ. ವಾಹನ ಖರೀದಿಯ ಯೋಗವಿದೆ. ಯಂತ್ರೋಪಕರಣಗಳ ವ್ಯವಹಾರವನ್ನು ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಆರ್ಥಿಕ ಅಭಿವೃದ್ಧಿಯಲ್ಲಿ ಸ್ವಲ್ಪ ಅಡೆತಡೆ ಇದ್ದರೂ ಸಹ ನಿಧಾನವಾಗಿ ಮುಂದುವರೆಯುತ್ತದೆ. ವಿದ್ಯಾರ್ಥಿಗಳಿಗೆ ಅವರ ಪ್ರಯತ್ನದಲ್ಲಿ ಯಶಸ್ಸು ಇರುತ್ತದೆ. ಒಡಹುಟ್ಟಿದವರ ಸಲಹೆಗಳು ಬಹಳ ಉಪಯೋಗಕ್ಕೆ ಬರುತ್ತವೆ. ವೃತ್ತಿಯಲ್ಲಿರುವ ಸ್ತ್ರೀಯರು ಪದೋನ್ನತಿಯನ್ನು ನಿರೀಕ್ಷೆ ಮಾಡಬಹುದು. ಮೂಳೆ ತೊಂದರೆ ಬಾಧಿಸಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಕೆಲವು ಮುಖ್ಯ ಕಾರ್ಯಕ್ರಮಗಳನ್ನು ಸ್ವಲ್ಪಕಾಲ ಮುಂದೂಡುವುದು ಉತ್ತಮ. ಬಹಳ ದೂರದ ಪ್ರಯಾಣ ಸದ್ಯಕ್ಕೆ ಬೇಡ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುವುದು. ಭೂಮಿಯ ವ್ಯವಹಾರಗಳಿಂದ ಹೆಚ್ಚು ಲಾಭ ಬರುತ್ತದೆ. ವೈಯಕ್ತಿಕ ಜೀವನದಲ್ಲಿ ನಿಧಾನಗತಿಯ ಅಭಿವೃದ್ಧಿ ಇರುತ್ತದೆ. ಬರಹಗಾರರು ತಮ್ಮ ಬರವಣಿಗೆಯ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಲೋಹಗಳ ವ್ಯಾಪಾರವನ್ನು ಮಾಡುವವರೆಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಅಪೇಕ್ಷಿತ ಸಾಲಗಳು ಸಂಸ್ಥೆಗಳಿಂದ ದೊರೆಯುತ್ತವೆ. ಕೃಷಿಕರ ಆದಾಯ ಹೆಚ್ಚುವ ಸಂದರ್ಭವಿದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಆತ್ಮಸ್ಥೈರ್ಯ ಹೆಚ್ಚಿಗೆ ಇರುತ್ತದೆ. ಸಂಬಂಧವಿಲ್ಲದ ವಿಷಯಗಳನ್ನು ಕೆದಕಲು ಹೋಗಿ ಅವಮಾನಕ್ಕೀಡಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ಕಾಣಬಹುದು. ವ್ಯವಹಾರದಲ್ಲಿ ಮಾತಿನ ಮೇಲೆ ಹಿಡಿತ ಸರಿಯಾಗಿರಲಿ. ಇಲ್ಲವಾದಲ್ಲಿ ವ್ಯವಹಾರಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಸಗಟು ಧಾನ್ಯ ವ್ಯಾಪಾರಿಗಳಿಗೆ ಲಾಭ ಹೆಚ್ಚುವ ಸಾಧ್ಯತೆಗಳಿವೆ. ಸ್ವಂತ ವಾಹನ ಖರೀದಿಯ ಬಗ್ಗೆ ಕಾರ್ಯೋನ್ಮುಖರಾಗುವಿರಿ. ಈ ಬಗ್ಗೆ  ಸಾಕಷ್ಟು ಮಾಹಿತಿಗಳನ್ನು ಸಂಗ್ರಹ ಮಾಡುವಿರಿ. ವ್ಯವಹಾರದಲ್ಲಿ ವಿದೇಶಿ ಪಾಲುದಾರರು ದೊರೆತು ವ್ಯಾಪಾರ ವಿಸ್ತಾರವಾಗುವುದು. ಧನದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ಆಸ್ತಿ ಒದಗಿ ಬರುವ ಸಾಧ್ಯತೆಗಳಿವೆ. 

ವೃಶ್ಚಿಕ ರಾಶಿ( ವಿಶಾಖಾ 4  ಅನುರಾಧ  ಜೇಷ್ಠ)  

ನಿಮ್ಮ ವಿರುದ್ಧ ಸಹೋದ್ಯೋಗಿಗಳು ಮಾಡಿದ್ದ ಪಿತೂರಿಯ ಮೂಲ ಸಿಗುತ್ತದೆ ಹಾಗೂ ಅದರ ಕಾರಣಕರ್ತರು ಯಾರೆಂದು ಸಹ ತಿಳಿದುಬರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯಾದರೂ ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.  ಕುಟುಂಬದ ಸದಸ್ಯರಿಂದ ನಿಮ್ಮ ಹೊಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಾಣಬಹುದು. ನೆರೆಹೊರೆಯವರೊಂದಿಗೆ ಬಾಂಧವ್ಯಗಳು ವೃದ್ಧಿಸುತ್ತವೆ. ವೃತ್ತಿಯಲ್ಲಿ ಅಧಿಕಾರಿಗಳಿಂದ ಸಾಕಷ್ಟು ಬೆಂಬಲ ದೊರೆಯುತ್ತದೆ. ವಯೋವೃದ್ಧರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು. ಬಂಧುಗಳು ನಿಮ್ಮ ವಿರುದ್ಧ ಒಳಸಂಚು ಮಾಡಬಹುದು. ಸ್ತ್ರೀಯರಿಗೆ ಹೆಚ್ಚಿನ ರೀತಿಯಲ್ಲಿ ಗೌರವಾದರಗಳು ದೊರೆಯುವ ಸಾಧ್ಯತೆಗಳಿವೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ಬಹಳ ವಯಸ್ಸಾದವರು ಕುಟುಂಬದಲ್ಲಿ ಗುಂಪುಗಾರಿಕೆ ಮಾಡಲು ಹೋಗಿ ಅಪಖ್ಯಾತಿಗೆ ಗುರಿಯಾಗುವ ಸಾಧ್ಯತೆಗಳಿವೆ. ಎಲ್ಲರ ಮೇಲು ಅನುಮಾನ ಪಡುವುದು ಅಷ್ಟು ಒಳಿತಲ್ಲ. ಮಾತೃವರ್ಗದವರಿಂದ ಸಹಾಯ ಸಹಕಾರಗಳು ದೊರೆಯುತ್ತವೆ. ಹಣದ ಒಳಹರಿವಿನಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಉನ್ನತ ಅಧ್ಯಯನವನ್ನು ಮಾಡುವವರು ಈಗ ಮಾಡಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಸಾಲ ಕೊಡುವುದನ್ನು ನಿಲ್ಲಿಸುವುದು ಒಳ್ಳೆಯದು. ತುರ್ತು  ಕೆಲಸಗಳಿಗಾಗಿ ಒಂದೆರಡು ಬಾರಿ ಬಂಧುಗಳ ಸಹಾಯವನ್ನು ಪಡೆಯುವಿರಿ.ದೂರದಲ್ಲಿರುವ ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗುವುದು. ಅನಾರೋಗ್ಯವಿದ್ದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ    ಧನಿಷ್ಠ 1.2)  

ಪ್ರೀತಿ ಪ್ರೇಮಗಳ ಹುಚ್ಚು ಹೊಳೆಗೆ ಕಡಿವಾಣ ಹಾಕುವುದು ಒಳ್ಳೆಯದು. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ. ಸ್ನೇಹಸಂಬಂಧದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ. ವ್ಯವಹಾರಗಳಲ್ಲಿ ಪಾಲುದಾರರಿಂದ  ಪ್ರೋತ್ಸಾಹ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಕಾಳಜಿ ಅಗತ್ಯ. ಜನಗಳ ನಡುವೆ ನಿಮ್ಮ ಒಳ್ಳೆಯತನ ದುರುಪಯೋಗ ಆಗದಂತೆ ಎಚ್ಚರ ವಹಿಸಿರಿ. ಕಲಾವಿದರುಗಳಿಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರೆತು ಸಂತಸವಾಗುತ್ತದೆ. ನಿಮ್ಮ ಅವಶ್ಯಕತೆಗಿಂತ ಹೆಚ್ಚಿನ ಹಣ ಒದಗಿ ಬರುತ್ತದೆ. ನೂತನ ಉದ್ಯಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭರದಿಂದ ಚರ್ಚೆಗಳು ಆಗುತ್ತವೆ. ವೃತ್ತಿಯಲ್ಲಿ ಹೆಚ್ಚಿನ ಸಂತೋಷವನ್ನು ಕಾಣಬಹುದು. ಹೈನುಗಾರಿಕೆ ಲಾಭವನ್ನು ತರುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 )

ಯುವಕರು ಬೇರೆಯವರ ಥಳುಕಿನ ಮಾತಿಗೆ ಮರುಳಾಗಿ ಮೋಸ ಹೋಗುವ ಸಾಧ್ಯತೆಗಳಿವೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ. ಕಟ್ಟಡ ನಿರ್ಮಾಣ ವಿಷಯದಲ್ಲಿ ನೆರೆಹೊರೆಯವರೊಂದಿಗೆ ಕಲಹ ಏರ್ಪಡುವ ಸಾಧ್ಯತೆಗಳಿವೆ. ವಜ್ರ ವೈಡೂರ್ಯ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಏಳಿಗೆ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ. ನಿವೇಶನ ಕೊಳ್ಳುವ ಮತ್ತು ಮಾರುವ ವ್ಯವಹಾರಗಳನ್ನು ಮಾಡುವವರೆಗೆ ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿ ಓದುತ್ತಿರುವವರಿಗೆ ಸೂಕ್ತ ಸವಲತ್ತುಗಳು ದೊರೆಯುತ್ತವೆ. ಶೃಂಗಾರ ಸಾಮಗ್ರಿಗಳನ್ನು ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಕೃಷಿ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಿರಿ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ನಿರೀಕ್ಷಿತ ಮೂಲಗಳಿಂದ ಧನಾಗಮನದ ಸಾಧ್ಯತೆಗಳಿವೆ. ಕೆಲವೊಂದು ವಿವಾದಾತ್ಮಕ ಹೇಳಿಕೆಗಳಿಂದ ಬಂದ ಸಮಸ್ಯೆಗಳು ಮಧ್ಯವರ್ತಿಗಳಿಂದ ನಿವಾರಣೆಯಾಗುತ್ತವೆ. ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ವರದಿಗಾರರಿಗೆ ದೊಡ್ಡ ಸತ್ಪುರುಷರ ಸಂದರ್ಶನ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಹಿಳಾ ಕಲಾವಿದರುಗಳಿಗೆ ಉತ್ತಮ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ತಾಯಿಯ ಸಹಕಾರ ನಿಮ್ಮ ಕೆಲಸ ಕಾರ್ಯಗಳಿಗೆ ಸಂಪೂರ್ಣವಾಗಿ ಸಿಗುತ್ತದೆ.  ವೃತ್ತಿಯಲ್ಲಿ ಮಹಿಳಾ ಮೇಲಧಿಕಾರಿಗಳಿಂದ ಸಹಕಾರ ದೊರೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.