ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ಶರೀರದ ಬಲೆಯಲ್ಲಿ ಅರಿವು

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ನಮ್ಮ ಅಂಗವು ಲಿಂಗವನ್ನು, ಎಂದರೆ ಭಗವಂತನನ್ನು ಸದಾ ಸ್ಮರಿಸುತ್ತಿರಬೇಕು. ಒಂದೊಮ್ಮೆ ಮರೆತರೆ ಜ್ಞಾನಸಂಚಯಕ್ಕೆ ಎರವಾಗುತ್ತದೆ.

ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು?
ಅಂಗ ಲಿಂಗವ ಮರೆದಲ್ಲಿ.
ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ?
ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು,
ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು,
ತನಗಾಶ್ರಯವಿಲ್ಲದಂತಾಯಿತ್ತು,
ಹಾಗಾಗಬೇಕು, ಅರ್ಕೇಶ್ವರಲಿಂಗವನರಿವುದಕ್ಕೆ

‘ಅರ್ಕೇಶ್ವರ ಲಿಂಗ’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದ ಮಧುವಯ್ಯನ 102 ವಚನಗಳು ಲಭಿಸಿವೆ. ಹುಟ್ಟಿನಿಂದ ಬ್ರಾಹ್ಮಣನಾದ ಇವನು ಬಸವಣ್ಣ ಹಾಗೂ ಹರಳಯ್ಯನಿಂದ ಪ್ರಭಾವಿತನಾಗಿ ಶರಣಧರ್ಮವನ್ನು ಸ್ವೀಕರಿಸಿದನು. ತನ್ನ ಮಗಳನ್ನು ಅಂತ್ಯಜನಾದ ಹರಳಯ್ಯನ ಮಗನಿಗೆ ಮದುವೆ ಮಾಡಿಕೊಡುವ ಮೂಲಕ ಸಮಾಜದಲ್ಲಿ ಬೇರು ಬಿಟ್ಟಿದ್ದ ವರ್ಣಸೂತಕವನ್ನು ಕೀಳಲು ಪ್ರಯತ್ನಿಸಿದ.

ಯುದ್ಧ ಮಾಡುವಾಗ ಬಿಲ್ಲು ಮುರಿದು ಬಿದ್ದರೆ ಆಮೇಲೆ ಬಾಣಗಳೆಷ್ಟೇ ಇದ್ದರೂ ವ್ಯರ್ಥವೇ ಸರಿ. ಬಾಣಗಳು ತಮ್ಮ ಗುರಿಯಾದ ವೈರಿಯ ಪ್ರಾಣಹರಣಕ್ಕೆ ಬಳಸಲ್ಪಡಬೇಕು ಎಂದಾದರೆ ಅದಕ್ಕೆ ಮುಖ್ಯವಾದ ಮಾಧ್ಯಮ ಬಿಲ್ಲೇ ಆಗಿರುತ್ತದೆ. ಆ ಬಿಲ್ಲಿನ ಮೂಲಕವೇ ಬಾಣ ತನ್ನ ಕ್ರಿಯೆಯನ್ನು ಮಾಡಬಹುದು. ಬಿಲ್ಲು ಮುರಿದಿದೆ – ಎಂದಾದದಲ್ಲಿ ಬಾಣವು ಇದ್ದರೂ ಇಲ್ಲದ ರೀತಿಯಲ್ಲಿ ನಿಷ್ಫಲಸ್ಥಿತಿಯನ್ನು ತಲಪುತ್ತದೆ.

ಅದೇ ರೀತಿಯಾಗಿ ಮನುಷ್ಯನ ಅಸ್ತಿತ್ವ ಇರುವುದು ಶರೀರದಲ್ಲಿ. ಆದರೆ ಈ ಶರೀರ ಎನ್ನುವುದು ಕೇವಲ ಮಾಧ್ಯಮ ಮಾತ್ರ. ನಮ್ಮಪಳಗಿನ ಆತ್ಮ ಅರಿವನ್ನು ಅಥವಾ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಈ ಶರೀರವನ್ನು ಒಂದು ಮಾಧ್ಯಮವಾಗಿ ಬಳಸುತ್ತದೆ. ನಮ್ಮ ಅಂಗವು ಲಿಂಗವನ್ನು, ಎಂದರೆ ಭಗವಂತನನ್ನು ಸದಾ ಸ್ಮರಿಸುತ್ತಿರಬೇಕು. ಒಂದೊಮ್ಮೆ ಮರೆತರೆ ಜ್ಞಾನಸಂಚಯಕ್ಕೆ ಎರವಾಗುತ್ತದೆ. ಜ್ಞಾನ ಅಥವಾ ತಿಳಿವು ಎನ್ನುವುದು ನಿರಾಕಾರ-ನಿರ್ಗುಣ ವಿದ್ಯುತ್ ರೀತಿಯಲ್ಲಿ ಸಂಚಯಿತ ಶಕ್ತಿಯಂತಿರುತ್ತದೆಯಾದರೂ ಅರಿವಿಗೆ ಕುರುಹು ಅಥವಾ ಮೂರ್ತ ಸ್ವರೂಪವನ್ನು ನೀಡಿರುತ್ತೇವೆ.

ಬೆಂಕಿ ಎನ್ನುವುದೂ ಕೂಡ ಒಂದು ಶಕ್ತಿ. ಮರದೊಳಗೆ ಅಡಗಿರುವ ಈ ಶಕ್ತಿಯು ಮರವನ್ನೇ ಸುಟ್ಟು ಹಾಕುವಂತಹ ಸಾಮರ್ಥ್ಯವನ್ನು ಪಡೆದಿರುತ್ತದೆ. ಹಾಗೆ ಅದು ತನ್ನ ಮೂಲಸ್ಥಾನವನ್ನೇ ಸುಟ್ಟು ಹಾಕಿದಾಗ ಅದಕ್ಕೆ ಆಶ್ರಯ ಇಲ್ಲದಂತಹ ಒಂದು ಅತಂತ್ರ ಸ್ಥಿತಿ ಬಂದೊದಗುತ್ತದೆ. ಲೌಕಿಕದ ನೆಲೆಯಲ್ಲಿ ನಿಂತು ವಿಚಾರ ಮಾಡಿದಾಗ ಇಂತಹ ಸ್ಥಿತಿಯನ್ನು ನಾವು ಕಂಗಾಲುಗೊಳಿಸುವ ದಾರುಣ ಸ್ಥಿತಿಯಾಗಿ ಪರಿಭಾವಿಸುತ್ತೇವೆ.

ಆದರೆ ಮಧುವಯ್ಯ ಹೇಳುತ್ತಾನೆ: ಇದು ಅಪೇಕ್ಷಣೀಯ. ಹೀಗಾಗಬೇಕು. ಯಾಕೆಂದರೆ ಇಂತಹ ಆಶ್ರಯಹೀನ ಸ್ಥಿತಿಯಲ್ಲಿ ನಾವು ದೇಹದ ವ್ಯಾಮೋಹವನ್ನು ಬಿಡುತ್ತೇವೆ. ದೇಹವೆಂದರೆ ಪ್ರಾಣಕ್ಕೆ ಆಶ್ರಯದಾತ ಅಷ್ಟೇ. ಪ್ರಾಣವು ಪರಮಾತ್ಮನನ್ನು ತನ್ನ ಒಡೆಯನೆಂದು ಅರಿತುಕೊಂಡು ಅವನನ್ನು ಸೇರುವ ಗುರಿಗಾಗಿ ಯತ್ನಿಸಬೇಕು. ಆದರೆ ಅದು ದೇಹವನ್ನೇ ಒಡೆಯನೆಂದು ತಪ್ಪಾಗಿ ಭ್ರಮಿಸಿಕೊಂಡು ಅದರ ಸುಖಕ್ಕಾಗಿ ಉದ್ಯುಕ್ತವಾಗುವ ಮೂಲಕ ವ್ಯತಿರಿಕ್ತವಾಗಿ ವರ್ತಿಸುತ್ತಿರುತ್ತದೆ. ಭಗವಂತನನ್ನು ಅರಿಯಬೇಕೆಂದರೆ ಈ ದೇಹದ ಹಂಗನ್ನು ಲೌಕಿಕ ಸುಖ-ಭೋಗದ ವ್ಯಸನವನ್ನು ನಾವು ಮೀರಲೇಬೇಕು. ಇದು ಪರಮಪದ ಸೋಪಾನಕ್ಕೆಳೆಸುವ ದಾರಿ. ಈ ಸತ್ಯವನ್ನು ಮಧುವಯ್ಯ ಬಹಳ ಮಾರ್ಮಿಕವಾಗಿ, ಅಷ್ಟೇ ಕಟುವಾಗಿ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT