ಮಂಗಳವಾರ, ಜೂನ್ 28, 2022
21 °C

ವಾರ ಭವಿಷ್ಯ: 2022ರ ಮೇ 22 ರಿಂದ 28ರ ವರೆಗೆ

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಸಾರ್ವಜನಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುವ ಇರಾದೆ ಇರುತ್ತದೆ. ದೀರ್ಘಕಾಲದಿಂದ ಮಾಡಬೇಕೆಂದು ಇಚ್ಛಿಸಿದ್ದ ಕೆಲಸ ಮಾಡಲು ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹಣಕಾಸಿನ ವಿಷಯದಲ್ಲಿ ಸಂಗಾತಿಯೊಡನೆ ಸಾಕಷ್ಟು ಕಾವೇರಿದ ಮಾತುಗಳು ಆಗಬಹುದು. ಹಳೆ ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯವೂ ಹೆಚ್ಚುತ್ತದೆ. ಸಾಂಪ್ರದಾಯಿಕ ಕೃಷಿಕರಿಗೆ ಉತ್ತಮ ಇಳುವರಿ ಬಂದು, ಸರ್ಕಾರದಿಂದ ಸೂಕ್ತ ಸಹಾಯಧನ ದೊರೆಯುತ್ತವೆ. ಕಣ್ಣಿನ ತೊಂದರೆ ಅಥವಾ ನಿದ್ರಾಹೀನತೆ ನಿಮ್ಮನ್ನು ಕಾಡಬಹುದು. ಸರ್ಕಾರಿ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುವ ಅವಕಾಶಗಳಿವೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಖಂಡಿತಾ ಇರುತ್ತದೆ. ಗೃಹ ನಿರ್ಮಾಣದ ಕೆಲಸಗಳು ಶೀಘ್ರಗತಿಯಲ್ಲಿ ಸಾಗುತ್ತದೆ. ವೃತ್ತಿ ನೈಪುಣ್ಯತೆ ಇರುವ ಕೆಲಸಗಾರರಿಗೆ ವಿಶೇಷ ಸ್ಥಾನಮಾನ ದೊರೆಯುತ್ತದೆ. ಬಂಧುಗಳ ನಡುವಿನ ಕೆಲವೊಂದು ವಿವಾದ ನಿವಾರಣೆಯಾಗಿ ಮಾನಸಿಕ ನೆಮ್ಮದಿ ಬರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸಾಮಾಜಿಕ ಗೌರವ ದೊರೆಯುತ್ತದೆ. ಹೈನುಗಾರಿಕೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ  ಕಾಣಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ಕೆಲವೊಂದು ಶತ್ರುಗಳು ತಮ್ಮ ತಪ್ಪಿನ ಅರಿವಾಗಿ ಮಿತ್ರರಾಗಿ ಬದಲಾಗುವರು. ಬಂಧುಗಳು ಮತ್ತು ಆಪ್ತರಿಂದ ಸ್ವಲ್ಪ ಕಿರಿಕಿರಿಯನ್ನು ಎದುರಿಸಬೇಕಾದೀತು. ನಿಮ್ಮ ಕೆಲವು ಯೋಜನೆಗಳಿಂದ ಇತರರಿಗೆ ಹೆಚ್ಚಿನ ಅನುಕೂಲತೆ ಒದಗಿಬಂದು ನೀವು ಎಲ್ಲರ ಗೌರವಕ್ಕೆ ಪಾತ್ರರಾಗುವಿರಿ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಪ್ರಮುಖರಿಗೆ ಆಪ್ತ ಸಲಹೆಯನ್ನು ನೀಡುವ ಅವಕಾಶ ದೊರೆಯುತ್ತದೆ. ಹಣದ ಒಳಹರಿವಿನಲ್ಲಿ ಮಂದಗತಿಯನ್ನು ಕಾಣಬಹುದು. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳಿಂದ ಶುಭವಾರ್ತೆಯನ್ನು ಕೇಳುವಿರಿ. ತಂದೆಯಿಂದ ಕೃಷಿ ಜಮೀನು ದೊರೆಯುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರವನ್ನು ಮಾಡುತ್ತಿರುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ದೂರ ಪ್ರಯಾಣ ಹೋಗಲು ಸಾಕಷ್ಟು ತಯಾರಿ ನಡೆಸುವಿರಿ. ಬಹಳ ದಿನಗಳಿಂದ ಕಾಡುತ್ತಿದ್ದ ಕೆಲವು ತೊಂದರೆ ತಾಪತ್ರಯಗಳು ನಿವಾರಣೆಯಾಗುವ ಲಕ್ಷಣಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಹಠಬಿಡದೆ ನಿಮ್ಮ ಯೋಜನೆಗಳನ್ನು ಮುಂದುವರೆಸಿದಲ್ಲಿ ಅದಕ್ಕೆ ತಕ್ಕ ಪ್ರತಿಫಲ ಇದ್ದೆ ಇರುತ್ತದೆ. ಕೃಷಿಕರ ಫಸಲಿಗೆ ಉತ್ತಮ ಬೆಲೆ ಸಿಗುವ ಎಲ್ಲ ಲಕ್ಷಣಗಳಿವೆ. ಬರಹಗಾರರು ಉತ್ತಮ ಬರಹವೊಂದನ್ನು ಹೊರತರುವ ಸಾಧ್ಯತೆ ಇದೆ. ಅಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿ ಮಾಡುವಿರಿ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಹೆಚ್ಚುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಕೆ ಮಾಡುವವರು ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ವ್ಯವಹಾರದಲ್ಲಿ ಅನಾಸಕ್ತಿ ತೋರಿದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಒರಟುತನದಿಂದಾಗಿ ಕೆಲವರು ನಿಮ್ಮನ್ನು ತಿರಸ್ಕರಿಸಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಆದಾಯ ಇರುತ್ತದೆ. ಗುತ್ತಿಗೆ ಕೆಲಸ ಮಾಡುತ್ತಿರುವವರಿಗೆ ಹೊಸ ಗುತ್ತಿಗೆಗಳು ದೊರೆಯುವ ಸಾಧ್ಯತೆ ಇದೆ. ಚಿನ್ನಾಭರಣ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗಿ ಆದಾಯ ಹೆಚ್ಚುತ್ತದೆ. ಬಂಧುಗಳ  ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ಗಮನ ಹರಿಸುವಿರಿ. ಕಟ್ಟಡ ನಿರ್ಮಾಣಕಾರರಿಗೆ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಬಹುದು. ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಬಹಳ ದಿನಗಳ ನಂತರ ಬಾಂಧವರೊಡನೆ ಸಂಬಂಧವನ್ನು ವೃದ್ಧಿಸಿಕೊಳ್ಳಲು ಪ್ರಯತ್ನ ಪಡುವಿರಿ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಒಳಾಂಗಣ ವಿನ್ಯಾಸವನ್ನು ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಉದ್ಯಮ ಕ್ಷೇತ್ರವನ್ನು ವಿಸ್ತರಿಸಬೇಕೆಂದು ಇರುವವರಿಗೆ ಬೇಕಾದ ಅನುಕೂಲತೆಗಳು ದೊರೆಯುತ್ತವೆ. ವಿದೇಶದಲ್ಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕೆಂದು ಇರುವವರಿಗೆ ಈಗ ಅನುಮತಿ ದೊರೆಯುತ್ತದೆ. ಕೃಷಿಕರು ಅತಿ ಹೆಚ್ಚು ಒತ್ತಡಗಳಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅನಗತ್ಯ ಚರ್ಚೆ ಮಾತುಕತೆಗಳಲ್ಲಿ ಭಾಗವಹಿಸದಿರುವುದು ಬಹಳ ಉತ್ತಮ. ಧನಾದಾಯವು ಸಾಮಾನ್ಯವಾಗಿರುತ್ತದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರಿಕೆ ವಹಿಸಿರಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಉದ್ದೇಶ ಸಾಧನೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ಎಲ್ಲರ ನಿಷ್ಟೂರಕ್ಕೆ ಒಳಗಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಾಹನ ಮಾರಾಟಗಾರರಿಗೆ ವ್ಯಾಪಾರ ಹೆಚ್ಚುತ್ತದೆ. ಷೇರು ವ್ಯವಹಾರಗಳಲ್ಲಿ ಹೆಚ್ಚಿನ ನಷ್ಟ ಸಂಭವಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಆದಾಯ ಪಡೆಯುವ ಸಲುವಾಗಿಯೇ ವಿವಿಧ ಆದಾಯದ ಮೂಲಗಳನ್ನು ಶೋಧಿಸಲು ಪ್ರಯತ್ನ ಪಡುವಿರಿ. ವಾಹನಗಳನ್ನು ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸವಿದ್ದು ಆದಾಯ ಸಹ ಇರುತ್ತದೆ. ಸಂಗಾತಿಯಿಂದ ಮಾನಸಿಕ ಕಿರಿಕಿರಿ ಉಂಟಾಗಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ವಿದೇಶಿ ಆಮದು-ರಫ್ತು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಹಿರಿಯರೊಡನೆ ವಾದ-ವಿವಾದಗಳು ಏರ್ಪಡುವ ಸಂಭವವಿದೆ, ಎಚ್ಚರವಹಿಸಿರಿ. ವಸ್ತ್ರ ವಿನ್ಯಾಸ ಮಾಡುವವರಿಗೆ ಹೆಚ್ಚಿನ ಮಾನ್ಯತೆ ದೊರೆತು ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಮನೆಯವರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವನ್ನು ಕಾಣಬಹುದು. ಕೆಲವು ಮಹಿಳೆಯರ ಅಭಿಲಾಷೆಗಳು ಈಡೇರುವ ಸಾಧ್ಯತೆ ಇದೆ. ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರಿಗೆ ಸರ್ಕಾರದಿಂದ ಸಹಾಯಧನ ಸಿಗುವ ಸಾಧ್ಯತೆ ಇದೆ. ಆಭರಣ ತಯಾರಿಕೆ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಕರಕುಶಲ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ಕೃಷಿಕರಿಗೆ ಬೇಕಾದ ಕೃಷಿ ಸಲಕರಣೆಗಳು ದೊರೆಯುತ್ತವೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಹೊಸ ವಾಹನ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಮನೆಯವರ ಒತ್ತಾಯಕ್ಕೆ ಮಣಿದು ದೇವಾಲಯ ದರ್ಶನಕ್ಕಾಗಿ ಹೊರಡುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಮಾಡಿದ ಶ್ರಮ ಉತ್ತಮ ಫಲವನ್ನು ಕೊಡುತ್ತದೆ. ರೇಶ್ಮೆ ನೂಲು ತೆಗೆಯುವವರಿಗೆ ಉತ್ತಮ ಮಾರುಕಟ್ಟೆ ಒದಗಿಬರುತ್ತದೆ. ಕೆಲವೊಂದು ಔಷಧಿ ತಯಾರಕರಿಗೆ ಬೇಡಿಕೆ ಹೆಚ್ಚಾಗಿ ಆದಾಯ ಹೆಚ್ಚುತ್ತದೆ. ಸ್ವಂತ ಉದ್ಯಮವನ್ನು ನಡೆಸುತ್ತಿರುವವರಿಗೆ ಉದ್ಯಮ ವಿಸ್ತರಣೆ ಮಾಡುವ ಯೋಗವಿದೆ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ವಿದೇಶದಲ್ಲಿ ಓದಬೇಕೆಂದು ಇಚ್ಛಿಸುವವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ. ರಕ್ತ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ಎಚ್ಚರವಹಿಸುವುದು ಒಳ್ಳೆಯದು. ಆರ್ಥಿಕ ಸ್ಥಿತಿಯು ಸಾಕಷ್ಟು ಚೇತರಿಕೆಯನ್ನು ಕಾಣುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಕಷ್ಟು ತುರ್ತಿನ ಕೆಲಸಗಳು ಎದುರಾಗುವ ಸಾಧ್ಯತೆ ಇದೆ. ಜಾಹಿರಾತುಗಳ ಮೂಲಕ ಸರಕುಗಳ ವಹಿವಾಟನ್ನು ಹೆಚ್ಚಿಸಿಕೊಳ್ಳುವಿರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದ ಹೆಚ್ಚು ಹಣಗಳಿಸುವಿರಿ. ಕಾರ್ಯ ಸ್ಥಳದಲ್ಲಿ ಎಲ್ಲರೊಡನೆ ಹೊಂದಾಣಿಕೆ ಸಾಧಿಸಿಯೇ ಕಾರ್ಯ ಸಾಧನೆ ಮಾಡುವಿರಿ. ಮಾಧ್ಯಮ ಮತ್ತು ಪ್ರಚಾರ ವ್ಯವಹಾರಗಳಲ್ಲಿ ಇರುವವರಿಗೆ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ರಾಜಕೀಯ ವ್ಯಕ್ತಿಗಳು ಅವರ ವಿಷಯದಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದು. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ವಿದೇಶದಲ್ಲಿರುವವರಿಗೆ ಸ್ಥಿರಾಸ್ತಿ ಮಾಡುವ ಅವಕಾಶ ದೊರೆಯುತ್ತದೆ. ಪ್ರೀತಿ-ಪ್ರೇಮದ ಗುಂಗಿನಲ್ಲಿ ಇರುವವರಿಗೆ ಹಿರಿಯರ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಯುವಕರು ಮೋಜು-ಮಸ್ತಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಲಕ್ಷಣಗಳಿವೆ. ಇದರಿಂದಾಗಿ ಮನೆಯಲ್ಲಿ ಮನಸ್ತಾಪ ಮೂಡಬಹುದು. ಕೆಲವು ರಾಜಕಾರಣಿಗಳಿಗೆ ಉನ್ನತ ಹುದ್ದೆ ಒದಗಿಬರುತ್ತದೆ. ಆಮದು ಮತ್ತು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ. ಸ್ನೇಹಿತರು ಮತ್ತು ಬಂಧುಗಳ ನಡುವೆ ಸಂಬಂಧ ಗಟ್ಟಿಗೊಳ್ಳುತ್ತದೆ. ಇದಕ್ಕೆ ಮನೆಯ ಎಲ್ಲರ ಸಹಕಾರ ದೊರೆಯುತ್ತದೆ. ಆರ್ಥಿಕ ಸ್ಥಿತಿಯು ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ. ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಫಲ ಇರುತ್ತದೆ.  ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅತ್ಯಂತ ಉತ್ಸಾಹದಿಂದ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ನೃತ್ಯಪಟುಗಳಿಗೆ ಉತ್ತಮ ವೇದಿಕೆ ದೊರೆತು ಪ್ರದರ್ಶನ ಮಾಡುವ ಅವಕಾಶವಿರುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಪ್ರಭಾವಿ ವ್ಯಕ್ತಿಗಳ ಸಹವಾಸದಿಂದಾಗಿ ಹಮ್ಮು ಬೆಳೆಯುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ಮತ್ತು ಪುರಸ್ಕಾರಗಳು ದೊರೆಯುವ ಸಾಧ್ಯತೆ ಇದೆ. ಉದರ ನೋವಿನ ಸಮಸ್ಯೆ ಬಾಧಿಸಬಹುದು. ನಿಮ್ಮ ಮಾತು ಕಠಿಣವಾಗಿ ಸಹೋದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ನಿಮ್ಮೆಲ್ಲಾ ಕೆಲಸಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ವಿದೇಶಿ ಹಣ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ಬರಹಗಾರರಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.