ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಯೌವನದ ಬಲಾಬಲಗಳು

Last Updated 12 ಫೆಬ್ರುವರಿ 2021, 1:18 IST
ಅಕ್ಷರ ಗಾತ್ರ

ರಾಗಂ ವಿಜೃಂಭಯತಿ ಸಂಶ್ರಯತೇ ಪ್ರಮಾದಂ

ದೋಷಾನ್‌ ನ ಚಿಂತಯತಿ ಸಾಹಸಮಭ್ಯುಪೈತಿ ।

ಸ್ವಚ್ಛಂದತೋ ವ್ರಜತಿ ನೇಚ್ಛತಿ ನೀತಿಮಾರ್ಗಂ

ಬುದ್ಧಿಂ ಶುಭಾಂ ಸುವಿದುಷಾಮವಶೀಕರೋತಿ ।।

ಇದರ ತಾತ್ಪರ್ಯ ಹೀಗೆ:

‘ಯೌವನವು ಕಾಮವನ್ನು ಹೆಚ್ಚಿಸುವಂತೆ ಮಾಡುತ್ತದೆ; ತಪ್ಪುಗಳನ್ನು ಅಡಿಗಡಿಗೆ ಮಾಡಿಸುತ್ತದೆ; ಜಾಗರೂಕತೆಯೇ ಇರುವುದಿಲ್ಲ; ಅಪಾಯದ ಕೆಲಸಗಳನ್ನು ಮಾಡಲು ಅದು ಪ್ರೇರಿಸುತ್ತದೆ; ಸ್ವೇಚ್ಛೆಯಾಗಿ ನಡೆಯುವಂತೆ ಮಾಡುತ್ತದೆ; ನೀತಿಯನ್ನೂ ಗಮನಿಸುವುದೇ ಇಲ್ಲ; ಎಷ್ಟೇ ವಿದ್ಯಾಂಸನಾಗಿದ್ದರೂ ಅವನ ಒಳ್ಳೆಯ ಬುದ್ಧಿಯನ್ನು ಕೂಡ ಅದು ಹದ್ದು ಮೀರುವಂತೆ ಮಾಡುತ್ತದೆ.’

ಯೌವನ ಎಂದರೆ ನಮ್ಮ ಆಯುಸ್ಸಿನ ಪ್ರಮುಖ ಘಟ್ಟ; ಅತ್ಯಂತ ಶಕ್ತಿಶಾಲಿಯಾದ ಘಟ್ಟ. ಈ ಶಕ್ತಿಯ ಉಪಯೋಗ ಸರಿಯಾಗಿ ಆಗದಿದ್ದರೆ ಆಗ ಅನಾಹುತಗಳ ಸರಣಿಯೇ ಸಂಭವಿಸುವುದು ಎಂದು ಸುಭಾಷಿತ ಹೇಳುತ್ತಿದೆ.

ಯೌವನ ಎನ್ನುವುದು ಇತ್ತ ಬಾಲ್ಯವೂ ಅಲ್ಲ, ಅತ್ತ ಮುಪ್ಪು ಅಲ್ಲ; ಎರಡರ ನಡುವಿನ ಕಾಲ. ಬಾಲ್ಯದ ಉತ್ಸಾಹ ಮತ್ತು ಪ್ರೌಢವಾಸ್ಥೆಯ ವಿವೇಕ – ಎರಡೂ ಸೇರಿರುವ ಅವಸ್ಥೆ. ಆದರೆ ಈ ಎರಡೂ ಎಚ್ಚರವಾಗಿರದಿದ್ದರೆ ಆಗ ನಮ್ಮ ಜೀವನ ತೊಂದರೆಗಳಿಗೆ ಒಳಗಾಗುತ್ತದೆ. ಇಂಥ ತೊಂದರೆಗಳ ಪಟ್ಟಿಯನ್ನೇ ಸುಭಾಷಿತ ಇಲ್ಲಿ ನೀಡಿದೆ.

ಯೌವನ ಎಂಬುದು ಕಾಮನನ್ನು ಸ್ವಾಗತಿಸುವ ಸಂಭ್ರಮದ ಸಮಯ. ಈ ಸಂಭ್ರಮವನ್ನು ಸಂಯಮದಿಂದ ಸ್ವೀಕರಿಸದಿದ್ದರೆ ಆಗ ಅದರಿಂದ ತೊಂದರೆಗಳು ಎದುರಾಗುವುದು ಸಹಜ. ಶಕ್ತಿಯೇ ಯೌವನದ ಮೂಲಮಂತ್ರವಾಗಿರುತ್ತದೆ. ಶಕ್ತಿಯ ಮದ ನಮ್ಮಿಂದ ತಪ್ಪುಗಳನ್ನು ಮಾಡಲು ಪ್ರಚೋದಿಸುತ್ತದೆ; ಅದೂ ಮತ್ತೆ ಮತ್ತೆ ತಪ್ಪುಗಳು.

ತಪ್ಪುಗಳು ಯಾಕೆ ನಡೆಯುತ್ತವೆ? ಕಾಮದ ಉನ್ಮಾದವೂ ಅದಕ್ಕೆ ಒಂದು ಕಾರಣ. ಈ ಉನ್ಮಾದದಿಂದಾಗಿ ಜಾಗರೂಕತೆಯನ್ನು ಮನಸ್ಸು ಕಳೆದುಕೊಂಡಿರುತ್ತದೆ. ಜಾಗರೂಕತೆ ಮಾಯವಾಗಿದೆ; ತಪ್ಪುಗಳನ್ನು ಮಾಡಲೂ ಮನಸ್ಸು ಸಿದ್ಧವಾಗಿದೆ. ಇಂಥ ಮೈಮರೆವು ಇದ್ದಾಗ ಅಪಾಯದ ಕೆಲಸಗಳನ್ನು ಸಾಹಸದ ಕೆಲಸಗಳು ಎಂದು ಅದರಲ್ಲಿ ತೊಡಗುವುದು ಸಹಜವೇ ಆಗುತ್ತದೆ. ಅಪಾಯದ ಕೆಲಸಗಳನ್ನು ಮಾಡಬೇಕು ಎಂದರೆ ಸ್ವೇಚ್ಛೆ ಮುಖ್ಯವಾಗುತ್ತದೆ; ಸ್ವೇಚ್ಛಾಚಾರವೇ ಅಪಾಯವನ್ನು ಲೆಕ್ಕಿಸದಂತೆ ಮಾಡುವಂಥದ್ದು.

ಅಪಾಯಕ್ಕೂ ಸಿದ್ಧ; ಸ್ವೇಚ್ಛಾಚರವೂ ಸಿದ್ಧಿಸಿದೆ. ಅಂಥ ಸಂದರ್ಭದಲ್ಲಿ ನೀತಿ–ನಿಯಮಗಳ ಲಕ್ಷ್ಯವಾದರೂ ಏಕಿದ್ದೀತು? ಅಪಾಯಕ್ಕೆ ಸಿದ್ಧ; ಸ್ವೇಚ್ಛಾಚಾರವೂ ಸಿದ್ಧ; ನೀತಿ–ನಿಯಮಗಳ ಗೊಡವೆ ಇಲ್ಲ. ಇಂಥ ಹಾದಿತಪ್ಪಿದ ಸಮಯದಲ್ಲಿ ಎಂಥ ವಿದ್ಯಾವಂತನಾದರೂ ಏನು ಪ್ರಯೋಜನ? ಅವನಲ್ಲಿ ವಿವೇಕ ಇಲ್ಲವಾಗಿರುವುದರಿಂದಲೇ ಇಷ್ಟೆಲ್ಲ ತಪ್ಪಿದ ತಾಳಗಳಿಗೆ ಅವಕಾಶ ಒದಗಿರುವುದು.

ಸುಭಾಷಿತ ಹೇಳುತ್ತಿರುವುದು ಏನೆಂದರೆ, ನಮಗಿರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ಬುದ್ಧಿ ನಮ್ಮಲ್ಲಿ ಇಲ್ಲದಿದ್ದರೆ ಆಗ ನಮ್ಮ ಬಲವೇ ನಮಗೆ ಶತ್ರುವಾಗುತ್ತದೆ ಎಂದು. ಪ್ರಜಾಪ್ರಭುತ್ವವನ್ನು ಸರಿಯಾಗಿ ಬಳಸಿಕೊಳ್ಳುವ, ಉಳಿಸಿಕೊಳ್ಳುವ ಮಾರ್ಗವೂ ನಮಗೆ ಗೊತ್ತಿರಬೇಕು; ಇಲ್ಲವಾದಲ್ಲಿ ಅದೇ ಪ್ರಜೆಗಳ ಹಿಂಸೆಗೂ ಕಾರಣವಾಗಬಲ್ಲದು, ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT