ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ – ಅಗಲ| ಚುನಾವಣೆಯಿಂದ ಚುನಾವಣೆಗೆ ಆಸ್ತಿ ಮೌಲ್ಯ ಭಾರಿ ಏರಿಕೆ

Last Updated 17 ಮಾರ್ಚ್ 2023, 19:30 IST
ಅಕ್ಷರ ಗಾತ್ರ

2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳು ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಮಾಲೀಕರಾಗಿದ್ದರು. ಈ ಪೈಕಿ ಇಬ್ಬರ ಆಸ್ತಿ ಮೌಲ್ಯವು ₹1,000 ಕೋಟಿ ರೂಪಾಯಿಗೂ ಅಧಿಕವಾಗಿತ್ತು. 2013 ಹಾಗೂ 2018ರಲ್ಲಿ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಗಳ ಆಸ್ತಿಯ ಮೌಲ್ಯವನ್ನು ಹೋಲಿಕೆ ಮಾಡಿದಾಗ, ಹಲವು ಪಟ್ಟು ಏರಿಕೆಯಾಗಿರುವುದು ಕಂಡುಬಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಗಳು ತಿಳಿಸುತ್ತವೆ.

ಚುನಾವಣೆಯ ವೇಳೆ ಅಭ್ಯರ್ಥಿಗಳು ತಮ್ಮ ಆಸ್ತಿ ಹಾಗೂ ಆದಾಯದ ಪ್ರಮಾಣಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತಾರೆ. 2013ಕ್ಕೆ ಹೋಲಿಸಿದರೆ 2018ರ ಹೊತ್ತಿಗೆ ಅಭ್ಯರ್ಥಿಗಳ ಆಸ್ತಿ ಮೌಲ್ಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ ಎಂಬುದನ್ನು ಪ್ರಮಾಣಪತ್ರವು ಹೇಳುತ್ತದೆ. ಅಭ್ಯರ್ಥಿಗಳ ಆಸ್ತಿ ಮೌಲ್ಯವು 5 ವರ್ಷಗಳ ಅವಧಿಯಲ್ಲಿ ಕನಿಷ್ಠ ಶೇ 20ರಿಂದ ಗರಿಷ್ಠ ಶೇ 500ವರೆಗೂ ಏರಿಕೆಯಾಗಿದೆ. ₹100 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿರುವ 6 ಅಭ್ಯರ್ಥಿಗಳ ಆಸ್ತಿ ಮೌಲ್ಯ ಶೇ 100ಕ್ಕಿಂತಲೂ ಹೆಚ್ಚಾಗಿರುವುದು ಕಂಡುಬಂದಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆ ಹೊತ್ತಿಗೆ ಒಂದು ಪಟ್ಟು ಹಾಗೂ ಎರಡು ಪಟ್ಟು ಆಸ್ತಿ ಹೆಚ್ಚಿಸಿಕೊಂಡ ರಾಜಕಾರಣಿಗಳ ಸಂಖ್ಯೆಯೂ ಇದೆ.

ನೂರಾರು ಕೋಟಿ ಆಸ್ತಿ ಹೊಂದಿರುವ ಬಹುತೇಕ ಅಭ್ಯರ್ಥಿಗಳು ರಾಜಕಾರಣದ ಆಚೆಗೆ ವಿವಿಧ ವ್ಯಾಪಾರ, ಉದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಆದಾಯದ ಮೂಲವನ್ನು ಅಭ್ಯರ್ಥಿಗಳು ಉಲ್ಲೇಖಿಸಿದ್ದಾರೆ. ವ್ಯಾಪಾರ ಆಥವಾ ವ್ಯವಹಾರದಿಂದ ಬರುವ ಆದಾಯ, ಕೃಷಿಯಿಂದ ಸಿಗುವ ಆದಾಯ, ಶಾಸಕರಿಗೆ ಸರ್ಕಾರ ನೀಡುವ ವೇತನ, ಬಾಡಿಗೆಯಿಂದ ಬರುವ ಆದಾಯ, ಡಿವಿಡೆಂಡ್ ಹಾಗೂ ಬ್ಯಾಂಕ್‌ನಿಂದ ಬರುವ ಬಡ್ಡಿಯನ್ನು ತಮ್ಮ ಆದಾಯದ ಮೂಲ ಎಂದು ಹೇಳಿಕೊಂಡಿದ್ದಾರೆ.

ಜನ–ನುಡಿ

ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡಬಾರದು

ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಜನಪ್ರತಿನಿಧಿಯಾದವರು ಪ್ರತಿ ಹಂತದಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಮೂಲಭೂತವಾಗಿ ಜನರಿಗೆ ಬೇಕಾದ ನೀರಿನ ವ್ಯವಸ್ಥೆ, ಆರೋಗ್ಯ, ಶಿಕ್ಷಣ ಹಾಗೂ ಅನ್ನದಾತರ ಸಂಕಷ್ಟಗಳನ್ನು ಪರಿಹರಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಹೆಚ್ಚಾಗುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸಲು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಬದಲಾಗುತ್ತಿರುವ ಬೆಳವಣಿಗೆಯಲ್ಲಿ ಯಾವುದೇ ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡದೇ ಅಭಿವೃದ್ಧಿಯತ್ತ ಗಮನ ಹರಿಸಬೇಕು.

- ಓಬಳೇಶ್ ಎನ್.ಎಸ್., ಮೊಳಕಾಲ್ಮುರು, ಚಿತ್ರದುರ್ಗ

***

ಮತ ಮಾರಾಟ ಬೇಡ

ಸಂವಿಧಾನಬದ್ಧವಾಗಿ, ಪಕ್ಷದ ಸಿದ್ಧಾಂತ ಹಾಗೂ ಪ್ರಣಾಳಿಕೆ ಪ್ರಕಾರ ಚುನಾವಣೆ ನಡೆಯಬೇಕು. ಯಾವುದೇ ಸಂದರ್ಭ ಬಂದರೂ ಆಸೆ, ಆಮಿಷಗಳಿಗೆ ಜನರು ತಮ್ಮ ಮತ ಮಾರಾಟ ಮಾಡಿಕೊಳ್ಳಬಾರದು. ಮತ ಮಾರಾಟ ಮಾಡಿಕೊಳ್ಳುವುದು ಮನೆಯ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದಂತೆ ಎಂಬುದಾಗಿ ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದ್ದರು.

ಮತ ಮಾರಾಟ ಮಾಡಿಕೊಂಡರೆ ಕೇಳಿ ಕೆಲಸ ಮಾಡಿಕೊಳ್ಳುವ ಹಕ್ಕು ಇರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಹಕ್ಕು ನಮ್ಮ ಕೈಯಲ್ಲಿದ್ದು, ಈಗಲಾದರೂ ಪ್ರಜ್ಞಾವಂತರಾಗಬೇಕು. ಆಗ ನಮ್ಮ ಕೆಲಸ ಮಾಡಿಸಿಕೊಳ್ಳಬಹುದು. ಆಳುವವರು ಜನರನ್ನು ಭ್ರಷ್ಟಾಚಾರ ಮಾಡಲು ಪ್ರಚೋದಿಸುತ್ತಾರೆ. ಏಕೆಂದರೆ ಮುಂದೆ ಹಣ ಮಾಡಲು ಈ ಮೂಲಕ ವೇದಿಕೆ ಮಾಡಿಕೊಳ್ಳುತ್ತಾರೆ. ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದೇ ನಾಯಕರು.

ವಿ. ಗೀತಾ, ನಾಯಕಿ, ಜನವಾದಿ ಮಹಿಳಾ ಸಂಘಟನೆ

***

ಯೋಚಿಸಿ ಮತ ಚಲಾಯಿಸಿ

ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆಯು ಜಾಗರೂಕತೆಯಿಂದ ನಡೆಯಬೇಕು. ಸೂಕ್ತ ಅಭ್ಯರ್ಥಿ ಪರ ಮತ ಚಲಾಯಿಸುತ್ತಿದ್ದೇವೆಯೇ ಎಂಬುದನ್ನು ಮತ ಚಲಾಯಿಸುವ ಮುನ್ನ ಮತದಾರರು ಆಲೋಚಿಸಬೇಕು. ಅಭ್ಯರ್ಥಿಯ ಹಿನ್ನೆಲೆ, ವ್ಯಕ್ತಿತ್ವ ಅರಿಯುವುದರ ಜೊತೆಗೆ ಅವರಿಂದ ಕ್ಷೇತ್ರದ ಅಭಿವೃದ್ಧಿ ಆಗುವುದೇ ಎಂಬುದನ್ನು ಕೂಡ ಯೋಚಿಸಬೇಕು. ಬೇರೆ ಬೇರೆ ಸ್ವರೂಪದಲ್ಲಿ ಆಮಿಷ ಒಡ್ಡುವವರಿಗೆ ಮತ ನೀಡಬಾರದು. ಜನರು ಮತ್ತು ಕ್ಷೇತ್ರದ ಬಗ್ಗೆ ಕಾಳಜಿಯುಳ್ಳ ಅಭ್ಯರ್ಥಿ ಪರ ಮತ ಚಲಾಯಿಸಬೇಕು.

- ಈರಣ್ಣ ಬೆಂಗಾಲಿ, ರಾಯಚೂರು

***

ಮತದಾರ ಆಮಿಷಕ್ಕೆ ಬಲಿಯಾಗಬಾರದು

ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ದಕ್ಷರು, ಪ್ರಾಮಾಣಿಕರು ಆಗಿರಬೇಕು. ನಿಸ್ವಾರ್ಥಸೇವೆಯ ಮನೋಭಾವ ಹೊಂದಿರಬೇಕು. ಸುಸಂಸ್ಕೃತರಾಗಿರಬೇಕು. ಪ್ರಜಾಪ್ರಭುತ್ವದ ಆಶಯಗಳಿಗೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕು. ಇಂತಹ ನಾಯಕ ಆಯ್ಕೆಯಾಗಬೇಕಾದರೆ ಮತದಾರರಾದ ನಾವು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು.

ನಮ್ಮ ಮತವನ್ನು ಪ್ರಾಮಾಣಿಕವಾಗಿ ಚಲಾಯಿಸಿ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಮುಂದಿನ ಐದು ವರ್ಷಗಳು ಜನರು ಸುಖವಾಗಿ, ನೆಮ್ಮದಿಯಾಗಿ ಇರಬಹುದು. ನಮ್ಮ ವ್ಯವಸ್ಥೆ, ನಮ್ಮ ಸಮಾಜವೂ ಭ್ರಷ್ಟಾಚಾರ ಮುಕ್ತವಾಗಲು ಸಹಕಾರಿಯಾಗುತ್ತದೆ. ನಮಗೆ ಬೇಕಾದ ಶುದ್ಧ ಕುಡಿಯುವ ನೀರು, ನೈರ್ಮಲ್ಯದ ವಾತಾವರಣದಲ್ಲಿ ಬದುಕಲು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸೋಣ.

ಎಂ.ಎನ್.ನರಹರಿ, ಭುವನೇಶ್ವರಿನಗರ, ಸಿ.ವಿ.ರಾಮನ್ ನಗರ, ಬೆಂಗಳೂರು

***

ಭ್ರಷ್ಟಾಚಾರ ರಹಿತ ಜನಪ್ರತಿನಿಧಿ, ಸರ್ಕಾರ ಬೇಕು

30–40 ವರ್ಷಗಳ ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ವ್ಯತ್ಯಾಸವಿದೆ. ಆಗ ಜನರೇ ಅಭ್ಯರ್ಥಿಗಳಿಗೆ ದುಡ್ಡು ಕೊಟ್ಟು ಗೆಲ್ಲಿಸುತ್ತಿದ್ದರು. ಈಗ ಅಭ್ಯರ್ಥಿಗಳೇ ಮತದಾರರಿಗೆ ದುಡ್ಡು ಕೊಡುತ್ತಾರೆ. ಜಾತಿ, ಧರ್ಮ ಆಧಾರಿತವಲ್ಲದ ಸ್ವಚ್ಛ ಮತ್ತು ಪಾರದರ್ಶಕವಾದ ಚುನಾವಣೆ ಬೇಕು. ಆಡಳಿತ ನಡೆಸುವ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಜನ ಕಲ್ಯಾಣ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ಇಂದಿನ ಅಗತ್ಯ. ಯೋಜನೆಗಳನ್ನು ಜನರ ಹೃದಯದ ಹತ್ತಿರ ತೆಗೆದುಕೊಂಡು ಹೋಗುವ ಜನಪ್ರತಿನಿಧಿ, ಸರ್ಕಾರ ಬೇಕು.

- ಲಕ್ಷ್ಮಿ ನರಸಿಂಹ, ಬರಹಗಾರ, ಕೃಷಿಕ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT