ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಅಮೆರಿಕ ಮೊದಲು... ಟ್ರಂಪ್‌ ನೀತಿ

Last Updated 6 ನವೆಂಬರ್ 2020, 19:31 IST
ಅಕ್ಷರ ಗಾತ್ರ

‘ದೊಡ್ಡಣ್ಣ’ನಿಗೆ ಹಿನ್ನಡೆ

ಅಮೆರಿಕ ಮೊದಲು ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಿ, ಅಧ್ಯಕ್ಷ ಹುದ್ದೆಗೆ ಏರಿದ್ದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಡಳಿತಾವಧಿಯಲ್ಲಿ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಟ್ರಂಪ್‌ ಅವರ ವಿದೇಶಾಂಗ ನೀತಿ ನಿಲುವುಗಳಿಂದ ಅಮೆರಿಕಕ್ಕೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಅದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕಕ್ಕೆ ಇದ್ದ ‘ಸೂಪರ್ ಪವರ್’ ಎಂಬ ಹೆಗ್ಗಳಿಕೆ ಮುಕ್ಕಾಗಿದೆ. ‘ಜಗತ್ತಿನ ದೊಡ್ಡಣ್ಣ’ ಎಂಬ ನಾಯಕತ್ವ ಸ್ಥಾನಕ್ಕೆ ಹಿನ್ನಡೆ ಆಗಿದೆ.

ಭಾರತಕ್ಕೆ ಎಚ್‌1ಬಿ ಹೊಡೆತ

ಅಮೆರಿಕದಲ್ಲಿ ಕೆಲಸಕ್ಕೆ ಸೇರಲಿಚ್ಛಿಸುವ ವಿದೇಶಿ ತಂತ್ರಜ್ಞರಿಗೆ ನೀಡಲಾಗುತ್ತಿದ್ದ ಎಚ್‌1-ಬಿ ವೀಸಾ ನಿಯಮಗಳನ್ನು ಬದಲಿಸಿದ್ದು, ಅಮೆರಿಕದಲ್ಲಿ ಟ್ರಂಪ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಈ ನೀತಿಯು ಅಮೆರಿಕನ್ನರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಿತು. ಆದರೆ ಇದೇ ಸಂದರ್ಭದಲ್ಲಿ ಈ ವೀಸಾವನ್ನು ಆಧರಿಸಿದ ಏಷ್ಯಾದ ನೌಕರ ವರ್ಗಕ್ಕೆ ಭಾರಿ ಅನನಕೂಲವಾಯಿತು. ಮುಖ್ಯವಾಗಿ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಅಮೆರಿಕದ ಉದ್ಯೋಗಾವಕಾಶದಿಂದ ವಂಚಿತರಾದರು. ಈ ನೀತಿಯಿಂದ ಹೆಚ್ಚು ಹೊಡೆತ ತಿಂದ ಎರಡನೇ ದೇಶವೆಂದರೆ ಚೀನಾ. ಪ್ರತಿ ವರ್ಷ ಮಂಜೂರಾಗುವ ಇಂತಹ ವೀಸಾಗಳಲ್ಲಿ, ಬಹುಪಾಲು ಭಾರತೀಯರು ಮತ್ತು ಚೀನಿಯರ ಪಾಲಾಗುತ್ತಿದ್ದವು. ಕೋವಿಡ್‌ನ ಕಾರಣದಿಂದ ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಈ ವೀಸಾ ನೀಡಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ವಿದೇಶಿ ನೌಕರರರಿಗೆ ಅಮೆರಿಕದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ವಾಣಿಜ್ಯ ಸಮರ

ಜಾಗತಿಕ ಮಟ್ಟದಲ್ಲಿ ಎರಡನೇ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಚೀನಾವನ್ನು ಮಟ್ಟಹಾಕಲು ಟ್ರಂಪ್ ಅವರು ವಾಣಿಜ್ಯ ಸಮರದ ಮೊರೆ ಹೋದರು. ಚೀನಾದಿಂದ ಆಮದಾಗುತ್ತಿದ್ದ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿದರು. ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿ ಚೀನಾ ಅಭಿವೃದ್ಧಿಪಡಿಸಿರುವ 5ಜಿ ತಂತ್ರಜ್ಞಾನವನ್ನು ತಿರಸ್ಕರಿಸಿದರು. ಅಮೆರಿಕದ ಈ ನಿರ್ಧಾರವನ್ನು ವಿಶ್ವದ ಹಲವು ರಾಷ್ಟ್ರಗಳು ಹಿಂಬಾಲಿಸಿದವು. ಚೀನಾ ಸಹ ಅಮೆರಿಕದ ವಿರುದ್ಧ ವಾಣಿಜ್ಯ ಸಮರಕ್ಕೆ ಮುಂದಾಯಿತು. ಆರ್ಥಿಕತೆಗೆ ತೀರಾ ಧಕ್ಕೆಯಾದಾಗ ಚೀನಾ ವಾಣಿಜ್ಯ ಸಮರದಿಂದ ಹಿಂದೆ ಸರಿಯಿತು.

ಆದರೆ, ಚೀನಾ ವಿರುದ್ಧದ ಹಿಡಿತವನ್ನು ಅಮೆರಿಕ ಮತ್ತಷ್ಟು ಗಟ್ಟಿಗೊಳಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಅತಿಕ್ರಮಣವನ್ನು ಅಮೆರಿಕ ಖಂಡಿಸಿದೆ. ತೈವಾನ್‌ನಲ್ಲಿ ಚೀನಾದ ಪ್ರಾಬಲ್ಯವನ್ನು ಕಡಿಮೆಮಾಡಲು ಅಮೆರಿಕದ ಸೇನೆ ನೆರವು ನೀಡಿದೆ.

ಭಾರತದಲ್ಲಿ ವಿದೇಶಿ ಆಮದು ಬೈಕ್‌ಗಳ ಮೇಲೆ ಹೆಚ್ಚಿನ ಸುಂಕ ಹೇರಲಾಗುತ್ತಿದೆ. ಇದರಿಂದ ಅಮೆರಿಕದ ಹಾರ್ಲೆ ಡೇವಿಡ್‌ಸನ್ ಮೋಟರ್‌ಸೈಕಲ್ಸ್ ಕಂಪನಿಗೆ ಹೊರೆಯಾಗುತ್ತಿದೆ ಎಂದು ಟ್ರಂಪ್ ನೇರವಾಗಿ ಆರೋಪಿಸಿದ್ದರು. ಈಗ ಹಾರ್ಲೆ ಡೇವಿಡ್‌ಸನ್ ಭಾರತದಿಂದ ನಿರ್ಗಮಿಸಿದೆ. ಭಾರತದ ಬೇರೊಂದು ಕಂಪನಿ ಜತೆ ಒಪ್ಪಂದ ಮಾಡಿಕೊಂಡು, ಬೈಕ್‌ ತಯಾರಿಕೆ ಮತ್ತು ಮಾರಾಟ ಮಾಡಲು ಮುಂದಾಗುತ್ತಿದೆ.

ವಿಶ್ವಕ್ಕಾಗಿ ಕಡಿಮೆ ವೆಚ್ಚ

ಅಮೆರಿಕವು ವಿಶ್ವದ ವಿವಿಧ ಒಪ್ಪಂದಗಳು, ಬದ್ಧತೆಗಳನ್ನು ಪಾಲಿಸುತ್ತಿತ್ತು. ಈ ಒಪ್ಪಂದ ಮತ್ತು ಬದ್ಧತೆಗಳಿಗಾಗಿ ಅಮೆರಿಕವು ಪ್ರತಿ ವರ್ಷ ಕೋಟ್ಯಂತರ ಡಾಲರ್ ವೆಚ್ಚ ಮಾಡುತ್ತಿತ್ತು. ಇಂತಹ ಹಲವು ಒಪ್ಪಂದಗಳಿಂದ, ಬದ್ಧತೆಗಳಿಂದ, ಜಾಗತಿಕ ಸಂಸ್ಥೆಗಳಿಂದ ಅಮೆರಿಕವು ಈಗ ಹೊರಬಂದಿದೆ. ಇದಕ್ಕೆ ಕಾರಣ ಅಮೆರಿಕವೇ ಮೊದಲು ಎಂಬ ಟ್ರಂಪ್ ಅವರ ನೀತಿ.

ಅಮೆರಿಕವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಗೆ ಬಂದಿದೆ. ಈ ಮಂಡಳಿಗೆ ಪ್ರತಿ ವರ್ಷ ಕೋಟ್ಯಂತರ ಡಾಲರ್ ದೇಣಿಗೆಯನ್ನು ಅಮೆರಿಕ ನೀಡುತ್ತಿತ್ತು. ಟ್ರಂಪ್ ಅವರು ಇದನ್ನು ನಿಲ್ಲಿಸಿದ್ದಾರೆ. ಈ ಸಂಸ್ಥೆಗೆ ಬರುತ್ತಿದ್ದ ದೇಣಿಗೆಯಲ್ಲಿ ಅಮೆರಿಕದ ಪಾಲು ಶೇ 50ಕ್ಕಿಂತಲೂ ಹೆಚ್ಚು. ಈಗ ದೇಣಿಗೆ ನಿಂತಿರುವುದರಿಂದ, ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಅಡಚಣೆಯಾಗಿದೆ. ಇದೇ ರೀತಿ ಯುನೆಸ್ಕೊಗೆ ನೀಡುತ್ತಿದ್ದ ದೇಣಿಗೆಯನ್ನು ಟ್ರಂಪ್ ನಿಲ್ಲಿಸಿದ್ದಾರೆ. ಇದರಿಂದ ಅಮೆರಿಕದ ಬೊಕ್ಕಸಕ್ಕೆ ಉಳಿತಾಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕವು ಘೋಷಿಸಿದ್ದ ದೇಣಿಗೆಯನ್ನು ಟ್ರಂಪ್ ಅವರು ರದ್ದುಪಡಿಸಿದ್ದಾರೆ.ಕೋವಿಡ್‌ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂಬುದು ಇದಕ್ಕೆ ಅವರು ಕೊಟ್ಟ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯ ವೈಫಲ್ಯದ ಕಾರಣದಿಂದಲೇ ಕೋವಿಡ್ ಜಗತ್ತಿನಾದ್ಯಂತ ಹರಡಿತು ಎಂದು ಟ್ರಂಪ್ ಅವರು ಬಹಿರಂಗವಾಗಿ ಆರೋಪಿಸಿದ್ದರು. ಅಮೆರಿಕದ ಈ ನಡೆಯಿಂದ ಕೋವಿಡ್‌ ಹೋರಾಟದಲ್ಲಿ ಡಬ್ಲ್ಯುಎಚ್‌ಒನ ಆರ್ಥಿಕ ಬಲ ಗಣನೀಯ ಪ್ರಮಾಣದಲ್ಲಿ ಕುಗ್ಗಿತು.

ನ್ಯಾಟೊದಿಂದ ಹೊರಗೆ ಬರುವುದಾಗಿ ಟ್ರಂಪ್ ಮೊದಲಿನಿಂದಲೂ ಹೇಳುತ್ತಿದ್ದಾರೆ. ಒಕ್ಕೂಟದ ಹಲವು ದೇಶಗಳಲ್ಲಿ ಇದ್ದ ಅಮೆರಿಕದ ಸೇನೆಯನ್ನು ಟ್ರಂಪ್ ವಾಪಸ್ ಕರೆಸಿಕೊಂಡಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕವು ನ್ಯಾಟೊದಿಂದ ಸಂಪೂರ್ಣವಾಗಿ ಹೊರಗೆಬರುವ ಸಾಧ್ಯತೆ ಇದೆ.

ಪ್ಯಾರಿಸ್ ಒಪ್ಪಂದದಿಂದ ಹೊರಕ್ಕೆ

2015ರ ಪ್ಯಾರಿಸ್‌ ಒಪ್ಪಂದದ ಪ್ರಕಾರ, ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುವ ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳಿಗೆ ಅಮೆರಿಕವೂ ಸೇರಿದಂತೆ ಎಲ್ಲಾ ಅಭಿವೃದ್ಧಿ ರಾಷ್ಟ್ರಗಳು ದೇಣಿಗೆ ನೀಡಲು ಒಪ್ಪಿಕೊಂಡಿದ್ದವು. ಆದರೆ ಟ್ರಂಪ್ ಅವರು ಈ ಒಪ್ಪಂದದಿಂದ ಹೊರಗೆ ಬರಲು ನಿರ್ಧರಿಸಿದರು. ಬೇರೆ ರಾಷ್ಟ್ರಗಳು ಕೈಗೊಳ್ಳುವ ಕ್ರಮಗಳಿಗೆ ಅಮೆರಿಕ ಏಕೆ ಹಣ ನೀಡಬೇಕು ಎಂದು ಟ್ರಂಪ್ ಪ್ರಶ್ನಿಸಿದರು. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಟೀಕೆ ವ್ಯಕ್ತವಾಯಿತು. ಆದರೂ ಅಮೆರಿಕವು ನೀಡಬೇಕಿದ್ದ ದೇಣಿಗೆಯನ್ನು ಟ್ರಂಪ್ ನಿಲ್ಲಿಸಿದರು.

ಟ್ರಂಪ್-ಮೋದಿ ಸಂಬಂಧ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಸಂಬಂಧ ಉತ್ತಮವಾಗಿತ್ತು. ಇಬ್ಬರೂ ನಾಯಕರು ಪರಸ್ಪರರನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಶಂಸೆ ಮಾಡುವಷ್ಟು ಅವರ ಸಂಬಂಧ ಗಟ್ಟಿಯಾಗಿತ್ತು. ಆದರೂ ಈಚೆಗೆ ಟ್ರಂಪ್ ಅವರು ಕೋವಿಡ್‌ ನಿರ್ವಹಣೆಯಲ್ಲಿ ಭಾರತದ ಬಗ್ಗೆ ನಕರಾತ್ಮಕವಾಗಿ ಮಾತನಾಡಿದ್ದರು.

ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ನಂತರ ಮೋದಿ ಅವರು 2 ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ ಹೆಚ್ಚು ಸುದ್ದಿಯಾಗಿತ್ತು, ಮೋದಿ ಅವರ ಇತ್ತೀಚಿನ ಅಮೆರಿಕ ಪ್ರವಾಸ. 2019ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ 'ಟೆಕ್ಸಾಸ್ ಇಂಡಿಯಾ ಫೋರಂ', 'ಹೌಡಿ ಮೋದಿ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಸಹ ಭಾಗಿಯಾಗಿದ್ದರು. ಒಂದು ಸಮುದಾಯದ ಕಾರ್ಯಕ್ರಮದಲ್ಲಿ ಇಬ್ಬರೂ ಜಾಗತಿಕ ನಾಯಕರು ಭಾಗಿಯಾಗಿದ್ದರು ಮತ್ತು ಪರಸ್ಪರ ಪ್ರಶಂಸೆ ಮಾಡಿದರು. ಇದೇ ರೀತಿ ಟ್ರಂಪ್ ಸಹ ಭಾರತಕ್ಕೆ ಮೊದಲ ಭಾರಿ ಭೇಟಿ ನೀಡಿದಾಗ, ಸರ್ಕಾರವು ಗುಜರಾತ್‌ನ ಅಹಮದಾಬಾದ್‌ನಲ್ಲಿ 'ನಮಸ್ತೆ ಟ್ರಂಪ್' ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾಶ್ಮೀರದ ವಿಚಾರದಲ್ಲಿ ಭಾರತ-ಪಾಕಿಸ್ತಾನದ ಮಧ್ಯೆ ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್ ಹಲವು ಭಾರಿ ಹೇಳಿದ್ದರು. ಆದರೆ, ಇದನ್ನು ಸರ್ಕಾರ ವಿರೋಧಿಸಿತ್ತು. ಟ್ರಂಪ್ ಮತ್ತು ಮೋದಿ ನಡುವಣ ಸಂಬಂಧ ಚೆನ್ನಾಗಿಯೇ ಇದ್ದರೂ, ಎಚ್‌1-ಬಿ ವೀಸಾ ವಿಚಾರದಲ್ಲಿ ಟ್ರಂಪ್ ಅವರ ನೀತಿಗಳು ಬಾರತೀಯರಿಗೆ ಮುಳುವಾಯಿತು. ಇದರ ಜತೆಯಲ್ಲೇ, ಕೋವಿಡ್‌ರೋಗಿಗಳು ಮತ್ತು ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯನ್ನು ಭಾರತವು ಮುಚ್ಚಿಡುತ್ತಿದೆ. ನಿಜವಾದ ಅಂಕಿಅಂಶಗಳನ್ನು ನೀಡುತ್ತಿಲ್ಲ ಎಂದು ಟ್ರಂಪ್ ಆರೋಪಿಸಿದ್ದರು. ವಾರಗಳ ಹಿಂದಷ್ಟೇ, 'ಭಾರತ ಕೊಳಕು, ಅಲ್ಲಿನ ಗಾಳಿ ಕೊಳಕು' ಎಂದೂ ಟ್ರಂಪ್ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT