ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಡಿಜಿಟಲ್ ಕಾರ್ಡ್ ಆರೋಗ್ಯ ಮಾಹಿತಿ ಕಣಜ

ಆಧಾರ: ಹೆಲ್ತ್‌ ಐಡಿ ಪೋರ್ಟಲ್, ಹೆಲ್ತ್‌ ಐಡಿಯ ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ, ಹೆಲ್ತ್‌ ಐಡಿಯ ಖಾಸಗಿತನ ನೀತಿ, ಪಿಟಿಐ
Last Updated 29 ಸೆಪ್ಟೆಂಬರ್ 2021, 3:47 IST
ಅಕ್ಷರ ಗಾತ್ರ

ಆಯುಷ್ಮಾನ್‌ ಭಾರತ ಡಿಜಿಟಲ್‌ ಮಿಷನ್‌ ಅಡಿಯಲ್ಲಿ ದೇಶದ ನಾಗರಿಕರಿಗೆ ಡಿಜಿಟಲ್‌ ಆರೋಗ್ಯ ಕಾರ್ಡ್‌ ಒದಗಿಸುವ ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಇದು ಕಾರಣವಾಗಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಆದರೆ, ಹಲವು ಅನುಕೂಲಗಳ ಜತೆಗೆ, ಖಾಸಗಿತನ ಮತ್ತು ಇತರ ಹಕ್ಕುಗಳ ಉಲ್ಲಂಘನೆಗೂ ಇದು ಅವಕಾಶ ಕೊಡಬಹುದು; ಆರೋಗ್ಯ ದತ್ತಾಂಶ ದುರ್ಬಳಕೆ ಆಗಬಹುದು ಎಂದ ಕಳವಳವೂ ವ್ಯಕ್ತವಾಗಿದೆ

ಆರೋಗ್ಯ ಗುರುತು ಚೀಟಿ ಎಂದರೇನು?

ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿ ಪ್ರಜೆಗೂ ‘ಡಿಜಿಟಲ್ ರೂಪ’ದ ಗುರುತಿನ ಚೀಟಿ ನೀಡಲು ಸರ್ಕಾರ ಉದ್ದೇಶಿಸಿದೆ. ಈ ಆರೋಗ್ಯ ಚೀಟಿಯು ವ್ಯಕ್ತಿಯೊಬ್ಬರ ಸಮಗ್ರ ಆರೋಗ್ಯ ಮಾಹಿತಿಯ ಕಣಜವಾಗಿ ಕೆಲಸ ಮಾಡಲಿದೆ. ರೋಗಿಯ ವೈದ್ಯಕೀಯ ಪರೀಕ್ಷೆಗಳು, ರೋಗದ ವಿಧ, ವೈದ್ಯರು ನೀಡಿದ ಪ್ರಿಸ್ಕ್ರಿಪ್ಷನ್, ಔಷಧಗಳು, ಚಿಕಿತ್ಸೆಗಳು ಮತ್ತುತೆಗೆದುಕೊಂಡ ರೋಗನಿರ್ಣಯದ ವಿವರಗಳು ಹಾಗೂ ಎಲ್ಲ ರೀತಿಯವೈದ್ಯಕೀಯ ದಾಖಲೆಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ಮೊಬೈಲ್ ಮೂಲಕ ಈ ದಾಖಲೆಗಳನ್ನು ವೀಕ್ಷಿಸಬಹುದು.

ಈ ಗುರುತಿನ ಚೀಟಿಯನ್ನು ವ್ಯಕ್ತಿಯ ಆರೋಗ್ಯ ಖಾತೆ ಎಂಬಂತೆ ಬಳಸಲಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದವರ ವೈದ್ಯಕೀಯ ಚಿಕಿತ್ಸೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಯೋಜನೆ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆಯು ವಿಶ್ವಾಸಾರ್ಹ ದತ್ತಾಂಶವನ್ನು ಒದಗಿಸುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರ ಅಮೂಲ್ಯ ಜೀವ ಉಳಿಸಲು ನೆರವಾಗುತ್ತದೆ ಎಂದು ಸರ್ಕಾರ ಹೇಳಿದೆ.ಈ ಯೋಜನೆಯಿಂದ ಹೊರಗುಳಿಯಲು ಇಚ್ಚಿಸಿದವರು ಸ್ವಯಂಪ್ರೇರಣೆಯಿಂದ ಈ ಆಯ್ಕೆ ಮಾಡಿಕೊಳ್ಳಬಹುದು.

ಗುರುತು ಚೀಟಿಯ ಗುರಿ ಏನು?

ಸರ್ಕಾರದ ಸೇವೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಜನರಿಗೆ ತಲುಪಿಸುವ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ವೈದ್ಯಕೀಯ ದಾಖಲೆಗಳು ಮತ್ತು ದತ್ತಾಂಶಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ವೈದ್ಯರು, ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರ ನಡುವೆ ಗೊಂದಲಗಳಿಲ್ಲದ, ಸುಲಭ ಸಂವಹನ ಸಾಧ್ಯವಾಗಿಸುವುದು ಇದರ ಉದ್ದೇಶ.

ಇಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಭಾರತದಾದ್ಯಂತ ಎಲ್ಲಿಯಾದರೂ ಪರಿಶೀಲಿಸಬಹುದು. ಆರೋಗ್ಯ ಸೇವೆ ನೀಡುತ್ತಿರುವ ಯಾರಿಗಾದರೂ ಈ ದತ್ತಾಂಶ ದಾಖಲೆಗಳು ಸುಲಭವಾಗಿ ಲಭ್ಯವಾಲಿವೆ.ದೇಶದಾದ್ಯಂತ ಆಸ್ಪತ್ರೆಗಳೊಂದಿಗೆ ರೋಗಿಗಳನ್ನು ಸಂಪರ್ಕಿಸಲು ಆಯುಷ್ಮಾನ್ ಭಾರತ ಯೋಜನೆಯು ಮಾಡಿದ ಕೆಲಸವನ್ನು ಮತ್ತಷ್ಟು ವಿಸ್ತರಿಸಿ, ಅದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.

‘ಆರೋಗ್ಯ ದಾಖಲೆ’ ಸೃಷ್ಟಿ ಹೇಗೆ?

ಈ ಆರೋಗ್ಯ ಕಾರ್ಡ್‌, 14 ಅಂಕಿಗಳನ್ನು ಒಳಗೊಂಡ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಳಗೊಂಡಿರುತ್ತದೆ.

ನೋಂದಣಿ ವೇಳೆ ವ್ಯಕ್ತಿಯು ನೀಡುವ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ, ‘ವೈಯಕ್ತಿಕ ಆರೋಗ್ಯ ದಾಖಲೆ’ ಸಿದ್ಧವಾಗುತ್ತದೆ. ಅಲ್ಲಿ ಆತನ ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ಎಲ್ಲವೂ ಇರಲಿದೆ. ಇದು ವ್ಯಕ್ತಿಯ ಹೆಲ್ತ್‌ ಅಕೌಂಟ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಜೋಡಣೆ ಮಾಡಬಹುದು ಹಾಗೂ ಮೊಬೈಲ್ ಅಪ್ಲಿಕೇಶನ್‌ ಸಹಾಯದಿಂದ ಆ ಮಾಹಿತಿಯನ್ನು ತಿಳಿಯಬಹುದು.

ಗುರುತಿನ ಚೀಟಿ ಮಾಡಿಸುವುದು ಕಡ್ಡಾಯವೇ?

ಭಾರತೀಯ ಆರೋಗ್ಯ ಗುರುತಿನ ಚೀಟಿ ಸೃಷ್ಟಿಸಿಕೊಳ್ಳುವುದು ಕಡ್ಡಾಯವಲ್ಲ. ಈ ಕಾರ್ಯಕ್ರಮ ಸಂಪೂರ್ಣ ಸ್ವಯಂಪ್ರೇರಿತವಾದುದು ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ. ಆರೋಗ್ಯ ಗುರುತಿನ ಚೀಟಿ ಮತ್ತು ಕ್ಯುಆರ್‌ ಕೋಡ್‌ ಇದ್ದರೆ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯ ಲಾಭಗಳನ್ನು ಪಡೆಯುವುದು ಸುಲಭವಾಗುತ್ತದೆ ಎಂದು ಹೆಲ್ತ್‌ ಐಡಿ ಜಾಲತಾಣದ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ.

ಆರೋಗ್ಯ ಗುರುತಿನ ಚೀಟಿ ಸೃಷ್ಟಿಸಿರುವ ವ್ಯಕ್ತಿಯು, ಯಾವಾಗ ಬೇಕಿದ್ದರೂ ಈ ಚೀಟಿಯನ್ನು ರದ್ದುಪಡಿಸಲು ಮತ್ತು ಅದರಲ್ಲಿರುವ ಮಾಹಿತಿಗಳನ್ನು ಅಳಿಸಿಹಾಕಲು ಅವಕಾಶವಿದೆ. ಆದರೆ, ಇದಕ್ಕಾಗಿ ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಆನಂತರವಷ್ಟೇ ಗುರುತಿನ ಚೀಟಿಯನ್ನು ಅಳಿಸಲು ಸಾಧ್ಯವಾಗುತ್ತದೆ. ಯಾವುದೇ ಕಾನೂನಾತ್ಮಕ ವ್ಯಾಜ್ಯದಲ್ಲಿ ಸಿಲುಕಿದ ಗುರುತಿನ ಚೀಟಿಗಳನ್ನು ಅಳಿಸಲು ಸಾಧ್ಯವಿಲ್ಲ. ಅವುಗಳಲ್ಲಿನ ಮಾಹಿತಿಯನ್ನೂ ಅಳಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವಾಲಯವು ವಿವರಿಸಿದೆ.

ಯಾವೆಲ್ಲ ವ್ಯವಸ್ಥೆಗಳು ಈ ಯೋಜನೆಯ ಭಾಗ?

ಆಧುನಿಕ ವೈದ್ಯಕೀಯ ಪದ್ಧತಿ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಈ ಎರಡಕ್ಕೂ ನೆರವಾಗುವಂತೆ ಆರೋಗ್ಯ ಗುರುತಿನ ಚೀಟಿ ರೂಪಿಸಲಾಗಿದೆ. ಆರೋಗ್ಯಸೇವೆ ವೃತ್ತಿಪರ ನೋಂದಣಿ (ಎಚ್‌ಆರ್‌ಆರ್), ಆರೋಗ್ಯ ಸೇವೆಯ ಸೌಲಭ್ಯ ನೋಂದಣಿ (ಎಚ್‌ಎಫ್‌ಆರ್‌) ವ್ಯವಸ್ಥೆಗಳು ಇದರಡಿ ಕೆಲಸ ಮಾಡಲಿವೆ. ಡಿಜಿಟಲ್ ಇಂಡಿಯಾ, ಜನಧನ್‌, ಆಧಾರ್, ಹಾಗೂ ಮೊಬೈಲ್‌,ಟೆಲಿಮಿಡಿಸಿನ್, ಆರೋಗ್ಯ ಇಲಾಖೆ, ರಾಜ್ಯ ಸರ್ಕಾರಗಳ ಆರೋಗ್ಯ ಘಟಕಗಳು, ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ಹಲವು ವ್ಯವಸ್ಥೆಗಳು ಈ ಯೋಜನೆಯ ಭಾಗವಾಗಿರಲಿವೆ.

ಈಗಾಗಲೇ ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಈಗ ಇಡೀ ದೇಶಕ್ಕೆ ವಿಸ್ತರಿಸಲಾಗುತ್ತಿದೆ.ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು (ಪಿಎಂ–ಜೆಎವೈ) ಮೂರು ವರ್ಷಗಳನ್ನು ಪೂರೈಸುತ್ತಿರುವ ವೇಳೆಯಲ್ಲಿ ಯೋಜನೆಯ ಡಿಜಿಟಲ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ.

ಆರೋಗ್ಯ ಕಾರ್ಡ್‌: ನೋಂದಣಿ ಮಾಡಿ ಕೊಳ್ಳುವುದು ಹೇಗೆ?

ಹೆಲ್ತ್‌ ಕಾರ್ಡ್‌ ವೆಬ್‌ ಪೋರ್ಟಲ್‌ (https://healthid.ndhm.gov.in) ಮೂಲಕ ಅಥವಾ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ (ಎಬಿಡಿಎಂ) ಹೆಲ್ತ್‌ ಕಾರ್ಡ್‌ ಅಪ್ಲಿಕೇಶನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇಲ್ಲವೇ ಸರ್ಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಆರೋಗ್ಯ ಕಾರ್ಡ್‌ ನೋಂದಣಿಗೆ ಮನವಿ ಮಾಡಬಹುದು.

ಇದಕ್ಕಾಗಿ ಬೇಕಾದ ಪ್ರಮುಖ ದಾಖಲೆಗಳು ಆಧಾರ್‌ ಸಂಖ್ಯೆ ಇಲ್ಲವೇ ಮೊಬೈಲ್‌ ಸಂಖ್ಯೆ.

ಆಧಾರ್‌ ಸಂಖ್ಯೆ ಮೂಲಕ ನೋಂದಣಿ ಮಾಡಿಸುವುದಾದಲ್ಲಿ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ, ಆಧಾರ್‌ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನೀಡಬೇಕು.‌ ಆಧಾರ್‌ ಸಂಖ್ಯೆಯನ್ನು ಜೋಡಿಸಲು ಬಯಸದವರು ಮೊಬೈಲ್‌ ಸಂಖ್ಯೆ ಮೂಲಕ ನೋಂದಣಿ ಮಾಡಿಸಬಹುದು. ಅಲ್ಲಿ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ, ಮೊಬೈಲ್‌ ಸಂಖ್ಯೆಯ ವಿವರ ನೀಡಬೇಕು. ಅದರೊಂದಿಗೆ, ವ್ಯಕ್ತಿಯ ವಾಸಸ್ಥಳ, ಪ್ರದೇಶ, ಕೌಟುಂಬಿಕ ವಿವರ ಹಾಗೂ ಅವರ ಸಂಪರ್ಕ ಮಾಹಿತಿಯನ್ನೂ ಒಳಗೊಂಡಿರುತ್ತದೆ.

ಡಿಜಿಟಲ್‌ ಆರೋಗ್ಯ ಕಾರ್ಡ್‌: ಕಾರ್ಯನಿರ್ವಹಣೆ ಹೇಗೆ?

ಈ ಆರೋಗ್ಯ ಕಾರ್ಡ್‌ನಲ್ಲಿ ವ್ಯಕ್ತಿಯು ಚಿಕಿತ್ಸೆ ಪಡೆದ ಆಸ್ಪತ್ರೆ, ವೈದ್ಯರ ವಿವರ, ವೈದ್ಯಕೀಯ ಪರೀಕ್ಷೆ, ಸೂಚಿಸಿದ ಔಷಧಿಗಳ ಮಾಹಿತಿ ಇರುತ್ತದೆ. ಒಂದು ವೇಳೆ, ವ್ಯಕ್ತಿಯು ಬೇರೊಂದು ಊರಿನ ವೈದ್ಯರನ್ನು ಕಾಣಬೇಕಾಗಿ ಬಂದರೂ ಆರೋಗ್ಯ ಕಾರ್ಡ್‌ನಲ್ಲಿ ಆತನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳು ಸಿಗುತ್ತವೆ. ಹೀಗಾಗಿ, ವ್ಯಕ್ತಿಗೆ ಸಂಬಂಧಿಸಿದ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಿ ನಿರ್ವಹಿಸಲು ಹಾಗೂ ತ್ವರಿತ ಮತ್ತು ಸಮರ್ಪಕ ಚಿಕಿತ್ಸೆ ನೀಡಲು ವೈದ್ಯರಿಗೆ ಅನುಕೂಲವಾಗುತ್ತದೆ.

ಖಾಸಗಿತನ ಮತ್ತು ಹಕ್ಕುಗಳ ಉಲ್ಲಂಘನೆಯ ಅಪಾಯವಿದೆಯೇ?

ಈ ಯೋಜನೆಗಾಗಿಯೇ ಆರೋಗ್ಯ ಸಚಿವಾಲಯವು ದತ್ತಾಂಶ ನಿರ್ವಹಣಾ ನೀತಿ ಮತ್ತು ಖಾಸಗಿತನ ನೀತಿಯನ್ನು ರಚಿಸಿದೆ. ಈ ನೀತಿಗಳ ಪ್ರಕಾರ ದತ್ತಾಂಶ ಸಂಗ್ರಹ, ಸಂಸ್ಕರಣೆ ಮತ್ತು ಹಂಚಿಕೆಗೂ ಮುನ್ನ ಸಂಬಂಧಿತ ವ್ಯಕ್ತಿಯ ಒಪ್ಪಿಗೆ ಪಡೆಯಬೇಕಿರುವುದು ಕಡ್ಡಾಯ. ಆದರೆ ಈ ನೀತಿಗಳಲ್ಲಿ ದತ್ತಾಂಶ ರಕ್ಷಣೆ ಬಗ್ಗೆ ಸ್ಪಷ್ಟವಾದ ನಿಯಮಗಳು ಇಲ್ಲ.

ದತ್ತಾಂಶ ನಿರ್ವಹಣೆ ನೀತಿಯ ಪ್ರಕಾರ, ಕೇಂದ್ರ ಆರೋಗ್ಯ ಸಚಿವಾಲಯವು ಆರೋಗ್ಯ ಗುರುತುಚೀಟಿ ಪೋರ್ಟಲ್‌ನಲ್ಲಿ ಇರುವ ಎಲ್ಲಾ ದತ್ತಾಂಶಗಳ ನಿಯಂತ್ರಣದ ಸಂಪೂರ್ಣ ಅಧಿಕಾರ ಹೊಂದಿರುತ್ತದೆ. ಆರೋಗ್ಯ ಸಚಿವಾಲಯದ ಅಧೀನ ಸಂಸ್ಥೆಗಳು, ಆರೋಗ್ಯ ಸೇವಾ ಕೇಂದ್ರಗಳು (ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ಕ್ಲಿನಿಕ್‌ಗಳು) ಮತ್ತು ಇತರೆ ಸಂಸ್ಥೆಗಳು ಈ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಈ ನೀತಿಯ 1ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಈ ಎಲ್ಲಾ ಸಂಸ್ಥೆಗಳಿಗೆ ಆರೋಗ್ಯ ಸಚಿವಾಲಯವು ಒಂದು ಗುರುತಿನ ಸಂಖ್ಯೆ ನೀಡುತ್ತದೆ. ಆ ಗುರುತಿನ ಸಂಖ್ಯೆಯನ್ನು ನಮೂದಿಸಿಯಷ್ಟೇ ದತ್ತಾಂಶವನ್ನು ಪಡೆಯಲು ಸಾಧ್ಯ.

ಈ ನೀತಿಯ 1ನೇ ಸೆಕ್ಷನ್‌ನಲ್ಲಿ ‘ಇತರೆ ಸಂಸ್ಥೆಗಳು’ ಎಂದು ನಮೂದಿಸಲಾಗಿದೆ. ಆ ಸಂಸ್ಥೆಗಳು ಯಾವುವು ಎಂಬುದನ್ನು ಸಚಿವಾಲಯವು ಸ್ಪಷ್ಟಪಡಿಸಿಲ್ಲ. ಆದರೆ ಈ ನೀತಿಯ 2ನೇ ಜಿ ಸೆಕ್ಷನ್‌ನಲ್ಲಿ ಔಷಧ ತಯಾರಕ ಕಂಪನಿಗಳು, ವೈದ್ಯಕೀಯ ಉಪಕರಣ ತಯಾರಕರು, ಔಷಧ ಮತ್ತು ವೈದ್ಯಕೀಯ ಉಪಕರಣ ತಯಾರಕರಿಗೆ ಈ ದತ್ತಾಂಶ ನೀಡಲಾಗುತ್ತದೆ ಎಂದು ಸೂಚಿಸಲಾಗಿದೆ. ಇಂತಹ ಕಂಪನಿಗಳಿಗೂ ಆರೋಗ್ಯ ಸಚಿವಾಲಯವು ಗುರುತಿನ ಸಂಖ್ಯೆ ನೀಡುತ್ತದೆ. ಅದನ್ನು ಬಳಸಿಕೊಂಡು ಈ ಕಂಪನಿಗಳು ದತ್ತಾಂಶಗಳನ್ನು ಬಳಸಿಕೊಳ್ಳಬಹುದು.

ಆರೋಗ್ಯ ಗುರುತಿನ ಚೀಟಿಯಲ್ಲಿ ನಮೂದಿಸಲಾಗುವ ಎಲ್ಲಾ ವಿವರಗಳು ಔಷಧ ಮತ್ತು ವೈದ್ಯಕೀಯ ಉಪಕರಣ ತಯಾರಕರಿಗೆ ಸುಲಭವಾಗಿ ದೊರೆಯುತ್ತದೆ. ಇದರಿಂದ ನಾಗರಿಕರ ಆರೋಗ್ಯ, ಕಾಯಿಲೆಗಳು, ಆರ್ಥಿಕ ಸ್ಥಿತಿಗತಿ, ವಿಮೆ ವಿವರ, ಚಿಕಿತ್ಸೆ ವಿವರ ಎಲ್ಲವೂ ಈ ಕಂಪನಿಗಳಿಗೆ ದೊರೆಯುತ್ತದೆ. ಈ ವಿವರಗಳು ದೊರೆತರೆ ತಯಾರಕ ಕಂಪನಿಗಳು ಔಷಧ ಮತ್ತು ವೈದ್ಯಕೀಯ ಉಪಕರಣಗಳ ಬೆಲೆ ಮತ್ತು ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಪಾಯವಿದೆ. ಅಂತಿಮವಾಗಿ ಇದರಿಂದ ನಾಗರಿಕರಿಗೆ ತೊಂದರೆಯಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸೆಕ್ಷನ್‌ 2ರಲ್ಲಿ ವಿವರಿಸಲಾಗಿರುವ ಆರೋಗ್ಯ ಸಂಸ್ಥೆಗಳ ಕಲಂ ಅಡಿ ಸರ್ಕಾರಿ ಆಸ್ಪತ್ರೆಗಳು, ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕ್ಲಿನಿಕ್‌ಗಳನ್ನೂ ಸೇರಿಸಲಾಗಿದೆ. ದತ್ತಾಂಶ ನಿರ್ವಹಣಾ ನೀತಿಯ ಪ್ರಕಾರ ಈ ಎಲ್ಲಾ ಸಂಸ್ಥೆಗಳಿಗೆ, ಅಲ್ಲಿನ ವೈದ್ಯರಿಗೆ ಮತ್ತು ಸಂಬಂಧಿತ ಸಿಬ್ಬಂದಿಗೆ ಗುರುತಿನ ಚೀಟಿ ಪೋರ್ಟಲ್‌ನ ಸಂಪೂರ್ಣ ದತ್ತಾಂಶ ದೊರೆಯುತ್ತದೆ. ವ್ಯಕ್ತಿಗಳ ವೈಯಕ್ತಿಕ ಆರೋಗ್ಯದ ವಿವರಗಳು ಎಲ್ಲರಿಗೂ ಲಭ್ಯವಾಗುತ್ತವೆ. ಅತ್ಯಂತ ಖಾಸಗಿಯಾದ ವಿವರಗಳು ಬಹಿರಂಗವಾಗುವ ಅಪಾಯವಿದೆ. ಈ ವಿವರಗಳನ್ನು ಬಳಸಿಕೊಂಡು ಸಂಬಂಧಿತ ವ್ಯಕ್ತಿಯಿಂದ ಹಣ ವಸೂಲಿ ಮಾಡುವ, ಬೆದರಿಸುವ, ತಮ್ಮ ಪರವಾಗಿ ಕೆಲಸ ಮಾಡಿಸಿಕೊಳ್ಳುವ ಎಲ್ಲಾ ರೀತಿಯ ಅಪಾಯಗಳಿಗೂ ಈ ವ್ಯವಸ್ಥೆಯಲ್ಲಿ ಆಸ್ಪದವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆಧಾರ: ಹೆಲ್ತ್‌ ಐಡಿ ಪೋರ್ಟಲ್, ಹೆಲ್ತ್‌ ಐಡಿಯ ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ, ಹೆಲ್ತ್‌ ಐಡಿಯ ಖಾಸಗಿತನ ನೀತಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT