ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ| ಮನಸ್ಸಿನ ಮೌಢ್ಯಕ್ಕೆ ನರಬಲಿ

Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಸತ್ತವರು ಕ್ಷುದ್ರ ಶಕ್ತಿಯ ಪ್ರಭಾವದಿಂದ ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಸುಶಿಕ್ಷಿತ ದಂಪತಿಯು ತಮ್ಮ ಇಬ್ಬರು ಪುತ್ರಿಯರನ್ನು ಹೊಡೆದು ಕೊಂದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಿಂದ ವರದಿಯಾಗಿದೆ. ಇದು ದೇಶದಲ್ಲಿ ವರದಿಯಾದ ಇಂಥ ಮೊದಲ ಘಟನೆಯಲ್ಲ. ಬಹುಶಃ ಕೊನೆಯ ಘಟನೆಯೂ ಆಗಿರಲಾರದು.

ಇಂಥ ಕುರುಡು ನಂಬಿಕೆಗಳು, ಮಾಟ–ಮಂತ್ರಗಳಿಗೆ ಬಲಿಯಾಗುವವರ ಲೆಕ್ಕವೇ ಸಿಗದು. ಇಂಥ ಘಟನೆಗಳು ಗೌಪ್ಯವಾಗಿ ನಡೆಯುವುದರಿಂದ ನಿಗಾ ಇರಿಸುವುದೂ ಕಷ್ಟ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ನರಬಲಿಯ ಬಲಿಪಶುಗಳು.

ದೇಶ–ಕಾಲಾತೀತ

ಇಂಥ ನಂಬಿಕೆಗಳು ಭಾರತಕ್ಕಷ್ಟೇ ಸೀಮಿತವಲ್ಲ. ಜಗತ್ತಿನಲ್ಲಿ ಶೇ 90ಕ್ಕೂ ಹೆಚ್ಚು ಜನರು ಪುನರ್ಜನ್ಮದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಅಧ್ಯಯನದ ವರದಿಗಳು ಹೇಳುತ್ತವೆ. ದೇವರು, ಸ್ವರ್ಗ–ನರಕ ಎಂಬುದೆಲ್ಲಾ ಅಲೌಕಿಕ ಕಲ್ಪನೆಗಳು ಎಂದು ಒಪ್ಪಲು ಸಿದ್ಧರಿರುವವರ ಸಂಖ್ಯೆ ಅತಿ ವಿರಳ. ವಿಜ್ಞಾನಿಗಳಲ್ಲೂ ಸಾಕಷ್ಟು ಮಂದಿ ದೆವ್ವ, ಭೂತ–ಪ್ರೇತಗಳನ್ನು ನಂಬುವವರಿದ್ದಾರೆ. ದೇವರ ಅಸ್ತಿತ್ವದ ಬಗ್ಗೆ ವಿಜ್ಞಾನಿಗಳಲ್ಲಿ ಹೆಚ್ಚಿನವರು ಮಾತನಾಡದಿರಬಹುದು, ಆದರೆ ದೈವಭಕ್ತಿಯನ್ನು ಹೊಂದಿರುತ್ತಾರೆ. ದೇಶ– ಕಾಲ, ಸಂಸ್ಕೃತಿ, ಧರ್ಮ ಎಲ್ಲವನ್ನೂ ಮೀರಿ ಜಗತ್ತಿನಾದ್ಯಂತ ಇಂಥ ನಂಬಿಕೆಗಳು ಇವೆ ಎಂದು ಅಧ್ಯಯನ ಹೇಳುತ್ತದೆ.

ಅಲೌಕಿಕ ಶಕ್ತಿಗಳ ಇರುವಿಕೆ ಹಾಗೂ ಪುನರ್ಜನ್ಮದಲ್ಲಿ ನಂಬಿಕೆ ಎಂಬುದು ಮಾನವ ಹುಟ್ಟುವಾಗಲೇ ಅವನ ತಲೆಯೊಳಗೆ ನುಸುಳಿರುತ್ತದೆ ಎಂಬಷ್ಟು ಸಹಜವಾಗಿದೆ. ನಾವೇಕೆ ಇವುಗಳನ್ನು ನಂಬುತ್ತೇವೆ ಎಂಬುದು ಗೊತ್ತಿಲ್ಲದಿದ್ದರೂ ನಂಬುತ್ತೇವೆ. ಮಾನವ ವಿಕಾಸದ ಹಾದಿಯಲ್ಲಿ ನೈಸರ್ಗಿಕವಾಗಿ ನಮ್ಮ ಒಳಗೆ ಸೇರಿಕೊಂಡಿರುವ ಈ ಭಾವನೆಗಳು, ಆ ನಂತರದಲ್ಲಿ ನಮ್ಮೊಳಗೆ ಮೂಡುವ ಅನೇಕ ಭಾವನೆಗಳಿಗೆ ಅಡಿಪಾಯವಾಗಿ ಕೆಲಸ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಧರ್ಮ ಮತ್ತು ನಾಸ್ತಿಕತೆ ಎರಡೂ ಮಾನವನ ಮನಸ್ಸಿನ ಮೂಲ ಪ್ರಚೋದನೆಗೆ ಕಾರಣವಾಗುವ ವಿಚಾರಗಳು ಎಂದು ಕೆಲವು ವರ್ಷಗಳ ಹಿಂದೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ 57 ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿತ್ತು. ದೇವರು ಮತ್ತು ಪುನರ್ಜನ್ಮ ಕುರಿತ ವಿಚಾರಗಳನ್ನು ಜನರಿಗೆ ಬೋಧಿಸಲಾಗುತ್ತದೆಯೇ ಅಥವಾ ಮಾನವ ಸ್ವಭಾವದ ಮೂಲ ಅಭಿವ್ಯಕ್ತಿಗಳೇ ಎಂಬುದನ್ನು ತಿಳಿಯಲು ಈ ಅಧ್ಯಯನ ನಡೆಸಲಾಗಿತ್ತು.

‘ಐದು ವರ್ಷಕ್ಕೂ ಸಣ್ಣ ವಯಸ್ಸಿನ ಮಕ್ಕಳು ಮಾನವನ ಮಿತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಸುಲಭವಾಗಿ ಅಲೌಕಿಕ ಶಕ್ತಿಗಳ ಬಗ್ಗೆ ಅರ್ಥ ಮಾಡಿಕೊಳ್ಳುತ್ತವೆ. ಮೂರು ವರ್ಷದೊಳಗಿನ ಮಕ್ಕಳು ನಮ್ಮ ಅಮ್ಮ ಮತ್ತು ದೇವರು ಎಲ್ಲಾ ವಿಷಯಗಳನ್ನು ತಿಳಿದಿರುತ್ತಾರೆ ಎಂಬ ಭಾವನೆ ಹೊಂದಿರುತ್ತಾರೆ. ನಾಲ್ಕನೇ ವರ್ಷಕ್ಕೆ ಬರುವಾಗ ಅಮ್ಮನಿಗೆ ಎಲ್ಲವೂ ತಿಳಿದಿರುವುದಿಲ್ಲ ಎಂಬುದು ಅವರಿಗೆ ಮನವರಿಕೆಯಾಗುತ್ತದೆಯಾದರೂ ಅಲೌಕಿಕ ಶಕ್ತಿಗಳ ಮೇಲಿನ ನಂಬಿಕೆ ಕಡಿಮೆಯಾಗುವುದಿಲ್ಲ’ ಎಂಬುದು ಅಧ್ಯಯನದಿಂದ ತಿಳಿದುಬಂದಿತ್ತು.

ಧರ್ಮ– ನಂಬಿಕೆ ಕಾರಣವೇ?

ಧರ್ಮ– ದೇವರ ಮೇಲಿನ ಅತಿಯಾದ ನಂಬಿಕೆಯೇ ಮನುಷ್ಯನನ್ನು ಇಂಥ ಕೃತ್ಯಗಳಿಗೆ ಪ್ರೇರೇಪಿಸುತ್ತದೆ ಎಂದು ವಾದಿಸುವರಿದ್ದಾರೆ. ಆದರೆ, ‘ಮನುಷ್ಯನ ಅಂತರಾಳದಲ್ಲಿಯ ಭಯ ಮತ್ತು ಅಸ್ಥಿರತೆಯ ಭಾವನೆಗಳು ಇಂಥ ನಂಬಿಕೆಗಳ ಮೂಲ ಭೂಮಿಕೆಯಾಗಿವೆ’ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.

ಮಾನವ ವಿಕಾಸದ ಹಂತದಲ್ಲಿ ನಿಸರ್ಗದ ಕೌತುಕಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮನುಷ್ಯ ದೆವ್ವ, ಭೂತ, ಅತಿಮಾನುಷ ಶಕ್ತಿಗಳು ಎಂದೆಲ್ಲ ಅವುಗಳನ್ನು ಗುರುತಿಸಿ, ಒಂದು ಭ್ರಮಾಲೋಕ ಸೃಷ್ಟಿಸಿ ತಾತ್ಕಾಲಿಕ ಸಮಾಧಾನ ಮಾಡಿಕೊಂಡ. ಕಾಲಾಂತರದಲ್ಲಿ ಅದು ಮನುಷ್ಯನ ಮನಸ್ಸಿನಲ್ಲಿ ದಟ್ಟವಾಗಿ ಮೂಡಿಬಿಟ್ಟಿತು. ವಿಜ್ಞಾನ ಬೆಳೆದಂತೆ, ಇಂಥ ಘಟನೆಗಳ ಮರ್ಮವು ಮನುಷ್ಯನಿಗೆ ಅರ್ಥವಾಗಲು ಆರಂಭವಾದರೂ ಹಿಂದಿನ ತನ್ನ ಸೀಮಿತ ಪರಿಧಿಯಿಂದ ಹೊರಬರಲಾಗದೆ ಆತ ಪರದಾಡುತ್ತಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಾಟ–ಮಂತ್ರಕ್ಕೆ 2 ಸಾವಿರ ಬಲಿ

ದೇಶದಲ್ಲಿ ಮಾಟ–ಮಂತ್ರ ಮತ್ತು ಭೂತ, ಪ್ರೇತ ಬಿಡಿಸುವುದರ ಹೆಸರಿನಲ್ಲಿ ಅಮಾಯಕ ಮಹಿಳೆಯರು ಹಾಗೂ ಮಕ್ಕಳನ್ನು ಬಲಿಗೊಡಲಾಗುತ್ತಿದೆ. 2000ನೇ ಇಸ್ವಿಯಿಂದ 2014ರ ಅವಧಿಯಲ್ಲಿ 2,290 ಮಹಿಳೆಯರು ವಾಮಾಚಾರ ಮೊದಲಾದ ಕೃತ್ಯಗಳಿಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೊ (ಎನ್‌ಸಿಆರ್‌ಬಿ) ವರದಿಯಲ್ಲಿ ಮಾಹಿತಿ ಇದೆ.

ಬಿಹಾರದಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದ ಇಂತಹ ಪ್ರಕರಣಗಳು, ಕ್ರಮೇಣ ಅಸ್ಸಾಂ, ಜಾರ್ಖಂಡ್‌ ರಾಜ್ಯಗಳಲ್ಲಿ ಹೆಚ್ಚತೊಡಗಿದವು. 14 ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ 464 ಮಹಿಳೆಯರು ಇದಕ್ಕೆ ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ವಾಮಾಚಾರಕ್ಕೆ ಬಲಿಯಾದ ಐವರಲ್ಲಿ ಒಬ್ಬ ಮಹಿಳೆ ಜಾರ್ಖಂಡ್‌ಗೆ ಸೇರಿದವಳು ಎಂಬಷ್ಟರ ಮಟ್ಟಿಗೆ ಅಲ್ಲಿ ಅತೀಂದ್ರೀಯ ಶಕ್ತಿಗಳ ಹೆಸರಿನಲ್ಲಿ ಅನಾಚಾರ ನಡೆಯುತ್ತಿದೆ.

ಹರಿಯಾಣದಲ್ಲಿ 2005ರಿಂದ 2010ರ ಅವಧಿಯಲ್ಲಿ ಇಂತಹ 204 ಪ್ರಕರಣಗಳು ವರದಿಯಾಗಿವೆ. ಸರ್ಕಾರ ಎಚ್ಚೆತ್ತುಕೊಂಡಿದ್ದರಿಂದ ಮುಂದಿನ ವರ್ಷಗಳಲ್ಲಿ ಇಂತಹ ಪ್ರಕರಣಗಳು ಗಣನೀಯವಾಗಿ ತಗ್ಗಿದವು.

2019ರ ಎನ್‌ಸಿಆರ್‌ಬಿ ವರದಿ ಪ್ರಕಾರ ಛತ್ತೀಸಗಡ (22 ಪ್ರಕರಣ) ಮೊದಲ ಸ್ಥಾನದಲ್ಲಿದ್ದರೆ,ಜಾರ್ಖಂಡ್ ಮೂರನೇ (15 ಪ್ರಕರಣ) ಸ್ಥಾನದಲ್ಲಿದೆ.

ಬುಡಕಟ್ಟು ಜನರಲ್ಲಿ ಹೆಚ್ಚು

ಬುಡಕಟ್ಟು ಜನರ ಜೀವನ ಪದ್ಧತಿಗಳು, ಕಡಿಮೆ ಸಾಕ್ಷರತೆ, ಮಕ್ಕಳ ಅಪೌಷ್ಟಿಕತೆ ಮತ್ತು ತಾಯಂದಿರ ಮರಣ, ಅನಾರೋಗ್ಯಕ್ಕೆ ತಕ್ಷಣ ಸಿಗದ ಚಿಕಿತ್ಸೆ ಮೊದಲಾದ ಕಾರಣಗಳನ್ನು ಇದಕ್ಕೆ ಗುರುತಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಿಂದ ದೂರದಲ್ಲಿರುವ ಜನರೇ ಇದಕ್ಕೆ ಹೆಚ್ಚು ತುತ್ತಾಗುತ್ತಾರೆ.

ವಾಮಾಚಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸರಿಯಾಗಿ ಆಗಿಲ್ಲ ಎಂಬುದು ಈ ಅಂಕಿ ಅಂಶಗಳಿಂದ ತಿಳಿಯುತ್ತದೆ. ಅನೇಕ ಸಂದರ್ಭಗಳಲ್ಲಿ, ಸಂತ್ರಸ್ತರ ಸಂಬಂಧಿಕರೇ ಇದರ ಸಂಚುಕೋರರಾಗಿರುತ್ತಾರೆ. ವಿಧವೆಯರನ್ನು ಅಥವಾ ಒಂಟಿ ಮಹಿಳೆಯರನ್ನು ವಾಮಾಚಾರದ ಕೂಪಕ್ಕೆ ತಳ್ಳಲಾಗುತ್ತದೆ.

ಮಹಿಳೆಯರಿಗೆ ಮಾಟಗಾತಿಯ ಪಟ್ಟ ಕಟ್ಟಿ, ಅವರನ್ನು ಹತ್ಯೆ ಮಾಡುವುದೂ ಒಳಗೊಂಡಂತೆ ಇಂತಹ ಪ್ರಕರಣಗಳು ಭಾರತದ ಸಂವಿಧಾನದ 14, 15 ಮತ್ತು 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಮೂಲಭೂತ ಹಕ್ಕುಗಳ ಉಲ್ಲಂಘನೆ ಎನಿಸಿವೆ.

ಎಲ್ಲೆಲ್ಲಿದೆ ಕಾಯ್ದೆ?

ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳು ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತಂದಿವೆ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಒಡಿಶಾ, ಅಸ್ಸಾಂ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳು ಮೌಢ್ಯ ನಿಷೇಧ ಕಾಯ್ದೆಗಳನ್ನು ಜಾರಿಗೆ ತಂದಿದ್ದರೂ, ಅನುಷ್ಟಾನ ನಿರೀಕ್ಷಿತ ಮಟ್ಟಿಗೆ ಆಗಿಲ್ಲ.

ಕರ್ನಾಟಕದ ಮೌಢ್ಯ ನಿಷೇಧ ಕಾಯ್ದೆ

‘ಮೌಢ್ಯ ನಿಷೇಧ ಕಾಯ್ದೆ’ಯನ್ನು ಕರ್ನಾಟಕ ರಾಜ್ಯ ಸರ್ಕಾರವು 2020ರ ಜನವರಿಯಲ್ಲಿ ಜಾರಿ ಮಾಡಿತು. ಯಾವುದಕ್ಕೆಲ್ಲಾ ನಿಷೇಧ ಹೇರಲಾಗಿದೆ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ. ಭಾನಾಮತಿ, ಮಾಟ–ಮಂತ್ರ ಮಾಡುವುದು, ವಾಮಾಚಾರ ಮಾಡುವುದು ನಿಷೇಧಿಸಲ್ಪಟ್ಟಿವೆ. ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಥವಾ ಆ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು, ದೆವ್ವ ಉಚ್ಚಾಟನೆ ಮಾಡುವ ನೆಪದಲ್ಲಿ ವಿವಿಧ ರೀತಿಯ ಹಿಂಸೆ ನೀಡುವುದು ಕಾಯ್ದೆಯ ವ್ಯಾಪ್ತಿಯಲ್ಲಿವೆ.

ನಿರ್ದಿಷ್ಟ ವ್ಯಕ್ತಿಯನ್ನು ಪಾಪಿ ಅಥವಾ ಸೈತಾನನ ಅವತಾರವೆಂದು ಘೋಷಿಸುವುದು, ಮಂತ್ರ ಪಠಿಸಿ ದೆವ್ವಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿ ಜನರಲ್ಲಿ ಗಾಬರಿ, ಭಯ ಹುಟ್ಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ತನ್ನಲ್ಲಿ ವಿಶೇಷ ಶಕ್ತಿ ಇದೆ ಎಂದು ಹೇಳುವುದು, ಪವಿತ್ರಾತ್ಮದ ಅವತಾರ ಎಂದು ಹೇಳಿಕೊಳ್ಳುವುದು, ಋತುಮತಿ, ಬಾಣಂತಿಯನ್ನು ಒಂಟಿಯಾಗಿರುವಂತೆ ಮಾಡುವುದು, ಬೆತ್ತಲೆ ಸೇವೆ, ಬೆತ್ತಲೆ ಮೆರವಣಿಗೆ ನಡೆಸುವುದು ಸರಿಯಲ್ಲ ಎಂದು ಕಾನೂನು ಹೇಳುತ್ತದೆ. ಮಡೆಸ್ನಾನವನ್ನು ಕಾಯ್ದೆ ವ್ಯಾಪ್ತಿಗೆ ತಂದಿದ್ದು ಸಾಕಷ್ಟು ವಿವಾದ ಹುಟ್ಟು ಹಾಕಿತ್ತು.

ವಾಮಾಚಾರ ಮುಂತಾದವುಗಳಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5,000 ದಿಂದ ₹50,000 ದವರೆಗೆ ದಂಡ ವಿಧಿಸಲಾಗುವುದು ಎಂದು ಕಾಯ್ದೆ ಉಲ್ಲೇಖಿಸಿದೆ.

‘ಇಬ್ಬರಲ್ಲಿ ಚಿತ್ತ ವಿಕಲತೆ ಅಪರೂಪ’

ಮದನಪಲ್ಲಿಯಲ್ಲಿ ವರದಿಯಾದ ಘಟನೆಯಲ್ಲಿ ಯುವತಿಯರ ಪೋಷಕರು ಮನೋವ್ಯಾಧಿಗೆ ಒಳಗಾಗಿದ್ದರೇ ಎಂಬುದನ್ನು ಮೌಲ್ಯ ಮಾಪನ ಮಾಡಬೇಕಾಗುತ್ತದೆ. ತಂದೆ–ತಾಯಿ ಇಬ್ಬರೂ ಒಂದೇ ರೀತಿಯ ಮನೋವ್ಯಾಧಿಗೆ ಒಳಗಾಗುವುದು ಅಪರೂಪ. ಅತಿಯಾದ ಧಾರ್ಮಿಕ ನಂಬಿಕೆ ಕೆಲವು ಸಲ ಈ ರೀತಿಯ ಕೆಲಸ ಮಾಡಿಸುತ್ತದೆ. ಅದೇ ರೀತಿ, ಮಾನಸಿಕ ಅಸ್ವಸ್ಥತೆ ಕೂಡ ಕಾರಣವಾಗುತ್ತದೆ. ಅದನ್ನು ಚಿತ್ತ ವಿಕಲತೆ ಎನ್ನಲಾಗುತ್ತದೆ. ಒಂದೇ ರೀತಿಯಾದ ಭ್ರಮೆ ನಿಕಟವರ್ತಿಗಳಲ್ಲಿ ಹಂಚಿಕೆಯಾಗುವ ಸಾಧ್ಯತೆ ಇರುತ್ತದೆ. ಪತ್ನಿ, ಮಕ್ಕಳು ಸೇರಿದಂತೆ ಆಪ್ತರಲ್ಲಿ ಒಂದೇ ರೀತಿಯ ಭ್ರಮೆ ವರ್ಗಾವಣೆಯಾಗುತ್ತದೆ. ಈ ಭ್ರಮೆ ಗಂಭೀರ ಸ್ವರೂಪ ಪಡೆದುಕೊಳ್ಳಲು ದೀರ್ಘಕಾಲ ಬೇಕಾಗುತ್ತದೆ. ಈ ರೀತಿಯ ಮಾನಸಿಕ ಕಾಯಿಲೆಗೆ ಒಳಪಟ್ಟಿರುವವರನ್ನು ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ಕಾಯಿಲೆ ವಾಸಿಮಾಡಬಹುದು.

ಡಾ. ಶಶಿಧರ್ ಎಚ್.ಎನ್.,ನಿಮ್ಹಾನ್ಸ್ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)

***

‘ಮನಸ್ಥಿತಿಗಳ ಮೇಲೆ ಪ್ರಭಾವ ಸಾಧ್ಯತೆ’

ಈ ರೀತಿಯ ಪ್ರಕರಣಗಳಲ್ಲಿ ವ್ಯಕ್ತಿಗಳು ನಿಜವಾಗಿಯೂ ಮಾನಸಿಕ ಕಾಯಿಲೆ ಎದುರಿಸುತ್ತಿದ್ದಾರೆಯೇ ಅಥವಾ ಬೇರೆಯವರ ಪ್ರಭಾವಕ್ಕೆ ಒಳಗಾಗಿದ್ದಾರೆಯೇ ಎನ್ನುವುದನ್ನು ಮೊದಲು ಗುರುತಿಸಬೇಕಾಗುತ್ತದೆ. ಧಾರ್ಮಿಕ ವಿಚಾರಧಾರೆಗಳನ್ನು ಅತಿಯಾಗಿ ನಂಬುವವರು, ಆಚರಣೆ ಮಾಡುವವರ ಮನಸ್ಥಿತಿಯ ಮೇಲೆ ಮಂತ್ರವಾದಿಗಳು ಸೇರಿದಂತೆ ಕೆಲವರು ಪ್ರಭಾವ ಬೀರಿ, ತಮ್ಮ ಲಾಭಕ್ಕಾಗಿ ಈ ರೀತಿಯ ಕೆಲಸಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳು ಇರುತ್ತವೆ. ಈ ರೀತಿಯ ಪ್ರಕರಣಗಳು ಈ ಹಿಂದೆ ಕೂಡ ವರದಿಯಾಗಿವೆ. ಹಾಗಾಗಿ ಸೂಕ್ತ ತನಿಖೆ ನಡೆಸಬೇಕಾಗುತ್ತದೆ. ಮಾನಸಿಕ ಕಾಯಿಲೆ ಇರುವುದು ದೃಢಪಟ್ಟಲ್ಲಿ ಚಿಕಿತ್ಸೆಯ ಮೂಲಕ ಅವರನ್ನು ಭ್ರಮಾ ಲೋಕದಿಂದ ಹೊರಕ್ಕೆ ಕರೆತರಬಹುದು.

ಡಾ.ಬಿ. ಕಪೂರ್,ಮನೋರೋಗ ತಜ್ಞ, ವಿಕ್ರಮ್ ಆಸ್ಪತ್ರೆ

***

‘ಜನರಲ್ಲಿ ವೈಚಾರಿಕತೆ ಬೆಳೆಯಬೇಕು’

ನಕಲಿ ದೇವಮಾನವನ ಮಾತುಗಳನ್ನು ನಂಬಿ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತವರೇ ಹತ್ಯೆ ಮಾಡಿರುವ ಘಟನೆ ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ ಅನ್ನುವುದಕ್ಕೆ ಅಪವಾದ. ಮೌಢ್ಯದಿಂದಾಗಿ ವಿದ್ಯಾವಂತರೇ ಮರುಳಾಗಿದ್ದಾರೆ. ಮನಸ್ಸನ್ನು ಸದೃಢವಾಗಿಟ್ಟುಕೊಳ್ಳುವ ಮಾನಸಿಕ ಸ್ವಚ್ಛತೆಯ ಬಗ್ಗೆಯೂ ಪಠ್ಯಕ್ರಮದಲ್ಲಿ ಪಾಠಗಳು ಇರಬೇಕು ಎನ್ನುವುದು ಇದರಿಂದ ಸಾಬೀತಾಗಿದೆ. ರ‍್ಯಾಂಕ್‌ ಪಡೆಯುವಂತೆ ಮಾಡಿದರಷ್ಟೇ ಸಾಲದು ವೈಚಾರಿಕತೆಯು ಬೆಳೆಯುವಂತೆ
ಮಾಡಬೇಕಿದೆ. ಒಬ್ಬ ವ್ಯಕ್ತಿಯ ದಿನನಿತ್ಯದ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬಂದಾಗ ಅವರನ್ನು ಆಪ್ತಸಮಾಲೋಚಕರಲ್ಲಿಗೆ ಕರೆದುಕೊಂಡು ಹೋದರೆ ಮಾನಸಿಕ ಖಿನ್ನತೆಯಿಂದ ಹೊರ ತರಲು ಅವಕಾಶ ಇದೆ.

ಹುಲಿಕಲ್ ನಟರಾಜ್,ಅಧ್ಯಕ್ಷರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್

***

ವರದಿ: ಉದಯ ಯು., ಅಮೃತ ಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT