ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಆರ್‌ಬಿಐನಲ್ಲಿ ಹಸ್ತಕ್ಷೇಪದ ಬಗ್ಗೆ ಇತ್ತು ಸರ್ಕಾರದ ನಿರಂತರ ಯತ್ನ

ರಿಪೋರ್ಟರ್ಸ್‌ ಕಲೆಕ್ಟಿವ್‌ನ ವರದಿಭಾಗ–1
Last Updated 17 ಏಪ್ರಿಲ್ 2022, 19:05 IST
ಅಕ್ಷರ ಗಾತ್ರ

ಶ್ರೀಮಂತ ದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಡ್ಡಿ ದರ ನಿಗದಿ ಮಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದ ಬಳಿಕ ಒತ್ತಾಯಿಸಿದ್ದರು. ರಿಪೋರ್ಟರ್ಸ್‌ ಕಲೆಕ್ಟಿವ್‌, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ದಾಖಲೆಗಳಿಂದ ಈ ಅಂಶವು ತಿಳಿದು ಬಂದಿದೆ.

ಬಡ್ಡಿದರವನ್ನು ಇಳಿಸುವ ಬದಲಿಗೆ ಸರಕುಗಳ ದರ ಏರಿಕೆಯನ್ನು ನಿಯಂತ್ರಿಸಲು ಆರ್‌ಬಿಐ ನಿರ್ಧರಿಸಿದ ಬಳಿಕ, ಹಣಕಾಸು ಕಾರ್ಯದರ್ಶಿ ರಾಜೀವ್‌ ಮಹರ್ಷಿ ಹೀಗೆ ಹೇಳಿದ್ದರು.

ಸರ್ಕಾರ ಮತ್ತು ಆರ್‌ಬಿಐ ಭಿನ್ನ ನಿಲುವು ಹೊಂದಿರುವುದು ಅಸಾಮಾನ್ಯ ಏನಲ್ಲ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳ ‘ಬಿಳಿ ವ್ಯಕ್ತಿ’ಗಳಿಗಾಗಿ ಆರ್‌ಬಿಐ ಕೆಲಸ ಮಾಡುತ್ತಿದೆ. ಕೇಂದ್ರೀಯ ಬ್ಯಾಂಕ್‌ನ ನಿರ್ಧಾರಗಳ ಹಿಂದಿನ ‘ನಿಜವಾದ ಉದ್ದೇಶ’ದ ಬಗ್ಗೆ ತನಿಖೆ ಆಗಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂಬುದು ಬಹಿರಂಗವಾಗಿರುವುದು ಇದೇ ಮೊದಲು.

2015ರಲ್ಲಿ ರಘುರಾಮ್‌ ರಾಜನ್‌ ಅವರು ಆರ್‌ಬಿಐ ಗವರ್ನರ್‌ ಆಗಿದ್ದರು. ರಘುರಾಮ್‌ ಅವರ ಉತ್ತರಾಧಿಕಾರಿಯಾಗಿ ಉರ್ಜಿತ್ ಪಟೇಲ್‌ ಅವರನ್ನು ಬಿಜೆಪಿ ಸರ್ಕಾರ ಆಯ್ಕೆ ಮಾಡಿತು. ಆದರೆ, ಉರ್ಜಿತ್‌ ನೇತೃತ್ವದ ಆರ್‌ಬಿಐ ಕೂಡ ಸರ್ಕಾರ ಬಯಸಿದ ಪ್ರಮಾಣದಲ್ಲಿ ಬಡ್ಡಿ ದರವನ್ನು ಕಡಿತ ಮಾಡಲಿಲ್ಲ. ಹಾಗಾಗಿ, ಹೊಸದಾಗಿ ರಚಿತವಾಗಿದ್ದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯನ್ನುಹಣಕಾಸು ಸಚಿವಾಲಯವು ಕರೆಯಿತು. ಬಡ್ಡಿದರ ಕಡಿತ ಮಾಡುವಂತೆ ಒತ್ತಡ ಹೇರುವುದು ಸಭೆಯ ಉದ್ದೇಶ ಎಂದು ದಾಖಲೆಗಳು ಹೇಳುತ್ತಿವೆ. ಈ ಸಭೆಯು ನಡೆಯಲೇ ಇಲ್ಲ. ಏಕೆಂದರೆ, ಸಮಿತಿಯ ಸದಸ್ಯರು ಸಭೆಗೆ ಬರಲು ಒಪ್ಪಲಿಲ್ಲ. ಈ ವಿಚಾರವು 2017ರಲ್ಲಿ ವ್ಯಾಪಕವಾಗಿ ವರದಿಯಾಗಿತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಗೆ 2016ರಲ್ಲಿಯೇ ಸರ್ಕಾರ ತಿದ್ದುಪಡಿ ತಂದಿತ್ತು. ಆರ್‌ಬಿಐನ ಪ್ರಾಥಮಿಕ ಕೆಲಸವಾದ ದರ ನಿಯಂತ್ರಣ ಮತ್ತು ಹಣದುಬ್ಬರಕ್ಕೆ ಕಾರಣವಾದರೂ ಅಭಿವೃದ್ಧಿಗೆ ಒತ್ತು ಕೊಡುವ ಸರ್ಕಾರದ ರಾಜಕೀಯ ಪ್ರೇರಣೆಗಳು ಒಂದರ ಮೇಲೊಂದು ಹಸ್ತಕ್ಷೇಪ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಹಾಗಿದ್ದರೂ ಮೋದಿ ನೇತೃತ್ವದ ಸರ್ಕಾರವು ಕೇಂದ್ರೀಯ ಬ್ಯಾಂಕ್‌ನ ಮೇಲೆ ಪ್ರಭಾವ ಬೀರುವ ಯತ್ನವನ್ನು ಮಾಡಿದೆ.

ಸರ್ಕಾರದ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಉರ್ಜಿತ್‌ ಯತ್ನಿಸಿದ್ದರು. ಸಾರ್ವಜನಿಕರು ಮತ್ತು ಸಂಸತ್ತಿನ ಮುಂದೆ ಹೊಸ ಆರ್ಥಿಕ ಚೌಕಟ್ಟಿನ ‘ಬದ್ಧತೆ ಮತ್ತು ವಿಶ್ವಾಸಾರ್ಹತೆ’ಯನ್ನು ರಕ್ಷಿಸುವುದಕ್ಕಾಗಿ ಆರ್‌ಬಿಐ ಮೇಲೆ ಪ್ರಭಾವ ಬೀರುವುದನ್ನು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಅವರು ಪತ್ರ ಬರೆದಿದ್ದರು.

ಭಿನ್ನಮತ ಬೆಳೆಯುತ್ತಲೇ ಹೋಯಿತು. ಉರ್ಜಿತ್‌ ಅವರು 2018ರ ಡಿಸೆಂಬರ್‌ 10ರಂದು ರಾಜೀನಾಮೆ ಕೊಟ್ಟರು. ಹಣಕಾಸು ಸಚಿವಾಲಯದ ಉನ್ನತ ಹುದ್ದೆಯಲ್ಲಿದ್ದ ಶಕ್ತಿಕಾಂತ ದಾಸ್‌ ಅವರನ್ನು ಉರ್ಜಿತ್ ಸ್ಥಾನಕ್ಕೆ ಸರ್ಕಾರ ನೇಮಿಸಿತು. ಆರ್‌ಬಿಐನ ದರ ನಿಗದಿ ಹೊಣೆಗಾರಿಕೆಯಲ್ಲಿ ಸರ್ಕಾರದ ಪ್ರಭಾವ ಹೆಚ್ಚಳವನ್ನು ದಾಸ್‌ ಸಮರ್ಥಿಸಿಕೊಂಡಿದ್ದಾರೆ ಎಂಬುದನ್ನು ಅಧಿಕೃತ ದಾಖಲೆಗಳು ಹೇಳುತ್ತವೆ.

ಭಿನ್ನ ಪಾತ್ರಗಳು: ತಾನು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರದ ಮೂಲಕ ಅರ್ಥ ವ್ಯವಸ್ಥೆಯಲ್ಲಿ ಇರುವ ಹಣದ ಮೊತ್ತ ಮತ್ತು ಸಾಲದ ಲಭ್ಯತೆಯನ್ನು ನಿಯಂತ್ರಿಸುವುದು ಆರ್‌ಬಿಐನ ಮುಖ್ಯ ಪಾತ್ರಗಳಲ್ಲಿ ಒಂದು. ಬಡ್ಡಿದರ ಕಡಿಮೆ ಇದ್ದರೆ ಅಲ್ಪಾವಧಿಯಲ್ಲಿ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಆದರೆ, ಅದು ಹಣದುಬ್ಬರಕ್ಕೆ ಕಾರಣ ಆಗಬಹುದು. ನಿಯಂತ್ರಣವಿಲ್ಲದ ಹಣದುಬ್ಬರವು ಬಡಜನರ ಕೈಯಲ್ಲಿರುವ ಹಣದ ಮೌಲ್ಯವನ್ನು ಕುಗ್ಗಿಸುತ್ತದೆ. ಅಗೋಚರ ತೆರಿಗೆಯಂತಿರುವ ಇದು ಬಡವರು ಮತ್ತು ಕಡಿಮೆ ಆದಾಯದ ಜನರ ಮೇಲೆ ಪರಿಣಾಮ ಬೀರುತ್ತದೆ.

ಹಣಕಾಸು ನೀತಿಯನ್ನು ಸರ್ಕಾರದ ನಿಯಂತ್ರಣದಿಂದ ಹೊರಗೆ ಇರಿಸಲಾಗುತ್ತದೆ. ಏಕೆಂದರೆ, ಜನರನ್ನು ಓಲೈಸುವ ಮತ್ತು ಅರ್ಥಹೀನ ಯೋಜನೆಗಳಿಗಾಗಿ ತಮ್ಮ ಸಾಮರ್ಥ್ಯವನ್ನು ಮೀರಿ ರಾಜಕಾರಣಿಗಳು ಖರ್ಚು ಮಾಡುವ ಸಾಧ್ಯತೆ ಇರುವುದರಿಂದ ಹೀಗೆ ಮಾಡಲಾಗುತ್ತದೆ.

ಹಣದುಬ್ಬರ ಮತ್ತು ಬಡ್ಡಿದರ ನಿಗದಿಯು ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ ಮತ್ತು ಸರ್ಕಾರಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು ಇದೆ. 2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ ಇದು ವಿಕಾರ ರೂಪ ಪಡೆದುಕೊಂಡಿತು. ಆ ಸಂದರ್ಭ ದಲ್ಲಿ, ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದ್ದ ದೇಶಗಳಲ್ಲಿ ಭಾರತವೂ ಒಂದಾಗಿತ್ತು.

ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸು ವುದಕ್ಕಾಗಿ ಪಾರದರ್ಶಕ ಮತ್ತು ಉತ್ತರ
ದಾಯಿಯಾದ ಹಣಕಾಸು ನೀತಿ ವ್ಯವಸ್ಥೆ ಜಾರಿಗೆ ತರುವುದಾಗಿ ಆಗಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಘೋಷಿಸಿದ್ದರು. ಆವರೆಗೆ ಬಡ್ಡಿದರವನ್ನು ನಿಗದಿ ಮಾಡುವುದು ಆರ್‌ಬಿಐ ಗವರ್ನರ್‌ ಹೊಣೆಯಾಗಿತ್ತು. ಈ ಪ್ರಕ್ರಿಯೆಯಲ್ಲಿ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಜೇಟ್ಲಿ ಘೋಷಣೆಯು ಹಳೆಯ ನೀತಿಯನ್ನು ಬದಿಗಿಟ್ಟಿತು.

ಮಹರ್ಷಿ ಮತ್ತು ಆರ್‌ಬಿಐನ ಆಗಿನ ಗವರ್ನರ್‌ ರಘುರಾಮ್‌ ನಡುವೆ ಎಂಪಿಸಿ ರಚನೆಗಾಗಿ 2015ರ ಫೆಬ್ರುವರಿಯಲ್ಲಿ ಒಪ್ಪಂದ ಏರ್ಪಟ್ಟಿತು. ಇದೇ ಮೊದಲ ಬಾರಿಗೆ ಹಣದುಬ್ಬರ ನಿಯಂತ್ರಣದ ಹೊಣೆಯನ್ನು ಆರ್‌ಬಿಐಗೆ ನೀಡಲಾಯಿತು. 2016ರ ಜನವರಿ ಹೊತ್ತಿಗೆ ಹಣದುಬ್ಬರ ದರವನ್ನು ಶೇ 6ಕ್ಕೆ ಮತ್ತು ನಂತರದ ವರ್ಷಗಳಲ್ಲಿ ಶೇ 4ಕ್ಕೆ ಇಳಿಸುವುದು ಹಾಗೂ ಮುಂದೆ ಶೇ 2ರಿಂದ ಶೇ 6ರ ಒಳಗೆ ಇರುವಂತೆ ನೋಡಿಕೊಳ್ಳುವ ಹೊಣೆಯನ್ನು ವಹಿಸಲಾಯಿತು. ಈ ಗುರಿ ಮುಟ್ಟಲು ಆರ್‌ಬಿಐ ವಿಫಲವಾದರೆ, ಸರ್ಕಾರಕ್ಕೆ ವಿವರಣೆ ನೀಡಬೇಕು ಎಂಬುದು ಒಪ್ಪಂದದ ಸಾರವಾಗಿತ್ತು.

(ರಿಪೋರ್ಟರ್ಸ್‌ ಕಲೆಕ್ಟಿವ್‌ನ ಈ ವರದಿಯ ಇಂಗ್ಲಿಷ್‌ ಅವತರಣಿಕೆಯು ‘ಅಲ್‌ ಜಝೀರಾ’ದಲ್ಲಿ ಪ್ರಕಟವಾಗಿದೆ)

-----


‘ವಿದೇಶದ ಶ್ರೀಮಂತರಿಗೆ ಸಹಾಯಧನ’

ಹಣದುಬ್ಬರದ ಕಾರಣದಿಂದಾಗಿ, 2014ರಲ್ಲಿ ರೆಪೊ ದರವನ್ನು (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿದರ) ಶೇ 8ರ ದರದಲ್ಲಿಯೇ ರಘುರಾಮ್‌ ಉಳಿಸಿಕೊಂಡಿದ್ದರು. 2015ರಲ್ಲಿ ಹಣದುಬ್ಬರದ ಒತ್ತಡ ಕುಗ್ಗಿತು. ಹೀಗಾಗಿ, ರೆಪೊ ದರವನ್ನು ಶೇ 7.25ಕ್ಕೆ ಇಳಿಸಲಾಯಿತು. ಈ ಇಳಿಕೆಯು ಸರ್ಕಾರಕ್ಕೆ ತೃಪ್ತಿ ತಂದಿರಲಿಲ್ಲ. ಜೇಟ್ಲಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್‌ ಅವರು ಆರ್‌ಬಿಐಯನ್ನು ಪದೇ ಪದೇ ಟೀಕಿಸುತ್ತಲೇ ಇದ್ದರು. ಸಾಲದ ದರವು ಬಹಳ ಹೆಚ್ಚು ಎಂಬುದು ಅವರ ಆಕ್ಷೇಪವಾಗಿತ್ತು.

ಪರದೆಯ ಹಿಂದೆ, ಭಾರಿ ಒತ್ತಡ ಹೇರಲಾಗುತ್ತಿದೆ ಎಂಬುದರ ಸುಳಿವನ್ನು ಈ ಬಹಿರಂಗ ಟೀಕೆಯು ನೀಡಿತು ಎಂಬುದನ್ನು ದಾಖಲೆಗಳು ಹೇಳುತ್ತವೆ.

2015ರ ಆಗಸ್ಟ್‌ 6ರಂದು, ಆರ್‌ಬಿಐ ದರ ನಿಗದಿ ನಿರ್ಧಾರ ಪ್ರಕಟಿಸಿ ಎರಡು ದಿನಗಳ ಬಳಿಕ, ಮಹರ್ಷಿ ಅವರು ಆಂತರಿಕ ಟಿಪ್ಪಣಿಯೊಂದರಲ್ಲಿ ಬಡ್ಡಿ ದರವನ್ನು ಶೇ 5.75ಕ್ಕೆ ಇಳಿಸಬೇಕು ಎಂದಿದ್ದರು. ಭಾರತದ ಉದ್ಯಮ ಮತ್ತು ಜನರನ್ನು ಬಲಿಕೊಟ್ಟು ವಿದೇಶದ ಶ್ರೀಮಂತ ಉದ್ಯಮಗಳಿಗೆ ಆರ್‌ಬಿಐ ನೆರವು ನೀಡುತ್ತಿದೆ. ಭಾರತದ ಅತಿಯಾದ ಬಡ್ಡಿದರದ ‘ಫಲಾನುಭವಿಗಳು’ ಶ್ರೀಮಂತ ದೇಶಗಳು ಮಾತ್ರ ಎಂದು ಟಿಪ್ಪಣಿಯಲ್ಲಿ ಮಹರ್ಷಿ ಆರೋಪಿಸಿದ್ದರು.

ಶ್ರೀಮಂತ ದೇಶಗಳಲ್ಲಿ ಬಡ್ಡಿದರವು ಭಾರತಕ್ಕಿಂತ ಕಡಿಮೆ ಇರುತ್ತದೆ. ಹಾಗಾಗಿ, ಅಲ್ಲಿನ ಹೂಡಿಕೆದಾರರು ತಮ್ಮ ಹಣವನ್ನು ಭಾರತದ ಹಣಕಾಸು ಸಂಸ್ಥೆಗಳಲ್ಲಿ ತಾತ್ಕಾಲಿಕವಾಗಿ ಇರಿಸಿ ಲಾಭ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಮಹರ್ಷಿ ಒತ್ತಾಯಿಸಿ ದ್ದರು. ಈ ಒತ್ತಾಯದ ಮೇಲೆ ‘ಚರ್ಚೆ ಅಗತ್ಯವಿದೆ’ ಎಂಬ ಟಿಪ್ಪಣಿಯನ್ನು ಆಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಬರೆದಿದ್ದರು.

ರಘುರಾಮ್‌ ನಿರ್ಗಮನವಾಗಿ ಉರ್ಜಿತ್‌ ಅವರು ಗವರ್ನರ್‌ ಹುದ್ದೆಗೇರಿದ ಬಳಿಕ 2016ರ ಸೆಪ‍್ಟೆಂಬರ್‌ನಲ್ಲಿ ಎಂಪಿಸಿ ಜಾರಿಗೆ ಬಂತು. ತಿಂಗಳ ಬಳಿಕ ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿದರವನ್ನು ಶೇ 0.25ರಷ್ಟು ಕಡಿತ ಮಾಡಲಾಯಿತು. ನೋಟು ರದ್ದತಿಯ ನಿರ್ಧಾರಕ್ಕೆ, ಆರ್‌ಬಿಐ ಆಡಳಿತ ಮಂಡಳಿಯು ಉರ್ಜಿತ್‌ ಅಧ್ಯಕ್ಷತೆಯಲ್ಲಿ ನವೆಂಬರ್‌ನಲ್ಲಿ ನಡೆಸಿದ ಸಭೆಯು ಅನಮೋದನೆ ನೀಡಿತು.

‘ದೇಶದ ಅತ್ಯಂತ ದೊಡ್ಡ ಆರ್ಥಿಕ ದುರಂತಕ್ಕೆ ಮೋದಿ ಅವರು ಆರ್‌ಬಿಐನಿಂದ ಬಲವಂತವಾಗಿ ಅನುಮೋದನೆ ಪಡೆದುಕೊಳ್ಳಲು ಉರ್ಜಿತ್‌ ಕಾರಣರಾದರು. ಈ ಮೂಲಕ, ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತೆಗೆ ಧಕ್ಕೆ ಮಾಡಲಾಯಿತು’ ಎಂದು ಕೆಲವು ಅರ್ಥಶಾಸ್ತ್ರಜ್ಞರು ಟೀಕಿಸಿದ್ದಾರೆ.

2017ರ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಎಂಪಿಸಿ ನಿಲುವು ಬದಲಾಯಿತು. ಹೊಂದಾಣಿಕೆಯ ನಿಲುವಿನ ಬದಲು ತಟಸ್ಥ ನಿಲುವಿಗೆ ಎಂಪಿಸಿ ಹೊರಳಿಕೊಂಡಿತು. ದರ ಕಡಿತಕ್ಕೆ ಇನ್ನು ಮುಂದೆ ಸಿದ್ಧವಿಲ್ಲ ಎಂಬ ಸಂದೇಶವನ್ನು ಹಣಕಾಸು ಮಾರುಕಟ್ಟೆಗೆ ಈ ನಿಲುವು ಸಾರಿತು.


---
ಒತ್ತಡ ತಂತ್ರ

ಉರ್ಜಿತ್ ಪಟೇಲ್ ಅವರು ಸರ್ಕಾರದ ಒತ್ತಡಕ್ಕೆ ಬಗ್ಗಲಿಲ್ಲ. ಹೀಗಾಗಿ, ಬಡ್ಡಿದರ ನಿಗದಿಪಡಿಸುವ ಆರ್‌ಬಿಐನ ಸ್ವತಂತ್ರ ಘಟಕವಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಮೇಲೆ ಪ್ರಭಾವ ಬೀರಲು ಹಣಕಾಸು ಸಚಿವಾಲಯವು ಯತ್ನಿಸಿತು. ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್‌ ಹಾಗೂ ಅಂದಿನ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಆರ್‌ಬಿಐನ ನಾಮನಿರ್ದೇಶಿತ ಮೂವರು ಸದಸ್ಯರ ಜೊತೆ ಸಭೆ ನಡೆಸಬೇಕು ಎಂಬುದಾಗಿ ಜೇಟ್ಲಿ ಹಾಗೂ ಅಂದಿನ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ನಡುವಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಗವರ್ನರ್ ಸೇರಿದಂತೆ ಆರ್‌ಬಿಐನ ಮೂವರು ಸದಸ್ಯರು ಹಾಗೂ ನಾಮನಿರ್ದೇಶಿತವಾದ ಮೂವರು ತಜ್ಞರು ಸಮಿತಿಯ ಸದಸ್ಯರಾಗಿರುತ್ತಾರೆ. ಸರ್ಕಾರವು ಬರಹದ ಮೂಲಕ ಮಾತ್ರ ತನ್ನ ಅಭಿಪ್ರಾಯವನ್ನು ಸಮಿತಿಯ ಮುಂದೆ ಇರಿಸಬಹುದು. ಸಮಿತಿಯ ಸದಸ್ಯರನ್ನು ಸರ್ಕಾರದ ಅಧಿಕಾರಿಗಳು ಭೇಟಿಯಾಗುವಂತಿಲ್ಲ, ಅವರ ಮೇಲೆ ಯಾವ ರೀತಿಯಲ್ಲೂ ಪ್ರಭಾವ ಬೀರುವಂತಿಲ್ಲ.

ಈ ನಿಯಮವನ್ನು ಉಲ್ಲಂಘಿಸಿ, 2017ರ ಮೇ 17ರಂದು ಹಣಕಾಸು ಸಚಿವಾಲಯವು ಪ್ರತಿಯೊಬ್ಬ ಎಂಪಿಸಿ ಸದಸ್ಯರಿಗೆ ಪತ್ರ ಬರೆದಿತ್ತು. ಹಣದುಬ್ಬರ, ಆರ್ಥಿಕ ಬೆಳವಣಿಗೆ ಮೊದಲಾದ ವಿಚಾರಗಳ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ತಿಳಿಸಲು ಎಂಪಿಸಿ ಸದಸ್ಯರ ಜೊತೆ ಕಾಲಕಾಲಕ್ಕೆ ಸಂಪರ್ಕ ಸಾಧಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಸಮಿತಿಯ ಸಭೆಗೂ ಮುನ್ನ, ಅಂದರೆ, 2017ರ ಜೂನ್ 1ರಂದು ಸುಬ್ರಮಣ್ಯನ್‌ ಅವರು ಆರ್‌ಬಿಐ ಹೊರಗಿನ ಮೂವರು ತಜ್ಞ ಸದಸ್ಯರನ್ನು ಭೇಟಿಗೆ ಬರುವಂತೆ ಕರೆದಿದ್ದರು.

ಉರ್ಜಿತ್ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ, ಎಂಪಿಸಿ ಸಭೆಯ ಕುರಿತು ಆರ್‌ಬಿಐ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವಂತೆ ಹಣಕಾಸು ಸಚಿವಾಲಯ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ನೀಡಲಾಗಿತ್ತು. ದೇಶದ ಆರ್ಥಿಕ ಸ್ಥಿತಿಗತಿ ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರರು ಚರ್ಚೆ ನಡೆಸಲಿದ್ದಾರೆ ಎಂದು ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಸ್ವತಂತ್ರ ಹಣಕಾಸು ನೀತಿ ಸಮಿತಿ ಸ್ಥಾಪಿಸುವ ಆರ್‌ಬಿಐ ಕಾಯ್ದೆಯ ಆಶಯಕ್ಕೆ ಇದು ವಿರುದ್ಧವಾಗಿದೆ ಎಂಬುದನ್ನು ಉರ್ಜಿತ್‌ ಒತ್ತಿ ಹೇಳಿದ್ದರು. ಒಕ್ಕೂಟ ಸರ್ಕಾರವು ತನ್ನ ಅಭಿಪ್ರಾಯವನ್ನು ಬರಹದ ಮೂಲಕ ತಿಳಿಸಬಹುದು. ಬೇರಾವ ವಿಧದಲ್ಲಿ ಅಭಿಪ್ರಾಯ ತಿಳಿಸಿದರೂ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂಬುದನ್ನು ಜೇಟ್ಲಿಗೆ ನೆನಪಿಸಿದ್ದರು.

‘ಹಣಕಾಸು ಸಚಿವಾಲಯ ಹಾಗೂ ಎಂಪಿಸಿ ಸದಸ್ಯರ ನಡುವಿನ ಮಾತುಕತೆಯನ್ನು ಆರ್‌ಬಿಐ ಕಾಯ್ದೆಯ ಉಲ್ಲಂಘನೆ ಎಂದು ವ್ಯಾಖ್ಯಾನಿಸಬಾರದು. ಅಂತಿಮವಾಗಿ ದೇಶದ ಆರ್ಥಿಕತೆಯ ನಿರ್ವಹಣೆಯ ಹೊಣೆಗಾರಿಕೆಯು ಹಣಕಾಸು ಸಚಿವಾಲಯದ್ದಾಗಿರುತ್ತದೆ’ ಎಂದು ಶಕ್ತಿಕಾಂತ್ ದಾಸ್ ಅವರು 2017ರ ಮೇ 29ರಂದು ಬರೆದಿದ್ದ ಆಂತರಿಕ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು. ಹಣಕಾಸು ಸಚಿವಾಲಯವು ಆರ್ಥಿಕತೆ ಕುರಿತು ನಡೆಸುವ ವಿಶ್ಲೇಷಣೆಯನ್ನು ಎಂಪಿಸಿ ಸದಸ್ಯರಿಗೆ ಕಳುಹಿಸುವುದಕ್ಕೆ ದಾಸ್‌ 2017ರಲ್ಲಿ ಒಪ್ಪಿಗೆ ನೀಡಿದ್ದರು. ಸರ್ಕಾರದ ನಿಲುವನ್ನೇ ಪ್ರತಿಪಾದಿಸುತ್ತಿದ್ದ ದಾಸ್‌ ಅವರನ್ನು, ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ 24 ಗಂಟೆಗಳ ಒಳಗಾಗಿ ಆರ್‌ಬಿಐ ಗವರ್ನರ್ ಹುದ್ದೆಗೆ ನೇಮಿಸಲಾಯಿತು.

----

‘ಹಣಕಾಸು ನೀತಿ’ಯ ಹಾದಿ

2014 ಜುಲೈ

ಆಧುನಿಕ ನೀತಿ ಚೌಕಟ್ಟು ರೂಪಿಸುವುದಾಗಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಣೆ

2015 ಫೆ.

ಆರ್‌ಬಿಐ ಹಾಗೂ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ

2015 ಫೆ.

ಹಣಕಾಸು ನೀತಿ ಸಮಿತಿ ಸ್ಥಾಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಹಣಕಾಸು ಕಾರ್ಯದರ್ಶಿ ರಾಜೀವ್ ಮಹರ್ಷಿ ನಿರ್ಧಾರ

2015 ಆ.

ಆರ್‌ಬಿಐ ಶ್ರೀಮಂತ ದೇಶಗಳಿಗೆ ಅನುಕೂಲ ಮಾಡುತ್ತಿದೆ ಎಂದು ಆರೋಪಿಸಿ ರಾಜೀವ್ ಮಹರ್ಷಿ ಅವರಿಂದ ಆಂತರಿಕ ಟಿಪ್ಪಣಿ ಬರಹ

2016 ಸೆ.

ರಘುರಾಮ್ ರಾಜನ್ ಅವರ ಅವಧಿ ಪೂರ್ಣಗೊಂಡಿದ್ದರಿಂದ, ಆರ್‌ಬಿಐ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕ

2016 ಅ.

ಪಟೇಲ್ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಎಂಪಿಸಿ ಸಭೆಯಲ್ಲಿ ಶೇ 0.25ರಷ್ಟು ಬಡ್ಡಿದರ ಇಳಿಕೆ

2016 ನ.

ನೋಟು ರದ್ದತಿ ಮಾಡುವ ಸರ್ಕಾರದ ಶಿಫಾರಸಿಗೆ ಆರ್‌ಬಿಐ ಒಪ್ಪಿಗೆ

2016 ಡಿ.

ಹಣಕಾಸು ನೀತಿ ನಿಲುವಿನಲ್ಲಿ ಬದಲಾವಣೆ ತಂದ ಎಂಪಿಸಿ;ಹೊಂದಾಣಿಕೆ ಬದಲು ತಟಸ್ಥ ನಿಲುವು ಘೋಷಣೆ

2017 ಏ.

ಅರುಣ್ ಜೇಟ್ಲಿ ಹಾಗೂ ಅಂದಿನ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸಭೆ; ಎಂಪಿಸಿ ಸದಸ್ಯರಿಗೆ
ಸಭೆಗೆ ಬರುವಂತೆ ಸೂಚಿಸುವ ಬಗ್ಗೆ ಚರ್ಚೆ

2017 ಮೇ

ಎಂಪಿಸಿ ಸದಸ್ಯರ ನಡುವೆ ಸಂವಹನ ವ್ಯವಸ್ಥೆಯೊಂದನ್ನು ರೂಪಿಸುವ ಉದ್ದೇಶವನ್ನು ಆರ್‌ಬಿಐಗೆ ತಿಳಿಸಿದ ಹಣಕಾಸು ಸಚಿವಾಲಯ

2017 ಮೇ

ಇದನ್ನು ಬಲವಾಗಿ ವಿರೋಧಿಸಿ ಜೇಟ್ಲಿಗೆ ಪತ್ರ ಬರೆದ ಉರ್ಜಿತ್ ಪಟೇಲ್; ಸಭೆ ನಡೆಸುವ ಕೋರಿಕೆಯನ್ನು ಆಂತರಿಕ ಟಿಪ್ಪಣಿಯಲ್ಲಿ ಸಮರ್ಥಿಸಿಕೊಂಡ
ಶಕ್ತಿಕಾಂತ್ ದಾಸ್

2017 ಜೂನ್‌

ಬಡ್ಡಿದರ ಯಥಾಸ್ಥಿತಿ ಘೋಷಿಸಿದ ಆರ್‌ಬಿಐ;ಸಭೆ ನಡೆಸುವ ಹಣಕಾಸು ಸಚಿವಾಲಯದ ಕೋರಿಕೆಯನ್ನು ತಿರಸ್ಕರಿಸಿದ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ ಉರ್ಜಿತ್‌

2018 ಡಿ.

ವೈಯಕ್ತಿಕ ಕಾರಣ ನೀಡಿ ಉರ್ಜಿತ್ ಪಟೇಲ್ ರಾಜೀನಾಮೆ; ತೆರವಾದ ಗವರ್ನರ್ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ನೇಮಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT