ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer - ಆಳ ಅಗಲ| ರಾಜಪಥ ಚಹರೆ, ಹೆಸರು ಬದಲು

Last Updated 28 ಜನವರಿ 2023, 13:30 IST
ಅಕ್ಷರ ಗಾತ್ರ

ದೇಶದ ಅಧಿಕಾರ ಕೇಂದ್ರವಾಗಿರುವ ದೆಹಲಿಯ ಲ್ಯುಟೆನ್ಸ್‌ ಪ್ರದೇಶವನ್ನು ಪುನರ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಲ್ಲಿ ಪ್ರಕಟಿಸಿತು. ಸಂಸತ್‌ ಭವನ, ಪ್ರಧಾನಿ ಕಚೇರಿ, ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ನಿವಾಸಗಳನ್ನು ಹೊಸದಾಗಿ ನಿರ್ಮಿಸುವುದು ಈ ಯೋಜನೆಯಲ್ಲಿ ಸೇರಿವೆ. ಸಚಿವಾಲಯಗಳು ಮತ್ತು ಇಲಾಖೆಗಳ ಕಚೇರಿಗಳಿಗಾಗಿ ಇತರ ಕಟ್ಟಡಗಳನ್ನೂ ನಿರ್ಮಿಸಲಾಗುವುದು. ಇದು ₹20,000 ಕೋಟಿ ವೆಚ್ಚದ ಯೋಜನೆ. ಇದರ ಭಾಗವಾಗಿ ರಾಜಪಥದ ಉದ್ದಕ್ಕೂ ಇರುವ ಸೆಂಟ್ರಲ್‌ ವಿಸ್ತಾ ಅವೆನ್ಯೂ ಪ್ರದೇಶವನ್ನೂ ನವೀಕರಿಸಲಾಗಿದೆ. ವಿಜಯ ಚೌಕದಿಂದ ಇಂಡಿಯಾ ಗೇಟ್‌ ವರೆಗಿನ ನವೀಕೃತ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.

ಸೆಂಟ್ರಲ್ ವಿಸ್ತಾ ಅವೆನ್ಯೂ ಪ್ರದೇಶವು ಪುನರ್ ಅಭಿವೃದ್ಧಿ ಬಳಿಕ ಹೆಚ್ಚು ಆಕರ್ಷಕಗೊಂಡಿದೆ. ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿವಿಧ ರಾಜ್ಯಗಳ ಆಹಾರಗಳನ್ನು ಮಾರುವ ಅಂಗಡಿಗಳು ಇಲ್ಲಿ ತೆರೆದುಕೊಳ್ಳಲಿವೆ. ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ, ನಡೆದಾಡುವ ಪ್ರದೇಶದಲ್ಲಿ ಕೆಂಪು ಶಿಲೆಗಳನ್ನು ಹಾಸಲಾಗಿದೆ. ಸುತ್ತಲೂ ಹಸಿರು ಹೊದಿಕೆಯನ್ನು ಹೆಚ್ಚಿಸಲಾಗಿದೆ. ಹೆಚ್ಚು ವಾಹನಗಳ ನಿಲುಗಡೆ ಸಾಧ್ಯವಾಗುವಂತೆ ನಿಲುಗಡೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ.

ಸೆಂಟ್ರಲ್‌ ವಿಸ್ತಾ
ಸೆಂಟ್ರಲ್‌ ವಿಸ್ತಾ

ಪುನರ್‌ ಅಭಿವೃದ್ಧಿಗಾಗಿ ರಾಜಪಥವನ್ನು 20 ತಿಂಗಳ ಹಿಂದೆ ಮುಚ್ಚಲಾಗಿತ್ತು. ಇನ್ನು ಮುಂದೆ ಈ ಪ್ರದೇಶವು ಸಂದರ್ಶಕರಿಗಾಗಿ ತೆರೆದುಕೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದ ಕಾರಣದಿಂದಾಗಿ ಇಂಡಿಯಾ ಗೇಟ್‌ನಿಂದ ಮಾನ್‌ ಸಿಂಗ್‌ ರಸ್ತೆವರೆಗೆ ಸಂದರ್ಶಕರಿಗೆ ಗುರುವಾರ ಪ್ರವೇಶ ಇಲ್ಲ. ಶುಕ್ರವಾರದಿಂದ ಜನರು ಇಲ್ಲಿ ಮುಕ್ತವಾಗಿ ಓಡಾಡಬಹುದು.

ಇಲ್ಲಿ ಐದು ವ್ಯಾಪಾರ ವಲಯಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದರಲ್ಲಿಯೂ 40 ಅಂಗಡಿಗಳಿಗೆ ಅವಕಾಶ ಇದೆ. ಇಂಡಿಯಾ ಗೇಟ್ ಸಮೀಪ ಎರಡು ವಲಯಗಳನ್ನು ನಿರ್ಮಿಸಲಾಗಿದ್ದು, ತಲಾ ಎಂಟು ಅಂಗಡಿಗಳು ಇಲ್ಲಿ ಇವೆ. ರಾಜ್ಯಗಳ ವಿಶಿಷ್ಟ ಆಹಾರಗಳ ಮಾರಾಟಕ್ಕೆ ಇಲ್ಲಿ ಅವಕಾಶ ಕೊಡಲಾಗುವುದು. ಕೆಲವು ರಾಜ್ಯಗಳು ಇಲ್ಲಿ ಅಂಗಡಿ ಹಾಕಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಸ್‌ಕ್ರೀಮ್‌ ಗಾಡಿಗಳಿಗೆ ಮಾರಾಟ ವಲಯಗಳಲ್ಲಿ ಮಾತ್ರ ಅವಕಾಶ ಇರುತ್ತದೆ.

ಇಲ್ಲಿ ಇರುವ ನಾಲೆಗಳು 19 ಎಕರೆ ಪ್ರದೇಶವನ್ನು ವ್ಯಾಪಿಸಿವೆ. ನಾಲೆಗಳಲ್ಲಿ ವಾಯುಪೂರಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹೀಗಾಗಿ ನೀರು ಸ್ವಚ್ಛವಾಗಿಯೇ ಇರಲಿದೆ. ಈ ನಾಲೆಗಳಲ್ಲಿ 16 ಸೇತುವೆಗಳಿವೆ. ಕೃಷಿ ಭವನ ಮತ್ತು ವಾಣಿಜ್ಯ ಭವನದ ಸಮೀಪ ಇರುವ ನಾಲೆಗಳಲ್ಲಿ ಬೋಟಿಂಗ್‌ಗೆ ಅವಕಾಶ ನೀಡಲಾಗುವುದು.

ರಾಜಪಥ ರಸ್ತೆ (ಮೊದಲು ಮತ್ತು ನಂತರ)
ರಾಜಪಥ ರಸ್ತೆ (ಮೊದಲು ಮತ್ತು ನಂತರ)

ಇನ್ನು ಕರ್ತವ್ಯಪಥ

ಸೆಂಟ್ರಲ್‌ ವಿಸ್ತಾದ ಪ್ರಮುಖ ಭಾಗವಾದ ರಾಜಪಥಕ್ಕೆ ‘ಕರ್ತವ್ಯಪಥ’ ಎಂದು ಮರುನಾಮಕರಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ದೆಹಲಿ ಮಹಾನಗರ ಪಾಲಿಕೆಯು (ಎನ್‌ಡಿಎಂಸಿ) ನಿರ್ಣಯವನ್ನು ಈಗಾಗಲೇ ಅಂಗೀಕರಿಸಿದೆ.

ಸೆಂಟ್ರಲ್‌ ವಿಸ್ತಾ ಪ್ರದೇಶದಲ್ಲಿರುವ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿರುವ ರಸ್ತೆಯೇ ರಾಜಪಥ. ಗಣರಾಜ್ಯೋತ್ಸವದ ಪಥಸಂಚಲನ ನಡೆಯುವುದು ಇದೇ ರಾಜಪಥದಲ್ಲಿ. 1911ರಲ್ಲಿ ಬ್ರಿಟನ್‌ ರಾಜ 5ನೇ ಜಾರ್ಜ್‌ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಈ ರಸ್ತೆ, ಅದರ ಇಕ್ಕೆಲದಲ್ಲಿನ ಕೊಳ ಮತ್ತು ಹುಲ್ಲುಹಾಸನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಕಾರಣದಿಂದ ಈ ಮಾರ್ಗಕ್ಕೆ ಕಿಂಗ್ಸ್‌ವೇ ಎಂದು ಹೆಸರಿಡಲಾಗಿತ್ತು. ನಂತರದಲ್ಲಿ ಇದನ್ನು ರಾಜಪಥ ಎಂದು ಬದಲಿಸಲಾಗಿತ್ತು.

ರಾಜಪಥ ಎಂಬುದು ವಸಾಹತುಶಾಹಿಯ ಕುರುಹು. ಹಾಗಾಗಿ ಅದನ್ನು ಬದಲಿಸಬೇಕಿದೆ. ರಾಜಪಥ ಎಂಬ ಪದವು ಜೀತವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅದನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಎನ್‌ಡಿಎಂಸಿ ಹೇಳಿದೆ. ದೆಹಲಿ ಬಿಜೆಪಿ ನಾಯಕರೂ ಇದೇ ಮಾತು ಹೇಳಿದ್ದಾರೆ.

ಬಿಗಿ ಭದ್ರತೆ

ರಾಜಪಥ ನಾಲೆ ಪಕ್ಕದ ನಡಿಗೆ ರಸ್ತೆ (ಮೊದಲು ಮತ್ತು ನಂತರ)
ರಾಜಪಥ ನಾಲೆ ಪಕ್ಕದ ನಡಿಗೆ ರಸ್ತೆ (ಮೊದಲು ಮತ್ತು ನಂತರ)

ಹೊಸದಾಗಿ ನಿರ್ಮಿಸಲಾಗಿರುವ ಸೌಲಭ್ಯಗಳಿಗೆ ಹಾನಿ ಮಾಡುವುದನ್ನು ತಡೆಯಲು, ಅವುಗಳನ್ನು ಕದ್ದೊಯ್ಯೊವುದನ್ನು ತಡೆಯಲು ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಇಲ್ಲಿ ಭದ್ರತೆ ಇರುತ್ತದೆ. ಸುಮಾರು 80 ಮಂದಿ ಭದ್ರತಾ ಸಿಬ್ಬಂದಿ ಇಲ್ಲಿ ಸದಾ ಕಾವಲಿಗೆ ಇರುತ್ತಾರೆ. ರಾಜಪಥವು ದೆಹಲಿಯ ಅತ್ಯಂತ ಜನಪ್ರಿಯ ಸಾರ್ವಜನಿಕ ಸ್ಥಳ. ಇಲ್ಲಿಗೆ ದಿನವೂ ಸಾವಿರಾರು ಜನರು ಭೇಟಿ ಕೊಡುತ್ತಾರೆ. ಹಾಗಾಗಿ, ಇಲ್ಲಿನ ಸ್ವಚ್ಛತೆಯನ್ನು ನಿರ್ವಹಿಸುವುದು ಕ್ಲಿಷ್ಟಕರ ಕೆಲಸ. ಹಾಗಾಗಿ, ನೈರ್ಮಲ್ಯ ಕಾಯ್ದುಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಲಾಗಿದೆ.

ಭಾರಿ ವಿರೋಧ

ಲ್ಯುಟೆನ್ಸ್ ಪ್ರದೇಶವನ್ನು ಮರು ಅಭಿವೃದ್ಧಿಪಡಿಸುವ ಯೋಜನೆಗೆ ವಿರೋಧವೂ ವ್ಯಕ್ತವಾಗಿತ್ತು. ಮೊದಲನೆಯದಾಗಿ, ಲ್ಯುಟೆನ್ಸ್ ಪ್ರದೇಶಕ್ಕೆ ಪಾರಂಪರಿಕ ಮೌಲ್ಯ ಇದೆ. ಸಂಸತ್ತು ಸೇರಿದಂತೆ ಇಲ್ಲಿ ಇರುವ ಹಲವು ಕಟ್ಟಡಗಳಿಗೆ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. ಪುನರ್ ಅಭಿವೃದ್ಧಿಯಿಂದಾಗಿ ಹಲವು ಕಟ್ಟಡಗಳು ನೆಲಸಮವಾಗುತ್ತವೆ ಅಥವಾ ಅವುಗಳ ಸ್ವರೂಪಕ್ಕೆ ಧಕ್ಕೆ ಆಗುತ್ತದೆ ಎಂದು ಪ್ರತಿಪಾದಿಸುವವರು ಇದ್ದಾರೆ. ಇದು ಸೆಂಟ್ರಲ್‌ ವಿಸ್ತಾ ಯೋಜನೆಗೆ ಇದ್ದ ಪ್ರಮುಖ ವಿರೋಧ.

ದೇಶವು ಕೋವಿಡ್‌ ಸಾಂಕ್ರಾಮಿಕದ ಸಂಕಷ್ಟದಲ್ಲಿ ಇದ್ದಾಗಲೇ ಸರ್ಕಾರವು ಯೋಜನೆಗಾಗಿ ₹20 ಸಾವಿರ ಕೋಟಿ ಮಂಜೂರು ಮಾಡಿತ್ತು. ಇದಕ್ಕೆ ಕೆಲ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಯೋಜನೆಯನ್ನು ರದ್ದುಗೊಳಿಸಿ ಈ ಮೊತ್ತವನ್ನು ಕೋವಿಡ್‌ ಸಾಂಕ್ರಾಮಿಕದಿಂದ ಆದ ನಷ್ಟ ಪರಿಹಾರಕ್ಕೆ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದವು.

ಅಂಕಿ ಸಂಖ್ಯೆಗಳಲ್ಲಿ ಮಾಹಿತಿ

1,125:ವಾಹನಗಳ ನಿಲುಗಡೆ ಸೌಲಭ್ಯ

35:ಇಂಡಿಯಾ ಗೇಟ್ ಬಳಿ ಬಸ್‌ ನಿಲುಗಡೆ ಸೌಲಭ್ಯ

900:ಹೊಸದಾಗಿ ಸ್ಥಾಪಿಸಲಾದ ದೀಪದ ಕಂಬಗಳ ಸಂಖ್ಯೆ

1,000:ಕಾಂಕ್ರೀಟ್‌ ಗೂಟಗಳ ಬದಲಿಗೆ ಶಿಲೆಯ ಗೂಟಗಳು

ರಾಜಪಥ ನಾಲೆ (ಮೊದಲು ಮತ್ತು ನಂತರ​​)
ರಾಜಪಥ ನಾಲೆ (ಮೊದಲು ಮತ್ತು ನಂತರ​​)

3.90 ಲಕ್ಷ ಚದರ ಅಡಿ ಪ್ರದೇಶದಲ್ಲಿ ಮರ, ಗಿಡ ಬೆಳೆಸಲಾಗಿದೆ

15.5 ಕಿ.ಮೀ:ನಡಿಗೆ ಪಥವನ್ನು ಅಭಿವೃದ್ಧಿಪಡಿಸಲಾಗಿದೆ

400 :ಜನರಿಗೆ ಕುಳಿತುಕೊಳ್ಳಲು ಅಳವಡಿಸಲಾದ ಬೆಂಚುಗಳು

150:ಕಸದ ಡಬ್ಬಗಳನ್ನು ಇರಿಸಲಾಗಿದೆ

650:ದಾರಿಯ ಮಾಹಿತಿ ಕೊಡುವ ಫಲಕಗಳು

ಆಧಾರ: ಪಿಟಿಐ, ಸೆಂಟ್ರಲ್‌ ವಿಸ್ತಾ ಅಧಿಕೃತ ಜಾಲತಾಣ, ಎಚ್‌ಸಿಪಿ ಡಿಸೈನ್ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT