ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಏಕತೆಯತ್ತ ದಲಿತರ ನಡೆ

Last Updated 4 ಡಿಸೆಂಬರ್ 2022, 18:00 IST
ಅಕ್ಷರ ಗಾತ್ರ

ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಟ್ಟಾಗಿ ‘ದಲಿತರ ಸಾಂಸ್ಕೃತಿಕ ಪ್ರತಿರೋಧ–ದಲಿತ ಸಂಘಟನೆಗಳ ಏಕತಾ ಸಮಾವೇಶ’ವನ್ನು ಮಂಗಳವಾರ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಸಲಿವೆ. ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನದಂದೇ ಈ ಕಾರ್ಯಕ್ರಮ ನಡೆಯಲಿದೆ

–––––

ಸುಮಾರು ಐವತ್ತು ವರ್ಷಗಳ ಹಿಂದೆ, ಕರ್ನಾಟಕದ ದಲಿತ ಸಮುದಾಯದ ಜನರು ಎದೆಯುಬ್ಬಿಸಿ ನಿಂತು ತಮ್ಮ ಹಕ್ಕು‌ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಚಾರಿತ್ರಿಕ ಹೋರಾಟಕ್ಕೆ ಅಡಿ ಇಟ್ಟರು. ಅಕ್ಷರ ಕಲಿತ ಮೊದಲ ತಲೆಮಾರು ಕಟ್ಟಿದ ‘ದಲಿತ ಸಂಘರ್ಷ ಸಮಿತಿ’ಯು (ದಸಂಸ) ತಳ ಸಮುದಾಯದವರ ಹೋರಾಟಕ್ಕೆ ನೆಲೆಯೊಂದನ್ನು ನಿರ್ಮಿಸಿತು.

ಅಧಿಕಾರಸ್ಥ ಪ್ರಬಲ ಜಾತಿಗಳ ಕುತಂತ್ರ, ಸಂಘಟನೆಯ ಮುಂಚೂಣಿಯಲ್ಲಿದ್ದವರ ಸ್ವಪ್ರತಿಷ್ಠೆ, ಕಾಲಘಟ್ಟಗಳಲ್ಲಿನ ತಪ್ಪುನಡೆಗಳು ತೋಡು ಹೊಂಡಗಳಾಗಿ ದಸಂಸವನ್ನು ವಿಘಟನೆಯ ವಿಪತ್ಕಾಲಕ್ಕೆ ದೂಡಿದವು. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ 6ರಂದು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ದ ಆಶಯದಡಿ ಸಂಘಟನೆಗಳನ್ನು ಮತ್ತೆ ಒಗ್ಗೂಡಿಸುವ ಏಕತಾ ಸಮಾವೇಶ ನಡೆಯಲಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಲೇ ಇದೆ, ಮುಂದುವರಿದ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಜಾರಿಯಾಗಿದ್ದರ ಕುರಿತೂ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಇಂತಹ ದಿನಗಳಲ್ಲಿ, ದಲಿತ ಸಂಘಟನೆಗಳು ಒಂದುಗೂಡಲು ಮುಂದಾಗಿವೆ.

ದಸಂಸದ ಹಾದಿ: 1970ರ ಆಸುಪಾಸಿನಲ್ಲಿ ಕರ್ನಾಟಕದಲ್ಲಿಯೂ ಪ್ರಬಲವಾಗಿದ್ದ ಕಮ್ಯುನಿಸ್ಟ್ ಹಾಗೂ ಸಮಾಜವಾದಿ ಚಳವಳಿಗಳು ಅಕ್ಷರ ಕಲಿತ ದಲಿತ ಸಮುದಾಯದವರನ್ನು ಪ್ರಭಾವಿಸಿದವು. ಚಳವಳಿಗಳಲ್ಲಿ ತೊಡಗಿಸಿಕೊಳ್ಳಲು ಸಮಾಜವಾದಿ ಯುವಜನ ಸಭಾ ಪ್ರೇರಣೆ ನೀಡಿತು. ಸ್ವಾತಂತ್ರ್ಯ ಮತ್ತು ಇಂಗ್ಲಿಷ್ ಭಾಷೆ ದಕ್ಕಿದ್ದರಿಂದಾಗಿ ಆ ಹೊತ್ತಿಗಾಗಲೇ ಬ್ರಾಹ್ಮಣೇತರರು ಸಾಹಿತ್ಯದಲ್ಲಿ ದೊಡ್ಡ ಮಟ್ಟದ ಕೆಲಸ ಮಾಡಿದ್ದರು. ವಿಚಾರಕ್ರಾಂತಿಗೆ ನೀರೆರೆದ ಕವಿ ಕುವೆಂಪು ಅವರು ಇದರ ಶ್ರೇಷ್ಠನಾಯಕರು. ಸಾಹಿತ್ಯ ವಲಯದಲ್ಲಿ ಬ್ರಾಹ್ಮಣ–ಶೂದ್ರ ವಾಗ್ವಾದವೂ ಅಷ್ಟೇ ದೊಡ್ಡ ಮಟ್ಟಕ್ಕೆ ನಡೆಯುತ್ತಿತ್ತು. ಅದೇ ಹೊತ್ತಿಗೆ ಮೈಸೂರಿನಲ್ಲಿ ನಡೆದ ಜಾತಿ ವಿನಾಶ ಸಮ್ಮೇಳನ ವಿಚಾರವಾದಿಗಳ ಮೊದಲ ಒಗ್ಗೂಡಿಕೆಯ ಫಲ. ಇದರ ಮುಂದುವರಿದ ರೂಪವಾಗಿ 1974ರಲ್ಲಿ ಬ್ರಾಹ್ಮಣೇತರ ಸಾಹಿತಿಗಳು ಕೂಡಿಕೊಂಡು ಬರಹಗಾರರ ಒಕ್ಕೂಟವನ್ನು ಹುಟ್ಟು ಹಾಕಿದರು. ಇದು ಸಾಮಾಜಿಕ, ಸಾಹಿತ್ಯಿಕ ವಲಯದಲ್ಲಿ ಗಮನಾರ್ಹ ಸಂವಾದಕ್ಕೆ ವೇದಿಕೆಯಾಯಿತು. ಅಲ್ಲಿಯವರೆಗೆ ಇದ್ದ ಶುದ್ಧ– ಶ್ರೇಷ್ಠ ಸಾಹಿತ್ಯವೆಂಬ ಅಹಂಕಾರಕ್ಕೆ ಕೊಡಲಿ ಪೆಟ್ಟು ಕೊಟ್ಟವರು ಸಚಿವ ಬಸವಲಿಂಗಪ್ಪನವರು. ‘ಕನ್ನಡ ಸಾಹಿತ್ಯದಲ್ಲಿ ಇರುವುದೆಲ್ಲವೂ ಶ್ರೇಷ್ಠವಲ್ಲ; ಹೆಚ್ಚಿನ ಅಂಶ ಬೂಸಾ ಸಾಹಿತ್ಯ’ ಎಂಬ ಅವರ ಹೇಳಿಕೆ ಸಾಹಿತ್ಯ–ಸಾಂಸ್ಕೃತಿಕ ವಲಯದಲ್ಲಿ ಶೂದ್ರ–ದಲಿತ ಸಮುದಾಯದ ಅಸ್ಮಿತೆಯನ್ನು ಮುನ್ನೆಲೆಗೆ ತಂದಿತು. ಇದು ವರ್ಷಾನುಗಟ್ಟಲೇ ಚರ್ಚೆಗೂ ಕಾರಣವಾಯಿತು. ಯು.ಆರ್. ಅನಂತಮೂರ್ತಿಯವರು, ಬಳಿಕ ಕುವೆಂಪು ಅವರು ಬಸವಲಿಂಗಪ್ಪ ಅವರ ಬೆಂಬಲಕ್ಕೆ ನಿಂತರೇ ವಿನಃ ಪ್ರಬಲ ಸಮುದಾಯದ ಸಾಹಿತಿಗಳು ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗಲಿಲ್ಲ. ಶೂದ್ರ ಸಮುದಾಯದ ಸಾಹಿತಿಗಳೂ ಬೆಂಬಲಕ್ಕೆ ನಿಲ್ಲಲಿಲ್ಲ. ಮೈಸೂರು, ಬೆಂಗಳೂರು ಕಾಲೇಜುಗಳಲ್ಲಿ ಈ ವಿವಾದ ಎಷ್ಟರಮಟ್ಟಿಗೆ ಎಂದರೆ ಬಸವಲಿಂಗಪ್ಪ ಪರ–ವಿರೋಧಿ ವಿದ್ಯಾರ್ಥಿ ಬಣಗಳು ಪರಸ್ಪರ ಸೆಣಸಾಡುವ ಮಟ್ಟಕ್ಕೆ ಹೋಗಿಬಿಟ್ಟಿತು. ಬಹುಶಃ ದಲಿತರ ಸ್ವಾಭಿಮಾನ ಕೆಣಕಿದ್ದು ಇಂತಹ ಘಟನೆಗಳೇ.

ಆ ಕಾಲಕ್ಕೆ ಮಹಾರಾಷ್ಟ್ರದಲ್ಲಿ ಸಂಘಟನೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ದಲಿತ್ ಪ್ಯಾಂಥರ್ಸ್‌ ದೊಡ್ಡ ಮಟ್ಟದ ಸದ್ದು ಮಾಡುತ್ತಿತ್ತು. ಇದರಲ್ಲಿ ಮುಂಚೂಣಿಯಲ್ಲಿದ್ದವರು ಸಾಹಿತಿಗಳೇ. ಇದು ಕರ್ನಾಟಕದ ಮೇಲೂ ‍ಪ್ರಭಾವ ಬೀರಿತು. ಇದೇ ಹೊತ್ತಿಗೆ, ದಲಿತರ ಮೇಲಿನ ದೌರ್ಜನ್ಯಗಳು ನಡೆದಾಗ ಪ್ರಬಲ ಜಾತಿಯ ಲೇಖಕರು, ಹೋರಾಟಗಾರರು ಬೆಂಬಲಕ್ಕೆ ನಿಲ್ಲಲಿಲ್ಲ. ಈ ಅಸಹನೆಯೂ ದಲಿತರಲ್ಲಿ ತಮ್ಮದೇ ಸಂಘಟನೆ ಬೇಕೆಂಬ ಆಕಾಂಕ್ಷೆ ಹುಟ್ಟಲು ಕಾರಣವಾಯಿತು. ಆಗ, ದಲಿತ್ ಪ್ಯಾಂಥರ್ಸ್‌ನ ಪ್ರಣಾಳಿಕೆಯನ್ನು ದೇವನೂರ ಮಹಾದೇವ ಕನ್ನಡಕ್ಕೆ ಅನುವಾದಿಸಿದರು. ಇದು, ದಲಿತ ಲೇಖಕರು, ಹೋರಾಟಗಾರರಲ್ಲಿ ಸಂಚಲನವನ್ನೇ ಮೂಡಿಸಿತು. ಇದರ ಮುಂದುವರಿದ ಭಾಗವಾಗಿ ‘ದಲಿತ ಲೇಖಕರ, ಕಲಾವಿದರ ಬಳಗ (ದಲೇಕ)’ ತಲೆ ಎತ್ತಿತು. ಇಂದೂಧರ ಹೊನ್ನಾಪುರ, ರಾಮದೇವ ರಾಕೆ, ಶಿವಾಜಿಗಣೇಶನ್, ಗೋವಿಂದಯ್ಯ, ದೇವನೂರು ಶಿವಮಲ್ಲು ನೇತೃತ್ವದಲ್ಲಿ ‘ಪಂಚಮ’ ಪತ್ರಿಕೆ ಶುರುವಾಯಿತು. ದಲಿತರ ಮೇಲೆ ನಡೆದ ದೌರ್ಜನ್ಯದ ಸವಿಸ್ತಾರ ವರದಿಗಳಿಗೆ ಪಂಚಮ ಧ್ವನಿಯಾಗಿತ್ತು. ದಲೇಕ ಸಂಘಟನೆ, ಚಳವಳಿ ತೀವ್ರಗೊಳ್ಳುತ್ತಾ ಹೋದಂತೆ ಅಂಬೇಡ್ಕರ್ ಅವರ ಬರೆಹಗಳನ್ನು ಕನ್ನಡಕ್ಕೆ ತರುವ ಕೆಲಸ ಮೊದಲಾಯಿತು. ಹಾಡು, ಕತೆ, ನಾಟಕಗಳು ಪ್ರಕಟವಾಗತೊಡಗಿದವು. ಅಲ್ಲಿಯವರೆಗೆ ಕನ್ನಡ ಸಾಹಿತ್ಯದಲ್ಲಿ ಕತ್ತಲ ಲೋಕವೇ ಆಗಿದ್ದ, ದಲಿತ ಸಮುದಾಯದ ಚಿತ್ರಣಗಳು ಅಕ್ಷರರೂಪದಲ್ಲಿ ಜೀವ ತಳೆಯ ತೊಡಗಿದವು. ಹೀಗೆ ಮೂಡಿದ ಜಾಗೃತ ಪ್ರಜ್ಞೆಯು ಸಮಾವೇಶ ನಡೆಸುವ ಮಟ್ಟಿಗೆ ವಿಸ್ತಾರಗೊಂಡಿತು.

ಸಮಾವೇಶ ನಡೆಸಲು, ಕರಪತ್ರ ಮುದ್ರಿಸಲು ಹಣವೂ ಇರಲಿಲ್ಲ. ಈ ಹೊತ್ತಿನೊಳಗೆ ರಾಜ್ಯದ ಪ್ರಬಲ ಕೈಗಾರಿಕಾ ಕ್ಷೇತ್ರವಾಗಿದ್ದ ಭದ್ರಾವತಿಯಲ್ಲಿ ವಿಐಎಸ್‌ಎಲ್‌, ಎಂಪಿಎಂ ಕಾರ್ಖಾನೆಗಳು ಸಕ್ರಿಯವಾಗಿದ್ದವು. ಅಲ್ಲಿ ಕೆಲಸ ಮಾಡುತ್ತಿದ್ದವರು ಸಮಾವೇಶ ನಡೆಸುವ ಹೊಣೆ ಹೊತ್ತರು. ಎರಡು ದಿನದ ಸಮಾವೇಶದಲ್ಲಿ ಬಸವಲಿಂಗಪ್ಪ, ಶಾಸಕರಾಗಿದ್ದ ದಾವಣಗೆರೆಯ ಬಿ.ಎಂ. ತಿಪ್ಪೇಸ್ವಾಮಿ, ಪ್ರೊ. ಬಿ. ಕೃಷ್ಣಪ್ಪ, ವಿ.ಟಿ. ರಾಜಶೇಖರ್, ದೇವನೂರ ಮಹಾದೇವ, ಎನ್. ಗಿರಿಯಪ್ಪ, ಚಂದ್ರಪ್ರಸಾದ್ ತ್ಯಾಗಿ, ಬಿ. ರಾಜಣ್ಣ, ಇಕ್ಬಾಲ್, ಇಂದೂಧರ ಹೊನ್ನಾಪುರ, ಎನ್. ವೆಂಕಟೇಶ್‌, ಸಿದ್ಧಲಿಂಗಯ್ಯ, ಕೋಟಿಗಾನಹಳ್ಳಿ ರಾಮಯ್ಯ ಇವರೆಲ್ಲ ಭಾಗಿಯಾಗಿದ್ದರು. ಇದು, ದಲಿತ ಚಳವಳಿ ಕಟ್ಟಲು ಕಾರಣವಾದ ಮೊದಲ ಸಾಂಸ್ಥಿಕ ಹೆಜ್ಜೆ. ಅನೇಕ ಹಂತದ ಚರ್ಚೆಯ ಬಳಿಕ, ಪ್ರೊ. ಬಿ.ಕೃಷ್ಣಪ್ಪನವರು 1974ರಲ್ಲಿ ನೋಂದಣಿ ಮಾಡಿಸಿದ್ದ ದಸಂಸ ಅಧಿಕೃತ ಸಂಘಟನೆಯಾಗಿ ಹೊರಹೊಮ್ಮಿತು.

ದಸಂಸದ ಪ್ರಧಾನ ಆಶಯವನ್ನು ಪ್ರಣಾಳಿಕೆಯಲ್ಲಿ ಬಿಂಬಿಸಲಾಗಿತ್ತು. ಎಲ್ಲ ಜಾತಿಯಲ್ಲೂ ಅಪಮಾನಿತರಾಗಿರುವ ಬಡವರು, ಹಿಂದೂ ಶ್ರೇಣಿಕೃತ ವ್ಯವಸ್ಥೆಯಡಿ ಅವಮಾನಕ್ಕೆ ಒಳಗಾಗುತ್ತಿರುವ ತಳಸಮುದಾಯದವರನ್ನು ಒಗ್ಗೂಡಿಸುವುದೇ ದಸಂಸದ ಗುರಿಯಾಗಿತ್ತು. ಆರಂಭಿಕ ಅನೇಕ ವರ್ಷಗಳಲ್ಲಿ ಎಲ್ಲ ಜಾತಿಗೆ ಸೇರಿದವರು ದಸಂಸದ ಪದಾಧಿಕಾರಿಗಳಾಗಿದ್ದರು. ತುಳಿತಕ್ಕೆ ಒಳಗಾದವರನ್ನು ಸಂಘಟಿಸಿ, ಶಾಂತಿಯ ಮಾರ್ಗದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವುದೇ ಪ್ರಧಾನ ಉದ್ದೇಶವಾಗಿತ್ತು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವೇ ಆಶಯವಾಗಿತ್ತು.

ವಿಘಟನೆಯ ಹಾದಿ: 1976ರ ಹೊತ್ತಿಗೆ ಪ್ರವರ್ಧಮಾನಕ್ಕೆ ಬಂದಿದ್ದ ದಸಂಸ 1983ರ ಹೊತ್ತಿಗೆ ಮೊದಲ ಒಡಕು ಕಂಡಿತು.

ಸರ್ಕಾರಕ್ಕೆ ದಸಂಸ ಮುಟ್ಟಿಸುತ್ತಿದ್ದ ಬಿಸಿಯನ್ನು ತಾಳಿಕೊಳ್ಳುವುದು ಆಳುವವರಿಗೆ ಸುಲಭದ ಮಾತಾಗಿರಲಿಲ್ಲ. ‘ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಕ್ರಾಂತಿಕಾರಿ ಕವಿ, ಲೇಖಕರ ತಲೆಗೆ ₹5 ಲಕ್ಷ, ₹10 ಲಕ್ಷ ಬಹುಮಾನ ಘೋಷಿಸಿತ್ತು. ಹಿಡಿದು ತಂದವರಿಗೆ ಅಥವಾ ತಲೆ ತಂದವರಿಗೆ ಅದು ಬಹುಮಾನ ಕೊಡುತ್ತಿತ್ತು. ಆದರೆ, ಕರ್ನಾಟಕದ ರಾಜಕಾರಣಿಗಳು ಅತಿ ಬುದ್ದಿವಂತರು. ಕವಿಗಳ ತಲೆಗೆ ದುಡ್ಡು ಕಟ್ಟುವ ಬದಲಿಗೆ, ವಿಧಾನಪರಿಷತ್ತಿನ ಸದಸ್ಯ ಸ್ಥಾನ, ಅಕಾಡೆಮಿಯ ಅಧ್ಯಕ್ಷ ಸ್ಥಾನ, ಇಲ್ಲವೇ ಯಾವುದೋ ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡಿ ಬಿಡುತ್ತದೆ. ಆಗ ಸರ್ಕಾರವನ್ನು ವಿರೋಧಿಸುವವರು ಸರ್ಕಾರದ ಭಾಜಾಭಜಂತ್ರಿಗಳಾಗಿ ಕೆಲಸ ಮಾಡಲಾರಂಭಿಸುತ್ತಾರೆ; ಹೋರಾಟವೂ ದಿಕ್ಕು ತಪ್ಪಿ ಬಿಡುತ್ತದೆ’ ಎಂದು ತೆಲುಗಿನ ಕ್ರಾಂತಿಕಾರಿ ಕವಿ ವರವರರಾವ್ ಹೇಳಿದ್ದ ಮಾತು ನೆನಪಾಗುತ್ತಿದೆ. ಪ್ರಬಲ ಜಾತಿಗೆ ಸೇರಿದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಹೀಗೆ ಮಾಡುವ ಮೂಲಕ ದಸಂಸದ ಒಂದೊಂದೇ ಗಳವನ್ನು ಹಿರಿದು, ಅದನ್ನು ದುರ್ಬಲಗೊಳಿಸಿದ್ದು ಇತಿಹಾಸ.

ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಅಧಿಕಾರ ಸಿಕ್ಕವರು ಒಂದು ಪಕ್ಷದ ಚುಂಗು ಹಿಡಿದು ಹೋದರು. ಸಿಗದವರು ತಮ್ಮ ಪ್ರತಿಷ್ಠೆಗಾಗಿ ಮತ್ತೊಂದು ಬಣವನ್ನು ಕಟ್ಟಿಕೊಳ್ಳುತ್ತಾ ಹೋದರು.

1990ರ ದಶಕದಲ್ಲಿ ದಲಿತರ ಚೈತನ್ಯವನ್ನೇ ನೆಚ್ಚಿಕೊಂಡು ಬಿಎಸ್‌ಪಿ ಕಟ್ಟಿದ್ದ ಕಾನ್ಶಿರಾಂ ಹಾಗೂ ಮಾಯಾವತಿಯರ ನಾಯಕತ್ವ ಕರ್ನಾಟಕದ ದಸಂಸ ನಾಯಕರನ್ನು ಆಕರ್ಷಿಸಿತು. ದಸಂಸದ ಪ್ರಬಲ ಗುಂಪು ಬಿಎಸ್‌ಪಿ ಜತೆಗೆ ಹೋಯಿತು. ಹೀಗೆ, ದಸಂಸದ ಬೇರೆ ಬೇರೆ ಬಣಗಳು, ಬಿಎಸ್‌ಪಿಯ ಮತ್ತೊಂದು ಗುಂಪು ವಿಭಜನೆಯಾಗುತ್ತಲೇ ಹೋಗಿದ್ದರಿಂದಾಗಿ ದಲಿತರಿಗೆ ಸಾಮೂಹಿಕ ನಾಯಕತ್ವದ ಪ್ರಬಲ ಸಂಘಟನೆಯೇ ಇಲ್ಲವಾಯಿತು.

ಎಲ್ಲ ಮಿತಿಗಳ ಮಧ್ಯೆಯೇ, ದಸಂಸದ ಬಹುಬಣಗಳು ಒಟ್ಟಾಗುವತ್ತ ಹೆಜ್ಜೆ ಇಟ್ಟಿವೆ. ಒಗ್ಗಟ್ಟನ್ನು ಒಡೆಯುವ ತಂತ್ರಗಾರಿಕೆ ಬಿಜೆಪಿ–ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದೇ ಇಲ್ಲ. ಈ ಒಗ್ಗೂಡುವಿಕೆಯು ಯಾವುದೋ ಪಕ್ಷವೊಂದರ ಕಾಲಾಳುಗಳಾಗುವ ಅಪಾಯದ ಬಲೆ–ಭರ್ಜಿಯಿಂದ ಪಾರಾಗಬೇಕಿದೆ. ಹಾಗೆಯೇ, ಒಳಮೀಸಲಾತಿಯ ವಿಷಯವನ್ನು ಆದ್ಯತೆಯಾಗಿಸಿಕೊಳ್ಳಬೇಕಿದೆ. ಒಳ ಮೀಸಲಾತಿ ಬೇಡಿಕೆಯ ಅಧ್ಯಯನಕ್ಕಾಗಿ 20 ವರ್ಷದ ಹಿಂದೆ ರಚಿಸಲಾಗಿದ್ದ ನ್ಯಾ. ಎ.ಜೆ. ಸದಾಶಿವ ಆಯೋಗ ವರದಿಯನ್ನೂ ನೀಡಿದೆ. ಸರ್ಕಾರ–ಪ್ರತಿಪಕ್ಷದಲ್ಲಿರುವ ಬಹುತೇಕರು ಒಳಮೀಸಲಾತಿಯ ಬಗ್ಗೆ ಧ್ವನಿ ಎತ್ತದಿರುವುದು ಅಥವಾ ವಿರೋಧ ವ್ಯಕ್ತಪಡಿಸುವುದು ನಡೆದೇ ಇದೆ. ಮೀಸಲಾತಿಯನ್ನು ಉಳಿಸಿಕೊಳ್ಳುವ ಜತೆಗೆ, ಅದರ ಫಲವನ್ನು ಈವರೆಗೆ ಕಾಣದೇ ಇರುವ ತಮ್ಮದೇ ಸಮುದಾಯದವರ ಹಿತವನ್ನು ಕಾಪಾಡಿ, ಅವರನ್ನು ತಮ್ಮೊಟ್ಟಿಗೆ ಕರೆದೊಯ್ಯುವ ಇಚ್ಛಾಶಕ್ತಿಯನ್ನೂ ದಸಂಸ ನಾಯಕರು ತೋರಬೇಕಾಗಿದೆ.

–––––––––––––

‘ಹೌದು, ಇದು ಸಾಹಸ, ಚಾರಿತ್ರಿಕ’

ದಸಂಸ ಮೈತಳೆದು ಅರ್ಧಶತಮಾನ ಆಗುತ್ತ ಬಂತು. ಈ ಕಾಲಾವಧಿಯಲ್ಲಿ ಅದು ಸಮಾಜದ ಕಲ್ಲುಮುಳ್ಳಿನ ಹಾದಿಯಲ್ಲಿ ನಡೆದಿದೆ. ವಿಜೃಂಭಿಸಿದೆ, ನೊಂದಿದೆ, ಬೆಂದಿದೆ, ಕೊನೆಗೆ ಚೂರು-ಚೂರಾಗಿ ಒಂಟೊಂಟಿಯಾಗಿ ನಗಣ್ಯವಾಗಿಬಿಟ್ಟಿತು.

ದಸಂಸ ಹುಟ್ಟಿದ ಗಳಿಗೆಯಿಂದಲೂ ಒಂದಿಷ್ಟು ಕಂಡುಂಡಿದ್ದೇನೆ. ಆಗ, ಹುಟ್ಟಿದ ಕೂಸೊಂದು ತಾಯಿ ಹಾಲಿಗೆ ಅಳುವಂತೆ ಎಲ್ಲರದೂ ಒಕ್ಕೊರಲ ದನಿಯಾಗಿತ್ತು. ಅದು ಹಾಡಾಯ್ತು. ಘೋಷಣೆಗಳಾದವು. ಗೋಡೆ ಬರಹಗಳಾದವು. ಹೋರಾಟಗಳಾದವು. ಆ ಹೋರಾಟಗಳಿಂದಾಗಿ ಸರ್ಕಾರಗಳು ಜನಪರ ಕಾಯ್ದೆಗಳನ್ನು ಜಾರಿಗೆ ತಂದವು ಕೂಡ.

ಹೌದು, ಹೀಗಿತ್ತು. ನೆನಪಿರಲಿ, ಆ ಕಾಲದಲ್ಲಿ ತನ್ನೆಲ್ಲಾ ಮಿತಿಗಳೊಡನೆ ಸಮಾಜದಲ್ಲಿ ವಂಚಿತರಿಗೆ ಸ್ವಲ್ಪವಾದರೂ ದಕ್ಕಬೇಕು ಎಂಬ ಮನಃಸ್ಥಿತಿ ಸ್ವಲ್ಪವಾದರೂ ಇತ್ತು. ಈ ಕಾಲದಲ್ಲಿ ಇದು ಉಲ್ಟಾ ಹೊಡೆದಿದೆ. ಹೆಚ್ಚು ದಕ್ಕಿದವರಿಗೆ ಇನ್ನೂ ಹೆಚ್ಚು ದಕ್ಕಬೇಕು ಎಂಬ ದುಃಸ್ವಪ್ನ ಆಳ್ವಿಕೆ ನಡೆಸುತ್ತಿದೆ. ಇಲ್ಲದಿದ್ದರೆ ಇಡಬ್ಲ್ಯುಎಸ್ ಮೀಸಲಾತಿ ಹೇಗೆ ಬಂತು? ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಬಹುಮತದಿಂದ ಎತ್ತಿ ಹಿಡಿದಿದೆಯಲ್ಲಾ? ನಾವು ಅಳಬೇಕೋ ನಗಬೇಕೋ? ತಳಸಮುದಾಯಗಳ ಮಕ್ಕಳ ವಿದ್ಯಾರ್ಥಿವೇತನಗಳಿಗೂ ಕನ್ನ ಹಾಕುತ್ತಿದೆ ಈ ಸರ್ಕಾರ.

ಒಟ್ಟಿನಲ್ಲಿ ಆಳ್ವಿಕೆ ನಡೆಸಲು ಅರ್ಹತೆ ಇಲ್ಲದವರು ಆಳ್ವಿಕೆ ನಡೆಸುತ್ತಿದ್ದಾರೆ. ಭಾರತ ಮಾತೆ ಅಳುತ್ತಿದ್ದಾಳೊ, ನಗುತ್ತಿದ್ದಾಳೊ? ಕಡುಕಷ್ಟ. ಆಳ್ವಿಕೆ ನಡೆಸುತ್ತಿರುವವರು ವಾಸ್ತವಕ್ಕೆ ಮುಖಾಮುಖಿಯಾಗದೆ ತಮ್ಮ ಅಪರಾಧಗಳನ್ನು ಮಸುಕು ಮಾಡಲು ದೇವರು–ದೇವಸ್ಥಾನಗಳ ಮೊರೆಹೋಗುತ್ತಿದ್ದಾರೆ. ಮಾಡಬಾರದನ್ನೆಲ್ಲಾ ಮಾಡಿ ಶಂಖ ಊದುತ್ತಿದ್ದಾರೆ. ಇಂದು ಮನುಷ್ಯರು ಆಳ್ವಿಕೆ ಮಾಡುತ್ತಿದ್ದಾರೊ ಅಥವಾ ಸುಳ್ಳು ಭ್ರಮೆ ವಂಚನೆಗಳೇ ಮನುಷ್ಯರೂಪ ತಳೆದು ಆಳ್ವಿಕೆ ನಡೆಸುತ್ತಿವೆಯೋ ಗೊತ್ತಾಗುತ್ತಿಲ್ಲ!

ಇಂಥ ಕಡುಕಷ್ಟದ ಕಾಲದಲ್ಲಿ ತಾನೇ ಕಡುಕಷ್ಟದಲ್ಲಿರುವ ದಸಂಸ- ಮತ್ತೆ ಒಗ್ಗಟ್ಟಿಗೆ ಪ್ರಯತ್ನಿಸುತ್ತಿದೆ. ಇದು ಖಂಡಿತ ಚಾರಿತ್ರಿಕ. ಈ ಗೆಳೆಯರ ಎದೆಗಾರಿಕೆಗೆ ಅಭಿನಂದಿಸುವೆ. ಕೃತಜ್ಞತೆ ಸಲ್ಲಿಸುವೆ. ಮುಂದಿನ ಯಶಸ್ಸು-ಸಂಘಟನೆಯ ಹಳೆಬೇರುಗಳು ಭೂಮಿ ಒಳಗೆ ಇದ್ದು ಆಲಿಸುತ್ತಾ ಹೊಸ ಚಿಗುರು ಭೂಮಿ ಮೇಲೆ ನಳನಳಿಸುತ್ತಾ ಫಸಲು ನೀಡುವ ವಾತಾವರಣ ಸೃಷ್ಟಿಸುವುದರಲ್ಲಿದೆ. ಸ್ವಾಯತ್ತ ಕಲಾ ಮಾಧ್ಯಮ, ಮಹಿಳಾ ಸಂಘಟನೆ, ವಿದ್ಯಾರ್ಥಿ-ಯುವಸಂಘಟನೆಗಳಿಗೆ ತಾನು ವೇಗವರ್ಧಕ ಮಾತ್ರವಾಗುವ ವಿವೇಕದಲ್ಲಿದೆ. ಇದನ್ನು ಆಶಿಸುವೆ. ನಂಬುವೆ. ಈ ಸಾಹಸದ ಸಭೆಯಲ್ಲಿ ನಾನು ಭಾಗವಹಿಸಲಾಗದಿರುವುದಕ್ಕೆ ಕ್ಷಮೆ ಇರಲಿ, ಎಲ್ಲರಲ್ಲೂ.

ದೇವನೂರ ಮಹಾದೇವ,ಸಾಹಿತಿ

‘ವೈರುಧ್ಯಗಳ ನಡುವೆ ಒಂದಾಗುವುದು ಸ್ವಾಗತ’

ಅಂತರ್ಗತವಾದ ಅನೇಕ ವೈರುಧ್ಯಗಳಿವೆ. ಏನೇ ವೈರುಧ್ಯಗಳಿದ್ದರೂ ಒಂದಾಗುವುದು ಸ್ವಾಗತ. 1991ರಲ್ಲಿ ಜನಕಲಾ ಮೇಳದಲ್ಲಿ ದಲಿತ ಚಳವಳಿಯಿಂದ ಹೊರಗೆ ಬಂದೆ. ಒಳಗೆ ಕರೆದಾಗೆಲ್ಲ ಹೋಗಿ ಇದೇ ಮಾತುಗಳನ್ನು ಹೇಳಿ ಬಂದಿದ್ದೇನೆ. ಸಮುದಾಯದ ಭಾಗವಾಗಿ ಪಾಲ್ಗೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಆ ಕಾರಣಕ್ಕಾಗಿ ನಾನು ಭಾಗವಹಿಸುತ್ತಿದ್ದೇನೆ. ಸಾಂಸ್ಕೃತಿಕ ಪ್ರತಿರೋಧ ಎಂದು ಕರೆಯಲಾಗಿದೆ. ಕವಿಗಳು, ಬರಹಗಾರರು, ಕಲಾವಿದರು, ಚಿಂತಕರ ಒಳದ್ರವ್ಯದಿಂದ ಸಾಂಸ್ಕೃತಿಕ ಪ್ರತಿರೋಧವನ್ನು ಕಟ್ಟಬೇಕಿದೆ. ಈಗ ಕಟ್ಟುತ್ತಿರುವಸಾಂಸ್ಕೃತಿಕ ಪ್ರತಿರೋಧದಲ್ಲಿ ಈ ಅಂಶಗಳು ಇಲ್ಲ. ಎಲ್ಲರನ್ನೂ ಒಳಗೊಳ್ಳುವ ತೆರೆದ ಮನಸ್ಸಿನ ಸ್ವೀಕಾರವೂ ಕಾಣಿಸುತ್ತಿಲ್ಲ. ಈಗ ಒಗ್ಗೂಡುತ್ತಿರುವವರು ಈ ಏಕತೆಯನ್ನು ಒಂದು ಅಗತ್ಯವಾಗಿಯಷ್ಟೇ ನೋಡುತ್ತಿದ್ದಾರೆ. ಡಿ.6ರ ಸಮಾವೇಶದಲ್ಲಿ ಮಾದಿಗ ಸಮುದಾಯದವರು ಎಷ್ಟಿರುತ್ತಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಮಾದಿಗ ಸಮುದಾಯದವರು ಮತ್ತು ಮಹಿಳೆಯರು ಶೇ 100ರಷ್ಟು ಇರಬೇಕು. ಅಲ್ಲದೇ, ಅದಕ್ಕೂ ಕೆಳಸ್ತರದಲ್ಲಿರುವ ಸಮುದಾಯಗಳನ್ನೂ ಒಳಗೊಳ್ಳಬೇಕು. ಈಗ ಈ ವರ್ಗಗಳಲ್ಲಿ ನವಕುಬೇರಿಕೆ ಇರುವ ಹಿತಾಸಕ್ತಿ ಗುಂಪುಗಳು ಹುಟ್ಟಿಕೊಂಡಿವೆ. ಇವು ಬದಲಾವಣೆಗೆ ಅಡ್ಡಿಯಾಗಿವೆ. ಈ ವಿಷಯಗಳನ್ನು ದಲಿತ ಮಧ್ಯಮ ವರ್ಗ ಕಟುವಾಗಿ ವಿಮರ್ಶಿಸಿಕೊಳ್ಳುವ ಅಗತ್ಯವಿದೆ.

ಕೋಟಿಗಾನಹಳ್ಳಿ ರಾಮಯ್ಯ,ಚಿಂತಕ

‘ಒಗ್ಗಟ್ಟಿನ ಪ್ರತಿರೋಧ ಇಂದಿನ ಅಗತ್ಯ’

ದಲಿತ ಸಂಘರ್ಷ ಸಮಿತಿ ಆರಂಭದಲ್ಲಿ ದಲಿತರ ಭೂಮಿಯ ಹಕ್ಕಿನ ಪರವಾಗಿ ದೌರ್ಜನ್ಯಗಳ ವಿರುದ್ಧದ ಶಕ್ತಿಯಾಗಿ ನಿಂತಿತ್ತು. ಅಷ್ಟೇ ಅಲ್ಲದೆ ಸಾಂಸ್ಕೃತಿಕ ಮತ್ತು ರಾಜಕೀಯ ಚಳವಳಿಯಾಗಿಯೂ ಬೆಳೆಯಿತು. ಅದರಿಂದಾಗಿ ಸಂಘಟನೆಗೆ ಘನತೆಯೂ ಬಂದಿತ್ತು. ನಂತರದ 10ರಿಂದ 12 ಸಂಘಟನೆಗಳಾಗಿ ಭಾಗವಾಗಿದ್ದರಿಂದ ಶಕ್ತಿ ಕುಂದಿದಂತಾಗಿತ್ತು. ಇಂದಿನ ಸಂದರ್ಭಕ್ಕೆ ಒಮ್ಮತದ ಹೋರಾಟ ಅಗತ್ಯ ಎಂದು ಭಾವಿಸಿ ಅಂತಿಮವಾಗಿ ಒಂದಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಬಿಜೆಪಿ ಮತ್ತು ಸಂಘ ಪರಿವಾರದ ಆಡಳಿತ ಶುರುವಾದ ಬಳಿಕ ಶೋಷಿತರ ವಿರುದ್ಧದ ದಮನಕಾರಿ ನೀತಿಗಳು ಹೆಚ್ಚಾಗುತ್ತಿವೆ. ಘನತೆ ಮತ್ತು ಗೌರವದಿಂದ ಬದುಕಲು ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುತ್ತಿದೆ. ವಿದ್ಯಾರ್ಥಿವೇತನ ರದ್ದುಗೊಳಿಸಿರುವುದು ಇದಕ್ಕೆ ಸಾಕ್ಷಿ. ಇಂತಹ ಸಂದರ್ಭದಲ್ಲಿ ದಲಿತ ಚಳವಳಿ ಬಲಗೊಳ್ಳಬೇಕಿದೆ, ಒಗ್ಗಟ್ಟಿನಿಂದ ಪ್ರತಿರೋಧ ಒಡ್ಡುವ ಅಗತ್ಯವಿದೆ. ಈ ದಿಸೆಯಲ್ಲಿ ಡಿಸೆಂಬರ್ 6ರಂದು ನಡೆಯುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಲಿದೆ.

ಎನ್.ವೆಂಕಟೇಶ್,ದಸಂಸ ನಾಯಕ

‘ಹಕ್ಕಿನ ಪ್ರತಿಪಾದನೆಗೆ ಒಂದುಗೂಡುವ ಕಾಲವಿದು’ ‌

70ರ ದಶಕದಲ್ಲಿ ಸಾಮಾಜಿಕ, ರಾಜಕೀಯ ಒತ್ತಡದ ಕಾರಣದಿಂದ ದಲಿತ ಸಂಘರ್ಷ ಸಮಿತಿ ಜೀವ ತಳೆದಿತ್ತು. ಈಗ ಮತ್ತೆ ಅಂತಹದೇ ಒತ್ತಡವೇ ತಾವು ಒಗ್ಗೂಡಬೇಕೆಂಬ ತಹತಹವನ್ನು ಮೂಡಿಸಿದೆ. ಒಂದೆಡೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಿರಂತರ ನಡೆಯುತ್ತಲೇ ಇದ್ದರೆ, ಬಾಬಾ ಸಾಹೇಬರು ನೀಡಿದ ಸಂವಿಧಾನದಡಿ ನಾವು ದಕ್ಕಿಸಿಕೊಂಡ ಸೌಲಭ್ಯಗಳನ್ನು ಸರ್ಕಾರ ಮೊಟಕುಗೊಳಿಸುತ್ತಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಯೇ ನಿಂತುಹೋಗಿದ್ದು, ಖಾಸಗೀಕರಣದ ಪ್ರಭಾವ ಹೆಚ್ಚುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ಹಕ್ಕಿನ ಪ್ರತಿಪಾದನೆಗೆ ಒಂದುಗೂಡಿ ಬೇಡಿಕೆ ಮಂಡಿಸುವ ಕಾಲ ಇದಾಗಿದೆ.

ವಿಶ್ವವಿದ್ಯಾಲಯಗಳಲ್ಲಿ ತಳ ಸಮುದಾಯಗಳ ಅಧ್ಯಯನ ವಿಶೇಷವಾಗಿ ನಡೆಯುತ್ತಿತ್ತು. ಅದಕ್ಕೆ ನೀಡುತ್ತಿದ್ದ ಅನುದಾನವನ್ನೇ ನಿಲ್ಲಿಸಲಾಗಿದೆ. ತಳ ಸಮಯದಾಯವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನ ನಡೆದರಷ್ಟೇ ಹಿಂದುಳಿದಿರುವಿಕೆಯ ನೈಜ ದಾಖಲೆ ಸಿಗುತ್ತದೆ. ಹಾಗಾದಲ್ಲಿ, ಸರ್ಕಾರ ತಳಸ್ತರದ ಜನವರ್ಗಗಳಿಗೆ ವಿಶೇಷ ಅನುದಾನ ಕೊಡಬೇಕಾಗುತ್ತದೆ. ಇಂತಹ ಅಧ್ಯಯನವನ್ನೇ ನಿಲ್ಲಿಸಿದರೆ ಹಿಂದುಳಿದಿರುವಿಕೆಯ ನಿಖರ ಅಂಕಿ–ಅಂಶ ಸಿಗುವುದಿಲ್ಲ. ಅನುದಾನ ಕೊಡುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ. ಅಂಬೇಡ್ಕರ್‌ ಅವರು ಬದುಕಿ ಬಾಳಿದ್ದ, ಓಡಾಡಿದ್ದ ಜಾಗವನ್ನು ತೀರ್ಥಕ್ಷೇತ್ರದಂತೆ ಮಾಡಿ, ಭಜನಾ ಕೇಂದ್ರಗಳಾಗಿಸುತ್ತಿದೆ. ಹೀಗೆ ಮಾಡುವ ಮುಖೇನಅಂಬೇಡ್ಕರ್‌ ಆಶಯಗಳಿಗೆ ಸಮಾಧಿ ಕಟ್ಟಿ, ಜಾಗೃತ ಪ್ರಜ್ಞೆ ಹೆಚ್ಚದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ದಲಿತರಿಗೆ ಇದ್ದ ಅವಕಾಶವನ್ನು ವಂಚಿಸುವುದು, ಸಾಂಸ್ಕೃತಿಕ ವಿಸ್ಮೃತಿಗೆ ದೂಡುವ ಹುನ್ನಾರ ನಡೆಸುತ್ತಿದೆ. ಇಂತಹ ಹೊತ್ತಿನಲ್ಲಿ ನಮ್ಮ ಒಗ್ಗೂಡುವಿಕೆ, ಹೋರಾಟ ಮಾತ್ರ ನಮ್ಮನ್ನು ಬದುಕುಳಿಸಬಲ್ಲದು. ವಿವಿಧ ಕಾರಣಗಳಿಗೆ ಒಡೆದ ಮನಸ್ಸುಗಳನ್ನು, ವಿಘಟನೆಗೊಂಡಿದ್ದ ಸಂಘಟನೆಗಳನ್ನು ಈ ಸಮಾವೇಶದ ಮೂಲಕ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ.

ಇಂದೂಧರ ಹೊನ್ನಾಪುರ,ಪತ್ರಕರ್ತ, ದಸಂಸ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT