ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer - ಆಳ ಅಗಲ| 2023: ಭಾರತದ ಅಧ್ಯಕ್ಷತೆಯಲ್ಲಿ ಜಿ20

Last Updated 30 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ಏಷ್ಯಾದಲ್ಲಿ ತಲೆದೋರಿದ್ದ ಆರ್ಥಿಕ ಬಿಕ್ಕಟ್ಟಿನ ನಂತರ, ಮತ್ತೆ ಅಂತಹ ಪರಿಸ್ಥಿತಿ ಎದುರಾಗದಂತೆ ಪರಿಹಾರ ಕಂಡುಕೊಳ್ಳಲು ವಿಶ್ವದ 20 ದೇಶಗಳು (19+ ಐರೋಪ್ಯ ಒಕ್ಕೂಟ) ಸೇರಿ ರಚಿಸಿಕೊಂಡ ಒಕ್ಕೂಟವೇ ಜಿ20. 1999ರಲ್ಲಿ ಇದು ರಚನೆಯಾದಾಗ, ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಆರ್ಥಿಕ ಬಿಕ್ಕಟ್ಟನ್ನು ಕುರಿತು ಚರ್ಚಿಸುವುದು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಈ ಒಕ್ಕೂಟದ ಪ್ರಮುಖ ಉದ್ದೇಶವಾಗಿತ್ತು. ಆರಂಭದ ವರ್ಷಗಳಲ್ಲಿ ಹಣಕಾಸು ಸಚಿವರ ಮಧ್ಯೆ ಸಭೆ ನಡೆಸಿ, ಒಪ್ಪಂದಗಳನ್ನು ಮಾಡಿಕೊಳ್ಳಲಷ್ಟೇ ಜಿ20 ಸೀಮಿತವಾಗಿತ್ತು. ಈಗ ಇದು ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ದೊಡ್ಡ ಒಕ್ಕೂಟವಾಗಿದೆ.

ಜಿ20ರ ಸ್ವರೂಪ, ಅದರ ಕಾರ್ಯವಿಧಾನ ಬದಲಾಗಿದ್ದು ನಂತರದ ಮತ್ತೊಂದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೇ. 2008ರ ವಿಶ್ವ ಆರ್ಥಿಕ ಹಿಂಜರಿತ ಸಂದರ್ಭದಲ್ಲಿ ಜಿ20 ದೇಶಗಳೆಲ್ಲವೂ ಸೇರಿ, ಆರ್ಥಿಕ ಹಿಂಜರಿತವನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸಿದವು. ಆವರೆಗೆ ಹಣಕಾಸು ಸಚಿವರ ಮಟ್ಟದಲ್ಲಿ ಸಭೆ ನಡೆಸುವ ಒಕ್ಕೂಟ ಮಾತ್ರವಾಗಿದ್ದ ಜಿ20ಕ್ಕೆ, 2009ರಲ್ಲಿ ಸದಸ್ಯ ದೇಶಗಳ ಮುಖ್ಯಸ್ಥರ ಸಭೆಯ ಮಾನ್ಯತೆ ನೀಡಲಾಯಿತು. ಅಂದರೆ ಸದಸ್ಯ ದೇಶಗಳ ಪ್ರಧಾನಿ ಅಥವಾ ಅಧ್ಯಕ್ಷರು ಒಕ್ಕೂಟದ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ಆಯಾ ವರ್ಷದ ಆರ್ಥಿಕ ಮುನ್ನೋಟ ಏನಾಗಿರಬೇಕು ಎಂಬುದನ್ನು ಚರ್ಚಿಸಲು ಒಂದೆರಡು ತಿಂಗಳಿಗೊಮ್ಮೆ ಜಿ20 ಸಭೆಗಳನ್ನು ನಡೆಸಲಾಗುತ್ತದೆ. ವರ್ಷದ ಕೊನೆಯಲ್ಲಿ ಶೃಂಗಸಭೆ ನಡೆಸಲಾಗುತ್ತದೆ.

ಈ ಸಭೆಗಳ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳು ಪರಸ್ಪರ ವಾಣಿಜ್ಯ ಸಹಕಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಇಂತಹ ಒಪ್ಪಂದಗಳನ್ನು ಸದಸ್ಯ ದೇಶಗಳೆಲ್ಲವೂ ಬೆಂಬಲಿಸುತ್ತವೆ. ಹೀಗಾಗಿ ಇಲ್ಲಿ ನಡೆಯುವ ಒಪ್ಪಂದಕ್ಕೆ ಬಹಳ ಮಹತ್ವವಿದೆ. ಆರಂಭದ ವರ್ಷಗಳಲ್ಲಿ ಈ ಸ್ವರೂಪದ ಆರ್ಥಿಕ ಮತ್ತು ಜಾಗತಿಕ ವಾಣಿಜ್ಯ ಚಟುವಟಿಕೆಗಳಿಗಷ್ಟೇ ಜಿ20 ಸೀಮಿತವಾಗಿತ್ತು. ಆದರೆ, ಈಚಿನ ವರ್ಷಗಳಲ್ಲಿ ಜಿ20ಯು ಜಾಗತಿಕ ಹವಾಮಾನ ವೈಪರೀತ್ಯ, ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನ, ಭಯೋತ್ಪಾದನೆ, ಪ್ರಾದೇಶಿಕ ಶಾಂತಿ ಮತ್ತು ಯುದ್ಧಗಳನ್ನೂ ತಮ್ಮ ಚರ್ಚೆಗಳಲ್ಲಿ ಒಳಗೊಳ್ಳುತ್ತಿದೆ. 2022ರ ಜಿ20 ಶೃಂಗಸಭೆಯಲ್ಲಿ, ಉಕ್ರೇನ್‌ ಮೇಲೆ ರಷ್ಯಾದ ಅತಿಕ್ರಮಣವನ್ನು ಖಂಡಿಸಲಾಗಿತ್ತು. ಇದು ಜಿ20ಯ ವ್ಯಾಪಕತೆಗೆ ಉತ್ತಮ ನಿದರ್ಶನವಾಗಿದೆ.

ಸಾಮೂಹಿಕ ನಾಯಕತ್ವ

ಜಿ20ಗೆ ಯಾವುದೇ ಒಂದು ಶಾಶ್ವತ ಮುಂದಾಳು ದೇಶವಿಲ್ಲ. ಎಲ್ಲಾ ಸದಸ್ಯ ದೇಶಗಳೂ ತಮ್ಮ ಸರದಿಯಂತೆ ಒಂದು ವರ್ಷದ ಅವಧಿಗೆ ಆಧ್ಯಕ್ಷತೆ ವಹಿಸಿಕೊಳ್ಳುತ್ತವೆ. 2023ನೇ ಸಾಲಿನ ಅಧ್ಯಕ್ಷತೆ ಭಾರತಕ್ಕೆ ಒದಗಿಬಂದಿದೆ. ಇದೊಂದು ರೀತಿಯ ಸಾಮೂಹಿಕ ನಾಯಕತ್ವವಿದ್ದಂತೆ.

ವರ್ಷದ ಅವಧಿಗೆ ದೊರೆಯುವ ಅಧ್ಯಕ್ಷತೆಯೂ ಪರಿಪೂರ್ಣವಾದುದಲ್ಲ. ಈ ಹಿಂದಿನ ವರ್ಷದಲ್ಲಿ ಅಧ್ಯಕ್ಷತೆ ವಹಿಸಿದ ಮತ್ತು ನಂತರದ ವರ್ಷದಲ್ಲಿ ಅಧ್ಯಕ್ಷತೆ ವಹಿಸಲಿರುವ ದೇಶವೂ ಸೇರಿ ಒಟ್ಟು ಮೂರು ದೇಶಗಳ ಗುಂಪು ಆ ಜವಾಬ್ದಾರಿಯನ್ನು ಹೊರಬೇಕು. ಈ ಮೂರು ದೇಶಗಳ ಗುಂಪನ್ನು ಟ್ರಯೋಕಾ (ಇದು ರಷ್ಯಾದ ಪೌರಾಣಿಕ ಪದ. ಇದನ್ನು ತ್ರಿಮೂರ್ತಿ ಎಂದು ಅರ್ಥೈಸಬಹುದು) ಎಂದು ಕರೆಯಲಾಗುತ್ತದೆ.2022ರಲ್ಲಿ ಇಂಡೊನೇಷ್ಯಾ ಅಧ್ಯಕ್ಷತೆ ವಹಿಸಿತ್ತು. 2023ರ ಅಧ್ಯಕ್ಷತೆ ಭಾರತ ವಹಿಸಿಕೊಂಡಿದೆ. 2024ರಲ್ಲಿ ಬ್ರೆಜಿಲ್‌ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಈ ಮೂರೂ ದೇಶಗಳ ಗುಂಪು ಈ ಬಾರಿಯ ಟ್ರಯೋಕಾ ಆಗಿದೆ.

ಆಯಾ ವರ್ಷದಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ದೇಶವು, ಆ ವರ್ಷದಲ್ಲಿ ನಡೆಯುವ ಎಲ್ಲಾ ಜಿ20 ಸಭೆಗಳನ್ನು ಆಯೋಜಿಸಬೇಕಾಗುತ್ತದೆ. ಜಿ20ಯ ಅಧ್ಯಕ್ಷತೆಯ ಕ್ಯಾಲೆಂಡರ್‌ ಡಿಸೆಂಬರ್‌ನಿಂದ ಆರಂಭವಾಗಿ ನಂತರದ ವರ್ಷದ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಹತ್ತಾರು ಸಭೆಗಳು ನಡೆಯುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಶೃಂಗಸಭೆ ನಡೆಯುತ್ತದೆ. ಆ ಶೃಂಗಸಭೆಯಲ್ಲಿ, ನಂತರದ ವರ್ಷದ ಅಧ್ಯಕ್ಷ ದೇಶವನ್ನು ಹೆಸರಿಸಲಾಗುತ್ತದೆ ಮತ್ತು ಅಧ್ಯಕ್ಷನ ಅಧಿಕಾರದ ಸುತ್ತಿಗೆಯನ್ನು ಹಸ್ತಾಂತರಿಸಲಾಗುತ್ತದೆ.

ಈ ಬಾರಿ ಅಧ್ಯಕ್ಷನಾಗಿರುವ ಭಾರತವು ದೇಶದಲ್ಲಿ ಒಟ್ಟು 15 ಜಿ20 ಸಭೆಗಳನ್ನು ಆಯೋಜಿಸಲಿದೆ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ, ಕಛ್, ಸೂರತ್‌ ಸೇರಿ 15 ನಗರಗಳಲ್ಲಿ ಈ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಶೃಂಗಸಭೆಯನ್ನು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಜಿ20 ಶೃಂಗಸಭೆಗೆಂದೇ ದೆಹಲಿಯಲ್ಲಿ ವಿಶೇಷ ಸಭಾಂಗಣವನ್ನು ರೂಪಿಸಲಾಗುತ್ತಿದೆ. ಅದರ ಮಾದರಿಯನ್ನು ಈಚೆಗೆ ಅನಾವರಣ ಮಾಡಲಾಗಿದೆ.

‘ವಸುಧೈವ ಕುಟುಂಬಕಂ’

‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದನ್ನು ಭಾರತದ ಅಧ್ಯಕ್ಷತೆಯ ಜಿ20 ವರ್ಷದ ಥೀಂ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಭಾರತವು ‘ವಸುಧೈವ ಕುಟುಂಬಕಂ’ ಎಂದು ಕರೆದಿದೆ. ಈ ಬಾರಿಯ ಎಲ್ಲಾ ಜಿ20 ಸಭೆಗಳನ್ನು ಇದೇ ಥೀಂ ಅಡಿಯಲ್ಲಿ ಆಯೋಜಿಸಲಾಗುತ್ತದೆ.

ಭಾರತದ ಅಧ್ಯಕ್ಷತೆ ಜಿ20ಯ ನೂತನ ಚಿಹ್ನೆಯನ್ನು ಮತ್ತು ಈ ವರ್ಷದ ಥೀಂನ ಚಿಹ್ನೆಯನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ.

ಜಾಗತಿಕ ಸ್ವಾಸ್ಥ್ಯ ಸಾಧಿಸೋಣ...

ಈ ಹಿಂದೆ ವಿವಿಧ ದೇಶಗಳ ನೇತೃತ್ವದಲ್ಲಿ ನಡೆದಿರುವ 17 ಜಿ–20 ಶೃಂಗಸಭೆಗಳು, ಆರ್ಥಿಕ ಸ್ಥಿರತೆ, ಸಾಲದ ಹೊರೆ ತಗ್ಗಿಸುವ, ಅಂತರರಾಷ್ಟ್ರೀಯ ತೆರಿಗೆಯಲ್ಲಿ ಸುಧಾರಣೆ ತರುವಂತಹ ಮಹತ್ವದ ಫಲಿತಾಂಶಗಳಿಗೆ ಕಾರಣವಾಗಿವೆ. ಭಾರತವು ಮಹತ್ವದ 18ನೇ ಶೃಂಗಸಭೆಯ ನೇತೃತ್ವ ವಹಿಸಿಕೊಳ್ಳುತ್ತಿದ್ದು, ಈಗ ಆಗಿರುವ ಸಾಧನೆಗಳನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ಹಾಗೂ ಮಾನವತ್ವಕ್ಕೆ ಲಾಭವಾಗುವ ನಿಟ್ಟಿನಲ್ಲಿ ಪರಿವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತೇನೆ. ಹೌದು, ನಮ್ಮಿಂದ ಇದನ್ನು ಮಾಡಲು ಸಾಧ್ಯವಿದೆ.

ನಮ್ಮೆಲ್ಲರ ಮನಸ್ಥಿತಿಯು ಪರಿಸ್ಥಿತಿಯನ್ನು ಅವಲಂಬಿಸಿದೆ. ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಮನಸ್ಥಿತಿ ಇಲ್ಲ. ಚಿಂತನೆಗಳು, ಸಿದ್ಧಾಂತಗಳು ಯುದ್ಧ ಮತ್ತು ಪೈಪೋಟಿಗೆ ಕಾರಣವಾಗಿವೆ. ದುರದೃಷ್ಟವಶಾತ್, ಈಗಲೂ ಇಂತಹ ಶೂನ್ಯ ಮನಸ್ಥಿತಿಯ ತಂತ್ರದಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಕೋಟ್ಯಂತರ ಜನರಿಗೆ ಬೇಕಾಗಿರುವ ಲಸಿಕೆಗಳು ಕೆಲವರ ಸ್ವಾಧೀನದಲ್ಲಿವೆ. ಭೂಭಾಗ ಮತ್ತು ಸಂಪನ್ಮೂಲಗಳಿಗಾಗಿ ದೇಶಗಳು ಯುದ್ಧದಲ್ಲಿ ತೊಡಗಿವೆ.

ಜೀವಿಗಳು ಹಾಗೂ ವಸ್ತುಗಳು ಪಂಚತತ್ವ ಆಧರಿಸಿವೆ. ಇದು ನಮ್ಮ ಪರಿಸರ, ದೈಹಿಕ, ಸಾಮಾಜಿಕ ಯೋಗಕ್ಷೇಮಕ್ಕೆ ಅಗತ್ಯ. ಭಾರತದ ನೇತೃತ್ವದಲ್ಲಿ ನಡೆಯಲಿರುವ ಶೃಂಗಸಭೆಯು ಏಕತ್ವ ಪ್ರಜ್ಞೆಯನ್ನು ಉತ್ತೇಜಿಸಲು ಯತ್ನಿಸುತ್ತದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದು ನಮ್ಮ ಧ್ಯೇಯವಾಗಿದೆ.

ಹವಾಮಾನ ಬದಲಾವಣೆ, ಭಯೋತ್ಪಾದನೆ, ಸಾಂಕ್ರಾಮಿಕದಂತಹ ದೊಡ್ಡ ಸವಾಲುಗಳನ್ನು ಸಂಘರ್ಷದಿಂದ ಎದುರಿಸಲಾಗದು. ನಮ್ಮ ಯುಗ ಯುದ್ಧದಿಂದ ಹೊರತಾಗಿರಬೇಕು. ಇಂತಹ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಭಾರತದಅನುಭವಗಳು ಒಳನೋಟ ನೀಡಲಿವೆ. ಈ ಶೃಂಗಸಭೆಯಲ್ಲಿ ನಮ್ಮ ದೃಷ್ಟಿಕೋನ, ಮಾದರಿಗಳು ಹಾಗೂ ಪಾಲಿಸಬೇಕಾದ ಕ್ರಮಗಳನ್ನು ಅಭಿವೃದ್ಧಿಶೀಲ ದೇಶಗಳ ಜೊತೆ ಭಾರತ ಹಂಚಿಕೊಳ್ಳಲಿದೆ. ಎಲ್ಲರನ್ನೂ ಒಳಗೊಳ್ಳುವ, ಮಹತ್ವಾಕಾಂಕ್ಷಿ, ಕ್ರಮ ಆಧರಿತ ನಿರ್ಣಯಗಳುಭಾರತದ ಜಿ–20 ನಾಯಕತ್ವದ ಕಾರ್ಯಸೂಚಿಗಳಾಗಿವೆ. ಸಾಮರಸ್ಯ, ಭರವಸೆ ಹಾಗೂ ಸ್ವಾಸ್ಥ್ಯ ಸಾಧಿಸುವ ನಿಟ್ಟಿನಲ್ಲಿ ಭಾರತದ ನೇತೃತ್ವದ ನಾಯಕತ್ವದ ಜೊತೆ ಎಲ್ಲರೂ ಕೈಜೋಡಿಸಿ

–ನರೇಂದ್ರ ಮೋದಿ,ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT