ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಹಿಮ ಕರಗಿ ನೀರಾಗಿ...

Last Updated 7 ಫೆಬ್ರುವರಿ 2021, 21:22 IST
ಅಕ್ಷರ ಗಾತ್ರ

ಹಿಮನದಿಯ ಬೃಹತ್ ಮಂಜುಗಡ್ಡೆಗಳು ಮುರಿದು ಬಿದ್ದಾಗ, ನದಿಯು ಅತೀವ ಒತ್ತಡದಿಂದ ಉಕ್ಕಿ ಹರಿಯುವ ವಿದ್ಯಮಾನವನ್ನು ‘ಹಿಮನದಿ ಸ್ಫೋಟ’ (ಗ್ಲೇಸಿಯರ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ಸ್–ಜಿಎಲ್‌ಒಎಫ್‌) ಎಂದು ಕರೆಯಲಾಗುತ್ತದೆ. ಆರ್ಕಟಿಕ್, ಅಂಟಾರ್ಕಟಿಕ್ ಧ್ರುವಪ್ರದೇಶಗಳನ್ನು ಒಳಗೊಂಡಂತೆ, ಹಿಮಾಲಯದ ಹಿಮನದಿಗಳು ಅಥವಾ ಆ ಭಾಗದ ಸರೋವರಗಳಲ್ಲಿ ಇಂತಹ ಅಪಾಯ ಇದ್ದೇ ಇರುತ್ತದೆ

ಮಂಜುಗಡ್ಡೆಯು ತನ್ನಲ್ಲಿ ಲಕ್ಷಾಂತರ ಟನ್‌ನಷ್ಟು ನೀರನ್ನು ಹಿಡಿದಿಟ್ಟುಕೊಂಡಿರುತ್ತದೆ. ಅಂದರೆ, ಒಂದೊಂದು ಹಿಮಗಡ್ಡೆಯ ಒಡಲಲ್ಲೂ ಹತ್ತಾರು ಸರೋವರಗಳಷ್ಟು ನೀರು ಇರುತ್ತದೆ. ಆಯಾ ಕಾಲಕ್ಕೆ ಅನುಗುಣವಾಗಿ ಹಿಮಗಟ್ಟುವ ಹಾಗೂ ಕರಗುವ ವಿದ್ಯಮಾನ ನಡೆಯುತ್ತಿರುತ್ತದೆ. ಈ ಬೃಹತ್ ಹಿಮಗಡ್ಡೆಗಳು ಒಮ್ಮೆಲೇ ಒಡೆದು ತುಂಡಾಗುತ್ತವೆ. ಇದನ್ನೇ ‘ಹಿಮನದಿ ಸ್ಫೋಟ’ ಎನ್ನಲಾಗುತ್ತದೆ. ಆಗ ನದಿಯಲ್ಲಿ ಸಹಜವಾಗಿ ಒತ್ತಡ ಹೆಚ್ಚಾಗಿ, ಅದು ಭೋರ್ಗರೆದು ಹರಿಯುತ್ತದೆ. ಹಿಮಗಡ್ಡೆ ಚೂರಾಗಿ ಬಿದ್ದಾಗ ಉಂಟಾಗುವ ಪ್ರವಾಹವು ನದಿಪಾತ್ರದ ಜೀವಸಂಕುಲವನ್ನು ಅಪಾಯಕ್ಕೆ ನೂಕುತ್ತದೆ. ನದಿಗೆ ಕಟ್ಟಿರುವ ಅಣೆಕಟ್ಟು, ಸೇತುವೆಗಳು ಈ ಪ್ರವಾಹಕ್ಕೆ ಕೊಚ್ಚಿ ಹೋಗುತ್ತವೆ.

ಜಾಗತಿಕ ತಾಪಮಾನ ಏರಿಕೆ

ಜಾಗತಿಕವಾಗಿ ಉಷ್ಣಾಂಶ ಏರಿಕೆ ಆಗುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣ. ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯ (ಐಪಿಸಿಸಿ) 2001ರ ವರದಿ ಪ್ರಕಾರ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮೊದಲಾದ ಕಾರಣಗಳಿಂದ 2100ನೇ ಇಸ್ವಿ ವೇಳೆಗೆ ತಾಪಮಾನವು 1.4 ಡಿಗ್ರಿ ಸೆಲ್ಸಿಯಸ್‌ನಿಂದ 5.8 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ. ಜಾಗತಿಕ ಹಿಮರಾಶಿಯ ಕಾಲು ಭಾಗವು 2050ರ ವೇಳೆಗೆ, ಅರ್ಧ ಭಾಗವು 2100ರ ಹೊತ್ತಿಗೆ ನಷ್ಟವಾಗಲಿದೆ.

ಹಿಮಾಲಯದ ಪರಿಸ್ಥಿತಿ

ಹಿಮನದಿ ಸ್ಫೋಟಕ್ಕೂ ಹವಾಮಾನ ವೈಪರೀತ್ಯಕ್ಕೂ ನಂಟಿದೆ. ಜಾಗತಿಕ ತಾಪಮಾನ ಏರುವುದರಿಂದ ಹಿಮಾಲಯ ಶ್ರೇಣಿಯ ಹಿಮಗಡ್ಡೆಗಳು ವೇಗವಾಗಿ ಕರಗುತ್ತಿವೆ. ಈ ಹಿಮ ಕರಗುವಿಕೆಯು ದೊಡ್ಡ ದೊಡ್ಡ ಹಿಮ ಸರೋವರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ನದಿಗಳಿಗೆ ಕಟ್ಟಿರುವ ಅಣೆಕಟ್ಟೆಗಳಲ್ಲಿ ಬೇಸಿಗೆಯಲ್ಲಿ ಸಹಜವಾಗಿ ನೀರಿನ ಪ್ರಮಾಣ ಏರಿಕೆಯಾಗಿ, ಅಣೆಕಟ್ಟು ಒತ್ತಡಕ್ಕೆ ಸಿಲುಕುತ್ತದೆ. ಈಗ ಉತ್ತರಾಖಂಡದಲ್ಲಿ ಆಗಿರುವ ರೀತಿಯಲ್ಲಿ ಹಿಮನದಿ ಸ್ಫೋಟಗೊಂಡು ನದಿಗೆ ನೀರು ಧುಮುಕುತ್ತದೆ.

ಭಾರತದಲ್ಲಿ ನಡೆದಿತ್ತೇ?

ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಈ ಅವಘಡದ ಸಂಭಾವ್ಯತೆ ಹೆಚ್ಚು. ಭಾರತಕ್ಕೆ ಹೊಂದಿಕೊಂಡ ಹಿಮಾಲಯ ಶ್ರೇಣಿಯಲ್ಲಿ ಹಿಮನದಿ ಸ್ಫೋಟದ ಪ್ರಕರಣ ದಾಖಲಾಗಿದ್ದು 1926ರಲ್ಲಿ. ಜಮ್ಮು ಮತ್ತು ಕಾಶ್ಮೀರದಶ್ಯಾಕ್ ಹಿಮನದಿಯ ಅಣೆಕಟ್ಟಿನಿಂದ ನೀರು ಬಿಡುಗಡೆಯಾದಾಗ ಪ್ರವಾಹ ಸಂಭವಿಸಿ, 400 ಕಿ.ಮೀ ದೂರದಲ್ಲಿರುವ ಅಬುಡಾನ್ ಗ್ರಾಮ ಮತ್ತು ಸುತ್ತಮುತ್ತ ಭಾರಿ ಹಾನಿಯಾಗಿತ್ತು. ಹಿಮಾಚಲ ಪ್ರದೇಶದ ಶೌನ್ ಗರಂಗ್ ಹಿಮನದಿಯಲ್ಲಿ ಹೆಚ್ಚಿನ ನೀರು ಹರಿದಿತ್ತು.

1929ರಲ್ಲಿ, ಕಾರಾಕೋರಂನ ಚೊಂಗ್ ಖುಮ್ಡಾನ್ ಹಿಮನದಿಯಲ್ಲಿ ಮಂಜುಗಡ್ಡೆ ಸಿಡಿದು ಸಿಂಧೂ ನದಿಯಲ್ಲಿ 1,200 ಕಿ.ಮೀ. ದೂರದವರೆಗೆ ಪ್ರವಾಹ ಉಂಟಾಗಿತ್ತು. 2000ನೇ ಇಸ್ವಿಯಏಪ್ರಿಲ್ 9ರಂದು ಚೀನಾದ ಯಿಗಾಂಗ್ ನದಿಯಲ್ಲಿ ಭಾರಿ ಭೂಕುಸಿತದಿಂದ ಸರೋವರದಲ್ಲಿ ನೀರು ಹೆಚ್ಚಾಗಿತ್ತು. ಈ ಪ್ರವಾಹವು ಅರುಣಾಚಲ ಪ್ರದೇಶದ ಹಲವು ಭಾಗಗಳಲ್ಲಿ ಹಾನಿ ಮಾಡಿತ್ತು. 2005ರಲ್ಲಿ ಚೀನಾದ ಪರೇಚು ನದಿಯಲ್ಲಿ ಭೂಕುಸಿತ ಉಂಟಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಉಂಟುಮಾಡಿತ್ತು.

ಹೈದರಾಬಾದ್‌ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿಗಳು 2013ರಲ್ಲಿ ನಡೆಸಿದ ಉಪಗ್ರಹ ಆಧಾರಿತ ಅಧ್ಯಯನದ ಪ್ರಕಾರ, ಸಿಕ್ಕಿಂನ ದಕ್ಷಿಣ ಲೋನಾಕ್ ಹಿಮನದಿಯಿಂದ ಬೃಹತ್ ಸರೋವರವೊಂದು ರೂಪ ತಾಳಿದ್ದು, ಸ್ಫೋಟಕ್ಕೆ ಕಾರಣವಾಗುವ ಮತ್ತು ಅದರಿಂದ ನಾಶ ಉಂಟಾಗಬಲ್ಲ ಅಪಾಯ ಹೊಂದಿದೆ.

ಅಧ್ಯಯನವೊಂದರ ಪ್ರಕಾರ, ತೀಸ್ತಾ ನದಿ ಜಲಾನಯನ ಪ್ರದೇಶವು 576 ಚದರ ಕಿ.ಮೀ.ನಷ್ಟು ವ್ಯಾಪ್ತಿಯ 285 ಹಿಮನದಿಗಳು, 266 ಸರೋವರಗಳು ಮತ್ತು 14 ಹಿಮನದಿ ಸರೋವರಗಳನ್ನು ಹೊಂದಿದೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಸಂಭಾವ್ಯ ಹಿಮನದಿ ಸ್ಫೋಟ ವಿದ್ಯಮಾನ ಇಲ್ಲಿ ಹೆಚ್ಚು ಎಂದು ಅಧ್ಯಯನ ಹೇಳುತ್ತದೆ. ಹಿಮಾಚಲ ಪ್ರದೇಶವು ಸುಮಾರು 4,160 ಚದರ ಕಿ.ಮೀ ವಿಸ್ತೀರ್ಣದಲ್ಲಿ 2,554 ಹಿಮನದಿ, 22 ಹಿಮ ಸರೋವರ, 229 ಸರೋವರಗಳು ಇವೆ. ಇವೂ ಸಹ ಸಂಭಾವ್ಯ ಹಿಮನದಿ ಸ್ಫೋಟಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ನಿಗಾ ವ್ಯವಸ್ಥೆ ಬೇಕು

ಇಂತಹ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ನಿರ್ಮಾಣ ಕಾಮಗಾರಿ ವೇಳೆ ನಿಗಾ ವ್ಯವಸ್ಥೆ ಜಾರಿ ಮಾಡಬೇಕು. ಸಂದೇಶ ವಾಹಕ ವ್ಯವಸ್ಥೆ, ಹಿಮನದಿ ಸರೋವರಗಳ ಪ್ರಕೋಪ ಸಂವೇದನಾ ವ್ಯವಸ್ಥೆ ಮತ್ತು ಹಿಮ ಸರೋವರದಲ್ಲಿ ಉಂಟಾಗಬಹುದಾದ ಪ್ರವಾಹ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಸ್ಥಾಪಿಸಿದರೆ, ಒಂದಿಷ್ಟು ಅನಾಹುತಗಳನ್ನು ತಡೆಯಬಹುದು. ಜಾಗತಿಕ ಉಷ್ಣಾಂಶ ಏರಿಕೆಗೆ ನಿಯಂತ್ರಣ ಹೇರುವುದು ಎಲ್ಲಕ್ಕಿಂತ ಮುಖ್ಯ.

ಜಗತ್ತಿನ ಎಲ್ಲೆಲ್ಲಿ ನಡೆದಿದೆ

l ವಿಶ್ವದ ವಿವಿಧ ಭಾಗಗಳಲ್ಲಿ ಜಿಎಲ್‌ಒಎಫ್ ವಿದ್ಯಮಾನ ಕಂಡುಬಂದಿದೆ. 1941ರಲ್ಲಿ ಉಂಟಾದ ಪ್ರವಾಹವು ಪೆರು ದೇಶದ ಹುವಾರಾಜ್ ನಗರವನ್ನು ನಾಶಪಡಿಸಿತು. ಈ ಅವಘಡದಲ್ಲಿ 4,500 ಜನರು ಸಾವನ್ನಪ್ಪಿದ್ದರು

l 1968 ಮತ್ತು 1970ರಲ್ಲಿ ಸ್ವಿಜರ್ಲೆಂಡ್‌ನ ಆಲ್ಫ್ಸ್‌ ಹಿಮನದಿಯ ಸರೋವರವೊಂದರಲ್ಲಿ ಮಂಜುಗಡ್ಡೆ ಒಡೆಯಿತು. ಮಂಜುಗಡ್ಡೆಯ ತುಂಡುಗಳು ನದಿ ಜೊತೆಗೆ ಹರಿದಿದ್ದರಿಂದ ಸಾಸ್ ಬಾಲೆನ್ ಗ್ರಾಮಕ್ಕೆ ಭಾರೀ ಹಾನಿ ಉಂಟಾಗಿತ್ತು

ಹಿಮಾಲಯ ಶ್ರೇಣಿಗೂ ಅಪಾಯ

ಹಿಮಾಲಯವನ್ನು ಭೂಮಿಯ ‘ಮೂರನೇ ಧ್ರುವ’ ಎಂದು ಕರೆಯಲಾಗುತ್ತದೆ. ಹಿಮನದಿಗಳ ಅತಿದೊಡ್ಡ ಸಂಗ್ರಹಗಳಲ್ಲಿ ಒಂದಾಗಿರುವ ಹಿಮಾಲಯ ಶ್ರೇಣಿ ಸುಮಾರು 33,000 ಕಿ.ಮೀ ವ್ಯಾಪ್ತಿಯ ಹಿಮನದಿ ಹೊದಿಕೆಯನ್ನು ಹೊಂದಿದೆ. ಧ್ರುವ ಪ್ರದೇಶಗಳನ್ನು ಹೊರತುಪಡಿಸಿದರೆ, ಇದು ಅತಿದೊಡ್ಡ ನೀರಿನ ಸಂಗ್ರಹವಾಗಿದೆ. ತೀವ್ರ ಹವಾಮಾನ ಏರುಪೇರಿನಿಂದ ಕಳೆದ 70 ವರ್ಷಗಳಲ್ಲಿ ಹಿಮಾಲಯ ಶ್ರೇಣಿಯಲ್ಲಿ ಬೃಹತ್ ಹಿಮಗಡ್ಡೆಗಳು ಒಡೆದು, ಪ್ರಹಾಹ ಉಂಟಾಗಿ ಹಾನಿ ಸಂಭವಿಸಿದ ಸುಮಾರು 20 ಘಟನೆಗಳು ದಾಖಲಾಗಿವೆ.

l 1981ರಲ್ಲಿ ನೇಪಾಳದಲ್ಲಿ ನಡೆದ ಜಿಎಲ್ಒಎಫ್ ಘಟನೆಯು ಚೀನಾ-ನೇಪಾಳ ಹೆದ್ದಾರಿಯ ಸ್ನೇಹ ಸೇತುವೆಯನ್ನು ಹಾನಿಗೊಳಿಸಿತ್ತು. ನೇಪಾಳದ ಕೋಸಿ ವಿದ್ಯುತ್ ಕೇಂದ್ರವನ್ನೂ ನಾಶಪಡಿಸಿತ್ತು

l 1985ರಲ್ಲಿ ನೇಪಾಳದ ಡಿಗ್ ಶೋ ಮತ್ತು 1994ರಲ್ಲಿ ಭೂತಾನ್‌ನ ಲುಗ್ಗಿ ತ್ಸೊ ಎಂಬಲ್ಲಿ ನಡೆದ ಜಿಎಲ್ಒಎಫ್‌ ವಿದ್ಯಮಾನಗಳು ಗಮನಾರ್ಹವಾಗಿವೆ. ಇವು ಅಧ್ಯಯನದ ಪ್ರಕರಣಗಳು ಎನಿಸಿವೆ

l 2000ರ ಆಗಸ್ಟ್‌ನಲ್ಲಿ, ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಂಜುಗಡ್ಡೆ ಒಡೆದು, 10,000ಕ್ಕೂ ಹೆಚ್ಚು ಮನೆ ಮತ್ತು 100 ಸೇತುವೆಗಳು ಹಾನಿಗೊಂಡಿದ್ದವು

l 2008ರಲ್ಲಿ ಕಾರಾಕೋರಂ ವಲಯದ ಗುಲ್ಕಿನ್ ಹಿಮನದಿಯಲ್ಲಿ ಜಿಎಲ್ಒಎಫ್ ವಿದ್ಯಮಾನ ಜರುಗಿ, ತೀವ್ರ ಹಾನಿ ಸಂಭವಿಸಿತ್ತು

l 1985ರಲ್ಲಿ ನೇಪಾಳದ ಭೋಟೆ ಕೋಸಿಯ ಡಿಗ್ ತ್ಶೋ ಸರೋವರದಲ್ಲಿ ಅತ್ಯಂತ ಮಹತ್ವದ ಜಿಎಲ್ಒಎಫ್ ಘಟನೆ ಸಂಭವಿಸಿತ್ತು. ₹1.5 ಕೋಟಿ ವೆಚ್ಚದ ನಿರ್ಮಾಣ ಹಂತದ ಸಣ್ಣ ಜಲವಿದ್ಯುತ್ ಯೋಜನೆಗೆ ಹಾನಿ ಮಾಡಿತ್ತು. ಹಲವಾರು ಕಾಲು ಸೇತುವೆಗಳು ನಾಶವಾಗಿ, ಸಾವು ನೋವುಗಳಿಗೆ ಕಾರಣವಾಗಿತ್ತು.

ಆಧಾರ: ಪಿಟಿಐ, ಬಿಬಿಸಿ, ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್, ಸೆಂಟ್ರಲ್ ವಾಟರ್ ಕಮಿಷನ್, ಜಿಯಾಗ್ರಫಿ ಅಂಡ್ ಯು, ಐಪಿಸಿಸಿ, ನೇಚರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT