ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಅಧಿಕ ಬಿತ್ತನೆಯ ಮಧ್ಯೆಯೂ ಗೋಧಿ ಇಳುವರಿ ಕುಸಿತ?

Last Updated 22 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ದೇಶದಲ್ಲಿ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. ಈ ಕಾರಣದಿಂದ ದೇಶದಲ್ಲಿ ಈ ಸಾಲಿನಲ್ಲಿ, ಈವರೆಗಿನ ಗರಿಷ್ಠ ಮಟ್ಟದ ಗೋಧಿ ಉತ್ಪಾದನೆಯಾಗಲಿದೆ ಎಂದು ಕೇಂದ್ರ ಸರ್ಕಾರವು ಅಂದಾಜಿಸಿತ್ತು. ಆದರೆ, ಗೋಧಿ ಬಿತ್ತನೆ ಪ್ರದೇಶದಲ್ಲಿ ಹಿಂಗಾರು ಮಳೆ ಕೊರತೆ ಮತ್ತು ಈಗ ಅತಿಯಾದ ಉಷ್ಣತೆಯ ಕಾರಣದಿಂದ ಇಳುವರಿ ಕಡಿಮೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಗೋಧಿಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕ್ರಿಸಿಲ್‌ ಅಂದಾಜಿಸಿದೆ. ಉಷ್ಣತೆಯಲ್ಲಿ ಆಗಿರುವ ಏರಿಕೆಯು, ಗೋಧಿಯ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆಯೂ ಹೇಳಿದೆ.

2021–22ನೇ ಸಾಲಿನಲ್ಲಿ 3.41 ಕೋಟಿ ಹೆಕ್ಟೇರ್‌ನಲ್ಲಿ ಗೋಧಿಯ ಬಿತ್ತನೆಯಾಗಿತ್ತು. ಆ ಸಾಲಿನಲ್ಲಿ ಒಟ್ಟು 11.1 ಕೋಟಿ ಟನ್‌ಗಳಷ್ಟು ಗೋಧಿಯ ಉತ್ಪಾದನೆಯಾಗಲಿದೆ ಎಂದು ಸರ್ಕಾರವು ಅಂದಾಜಿಸಿತ್ತು. ಆದರೆ, 2022ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಉತ್ತರ ಭಾರತದಲ್ಲಿ ಬೀಸಿದ ಬಿಸಿಗಾಳಿಯ ಕಾರಣದಿಂದ ಗೋಧಿಯ ಉತ್ಪಾದನೆ 10.6 ಕೋಟಿ ಟನ್‌ಗಳಿಗೆ ಕುಸಿದಿತ್ತು. 2022–23ನೇ ಸಾಲಿನ ಹಿಂಗಾರಿನಲ್ಲಿ ದೇಶದಾದ್ಯಂತ 3.43 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿಯನ್ನು ಬಿತ್ತನೆ ಮಾಡಲಾಗಿದೆ. 2021–22ನೇ ಸಾಲಿನಲ್ಲಿ ತಲೆದೋರಿದ ಪರಿಸ್ಥಿತಿಯೇ ಈ ಸಾಲಿನಲ್ಲಿಯೂ ತಲೆದೋರಬಹುದು ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಬಗ್ಗೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಸಹ ಈಚೆಗೆ ಪ್ರಕಟಣೆ ಹೊರಡಿಸಿದ್ದು, ಗೋಧಿ ಬೆಳೆ ಸಂರಕ್ಷಣೆಗೆ ಸಲಹೆಗಳನ್ನು ನೀಡಿದೆ.

ಈ ಸಾಲಿನಲ್ಲಿ ಕೇಂದ್ರ ಸರ್ಕಾರವು ಅಂದಾಜಿಸಿದ್ದಕ್ಕಿಂತ, ಗೋಧಿ ಇಳುವರಿಯು ಈಗಾಗಲೇ ಕಡಿಮೆಯಾಗಿದೆ ಎಂದು ಕ್ರಿಸಿಲ್ ಅಂದಾಜಿಸಿದೆ. ಗೋಧಿ ಹೂ ಕಟ್ಟುವ ಸಂದರ್ಭದಲ್ಲಿ ಆಗಬೇಕಿದ್ದ ಮಳೆ ಆಗದೇ ಇರುವ ಕಾರಣ ಈಗಾಗಲೇ ಇಳುವರಿ ಕಡಿಮೆಯಾಗಿದೆ. ಇನ್ನು ಮಾರ್ಚ್‌ ಮಧ್ಯಭಾಗದಿಂದ ಉಷ್ಣಾಂಶದಲ್ಲಿ ಏರಿಕೆಯಾಗಬೇಕಿತ್ತು. ಆದರೆ, ಫೆಬ್ರುವರಿ ಮೂರನೇ ವಾರದಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದೆ. ಇದು ಗೋಧಿ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೆಚ್ಚು ಉಷ್ಣತೆಯ ಕಾರಣದಿಂದ ಇಳುವರಿ ಮತ್ತಷ್ಟು ಕಡಿಮೆಯಾಗಲಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ.

ಇದೇ ಫೆಬ್ರುವರಿಯ ಮೂರನೇ ವಾರದಲ್ಲಿ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತ 5–10 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚು ಉಷ್ಣಾಂಶ ದಾಖಲಾಗಿದೆ. ಫೆಬ್ರುವರಿ 22ರ ನಂತರದ ಐದು ದಿನಗಳಲ್ಲಿ ವಾಡಿಕೆಗಿಂತ 3–5 ಡಿಗ್ರಿಗಳಷ್ಟು ಹೆಚ್ಚು ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದು ಗೋಧಿಯ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆಯೂ ಫೆಬ್ರುವರಿ 22ರ ತನ್ನ ಮುನ್ಸೂಚನೆಯಲ್ಲಿ ಹೇಳಿದೆ.

ಜನವರಿಯಲ್ಲಿ ಗೋಧಿಯ ಬೆಲೆಯಲ್ಲಿ ಏರಿಕೆಯಾದ ಕಾರಣ, ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿತ್ತು. ಗೋಧಿ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಜತೆಗೆ ತನ್ನ ಸಂಗ್ರಹದಲ್ಲಿರುವ ಗೋಧಿಯಲ್ಲಿ 30 ಲಕ್ಷ ಟನ್‌ಗಳಷ್ಟು ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಮೂಲಕ ದೇಶಿ ಮಾರುಕಟ್ಟೆಯಲ್ಲಿ ಗೋಧಿ ಲಭ್ಯತೆಯ ಕೊರತೆ ಉಂಟಾಗದಂತೆ ಕ್ರಮ ತೆಗೆದುಕೊಂಡಿತ್ತು. ಈ ಕಾರಣದಿಂದ ಗೋಧಿ ಮತ್ತು ಗೋಧಿಹಿಟ್ಟಿನ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ, ಈಗ ಇರುವ ಅಧಿಕ ಉಷ್ಣತೆಯ ಪರಿಸ್ಥಿತಿ ಇನ್ನೂ 20 ದಿನ ಮುಂದುವರಿದರೆ ಗೋಧಿಯ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕ್ರಿಸಿಲ್‌ ಹೇಳಿದೆ.

ಯಾವುದೇ ಬೆಳೆಯ ಬಿತ್ತನೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು, ಆ ಋತುವಿನಲ್ಲಿ ಇಳುವರಿಯನ್ನು ಅಂದಾಜಿಸುತ್ತದೆ. ಮಳೆ ಮತ್ತು ವಾತಾವರಣವನ್ನು ಆಧರಿಸಿ, ಕೊಯ್ಲಿನ ಸಂದರ್ಭದಲ್ಲಿ ಇಳುವರಿಯ ಪರಿಷ್ಕೃತ ಅಂದಾಜನ್ನು ಪ್ರಕಟಿಸುತ್ತದೆ. ಗೋಧಿ ಇಳುವರಿಯ ಪರಿಷ್ಕೃತ ಅಂದಾಜನ್ನು ಕೇಂದ್ರ ಸರ್ಕಾರ ಇನ್ನಷ್ಟೇ ಪ್ರಕಟಿಸಬೇಕಿದೆ. ಹೀಗಾಗಿ ಗೋಧಿ ಇಳುವರಿಯಲ್ಲಿ ಎಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ಈಗ ಲಭ್ಯವಿಲ್ಲ.

ಆತಂಕಕ್ಕೆ ಕಾರಣಗಳು

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹಿಂಗಾರು ಋತುವಿನಲ್ಲಿ ಹೆಚ್ಚು ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗುತ್ತದೆ. ಮುಂಗಾರಿನಲ್ಲಿ ಗೋಧಿ ಮತ್ತು ಭತ್ತ ಬೆಳೆಯುವ ಪ್ರದೇಶದಲ್ಲಿ, ಅಕ್ಟೋಬರ್‌ ವೇಳೆಗೆ ಗೋಧಿಯನ್ನು ಮತ್ತೆ ಬಿತ್ತನೆ ಮಾಡಲಾಗುತ್ತದೆ. ಕಬ್ಬು ಬೆಳೆಯುವ ಪ್ರದೇಶದಲ್ಲಿ ಡಿಸೆಂಬರ್ ಅಂತ್ಯ ಅಥವಾ ಜನವರಿಯ ಆರಂಭದಲ್ಲಿ ಗೋಧಿಯನ್ನು ಬಿತ್ತನೆ ಮಾಡಲಾಗುತ್ತದೆ. ಅಕ್ಟೋಬರ್‌ನಲ್ಲಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಗೋಧಿ ಬೆಳೆ ಈಗಾಗಲೇ ಕೊಯ್ಲಿಗೆ ಸಿದ್ಧವಾಗಿದೆ. ಒಂದು ವಾರದಲ್ಲಿ ಈ ಗೋಧಿಯ ಕೊಯ್ಲು ಮುಗಿಯಲಿದೆ. ಉಷ್ಣಾಂಶದಲ್ಲಿ ಆದ ಏರಿಕೆಯಿಂದ ಈ ಗೋಧಿ ಬೆಳೆಯ ಮೇಲೆ ಗಣನೀಯ ಪರಿಣಾಮ ಬೀರುವುದಿಲ್ಲ. ಆದರೆ, ಡಿಸೆಂಬರ್ ಮತ್ತು ಜನವರಿಯಲ್ಲಿ ಬಿತ್ತನೆ ಮಾಡಿದ ಗೋಧಿ ಬೆಳೆಯ ಮೇಲೆ ಅಧಿಕ ಉಷ್ಣಾಂಶವು ತೀವ್ರ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್‌ ತನ್ನ ವರದಿಯಲ್ಲಿ ಹೇಳಿದೆ.

ಡಿಸೆಂಬರ್‌ನಲ್ಲಿ ಬಿತ್ತನೆ ಮಾಡಿದ ಗೋಧಿ ಬೆಳೆಯು ಈಗ ಹಾಲ್ದೆನೆ ಹಂತದಲ್ಲಿ ಇರುತ್ತದೆ. ಈ ಹಂತದಲ್ಲಿ ವಾಡಿಕೆ ಉಷ್ಣಾಂಶದಲ್ಲಿ ಏರಿಕೆಯಾದರೆ ಮತ್ತು ಹೊಲದಲ್ಲಿ ತೇವಾಂಶ ಕಡಿಮೆಯಾದರೆ ಹಾಲ್ದೆನೆಗಳು ಮುರುಟಿಹೋಗುತ್ತವೆ. ಗೋಧಿ ಜೊಳ್ಳಾಗುತ್ತದೆ. ಉತ್ತರ ಪ್ರದೇಶದ ಪೂರ್ವಭಾಗದಲ್ಲಿ ಗೋಧಿ ಬೆಳೆ ಈ ಹಂತದಲ್ಲಿದೆ. ಈಗ ಉಷ್ಣಾಂಶದಲ್ಲಿ ಆಗಿರುವ ಏರಿಕೆಯು ಈ ರಾಜ್ಯದಲ್ಲಿನ ಗೋಧಿ ಬೆಳೆಯ ಇಳುವರಿಯನ್ನು ಬಾಧಿಸಲಿದೆ ಎಂದು ಕ್ರಿಸಿಲ್ ಹೇಳಿದೆ.

ಪಂಜಾಬ್‌ ಮತ್ತು ಹರಿಯಾಣದಲ್ಲಿ ಜನವರಿಯಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. ಈ ಪ್ರದೇಶದಲ್ಲಿನ ಗೋಧಿ ಬೆಳೆಯು ಈಗ ಇನ್ನೂ ಹೂಕಟ್ಟುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾದರೆ ಹೂಗಳು ಉದುರಿಹೋಗುತ್ತವೆ. ದೇಶದ ಒಟ್ಟು ಗೋಧಿ ಉತ್ಪಾದನೆಯಲ್ಲಿ ಉತ್ತರ ಪ್ರದೇಶದ ಉತ್ಪಾದನೆಯ ಪ್ರಮಾಣ ಶೇ 30ರಷ್ಟು. ಇನ್ನು ಪಂಜಾಬ್‌ ಮತ್ತು ಹರಿಯಾಣದ ಉತ್ಪಾದನೆ ಪ್ರಮಾಣ, ಒಟ್ಟು ಉತ್ಪಾದನೆಯ ಶೇ 25ರಷ್ಟಾಗುತ್ತದೆ. ಈ ಮೂರೂ ರಾಜ್ಯಗಳ ಉತ್ಪಾದನೆ ಪ್ರಮಾಣ ಶೇ 55ರಷ್ಟನ್ನು ದಾಟುತ್ತದೆ. ಈ ಮೂರು ರಾಜ್ಯಗಳಲ್ಲೂ ಉಷ್ಣಾಂಶ ಏರಿಕೆಯಾಗಿರುವ ಕಾರಣ ಇಲ್ಲಿ ಇಳುವರಿ ಕಡಿಮೆಯಾದರೆ, ಅದು ದೇಶದ ಒಟ್ಟು ಗೋಧಿಯ ಉತ್ಪಾದನೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುತ್ತದೆ.

*ಉತ್ತರ ಪ್ರದೇಶದ ಹಲವೆಡೆ ಕಳೆದ ವಾರ ವಾಡಿಕೆಗಿಂತ 5–10 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗಿದೆ

*ಪಂಜಾಬ್‌ ಮತ್ತು ಹರಿಯಾಣದ ಹಲವೆಡೆ ಕಳೆದ ವಾರ ವಾಡಿಕೆಗಿಂತ 4–9 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗಿದೆ

*ಈ ರಾಜ್ಯಗಳಲ್ಲಿ ಗೋಧಿ ಹೊಲಗಳಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಹೊಲಕ್ಕೆ ನೀರು ಹರಿಸಿ ಮತ್ತು ಪೋಷಕಾಂಶಗಳನ್ನು ನೀಡಿ ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ರೈತರಿಗೆ ಸಲಹೆ ನೀಡಿದೆ

ಬಿತ್ತನೆ ಮತ್ತು ಉತ್ಪಾದನೆ ಏರಿಕೆ

ದೇಶದಲ್ಲಿ ಗೋಧಿಯನ್ನು ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಸರ್ಕಾರದ ಅಂಕಿ–ಅಂಶಗಳು ಹೇಳುತ್ತವೆ. ಏರುತ್ತಿರುವ ಗೋಧಿ ಬೇಡಿಕೆ ಪೂರೈಸಲು ಬಿತ್ತನೆ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಉತ್ಪಾದನೆ ಪ್ರಮಾಣವೂ ಏರಿಕೆ ಕಂಡಿದೆ

****

ಗೋಧಿ ಬಿತ್ತನೆ ಪ್ರದೇಶ (ಕೋಟಿ ಹೆಕ್ಟೇರ್‌ಗಳಲ್ಲಿ)

2017–18;3.043

2018–19;3.008

2019–20;3.365

2020–21;3.461

2021–22;3.418

2022–23;3.432

* ದೇಶದಲ್ಲಿ ಗೋಧಿ ಬಿತ್ತನೆ ಪ್ರದೇಶವು 6 ವರ್ಷಗಳಲ್ಲಿ ಶೇ 12.8ರಷ್ಟು ಹೆಚ್ಚಳವಾಗಿದೆ

* ಈ ಆರು ವರ್ಷಗಳ ಪೈಕಿ 2020–21ರಲ್ಲಿ ಅತಿಹೆಚ್ಚು ಪ್ರದೇಶ ಅಂದರೆ, 3 ಕೋಟಿ 46 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು

* 2020–21ರ ಅವಧಿಗೆ ಹೋಲಿಸಿದರೆ, ಈ ಬಾರಿ ಗೋಧಿ ಬಿತ್ತನೆ ಪ್ರದೇಶ ಇಳಿಕೆಯಾಗಿದೆ

* 2017–18ಕ್ಕೆ ಹೋಲಿಸಿದರೆ, 2022–23ರಲ್ಲಿ 38 ಲಕ್ಷ ಹೆಕ್ಟೇರ್‌ನಷ್ಟು ಹೆಚ್ಚುವರಿ ಪ್ರದೇಶವು ಗೋಧಿ ಬಿತ್ತನೆಗೆ ಒಳಪಟ್ಟಿದೆ

ಗೋಧಿ ಉತ್ಪಾದನೆ (ಕೋಟಿ ಟನ್‌ಗಳಲ್ಲಿ)

2012–13;9.3

2013–14;9.5

2014–15;8.6

2015–16;9.2

2016–17;9.8

2017–18;9.9

2018–19;10.3

2019–20;10.7

2020–21;10.9

2021–22;10.6

2022–23;11.2 ಉತ್ಪಾದನೆ ಅಂದಾಜು

* 10 ವರ್ಷಗಳ ದತ್ತಾಂಶಗಳನ್ನು ಗಮನಿಸಿದರೆ, ಗೋಧಿ ಉತ್ಪಾದನೆಯಲ್ಲೂ ಏರಿಕೆಯ ಕಂಡುಬಂದಿದೆ

* 2012–13ರಲ್ಲಿ 9.3 ಕೋಟಿ ಟನ್‌ ಇದ್ದ ಇಳುವರಿ, 2021–22ರಲ್ಲಿ 10.6 ಕೋಟಿ ಟನ್‌ಗೆ ಜಿಗಿದಿದೆ

* ಈ ಬಾರಿಯೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಆಗಿದ್ದು, 11.2 ಕೋಟಿ ಟನ್ ಇಳುವರಿಯನ್ನು ನಿರೀಕ್ಷಿಸಲಾಗಿದೆ

* 2014–15ರ ಒಂದು ವರ್ಷ ಮಾತ್ರ ಇಳುವರಿ ಕುಸಿದಿದ್ದನ್ನು ಹೊರತುಪಡಿಸಿದರೆ, ಉಳಿದ ಎಲ್ಲ ವರ್ಷಗಳಲ್ಲೂ ಹೆಚ್ಚಳವಾಗಿದೆ

ಆಧಾರ: ಕ್ರಿಸಿಲ್ ವರದಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಪ್ರಕಟಣೆ, ಹವಾಮಾನ ಇಲಾಖೆ ಮುನ್ಸೂಚನೆ, ಆರ್‌ಬಿಐನ ರಾಜ್ಯವಾರು ಆಹಾರಧಾನ್ಯ ಉತ್ಪಾದನೆ ವರದಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT