ಗುರುವಾರ , ನವೆಂಬರ್ 26, 2020
20 °C

ಆಳ–ಅಗಲ: ಸನಿಹದಲ್ಲೇ ಇದೆಯೇ ಕೋವಿಡ್‌ ಲಸಿಕೆ?

ಉದಯ ಯು./ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ಗೆ ಲಸಿಕೆ ತಯಾರಿಸುವಲ್ಲಿ ಕೆಲವು ಕಂಪನಿಗಳು ಯಶಸ್ಸು ಸಾಧಿಸಿವೆ ಎಂದು ವರದಿಯಾಗಿದೆ. ಇಂಥ ವರದಿಗಳು ಬರುತ್ತಿದ್ದಂತೆಯೇ ಸರ್ಕಾರಗಳು ಲಸಿಕೆಗಳ ವಿತರಣೆಗೆ ವ್ಯವಸ್ಥಿತ ಯೋಜನೆ ರೂಪಿಸಲು ಆರಂಭಿಸಿವೆ. ಇದರಿಂದಾಗಿ 2021ರ ಪೂರ್ವಾರ್ಧದಲ್ಲಿ ಒಂದಷ್ಟು ಜನರಿಗಾದರೂ ಲಸಿಕೆ ಲಭಿಸಬಹುದೆಂಬ ಭರವಸೆ ಮೂಡಿದೆ. ಜಗತ್ತನ್ನು ಕಾಡಿದ ಈ ಮಹಾಮಾರಿಯಿಂದ ಮುಕ್ತಿ ಸಿಗಬಹುದೆಂಬ ನಿರೀಕ್ಷೆ ಗರಿಗೆದರಿದೆ

ಕೋವಿಡ್‌ಗೆ ಲಸಿಕೆ ತಯಾರಿಸುವ ವಿಚಾರದಲ್ಲಿ ಈಚಿನ ದಿನಗಳಲ್ಲಿ ಕೆಲವು ಆಶಾದಾಯಕ ಬೆಳವಣಿಗೆಗಳು ಕಂಡುಬಂದಿವೆ. ಕೆಲವು ಕಂಪನಿಗಳು ನಡೆಸಿರುವ ಪ್ರಯೋಗಗಳು ಯಶಸ್ಸು ಕಂಡಿದ್ದು, 2021ರ ಪೂರ್ವಾರ್ಧದಲ್ಲಿ ಲಸಿಕೆ ಲಭ್ಯವಾಗುವ ಲಕ್ಷಣಗಳು ಗೋಚರಿಸಿವೆ. ‘ಬ್ರಿಟನ್‌ನ ಅಸ್ಟ್ರಾಜೆನೆಕಾ ಸಂಸ್ಥೆ ತಯಾರಿಸಿದ ಲಸಿಕೆಯು ಯುವಕರು ಮತ್ತು ಹಿರಿಯ ವಯಸ್ಸಿನವರ ದೇಹದೊಳಗೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಆರಂಭಿಸಿರುವುದು ಕಂಡುಬಂದಿದೆ’ ಎಂದು ಬ್ಲೂಮ್‌ಬರ್ಗ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಲಾಗಿದೆ.

ಅಸ್ಟ್ರಾಜೆನೆಕಾ ಸಂಸ್ಥೆಯ ಜತೆ ಸೇರಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಈ ಲಸಿಕೆಯನ್ನು ತಯಾರಿಸುತ್ತಿದೆ.

‘ವೃದ್ಧರು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರಲ್ಲೂ ಈ ಲಸಿಕೆ ಕೆಲಸ ಮಾಡಬಲ್ಲದೇ ಎಂದು ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಬ್ಲೂಮ್‌ಬರ್ಗ್‌ ಲೇಖನವು ಸಂದೇಹ ದೂರಮಾಡಿದೆ’ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ ಜತೆಗೆ ಅವರು ಬ್ಲೂಮ್‌ಬರ್ಗ್‌ನ ಲೇಖನದ ಪ್ರತಿಯನ್ನೂ ಟ್ಯಾಗ್‌ ಮಾಡಿದ್ದಾರೆ.

‘ಯುವಕರು ಮತ್ತು ವೃದ್ಧರಲ್ಲಿ ಒಂದೇ ರೀತಿಯಲ್ಲಿ ಈ ಲಸಿಕೆಯು ಕೆಲಸ ಮಾಡುವುದು ಕಂಡುಬಂದಿದೆ. ಕೋವಿಡ್‌–19 ವೃದ್ಧರಿಗೆ ಹೆಚ್ಚು ಅಪಾಯ ಉಂಟುಮಾಡುತ್ತಿದೆ. ಆದರೆ ವೃದ್ಧರಲ್ಲಿ ಲಸಿಕೆಯ ಅಡ್ಡ ಪರಿಣಾಮಗಳು ನಿರೀಕ್ಷಿತ ಮಟ್ಟಕ್ಕಿಂತಲೂ ಕಡಿಮೆ ಇರುವುದು ಕಂಡುಬಂದಿದೆ’ ಎಂದು ಅಸ್ಟ್ರಾಜೆನೆಕಾದ ವಕ್ತಾರರು ಹೇಳಿದ್ದು ವರದಿಯಾಗಿದೆ.

ಇನ್ನೊಂದೆಡೆ, ಬ್ರಿಟಿಷ್‌ ಸರ್ಕಾರವು ಈ ಲಸಿಕೆಯ ವಿತರಣೆಗೆ ವ್ಯವಸ್ಥೆ ರೂಪಿಸಲು ಮುಂದಾಗಿದೆ. ‘ಲಸಿಕೆ ಇನ್ನೂ ಸಿದ್ಧವಾಗಿಲ್ಲ. ಆದರೆ, 2021ರ ಪೂರ್ವಾರ್ಧದಲ್ಲೇ ಇದು ಲಭ್ಯವಾಗಬಹುದೆಂಬ ನಿರೀಕ್ಷೆಯಲ್ಲಿ, ಅದನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಲು ಅಗತ್ಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ’ ಎಂದು ಬ್ರಿಟನ್‌ನ ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ.

ರಷ್ಯಾದಲ್ಲೂ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳ ಮೂರನೆ ಹಂತದ ಪರೀಕ್ಷೆ ನಡೆಯದಿದ್ದರೂ ಅಲ್ಲಿನ ಸರ್ಕಾರವು ಅವುಗಳಿಗೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ 18ಕ್ಕೂ ಹೆಚ್ಚು ಸಂಸ್ಥೆಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಹಗಲಿರುಳು ದುಡಿಯುತ್ತಿವೆ.

ಭಾರತದಲ್ಲೂ ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಗಮನಾರ್ಹ ಯಶಸ್ಸು ಲಭಿಸಿದೆ. ‘2021ರ ಮಾರ್ಚ್‌ ವೇಳೆಗೆ ನಮಗೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ’ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುರೇಶ್‌ ಜಾಧವ್‌ ಹೇಳಿದ್ದಾರೆ.

ಜತೆಗೆ ಇಲ್ಲೂ ಲಸಿಕೆಯ ವಿತರಣೆಗೆ ಸಿದ್ಧತೆಗಳು ಆರಂಭವಾಗಿವೆ. ‘ಆರಂಭದಲ್ಲಿ ಸುಮಾರು 30 ಕೋಟಿ ಡೋಸ್‌ ಲಸಿಕೆ ಲಭ್ಯವಾಗುವ ಸಾಧ್ಯತೆ ಇರುವುದರಿಂದ ಅದನ್ನು ಕೋವಿಡ್‌ ವಾರಿಯರ್‌ಗಳಿಗೆ ಆದ್ಯತೆಯ ಮೇಲೆ ವಿತರಿಸಲು ಸಿದ್ಧತೆ ಮಾಡಲಾಗುತ್ತಿದೆ’ ಎಂದು ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಮಾತ್ರವಲ್ಲ ಈ ಕುರಿತ ಆದ್ಯತಾ ಪಟ್ಟಿಯನ್ನು ಸಲ್ಲಿಸುವಂತೆ ಕೇಂದ್ರವು ರಾಜ್ಯಗಳಿಗೆ ಸೂಚನೆಯನ್ನೂ ನೀಡಿತ್ತು. ಈಗಾಗಲೇ ಸಾವಿರಾರು ಮಂದಿ ಆರೋಗ್ಯ ಸೇವಾ ಕಾರ್ಯಕರ್ತರು ಲಸಿಕೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಲಸಿಕೆ ಅಭಿವೃದ್ಧಿಪಡಿಸುವುದರ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಅದನ್ನು ತಯಾರಿಸುವುದು ಮತ್ತು ಅಗತ್ಯವಿರುವ ಎಲ್ಲರಿಗೂ ವಿತರಿಸುವುದು ದೊಡ್ಡ ಸವಾಲಾಗಿದೆ. ಬಡ ರಾಷ್ಟ್ರಗಳಿಗೂ ಲಸಿಕೆ ಲಭ್ಯವಾಗಿಸಬೇಕೆಂಬ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ವಿವಿಧ ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸುತ್ತಿದೆ. ಒಟ್ಟಿನಲ್ಲಿ 2021ರಲ್ಲಿ ಕೋವಿಡ್‌ಗೆ ಲಸಿಕೆ ಲಭಿಸುವ ಭರವಸೆಯಂತೂ ಇತ್ತೀಚಿನ ಬೆಳವಣಿಗೆಗಳಿಂದ ಮೂಡಿದೆ.

ಅಭಿವೃದ್ಧಿಯ ಹಂತಗಳು

ಸಾಮಾನ್ಯವಾಗಿ ಯಾವುದೇ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸಲು 8-10 ವರ್ಷ ಬೇಕಾಗುತ್ತದೆ. ಆದರೆ, ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಕಾರಣ, ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕೆ ಅಭಿವೃದ್ಧಿ ಕಾರ್ಯ ಆರಂಭಿಸಿ 8-10 ತಿಂಗಳು ಕಳೆಯುವಷ್ಟರಲ್ಲೇ ಹಲವು ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ ಘಟ್ಟಕ್ಕೆ ಬಂದಿವೆ.

ಪ್ರಿಕ್ಲಿನಿಕಲ್ ಟ್ರಯಲ್‌: ಪ್ರಯೋಗಾಲಯದಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಅದನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲು ಅನುಮತಿ ಪಡೆಯಲಾಗುತ್ತದೆ. ಅವನ್ನು ಪ್ರಾಣಿಗಳ (ಸಾಮಾನ್ಯವಾಗಿ ಇಲಿಗಳು) ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಕ್ಲಿನಿಕಲ್ ಟ್ರಯಲ್‌: ಈ ಹಂತದಲ್ಲಿ ಮನುಷ್ಯರ ಮೇಲೆ ಲಸಿಕೆಯನ್ನು ಮೂರು ಹಂತಗಳಲ್ಲಿ ಪ್ರಯೋಗಿಸಲಾಗುತ್ತದೆ. ಮೊದಲ ಹಂತದಲ್ಲಿ 50 ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ರೋಗಿಗೆ ಯಾವುದಾದರೂ ಹಾನಿಯಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಲಸಿಕೆಯನ್ನು ಎಷ್ಟು ಪ್ರಮಾಣದಲ್ಲಿ (ಡೋಸ್‌) ನೀಡಬೇಕು ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಸುಮಾರು 500 ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲಾಗುತ್ತದೆ. ರೋಗಿಗಳ ಮೇಲೆ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಈ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ 1,000ಕ್ಕೂ ಹೆಚ್ಚು ರೋಗಿಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಈ ಹಂತದ ಪರೀಕ್ಷೆ ನಡೆಸಿದ ನಂತರ ಲಸಿಕೆ ಸಫಲವಾಗಿದ್ದರೆ, ಆದ್ಯತೆಯ ರೋಗಿಗಳಿಗೆ ಅದನ್ನು ನೀಡಲಾಗುತ್ತದೆ.

ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ದೊರೆತ ನಂತರ, ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದೆ.

ಭಾರತದಲ್ಲಿ ಕ್ಲಿನಿಕಲ್ ಟ್ರಯಲ್‌

l ಭಾರತದಲ್ಲಿ ನಾಲ್ಕು ಕೋವಿಡ್‌ ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನ ವಿವಿಧ ಹಂತದಲ್ಲಿವೆ

l ಹೈದರಾಬಾದ್‌ನ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. ಈ ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಪತ್ತೆಯಾಗಿದೆ. ಮೂರನೇ ಹಂತದಲ್ಲಿ 25,800 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ

l ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸಹ ಭಾರತದಲ್ಲಿ ನಡೆಯುತ್ತಿದೆ

l ರಷ್ಯಾ ಅಭಿವೃದ್ಧಿಪಡಿಸಿರುವ ಸ್ಫುತ್ನಿಕ್-ವಿ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ ಅನ್ನು ಭಾರತದಲ್ಲಿ ನಡೆಸಲು ಅನುಮತಿ ದೊರೆತಿದ್ದು, ಅಂತಿಮ ಹಂತದ ಸಿದ್ಧತೆ ನಡೆದಿದೆ

l ಅಮೆರಿಕದ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್‌ ನಡೆಸಲಾಗುತ್ತಿದೆ. ಈ ಲಸಿಕೆ ಸಫಲವಾದರೆ, ಅದನ್ನು ಭಾರತದಲ್ಲೇ ತಯಾರಿಸಲು ಸೆರಂ ಇನ್‌ಸ್ಟಿಟ್ಯೂಟ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ

92 ದೇಶಗಳಿಗೆ ಉಚಿತ ವಿತರಣೆ

ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೋವಿಡ್‌ ಲಸಿಕೆ ಸಮಾನ ಆದ್ಯತೆಯಲ್ಲಿ ಲಭ್ಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದಕ್ಕಾಗಿ ಲಸಿಕೆ ಹಂಚಿಕೆ ಬದ್ಧತೆ ಒಪ್ಪಂದವನ್ನೂ ಡಬ್ಲ್ಯುಎಚ್‌ಒ ಪ್ರಕಟಿಸಿದೆ. ಲಸಿಕೆ ಅಭಿವೃದ್ಧಿಯಾದ ನಂತರ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳು, ಅವುಗಳಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಖರೀದಿಸಬಹುದು. ಲಸಿಕೆ ಖರೀದಿಸಲು ಶಕ್ತವಲ್ಲದ ರಾಷ್ಟ್ರಗಳಿಗೆ, ನೆರವು ನೀಡಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಲಸಿಕೆ ಖರೀದಿಸಲು ಶಕ್ತವಲ್ಲದ 92 ದೇಶಗಳನ್ನು ಡಬ್ಲ್ಯುಎಚ್‌ಒ ಈಗಾಗಲೇ ಗುರುತಿಸಿದೆ. ಈ ದೇಶಗಳಿಗಾಗಿ ಲಸಿಕೆ ಖರೀದಿ ಮತ್ತು ವಿತರಣೆಗಾಗಿ ಒಂದು ನಿಧಿಯನ್ನು ಸ್ಥಾಪಿಸಿದೆ. ಗಾವಿ ಸಂಸ್ಥೆಯು ಈ ನಿಧಿಯ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಈ ನಿಧಿಯು ದೇಣಿಗೆಗಳನ್ನು ಆಧರಿಸಿದೆ. ಗೇಟ್ಸ್‌ ಪ್ರತಿಷ್ಠಾನವು ಈಗಾಗಲೇ ಈ ನಿಧಿಗೆ ದೇಣಿಗೆ ನೀಡಿದೆ.

ಈ ನಿಧಿಯಲ್ಲಿನ ಹಣವನ್ನು ಬಳಸಿಕೊಂಡು, ಲಸಿಕೆ ತಯಾರಕರ ಜತೆ ಪೂರ್ವಭಾವಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಲಸಿಕೆ ತಯಾರಿಕೆಗೆ ಅನುಮತಿ ದೊರೆಯುವ ಮುನ್ನವೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅನುಮತಿ ದೊರೆತ ನಂತರ ಲಸಿಕೆ ಲಭ್ಯವಾಗುತ್ತದೆ. ಹೀಗೆ ಖರೀದಿಸಲಾದ ಲಸಿಕೆಯನ್ನು 92 ದೇಶಗಳಿಗೆ ಗಾವಿ ಹಂಚಿಕೆ ಮತ್ತು ವಿತರಣೆ ಮಾಡಲಿದೆ.

ಆದ್ಯತೆ ಮೇಲೆ ನೀಡಿಕೆ

ಲಸಿಕೆ ಅಭಿವೃದ್ಧಿಯಾದರೆ ಎಂತಹ ರೋಗಿಗಳಿಗೆ ಅದನ್ನು ಮೊದಲು ನೀಡಬೇಕು ಎಂಬುದರ ಬಗ್ಗೆ ನೀಲನಕ್ಷೆ ರೂಪಿಸಿಕೊಳ್ಳಬೇಕು. ಇಂತಹ ನೀಲನಕ್ಷೆ ಇಲ್ಲದಿದ್ದರೆ ರೋಗದ ನಿಯಂತ್ರಣ ಕಷ್ಟವಾಗುತ್ತದೆ. ಹೀಗಾಗಿ ಆಯಾ ದೇಶದ ಸರ್ಕಾರಗಳು ‘ಲಸಿಕೆ ಟಾರ್ಗೆಟ್ ಗ್ರೂಪ್‌’ಗಳನ್ನು ಗುರುತಿಸಬೇಕಾಗುತ್ತದೆ. ಆನಂತರ ನೀಲನಕ್ಷೆ ರೂಪಿಸಬೇಕಾಗುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಕೋವಿಡ್‌ ಹರಡದಂತೆ ತಡೆಯುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದರೆ, ದೇಶದ ಜನಸಂಖ್ಯೆಯಲ್ಲಿ ಶೇ 60-70ರಷ್ಟು ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಇದಕ್ಕಾಗಿ ಸರ್ಕಾರಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಡಬ್ಲ್ಯುಎಚ್‌ಒ ವಿವರಿಸಿದೆ.

ಈಗ ಸೋಂಕಿಗೆ ತುತ್ತಾಗಿರುವವರನ್ನು ಗುಣಪಡಿಸುವುದು ಆದ್ಯತೆಯಾಗಿದ್ದರೆ, ರೋಗಿಗಳಿಗೆ ಲಸಿಕೆ ನೀಡಬೇಕಾಗುತ್ತದೆ. ರೋಗಿಗಳಲ್ಲಿ, ಲಸಿಕೆಯನ್ನು ಯುವಕರಿಗೆ ನೀಡಬೇಕೆ? ವಯಸ್ಕರಿಗೆ ನೀಡಬೇಕೇ ಅಥವಾ ವೃದ್ಧರಿಗೆ ನೀಡಬೇಕೆ ಅಥವಾ ಮಕ್ಕಳಿಗೆ ನೀಡಬೇಕೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ರೋಗದಿಂದ ಹೆಚ್ಚು ಬಾಧಿತರಾಗಿರುವ ವರ್ಗಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಇದು ದೇಶದಿಂದ ದೇಶಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ತಮ್ಮಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಗಳು ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಕೋವಿಡ್‌ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದ್ದರೆ, ಮರಣ ಪ್ರಮಾಣ ಹೆಚ್ಚು ಇರುವ ವರ್ಗದ ರೋಗಿಗಳಿಗೆ ಲಸಿಕೆ ನೀಡಬೇಕಾಗುತ್ತದೆ. ಯಾವ ವಯಸ್ಸಿನವರಲ್ಲಿ, ಆರೋಗ್ಯದ ಇತರ ತೊಂದರೆ ಇರುವವರಲ್ಲಿ ಮರಣ ಪ್ರಮಾಣ ಎಷ್ಟಿದೆ ಎಂಬುದನ್ನು ಆಧರಿಸಿ ಲಸಿಕೆ ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದು ಡಬ್ಲ್ಯುಎಚ್‌ಒ ವಿವರಿಸಿದೆ.

ಸರ್ಕಾರದ ಬಳಿ ಹಣವಿದೆಯೇ?

‘ಭಾರತ ಸರ್ಕಾರದ ಬಳಿ ಮುಂದಿನ ಒಂದು ವರ್ಷದ ಅವಧಿಗೆ ₹80,000 ಕೋಟಿ ಇರಲಿದೆಯೇ ಎಂಬುದು ಈಗಿನ ಪ್ರಶ್ನೆ. ಏಕೆಂದರೆ ದೇಶದ ಎಲ್ಲರಿಗೂ ಲಸಿಕೆ ನೀಡಲು ಆರೋಗ್ಯ ಸಚಿವಾಲಯವು ಲಸಿಕೆಗಳನ್ನು ಖರೀದಿಸಲು ಮತ್ತು ವಿತರಿಸಲು ಇಷ್ಟು ಹಣದ ಅಗತ್ಯವಿದೆ. ನಮ್ಮ ಮುಂದೆ ಇರುವ ಅತ್ಯಂತ ಕಳವಳಕಾರಿ ಸವಾಲು ಇದು’ ಎಂದು ಸೆರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್ ಪೂನಾವಾಲಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಭಾರಿ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಸರ್ಕಾರ ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಉಚಿತವಾಗಿ ಏಕೆ ಲಸಿಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಲಸಿಕೆ ನೀಡಲೆಂದೇ ಸರ್ಕಾರ ಒಂದು ನಿಧಿ ಸ್ಥಾಪಿಸಲಿ, ಸಾಧ್ಯವಿದ್ದವರು ಅದಕ್ಕೆ ದೇಣಿಗೆ ನೀಡಲಿ ಎಂದು ಸಲಹೆ ನೀಡಿದ್ದಾರೆ.

ಇನ್ನೂ ಕೆಲವರು ತಮಗೆ ಮತ್ತು ತಮ್ಮ ಕುಟುಂಬದವರಿಗೆ ಲಸಿಕೆ ನಾವೇ ಹಾಕಿಸಿಕೊಳ್ಳುತ್ತೇವೆ. ಸರ್ಕಾರ ಎಲ್ಲರಿಗೂ ಉಚಿತವಾಗಿ ನೀಡುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಮೊದಲು ಲಸಿಕೆ ಸಿದ್ಧವಾಗಲಿ, ಹಣಕಾಸಿನ ವ್ಯವಸ್ಥೆ ಆಮೇಲೆ ಮಾಡಿಕೊಂಡರಾಯಿತು ಎಂದು ಪ್ರತಿಪಾದಿಸಿದ್ದಾರೆ.

ಆಧಾರ: ಪಿಟಿಐ, ರಾಯಿಟರ್ಸ್‌, ಬಿಬಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು