ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಚೀನಾದಿಂದ ಆಮದು ಗಣನೀಯ ಹೆಚ್ಚಳ!

ಆಧಾರ: ವಾಣಿಜ್ಯ ಸಚಿವಾಲಯದ ‘ರಫ್ತು–ಆಮದು ದತ್ತಾಂಶ ಬ್ಯಾಂಕ್’ ವಾರ್ಷಿಕ ಮತ್ತು ಮಾಸಿಕ ವರದಿಗಳು, ಪಿಟಿಐ
Last Updated 10 ಫೆಬ್ರುವರಿ 2022, 3:15 IST
ಅಕ್ಷರ ಗಾತ್ರ

ಚೀನಾದಿಂದ ಭಾರತವು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳ ಮೊತ್ತದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚೀನಾದಿಂದ ಆಮದು ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. 2012–13ನೇ ಸಾಲಿನಲ್ಲಿ ಚೀನಾದ ಆಮದು ಮೊತ್ತವು ₹2.84 ಲಕ್ಷ ಕೋಟಿಯಷ್ಟು ಇತ್ತು. 2018–19ನೇ ಸಾಲಿನ ವೇಳೆಗೆ ಈ ಮೊತ್ತವು ₹4.92 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಇದು ಒಟ್ಟಾರೆ ಶೇ 73.23ರಷ್ಟು ಏರಿಕೆ. ಇದು ಚೀನಾದ ಮೇಲಿನ ಭಾರತದ ಅವಲಂಬನೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

2012–13ನೇ ಸಾಲಿನಲ್ಲಿ ಭಾರತವು ವಿಶ್ವದ ಎಲ್ಲಾ ದೇಶಗಳಿಂದ ₹26.69 ಲಕ್ಷ ಕೋಟಿ ಮೊತ್ತದಷ್ಟು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಂಡಿತ್ತು. 2018–19ನೇ ಸಾಲಿನಲ್ಲಿ ಈ ಮೊತ್ತವು ₹35.94 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆದರೂ ಈ ಏರಿಕೆ ಪ್ರಮಾಣವು ಶೇ 34.59ರಷ್ಟು ಮಾತ್ರ. ಚೀನಾದಿಂದ ಆಮದು ಮಾಡಿಕೊಳ್ಳಲಾದ ಸರಕು ಮತ್ತು ಸೇವೆಗಳ ಮೊತ್ತವು ಇದರ ದುಪ್ಪಟ್ಟು ಏರಿಕೆಯಾಗಿದೆ. ಇದೂ ಸಹ ಚೀನಾದ ಮೇಲಿನ ಭಾರತದ ಅವಲಂಬನೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿತ್ತು. ಇದಕ್ಕಾಗಿ ಭಾರತದಲ್ಲೇ ತಯಾರಿಸಿ (ಮೇಕ್‌ ಇನ್ ಇಂಡಿಯಾ) ಅಭಿಯಾನಕ್ಕೆ ಚಾಲನೆ ನೀಡಿತು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿತು. ಹೀಗಿದ್ದೂ, ದೇಶದ ಆಮದು ಅವಲಂಬನೆ ಕಡಿಮೆಯಾಗಿಲ್ಲ.

2020ರಲ್ಲಿ ಗಾಲ್ವನ್‌ ಕಣಿವೆಯಲ್ಲಿ ಚೀನಾ ಸೈನಿಕರು ಭಾರತದ ಸೈನಿಕರ ಜತೆ ಸಂಘರ್ಷ ನಡೆಸಿದ ನಂತರ, ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಟ್ರೆಂಡ್‌ ದೇಶದೆಲ್ಲೆಡೆ ಚಾಲ್ತಿಗೆಬಂದಿತ್ತು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವೂ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಆರಂಭಿಸಿತು. ಇದರ ಜತೆಯಲ್ಲೇ ‘ವೋಕಲ್ ಫಾರ್ ಲೋಕಲ್‌’ ಕಾರ್ಯಕ್ರಮಕ್ಕೂಚಾಲನೆ ದೊರೆಯಿತು. ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ವಸ್ತುಗಳು/ಸರಕುಗಳ ಬಳಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮಗಳ ಉದ್ದೇಶವೂ ಸಂಪೂರ್ಣವಾಗಿ ಈಡೇರಿದಂತೆ ಕಾಣುವುದಿಲ್ಲ. ಈ ಅವಧಿಯಲ್ಲಿ ಮತ್ತೆ ಚೀನಾದಿಂದ ಆಮದು ಮಾಡಿಕೊಳ್ಳಲಾದ ಸರಕು ಮತ್ತು ಸೇವೆಗಳ ಮೊತ್ತವು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಚೀನಾದಿಂದ ಆಮದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

* 2019–20ರಲ್ಲಿ ಕೋವಿಡ್‌ನ ಕಾರಣದಿಂದ ದೇಶದ ಒಟ್ಟು ಆಮದಿನ ಮೊತ್ತವು ₹33.60 ಲಕ್ಷ ಕೋಟಿಗೆ ಕುಸಿದಿತ್ತು. ಆಗ ಚೀನಾದಿಂದ ಆಮದು ಮಾಡಿಕೊಳ್ಳಲಾದ ಸರಕು ಮತ್ತು ಸೇವೆಗಳ ಮೊತ್ತವು ₹4.61 ಲಕ್ಷ ಕೋಟಿಗೆ ಕುಸಿದಿತ್ತು

* 2020–21ರಲ್ಲಿ ಕೋವಿಡ್‌ನ ಕಾರಣದಿಂದ ದೇಶದ ಒಟ್ಟು ಆಮದಿನ ಪ್ರಮಾಣ ₹29.15 ಲಕ್ಷ ಕೋಟಿಗೆ ಕುಸಿದಿತ್ತು. ಆದರೆ ಅದೇ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾದ ಸರಕು ಮತ್ತು ಸೇವೆಗಳ ಮೊತ್ತವು ₹4.82 ಲಕ್ಷ ಕೋಟಿಗೆ ಏರಿಕೆಯಾಗಿತ್ತು

* 2021–22ರಲ್ಲಿ ದೇಶದ ಆಮದು ಏರುಗತಿಯಲ್ಲಿದೆ. ಈ ಆರ್ಥಿಕ ವರ್ಷದ ಮೊದಲ 8 ತಿಂಗಳಲ್ಲೇ ದೇಶವು ₹2.82 ಲಕ್ಷ ಕೋಟಿಯಷ್ಟು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಚೀನಾದಿಂದ ₹4.32 ಲಕ್ಷ ಕೋಟಿಯಷ್ಟು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಮೊತ್ತವು ₹5 ಲಕ್ಷ ಕೋಟಿಯನ್ನು ಮೀರಲಿದೆ ಎಂದು ಅಂದಾಜಿಸಲಾಗಿದೆ

ಚೀನಾದ ಮೇಲಿನ ಅವಲಂಬನೆ ಹೆಚ್ಚಳ

ದೇಶದ ಒಟ್ಟು ಆಮದಿನಲ್ಲಿ ಚೀನಾದ ಪಾಲು ಪ್ರತೀ ವರ್ಷ ಹೆಚ್ಚುತ್ತಲೇ ಇದೆ. 2012–13ನೇ ಸಾಲಿನಲ್ಲಿ ಭಾರತದ ಒಟ್ಟು ಆಮದಿನ ಮೊತ್ತದಲ್ಲಿ ಚೀನಾದ ಪ್ರಮಾಣ ಶೇ 10.65ರಷ್ಟಿತ್ತು. 2020–21ನೇ ಸಾಲಿನಲ್ಲಿ ಈ ಪ್ರಮಾಣವು ಶೇ 16.54ಕ್ಕೆ ಏರಿಕೆಯಾಗಿತ್ತು. ಇದು ಈವರೆಗಿನ ಗರಿಷ್ಠ ಪ್ರಮಾಣವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎಂಟು ತಿಂಗಳಲ್ಲಿ ದೇಶವು ಮಾಡಿಕೊಂಡಿರುವ ಒಟ್ಟು ಆಮದಿನಲ್ಲಿ ಚೀನಾದ ಪಾಲು ಶೇ 15.47ರಷ್ಟಿದೆ. ಇದು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಶೇ 18ರಷ್ಟನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.

2020–21ನೇ ಸಾಲಿನಲ್ಲಿ ಭಾರತವು ಚೀನಾದಿಂದ ₹11,503 ಕೋಟಿ ಮೊತ್ತದಷ್ಟು ರಸಗೊಬ್ಬರವನ್ನು ಆಮದು ಮಾಡಿಕೊಂಡಿತ್ತು. 2021–22ನೇ ಸಾಲಿನ ಮೊದಲ ಎಂಟು ತಿಂಗಳ ಅಂತ್ಯದ ವೇಳೆಗೆ ಈ ಮೊತ್ತವು ₹19,005 ಕೋಟಿಗೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ರಸಗೊಬ್ಬರ ಆಮದಿನ ಪ್ರಮಾಣವು ಶೇ 65.21ರಷ್ಟು ಏರಿಕೆಯಾಗಿದೆ. ಇದು ಚೀನಾದಿಂದ ಆಮದು ಮಾಡಿಕೊಳ್ಳಲಾದ ಯಾವುದೇ ಸರಕಿನ ಹೋಲಿಕೆಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ.

2020–21ನೇ ಸಾಲಿನಲ್ಲಿ ಭಾರತವು ಚೀನಾದಿಂದ ₹1.03 ಲಕ್ಷ ಕೋಟಿ ಮೊತ್ತದಷ್ಟು ಪರಮಾಣು ರಿಯಾಕ್ಟರ್‌ ಮತ್ತು ಅದರ ಬಿಡಿಭಾಗಗಳನ್ನು ಆಮದು ಮಾಡಿಕೊಂಡಿದೆ. 2021–22ನೇ ಸಾಲಿನ ಮೊದಲ 8 ತಿಂಗಳಲ್ಲಿ ₹91,536 ಕೋಟಿ ಮೊತ್ತದಷ್ಟು ಪರಮಾಣು ರಿಯಾಕ್ಟರ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. 2020–21ನೇ ಸಾಲಿನಲ್ಲಿ ಭಾರತವು ಚೀನಾದಿಂದ ₹1.50 ಲಕ್ಷ ಕೋಟಿ ಮೊತ್ತದಷ್ಟು ಎಲೆಕ್ಟ್ರಿಕಲ್ ವಸ್ತುಗಳು, ಉಪಕರಣಗಳು ಮತ್ತು ಅವುಗಳ ಬಿಡಿಭಾಗಗಳನ್ನು ಆಮದು ಮಾಡಿಕೊಂಡಿದೆ. 2021–22ನೇ ಸಾಲಿನ ಮೊದಲ ಎಂಟು ತಿಂಗಳಲ್ಲಿ ₹1.31 ಲಕ್ಷ ಕೋಟಿ ಮೊತ್ತದಷ್ಟು ಈ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

‘ನವ ಭಾರತ ಚೀನಾ ನಿರ್ಭರವೇ?’

ಕೇಂದ್ರ ಸರ್ಕಾರದ ಜನಪ್ರಿಯ ‘ಆತ್ಮನಿರ್ಭರ ಭಾರತ’ ಘೋಷಣೆಯನ್ನು ಮೂದಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಅದನ್ನು‘ಚೀನಾ ನಿರ್ಭರವೇ’ ಎಂದು ಪ್ರಶ್ನಿಸಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆಯನ್ನು ಚೀನಾ ನಿರ್ಮಿಸಿದೆ ಎಂಬುದನ್ನು ಉಲ್ಲೇಖಿಸಿ ಅವರು ಈ ಟೀಕೆ ಮಾಡಿದ್ದಾರೆ. ಟ್ವೀಟ್ ಮಾಡಿರುವ ಅವರು ‘ನವ ಭಾರತವು ‘ಚೀನಾ ನಿರ್ಭರ’ವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಚೀನಾದ ಸರಕುಗಳಿಗೆ ನಿಷೇಧ ಹೇರಬೇಕು ಎಂಬ ಆಗ್ರಹ ಹಾಗೂ ಗಡಿ ಸಂಘರ್ಷದ ನಡುವೆಯೂ ಚೀನಾದ ಕಂಪನಿಗಳು ಭಾರತದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ.

ಕಳೆದ ಶನಿವಾರ, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ರಾಮಾನುಜಾಚಾರ್ಯರ ಪ್ರತಿಮೆ ತಯಾರಾದದ್ದುಚೀನಾದಲ್ಲಿ. ಚೀನಾದ ಏರೋಸನ್ ಕಾರ್ಪೊರೇಷನ್ ಕಂಪನಿಗೆ 2015ರಲ್ಲಿ ₹135 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿತ್ತು.ಚೀನಾದಲ್ಲಿ ಇದರ ಬಿಡಿಭಾಗಗಳನ್ನು ತಯಾರಿಸಿ, ಭಾರತದಲ್ಲಿ ಅವುಗಳನ್ನು ಜೋಡಿಸಲಾಗಿದೆ.

2018ರಲ್ಲಿ ₹3 ಸಾವಿರ ಕೋಟಿ ವೆಚ್ಚದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣದಲ್ಲೂ ಚೀನಾದ ಕೊಡುಗೆಯಿದೆ. ಪ್ರತಿಮೆಯ ಮೇಲ್ಮೈಗೆಹೊದಿಸಲಾಗಿರುವ ಕಂಚಿನ ಕವಚಗಳು ತಯಾರಾಗಿದ್ದು ಚೀನಾದಲ್ಲಿ. 553 ಕಂಚಿನ ಕವಚಗಳನ್ನು ಚೀನಾದಲ್ಲಿ ತಯಾರಿಸಿ, ಭಾರತಕ್ಕೆ ತಂದು ಜೋಡಲಾಗಿದೆ ಎಂದು ಗುತ್ತಿಗೆ ವಹಿಸಿಕೊಂಡಿದ್ದ ಎಲ್‌ ಅಂಡ್‌ ಟಿ ಕಂಪನಿ ಹೇಳಿದೆ. ಇದು ಅಂತರರಾಷ್ಟ್ರೀಯ ಬಿಡ್ಡಿಂಗ್‌ನ ಭಾಗವಾಗಿದ್ದು, ಭಾರತದಲ್ಲಿ ಇಷ್ಟು ಬೃಹತ್ ಗಾತ್ರದ ಕವಚಗಳನ್ನು ತಯಾರಿಸುವ ಸೌಲಭ್ಯ ಇರಲಿಲ್ಲ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದರು.

ಕೇವಲ ಪ್ರತಿಮೆ ನಿರ್ಮಾಣದಲ್ಲಿ ಮಾತ್ರವಲ್ಲದೆ, ದೇಶದ ಹಲವು ಬೃಹತ್ ಯೋಜನೆಗಳಲ್ಲಿ ಚೀನಾ ಕೆಲಸ ಮಾಡುತ್ತಿದೆ. ಶಾಂಘೈ ಟನೆಲ್ ಎಂಜಿನಿಯರಿಂಗ್ ಎಂಬ ಚೀನಾದ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗೆ ₹1,226 ಕೋಟಿ ಮೊತ್ತದ ಗುತ್ತಿಗೆಯನ್ನು ಸರ್ಕಾರ ನೀಡಿದೆ.ದೆಹಲಿ–ಮೀರಠ್ ಆರ್‌ಆರ್‌ಟಿಎಸ್ ಯೋಜನೆಯ ಭಾಗವಾಗಿ, 5.6 ಕಿಲೋಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಗುತ್ತಿಗೆ ನೀಡಲಾಗಿದೆ.ಚೀನಾದ ಗ್ರೇಟ್ ವಾಲ್ ಆಟೊಮೊಬೈಲ್ ಕಂಪನಿಯು ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹7,500 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ. ಭಾರತದಲ್ಲಿ ವಿದ್ಯುತ್‌ಚಾಲಿತ ಕಾರುಗಳ ಮಾರಾಟಕ್ಕೆ ಕಂಪನಿ ಆಲೋಚಿಸುತ್ತಿದೆ.

2020ರಲ್ಲಿ ನಡೆದ ಗಾಲ್ವನ್ ಗಡಿ ಘರ್ಷಣೆಯಿಂದಾಗಿ ₹15 ಸಾವಿರ ಕೋಟಿ ಮೊತ್ತದ 150ಕ್ಕೂ ಹೆಚ್ಚು ಬಂಡವಾಳ ಹೂಡಿಕೆ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ಹೇಳಲಾಗಿದೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶಗಳ ಯಾವುದೇ ಯೋಜನೆಗಳನ್ನು ಸರ್ಕಾರದ ಅನುಮತಿಯಿಲ್ಲದೆ ಜಾರಿ ಮಾಡುವಂತಿಲ್ಲ ಎಂದುಘರ್ಷಣೆಯ ಬಳಿಕ ಕೇಂದ್ರ ನಿರ್ದೇಶಿಸಿತ್ತು. ಈ ಸಂಬಂಧತನ್ನ ಸಾಮಾನ್ಯ ಹಣಕಾಸು ನಿಯಮಗಳಿಗೆ ತಿದ್ದುಪಡಿ ತಂದಿತ್ತು.

ಆದರೆ, 2021ರ ಜುಲೈನಲ್ಲಿ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿತ್ತು.ಯೋಜನೆಗಳಿಗೆ ಬಿಡ್ ಮಾಡಲು ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳ ಮೂಲಕ ಚೀನೀ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಲು ದೇಶೀಯ ಕಂಪನಿಗಳಿಗೆ ಅವಕಾಶ ನೀಡಿತ್ತು. ಇದರಿಂದ ಚೀನಾದ ಕಂಪನಿಗಳಿಗೆ ಭಾರತದ ಯೋಜನೆಗಳಲ್ಲಿ ಪಾಲ್ಗೊಳ್ಳಲು ಮತ್ತೆ ಅವಕಾಶ ಸಿಕ್ಕಂತಾಗಿತ್ತು.45 ಯೋಜನೆಗಳು ಸರ್ಕಾರದ ಅನುಮೋದನೆಗೆ ಕಾಯುತ್ತಿವೆ ಎನ್ನಲಾಗಿದೆ.

ಗಾಲ್ವನ್ ಸಂಘರ್ಷ

ಭಾರತ–ಹಾಗೂ ಚೀನಾ ನಡುವೆ ಸೃಷ್ಟಿಯಾಗಿದ್ದ 72 ದಿನಗಳ ಸೇನಾ ಬಿಕ್ಕಟ್ಟು ತಿಳಿಯಾಯಿತು ಎನ್ನುವಾಗಲೇ ಗಾಲ್ವನ್ ಬಿಕ್ಕಟ್ಟು ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಕೆಡಿಸಿತ್ತು. 2020ರ ಮೇ ತಿಂಗಳಲ್ಲಿ ಗಾಲ್ವನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೈನಿಕರ ನಡುವೆ ಘರ್ಷಣೆ ನಡೆದು ಭಾರತದ 20 ಸೈನಿಕರು ಹುತಾತ್ಮರಾದರು.

ಉಭಯ ದೇಶಗಳ ಗಡಿಗಳಲ್ಲಿ ಸೇನಾ ಜಮಾವಣೆ ಹಾಗೂ ಘರ್ಷಣೆ ವಿಚಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ, ಘರ್ಷಣೆಯಲ್ಲಿ ಚೀನಾ ಸೇನೆಯ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಇರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಆದರೆ ಈ ಘಟನೆಯ ನಂತರ ಚೀನಾ ವಸ್ತುಗಳ ಬಳಕೆಯನ್ನು ಬಹಿಷ್ಕರಿಸಬೇಕು ಎಂಬ ಆಗ್ರಹ ತೀವ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT