ಬುಧವಾರ, ಮಾರ್ಚ್ 29, 2023
28 °C

ಆಳ–ಅಗಲ | ಇಂಟರ್‌ನೆಟ್ ನಿರ್ಬಂಧ, ಭಾರತವೇ ಮುಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ 2015ರಿಂದ 2022ರ ಅಂತ್ಯದವರೆಗೆ 55 ಸಾವಿರಕ್ಕೂ ಹೆಚ್ಚು ಜಾಲತಾಣಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ವಿಶ್ವದಲ್ಲಿಯೇ ಹೆಚ್ಚು. ಇವುಗಳಲ್ಲಿ ಶೇ 47ಕ್ಕೂ ಹೆಚ್ಚು ಜಾಲತಾಣಗಳನ್ನು ಸರ್ಕಾರದ ಆದೇಶದ ಮೇರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ, ಈ ಜಾಲತಾಣಗಳನ್ನು ಏಕೆ ಸ್ಥಗಿತಗೊಳಿಸಲಾಗಿದೆ ಎಂಬ ಕಾರಣವನ್ನು ಸರ್ಕಾರ ನೀಡಿಲ್ಲ. ಕಾನೂನಿನ ಅನ್ವಯ ಅಂತಹ ಕಾರಣವನ್ನು ಸರ್ಕಾರ ನೀಡಬೇಕಿಲ್ಲ. ಹೀಗಾಗಿಯೇ ಕಾನೂನನ್ನು ಸರ್ಕಾರಗಳು ದುರುಪಯೋಗ ಮಾಡಿಕೊಳ್ಳುತ್ತಿರುವ ಸಾಧ್ಯತೆಗಳು ಅತ್ಯಧಿಕವಾಗಿವೆ ಎಂದು ‘ಸಾಫ್ಟ್‌ವೇರ್‌ ಫ್ರೀಡಂ ಲಾ ಸೆಂಟರ್‌ ಇಂಡಿಯಾ’ (ಎಸ್‌ಎಫ್‌ಎಲ್‌ಸಿ) ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ದೇಶದಲ್ಲಿ ಯಾವುದೇ ಜಾಲತಾಣ, ಯುಆರ್‌ಎಲ್‌, ಸಾಮಾಜಿಕ ಜಾಲತಾಣ ಪೋಸ್ಟ್‌ಗಳು, ಯುಟ್ಯೂಬ್‌ ವಾಹಿನಿಗಳು ಮತ್ತು ಕಂಟೆಂಟ್‌ಗಳನ್ನು ಸ್ಥಗಿತಗೊಳಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆದೇಶ ಹೊರಡಿಸಲಾಗುತ್ತದೆ. ಮುಖ್ಯವಾಗಿ ಈ ಕಾಯ್ದೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಸರ್ಕಾರವು ಅಂತಹ ಆದೇಶವನ್ನು ಹೊರಡಿಸಬಹುದು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ, ಭಾರತದೊಂದಿಗೆ ಸ್ನೇಹಸಂಬಂಧ ಹೊಂದಿರುವ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವಂತಹ ಬರಹ ಅಥವಾ ಚಿತ್ರ ಅಥವಾ ವಿಡಿಯೊ ಅಥವಾ ಕಲಾಕೃತಿಗಳು ಇರುವ ಜಾಲತಾಣಗಳನ್ನು ಸ್ಥಗಿತಗೊಳಿಸಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.

ಇಡೀ ಜಾಲತಾಣ ಅಥವಾ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆ ಅಥವಾ ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌ಗಳನ್ನು ಸ್ಥಗಿತಗೊಳಿಸುವ ಆದೇಶ ನೀಡುವ ಅಧಿಕಾರವನ್ನು ಈ ಕಾಯ್ದೆಯ 69ನೇ ಎ ಸೆಕ್ಷನ್‌ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಪೂರ್ಣ ಜಾಲತಾಣ ಅಥವಾ ಸಾಮಾಜಿಕ ಜಾಲತಾಣ ಖಾತೆ ಅಥವಾ ಯುಟ್ಯೂಬ್‌ ವಾಹಿನಿಯನ್ನು ಸ್ಥಗಿತಗೊಳಿಸದೆ ಅದರಲ್ಲಿರುವ ‘ಕಂಟೆಂಟ್‌’ ಅನ್ನು ಸ್ಥಗಿತಗೊಳಿಸಲೂ ಅವಕಾಶವಿದೆ.

2015ರಿಂದ 2022ರ ನಡುವೆ ಈ ಸೆಕ್ಷನ್‌ನ ಅಡಿಯಲ್ಲಿ ಒಟ್ಟು 26,447 ಜಾಲತಾಣಗಳನ್ನು (ಸಾಮಾಜಿಕ ಜಾಲತಾಣ ಖಾತೆಗಳು, ಯುಟ್ಯೂಬ್‌ ವಾಹಿನಿಗಳು ಸೇರಿ) ಸ್ಥಗಿತಗೊಳಿಸಲು ಸರ್ಕಾರವು ಆದೇಶಿಸಿದೆ. ಇವುಗಳಲ್ಲಿ 26,379 ಜಾಲತಾಣಗಳನ್ನು ಸ್ಥಗಿತಗೊಳಿಸಿ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆದೇಶ ಹೊರಡಿಸಿದ್ದರೆ, 94 ಜಾಲತಾಣಗಳನ್ನು ಸ್ಥಗಿತಗೊಳಿಸಿ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ. ಈ ಸೆಕ್ಷನ್‌ ಅಡಿಯಲ್ಲಿ ಯಾವ ಕಾರಣಕ್ಕೆ ಆದೇಶ ಹೊರಡಿಸಲಾಗಿದೆ ಎಂಬುದನ್ನು ಸರ್ಕಾರವಾಗಲೀ ಅಥವಾ ಸಂಬಂಧಿತ ಸಚಿವಾಲಯವಾಗಲಿ ಬಹಿರಂಗಪಡಿಸಬೇಕಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಇಂತಹ ಆದೇಶ ಹೊರಡಿಸಲಾಗಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಾಗುವುದೇ ಇಲ್ಲ. ಹೀಗಾಗಿ ಈ ಕಾನೂನು ದುರುಪಯೋಗ ಆಗುತ್ತಿದೆ ಎಂದು ಎಸ್‌ಎಫ್‌ಎಲ್‌ಸಿ ತನ್ನ ವರದಿಯಲ್ಲಿ ಹೇಳಿದೆ.

ಕಾಪಿರೈಟ್‌ ಉಲ್ಲಂಘನೆ ಕಾರಣಕ್ಕೆ 26,024 ಜಾಲತಾಣಗಳನ್ನು (ಸಾಮಾಜಿಕ ಜಾಲತಾಣ ಖಾತೆಗಳು, ಯುಟ್ಯೂಬ್‌ ವಾಹಿನಿಗಳು ಸೇರಿ) ವಿವಿಧ ನ್ಯಾಯಾಲಯಗಳ ಆದೇಶದ ಅನ್ವಯ ಸ್ಥಗಿತಗೊಳಿಸಲಾಗಿದೆ. ಮಕ್ಕಳನ್ನು ಒಳಗೊಂಡ ನೀಲಿಚಿತ್ರಗಳನ್ನು ಹೊಂದಿದ್ದ 1,065 ಜಾಲತಾಣಗಳನ್ನು ಈ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದೆ.

ಏರುತ್ತಲೇ ಹೋದ ನಿರ್ಬಂಧ
ದೇಶದಲ್ಲಿ 10 ವರ್ಷಗಳ ಅವಧಿಯಲ್ಲಿ 699 ಬಾರಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕ ತುರ್ತು ಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹೆಸರಿನಲ್ಲಿ ಈ ಅಸ್ತ್ರವನ್ನು ಪ್ರಯೋಗಿಸಲಾಗುತ್ತದೆ. ಭಯೋತ್ಪಾದಕ ಚಟುವಟಿಕೆಗಳು, ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದಾಗ, ಕೋಮು ಘರ್ಷಣೆಗಳು ನಡೆದಾಗ, ಅವುಗಳ ವ್ಯಾಪ್ತಿಯು ದೇಶದಾದ್ಯಂತ ವಿಸ್ತರಿಸುವುದನ್ನು ತಡೆಯಲು ಇಂಟರ್‌ನೆಟ್ ಮೂಲಕ ಸಂವಹನ ಬಂದ್ ಮಾಡಲಾಗುತ್ತದೆ. ಕೆಲವೊಮ್ಮೆ, ಮುಂಜಾಗ್ರತಾ ಕ್ರಮವಾಗಿಯೂ ಅಂತರ್ಜಾಲವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪರೀಕ್ಷೆಗಳ ಸಮಯದಲ್ಲಿ ನಕಲು ತಡೆಯಲು ಈ ಅಸ್ತ್ರವನ್ನು ಬಳಸಿಕೊಂಡ ಉದಾಹರಣೆಗಳಿವೆ.

2012ರಿಂದ 2022ರವರೆಗಿನ ದತ್ತಾಂಶಗಳನ್ನು ಗಮನಿಸಿದರೆ, ಇಂಟರ್‌ನೆಟ್ ಬಳಕೆಯನ್ನು ತಡೆಹಿಡಿಯುವ ಯತ್ನಗಳು ಹೆಚ್ಚಳವಾಗಿವೆ. 2012ರಲ್ಲಿ ಅಂದರೆ ಹತ್ತು ವರ್ಷಗಳ ಹಿಂದೆ ಇಂಟರ್‌ನೆಟ್ ಸ್ಥಗಿತಗೊಳಿಸಿದ್ದ ಕೇವಲ 3 ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ಇವುಗಳ ಸಂಖ್ಯೆ 2022ರಲ್ಲಿ 75ಕ್ಕೆ ತಲುಪಿದೆ ಎಂದು ವರದಿ ಹೇಳಿದೆ. ಅಂದರೆ ಶೇ 2,400ರಷ್ಟು ಹೆಚ್ಚಳವಾಗಿದೆ. 2016ರಲ್ಲಿ ಈ ಪ್ರವೃತ್ತಿ 30ರ ಗಡಿ ದಾಟಿತು. 2019ರಲ್ಲಿ 100ಕ್ಕೂ ಹೆಚ್ಚು ಬಾರಿ ಇಂಟರ್‌ನೆಟ್‌ ಬಂದ್ ಆಗಿತ್ತು. 2018ರಲ್ಲಿ ಅತಿಹೆಚ್ಚು ಬಾರಿ ಅಂದರೆ, 135 ಬಾರಿ ಇಂತಹ ಯತ್ನಗಳು ನಡೆದಿದ್ದವು. ಕಳೆದ ವರ್ಷ ಮಾತ್ರ ಈ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆಯಾದರೂ, ಸೇವೆ ಸ್ಥಗಿತಗೊಳಿಸುವ ಪ್ರವೃತ್ತಿ ಮುಂದುವರಿದಿದೆ. 

ಮಾನವ ಹಕ್ಕುಗಳ ಉಲ್ಲಂಘನೆ: ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವರದಿ ಹೇಳಿದೆ. ಪ್ರತಿಭಟನೆ ನಡೆಸುವ ಜನರ ದನಿಯನ್ನು ಹತ್ತಿಕ್ಕಲು, ಯುದ್ಧದ ಸಮಯದ ಅಪರಾಧಗಳು ಹೊರಜಗತ್ತಿಗೆ ತಿಳಿಯದಂತೆ ಮರೆಮಾಚುವ ಉದ್ದೇಶದಿಂದ ಆಳುವ ಸರ್ಕಾರಗಳು ಇಂಟರ್‌ನೆಟ್ ಅಸ್ತ್ರವನ್ನು ಪ್ರಯೋಗಿಸುತ್ತವೆ. ಉಕ್ರೇನ್, ರಷ್ಯಾ, ಮ್ಯಾನ್ಮಾರ್‌, ಟಿಗ್ರೆ ಮೊದಲಾದ ದೇಶಗಳಲ್ಲಿ ಇಂತಹ ವಿದ್ಯಮಾನಗಳು ನಡೆದಿವೆ. 

ಕಾಶ್ಮೀರದಲ್ಲಿ ಅತ್ಯಧಿಕ
ಭಾರತದ ಇತರೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ, ಜಮ್ಮು–ಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿದ ಉದಾಹರಣೆಗಳು ಅತ್ಯಧಿಕವಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ಜಮ್ಮು–ಕಾಶ್ಮೀರ ಪ್ರದೇಶವೊಂದರಲ್ಲೇ 418 ಬಾರಿ ಇಂಟರ್‌ನೆಟ್‌ ಸಂಪರ್ಕಕ್ಕೆ ಕೊಡಲಿ ಬಿದ್ದಿದೆ ಎಂದು ಎಸ್‌ಎಫ್‌ಎಲ್‌ಸಿ.ಇನ್ ಜಾಲತಾಣ ದತ್ತಾಂಶಗಳನ್ನು ಒದಗಿಸಿದೆ. ಭಯೋತ್ಪಾದಕ ಚಟುವಟಿಕೆಗಳ ಕಾರಣ ನೀಡಿ, ಪದೇ ಪದೇ ಅಥವಾ ದೀರ್ಘಕಾಲದವರೆಗೆ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಈ ವಿಚಾರದಲ್ಲಿ ಜಮ್ಮು ಕಾಶ್ಮೀರವು ದೇಶದ ಅತಿಹೆಚ್ಚು ಬಾಧಿತ ಪ್ರದೇಶವಾಗಿದೆ. ದೇಶದ ಇಂತಹ ಪ್ರಕರಣಗಳಲ್ಲಿ ಜಮ್ಮು ಕಾಶ್ಮೀರದ ಪಾಲು ಶೇ 67ರಷ್ಟಿದೆ.

ರಾಜಸ್ಥಾನವು ನಂತರದ ಸ್ಥಾನದಲ್ಲಿದ್ದು, ಇಲ್ಲಿ 96 ಬಾರಿ ಅಂತರ್ಜಾಲದ ಸೇವೆ ತೆಗೆದುಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ 30 ಪ್ರಕರಣಗಳು ದಾಖಲಾಗಿವೆ. ಹರಿಯಾಣ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದಲ್ಲಿ 15ಕ್ಕೂ ಹೆಚ್ಚು ಬಾರಿ ಇಂತಹ ಘಟನೆಗಳು ಜರುಗಿವೆ. ಉತ್ತರ ಭಾರತದ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲೇ ಈ ಪ್ರವೃತ್ತಿ ಹೆಚ್ಚಿದೆ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಒಂದೋ, ಎರಡೋ ಪ್ರಕರಣಗಳು ಮಾತ್ರ ಕಂಡುಬಂದಿವೆ. ಕರ್ನಾಟದಲ್ಲಿ ಈ ಹತ್ತು ವರ್ಷಗಳಲ್ಲಿ ಒಮ್ಮೆ ಮಾತ್ರ ಇಂಟರ್‌ನೆಟ್ ಸೇವೆಯನ್ನು ತಡೆಹಿಡಿಯಲಾಗಿತ್ತು. 

ಆರ್ಥಿಕ ನಷ್ಟದ ಬಿಸಿ
ಜನರು ಅತಿಯಾಗಿ ಅವಲಂಬಿತವಾಗಿರುವ ಇಂಟರ್‌ನೆಟ್ ಆಧರಿತ ಸೇವೆಗಳನ್ನು ದಿಢೀರ್ ಸ್ಥಗಿತಗೊಳಿಸುವುದರಿಂದ ನಾನಾ ರೀತಿಯ ಪರಿಣಾಮಗಳು ಉಂಟಾಗುತ್ತವೆ. ಇವುಗಳಲ್ಲಿ ಮುಖ್ಯವಾದುದು ಆರ್ಥಿಕ ಹೊಡೆತ. 2022ರಲ್ಲಿ ಅಂರ್ತಜಾಲ ಸೇವೆ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ದೇಶದಲ್ಲಿ ಸುಮಾರು ₹1,420 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ‘ಟಾಪ್‌10ವಿಪಿಎನ್‌’ ವರದಿ ತಿಳಿಸಿದೆ. ಇಂಟರ್‌ನೆಟ್‌ ಬಂದ್ ಆಗುವುದು ಜನರ ಜೀವನದ ಮೇಲೆ ಹಾಗೂ ಉದ್ಯೋಗದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ದೊಡ್ಡ ಉದ್ಯಮಗಳು, ಆನ್‌ಲೈನ್ ಸೇವೆಗಳು ಬಹುತೇಕ ನಿಷ್ಕ್ರಿಯವಾಗುತ್ತವೆ. 

ಕಣಿವೆಯಲ್ಲಿ 18 ತಿಂಗಳ ಯಾತನೆ
ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದರಿಂದ ಜಮ್ಮು–ಕಾಶ್ಮೀರ ಬಿಕ್ಕಟ್ಟು ಎದುರಿಸಿತು. ಇಂಟರ್‌ನೆಟ್‌ ಸ್ಥಗಿತಗೊಂಡಿದ್ದರಿಂದ 2019ರ ಆಗಸ್ಟ್ 5ರ ಬಳಿಕ ಹೊರಜಗತ್ತಿನ ಜೊತೆ ಇಲ್ಲಿನ ಜನರ ಸಂಪರ್ಕ ಬಹುತೇಕ ನಿಂತು ಹೋಯಿತು.  ಎಲ್ಲ ರೀತಿಯ ಸಂವಹನ ಮಾರ್ಗಗಳು ಕಡಿತಗೊಂಡವು. ಇದು ಸುದೀರ್ಘ 18 ತಿಂಗಳವರೆಗೆ ರಾಜ್ಯವನ್ನು ಬಾಧಿಸಿತು. ಜನಜೀವನ, ಆರೋಗ್ಯ, ಪ್ರವಾಸೋದ್ಯಮ, ಆರ್ಥಿಕತೆ ಬುಡಮೇಲಾಯಿತು. 

ಜಮ್ಮು–ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್‌ನ ವರದಿ ಪ್ರಕಾರ, 2019ರ ಆಗಸ್ಟ್ 5ರಿಂದ 2020ರ ಜುಲೈ ಅವಧಿಯಲ್ಲಿ ಉದ್ಯಮಗಳು ₹40,000 ಕೋಟಿಯಷ್ಟು ಆರ್ಥಿಕ ನಷ್ಟ ಎದುರಿಸಿದ್ದವು. 4.96 ಲಕ್ಷ ಜನರು ಉದ್ಯೋಗ ಕಳೆದುಕೊಂಡರು. ಪ್ರವಾಸೋದ್ಯಮ ಹಾಗೂ ದೂರಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜ್ಯದ ಸುಮಾರು 5,000 ಜನರಿಗೆ ಹಲವು ತಿಂಗಳು ವೇತನ ಸಿಕ್ಕಿರಲಿಲ್ಲ. ಇಂಟರ್‌ನೆಟ್ ಇಲ್ಲದ ಕಾರಣ, ಆನ್‌ಲೈನ್ ಶಾಪಿಂಗ್, ಬುಕ್ಕಿಂಗ್ ಸೇವೆಗಳು, ಇ–ಕಾಮರ್ಸ್, ಕೊರಿಯರ್ ಸೇವೆಗಳು, ನವೋದ್ಯಮಗಳು ಇನ್ನಿಲ್ಲದ ನಷ್ಟ ಅನುಭವಿಸಿದ್ದವು ಎಂದು ಜಮ್ಮು–ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್‌ ತಿಳಿಸಿದೆ. 

ಆನ್‌ಲೈನ್ ಆಧಾರಿತ ಸಾರಿಗೆ ಸೇವೆಗಳನ್ನು ನೀಡುವ ಕ್ಯಾಬ್ ಸಂಸ್ಥೆಗಳು, ಆಹಾರ ಪೂರೈಕೆ ಉದ್ಯಮಗಳು, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ತುಂಬುವ ಅಂಗಡಿಯವರು ಸತತ ಒಂದೂವರೆ ತಿಂಗಳವರೆಗೆ ಬಾಗಿಲು ಹಾಕಬೇಕಾಯಿತು. ಡಿಜಿಟಲ್‌ ಆಧಾರಿತ ಆರೋಗ್ಯ ಸೇವೆಗಳನ್ನು ಪಡೆಯಲು ರೋಗಿಗಳು ಕಷ್ಟಪಟ್ಟರು. ಆಸ್ಪತ್ರೆಗಳಲ್ಲಿ ಇಂಟರ್‌ನೆಟ್ ಸಹಾಯದಿಂದ ನಡೆಯಬೇಕಿದ್ದ ವಿವಿಧ ಸೇವೆಗಳು ನಿಂತುಹೋದವು. ಆನ್‌ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಸಲಹೆ ಪಡೆಯುವ ಅವಕಾಶ ಮುಚ್ಚಿಹೋಯಿತು. ಆಯುಷ್ಮಾನ್ ಭಾರತ್ ಸೇವೆಯಡಿ ಚಿಕಿತ್ಸೆ ಪಡೆಯಬೇಕಿದ್ದ ಜನರಿಗೆ ಡಿಜಿಟಲ್‌ ದಾಖಲೆಗಳು ಲಭ್ಯವಾಗದೇ ಕಷ್ಟ ಅನುಭವಿಸಬೇಕಾಯಿತು. ಮಣಿಪುರದಲ್ಲೂ ಇದೇ ಪರಿಸ್ಥಿತಿ ಇತ್ತು. 

ಕೋವಿಡ್‌: ಶಿಕ್ಷಣ ವಂಚಿತ ಮಕ್ಕಳು
ಅಂತರ್ಜಾಲ ಸ್ಥಗಿತಗೊಂಡಿದ್ದರಿಂದ ಜಮ್ಮು ಕಾಶ್ಮೀರದ ಜನರಿಗೆ ಕೊರೊನಾ ವೈರಸ್‌ನ ಸೋಂಕಿನ ತೀವ್ರತೆಯ ಮಾಹಿತಿ ಸರಿಯಾಗಿ ದೊರೆಯಲಿಲ್ಲ. ದೇಶದಾದ್ಯಂತ ಶಾಲೆಗಳು ಬಂದ್ ಆಗಿ, ಮಕ್ಕಳ ಶಿಕ್ಷಣವು ಆನ್‌ಲೈನ್‌ಗೆ ಬದಲಾಯಿತು. ಆದರೆ, ಕಣಿವೆ ರಾಜ್ಯದ ಅಷ್ಟೂ ಮಕ್ಕಳಿಗೆ ಇಂಟರ್‌ನಿಂದ ದೊರೆಯಬೇಕಿದ್ದ ಆನ್‌ಲೈನ್ ಶಿಕ್ಷಣ ಮರೀಚಿಕೆಯಾಯಿತು. ಸುಮಾರು 1.5 ಕೋಟಿಯಷ್ಟು ಮಕ್ಕಳು ಶಿಕ್ಷಣ ಸಿಗದೇ ಕತ್ತಲಲ್ಲಿ ಕಾಲಕಳೆದರು. 

ಟೆಲಿಗ್ರಾಫ್ ಕಾಯ್ದೆ
ಭಾರತೀಯ ಟೆಲಿಗ್ರಾಫ್ ಕಾಯ್ದೆ 1885ರ ಅಡಿಯಲ್ಲಿ ದೂರಸಂಪರ್ಕ ಸೇವೆಗಳ ತಾತ್ಕಾಲಿಕ ಸ್ಥಗಿತ (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳನ್ನು ರೂಪಿಸಲಾಗಿದೆ. ಸೆಕ್ಷನ್ 5 (2) ಪ್ರಕಾರ, ಸಾರ್ವಜನಿಕ ತುರ್ತು ಸ್ಥಿತಿ ಅಥವಾ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಬಂದಾಗ ಇಂಟರ್‌ನೆಟ್ ಸೇವೆಯನ್ನು ಸ್ಥಗಿತ ಮಾಡಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಅಧಿಕಾರವಿದೆ. ಆದರೆ, ತುರ್ತು ಸ್ಥಿತಿ  ಹಾಗೂ ಸುರಕ್ಷತೆಗೆ ಸಂಬಂಧಿಸಿದ ಯಾವ ಅಪಾಯ ಇಲ್ಲದ ಸಮಯದಲ್ಲೂ ಇಂಟರ್‌ನೆಟ್ ಸೇವೆ ಸ್ಥಗಿತ ನಿರ್ಧಾರವನ್ನು ಹೇರಿರುವ ಹಲವು ನಿದರ್ಶನಗಳಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ. ನಿಷೇಧಾಜ್ಞೆ (ಸೆಕ್ಷನ್ 144) ಜಾರಿ ಮಾಡಿಯೂ ಇಂಟರ್‌ನೆಟ್ ಸಂಪರ್ಕ ಮೊಟಕುಗೊಳಿಸಬಹುದಾಗಿದೆ.  

ಮುಂಚೂಣಿಯಲ್ಲಿ ಭಾರತ
ಇಂಟರ್‌ನೆಟ್ ಸ್ಥಗಿತಗೊಳಿಸುವ ಪ್ರವೃತ್ತಿ ಜಗತ್ತಿನ ವಿವಿಧ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲೇ ಅತ್ಯಧಿಕ ಎಂದು ದತ್ತಾಂಶಗಳು ಹೇಳುತ್ತವೆ. 2022ರಲ್ಲಿ ಭಾರತವನ್ನು ಹೊರತುಪಡಿಸಿ, ಎಲ್ಲ ದೇಶಗಳಲ್ಲಿ ಇಂತಹ 103 ಘಟನೆಗಳು ವರದಿಯಾಗಿವೆ. ಆದರೆ, ಭಾರತವೊಂದರಲ್ಲೇ 84 ಪ್ರಕರಣಗಳು (2021ರಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ ಮುಂದುವರಿದಿರುವ ಘಟನೆಗಳೂ ಸೇರಿ) ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. 

ಯುದ್ಧಪೀಡಿತ ಉಕ್ರೇನ್‌ನಲ್ಲಿ 22 ಬಾರಿ ಇಂಟರ್‌ನೆಟ್ ಕಡಿತ ಮಾಡಲಾಗಿತ್ತು. ಭಾರತದಲ್ಲಿ ಯುದ್ಧದಂತಹ ಪರಿಸ್ಥಿತಿ ಇಲ್ಲದಿದ್ದರೂ, ಉಕ್ರೇನ್‌ಗಿಂತಲೂ ಅತ್ಯಧಿಕ ಬಾರಿ ಹೇರಲಾಗಿದೆ. ಟಿಗ್ರೆ ದೇಶದ ಜನರು 787 ದಿನಗಳಿಂದ ಸತತವಾಗಿ ಇಂಟರ್‌ನೆಟ್ ಸಂಪರ್ಕದಿಂದ ವಂಚಿತರಾಗಿದ್ದಾರೆ. ಇದು ಜಗತ್ತಿನಲ್ಲೇ ಅತ್ಯಧಿಕ. ನಂತರದ ಸ್ಥಾನದಲ್ಲಿ ಮ್ಯಾನ್ಮಾರ್‌ ಇದ್ದು, 460 ದಿನಗಳಿಂದ ಇಲ್ಲಿನ ಜನರು ಡಿಜಿಟಲ್‌ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

__________________________

ಆಧಾರ: ಎಸ್‌ಎಫ್‌ಎಲ್‌ಸಿಯ ‘ಫೈಂಡಿಂಗ್‌ 404’ ವರದಿ, ಆಕ್ಸೆಸ್‌ ನೌನ ‘#ಕೀಪ್‌ಇಟ್‌ಆನ್‌’ ವರದಿ, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು