ಮಂಗಳವಾರ, ನವೆಂಬರ್ 24, 2020
20 °C

ಬೆಳಕಿನೆಡೆಗೆ ಸಾಗುವರೇ ಬೈಡನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಜೋ ಬೈಡನ್‌

‘ನಾನು ಅಮೆರಿಕದ ಆತ್ಮವನ್ನು ಮರುಸ್ಥಾಪಿಸುವ ಪ್ರಯತ್ನ ಮಾಡುವೆ. ಬೆಳಕಿನ ಕಡೆಗೆ ಸಾಗುವೆನೇ ವಿನಾ ಕತ್ತಲೆಯತ್ತ ಅಲ್ಲ...’

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ, ಜೋ ಬೈಡನ್‌ ಅವರು ದೇಶದ ಜನರಿಗೆ ನೀಡಿದ್ದ ಭರವಸೆ ಇದು. ‘ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳಿಂದಾಗಿ ಅಮೆರಿಕದ ಹಿಮ್ಮುಖ ಚಲನೆ ಆರಂಭವಾಗಿದೆ’ ಎಂದು ಭಾವಿಸಿದ್ದವರಿಗೆ ಬೈಡನ್‌ ಅವರ ಈ ಮಾತುಗಳಲ್ಲಿ ಭರವಸೆ ಮೂಡಿದ್ದರೆ ಅಚ್ಚರಿ ಇಲ್ಲ.

ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿರುವ ಬೈಡನ್‌, ತಮ್ಮ 77ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಈ ಹುದ್ದೆಗೆ ಆಯ್ಕೆಯಾದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಂದಹಾಗೆ, 29ನೇ ವಯಸ್ಸಿನಲ್ಲೇ ಡೆಲವೇರ್‌ ರಾಜ್ಯದ ಸೆನೆಟರ್‌ ಆಗಿ ಆಯ್ಕೆಯಾಗಿದ್ದ ಬೈಡನ್‌ ಅವರ ಹೆಸರಿನಲ್ಲಿ, ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸೆನೆಟರ್‌ ಆದ ವ್ಯಕ್ತಿ ಎಂಬ ದಾಖಲೆಯೂ ಇದೆ.

ಆರು ಅವಧಿಗೆ ಸೆನೆಟರ್‌ ಆಗಿದ್ದ ಬೈಡನ್‌ಗೆ ಇದು ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲ. 1988 ಹಾಗೂ 2008ರಲ್ಲಿ ಅವರು ಈ ಹುದ್ದೆಗೆ ಸ್ಪರ್ಧಿಸಿ ಸೋತಿದ್ದರು. ಮೂರನೇ ಪ್ರಯತ್ನದಲ್ಲಿ ಅವರ ಕನಸು ಈಡೇರಿದೆ.

ಬರಾಕ್‌ ಒಬಾಮ ಅಧ್ಯಕ್ಷರಾಗಿದ್ದ ಎಂಟು ವರ್ಷಗಳ ಅವಧಿಯಲ್ಲಿ (ಎರಡು ಅವಧಿ) ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬೈಡನ್‌, ಈ ಅವಧಿಯಲ್ಲಿ ಅಧ್ಯಕ್ಷ ಹುದ್ದೆಗೇರುವ ಕನಸನ್ನು ಪೋಷಿಸುತ್ತಾ, ಅದನ್ನು ನನಸಾಗಿಸುವ ದಾರಿಯನ್ನೂ ರೂಪಿಸುತ್ತಾ ಹೋದರು.

ಒಬಾಮ ಅವರೂ ‘ಬೈಡನ್‌ ನನ್ನ ಆತ್ಮೀಯ ಸಹೋದರ, ಅಮೆರಿಕ ಕಂಡ ಅತ್ಯುತ್ತಮ ಉಪಾಧ್ಯಕ್ಷ’ ಎಂದು ಹೇಳಿದ್ದರು. ಒಬಾಮ ಅವರ ಆತ್ಮೀಯ ಎನಿಸಿಕೊಂಡಿದ್ದರಿಂದ ಕಪ್ಪು ವರ್ಣೀಯರ ಮತಗಳನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾದರು. ಮಧ್ಯಮ ವರ್ಗದ ವ್ಯಕ್ತಿ ಎಂಬ ಕಾರಣಕ್ಕೆ ದೇಶದ ಈ ವರ್ಗದ ಜನಸಮುದಾಯಕ್ಕೆ ಅವರು ಹತ್ತಿರವಾಗಿದ್ದರು. ಜತೆಗೆ ಅನುಭವಿ ರಾಜಕಾರಣಿಯಾಗಿರುವ ಬೈಡನ್‌, ಟ್ರಂಪ್‌ಗೆ ಅತ್ಯುತ್ತಮ ಪರ್ಯಾಯ ಆಗಬಲ್ಲರು ಎಂಬ ಭಾವನೆ ಜನರಲ್ಲಿ ಮೂಡಿದಂತಿದೆ. ಪೆನ್ಸಿಲ್ವೇನಿಯಾದಲ್ಲಿ 1942ರಲ್ಲಿ ಜನಿಸಿದ ಬೈಡನ್‌, ಡೆಲವೇರ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. ಆನಂತರ, 1968ರಲ್ಲಿ ಸಿರಕ್ಯೂಸ್‌ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪಡೆದರು. 1972ರಲ್ಲಿ ಮೊದಲ ಬಾರಿಗೆ ಡೆಲವೇರ್‌ನ ಸೆನೆಟರ್‌ ಆಗಿ ಆಯ್ಕೆಯಾಗಿದ್ದರು.

ದೌರ್ಜನ್ಯದ ಆರೋಪ

ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಬೈಡನ್‌ ವಿರುದ್ಧ ಇತ್ತೀಚೆಗೆ ಕೇಳಿಬಂದಿತ್ತು. ಅವರ ಕಚೇರಿಯ ಸಿಬ್ಬಂದಿಯಾಗಿದ್ದ ತಾರಾ ರೀಡ್‌ ಎಂಬುವವರು, ‘ಬೈಡನ್‌ ಅವರ ಕಚೇರಿಯಲ್ಲಿ ಕೆಲಸ ಮಾಡಲು ನನಗೆ ಇರುಸುಮುರುಸಾಗುತ್ತಿತ್ತು. 2013ರಲ್ಲಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು’ ಎಂದು 2019ರಲ್ಲಿ ಹೇಳಿದ್ದರು. ಆದರೆ ಬೈಡನ್‌ ಅವರ ಚುನಾವಣಾ ಪ್ರಚಾರ ತಂಡವು ಇದನ್ನು ಬಲವಾಗಿ ವಿರೋಧಿಸಿತ್ತು.

ಕೌಟುಂಬಿಕ ದುರಂತ

ಕೌಟುಂಬಿಕವಾಗಿ ಬೈಡನ್‌ ಹಲವು ದುರಂತಗಳನ್ನು ಕಂಡಿದ್ದಾರೆ. ನೇರ ನುಡಿಯ ಬೈಡನ್‌ ಅವರು ತಮ್ಮ ಕುಟುಂಬದ ದುರಂತಗಳ ಬಗ್ಗೆ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದೂ ಇದೆ.

1972ರಲ್ಲಿ ಸಂಭವಿಸಿದ ಕಾರು‌ ಅಪಘಾತವೊಂದರಲ್ಲಿ ಬೈಡನ್‌ ಅವರ ಪತ್ನಿ ನೈಲಿಯಾ ಹಾಗೂ ಒಂದು ವರ್ಷದ ಪುತ್ರಿ ನೆಯೊಮಿ ಮೃತಪಟ್ಟರು. ಪುತ್ರರಾದ ಬೆಒ ಹಾಗೂ ಹಂಟರ್‌ ಗಂಭೀರವಾಗಿ ಗಾಯಗೊಂಡಿದ್ದರು. ಆಗಷ್ಟೇ ಸೆನೆಟರ್‌ ಆಗಿ ಆಯ್ಕೆಯಾಗಿದ್ದ ಬೈಡನ್‌, ಮಕ್ಕಳನ್ನು ನೋಡಿಕೊಳ್ಳುತ್ತಾ ಆಸ್ಪತ್ರೆಯಿಂದಲೇ ಪ್ರಮಾಣವಚನ ಸ್ವೀಕರಿಸಿದ್ದರು.

1975ರಲ್ಲಿ ಜಿಲ್‌ ಜಾಕೋಬ್‌ ಅವರನ್ನು ಭೇಟಿಮಾಡಿದ ಬೈಡನ್‌ 1977ರಲ್ಲಿ ಅವರನ್ನು ವರಿಸಿದರು. ಅವರಿಗೆ ಆ್ಯಶ್ಲಿ ಎಂಬ ಒಬ್ಬ ಪುತ್ರಿ ಇದ್ದಾರೆ.

ಇರಾಕ್‌ ಯುದ್ಧದಲ್ಲಿ ಪಾಲ್ಗೊಂಡಿದ್ದ, ಡೆಲವೇರ್‌ನ ಅಟಾರ್ನಿ ಜನರಲ್‌ ಸಹ ಆಗಿದ್ದ ಪುತ್ರ ಬೆಒ 2015ರಲ್ಲಿ 46ನೇ ವಯಸ್ಸಿನಲ್ಲಿ ಬ್ರೇನ್‌ ಟ್ಯೂಮರ್‌ನಿಂದಾಗಿ ಮೃತಪಟ್ಟರು. ಇನ್ನೊಬ್ಬ ಪುತ್ರ ಹಂಟರ್‌, ಒಂದು ಕಾಲದಲ್ಲಿ ಮಾದಕ ವ್ಯಸನಿಯಾಗಿದ್ದರು. ಬೈಡನ್‌ ಅವರಿಗೂ 1988ರಲ್ಲಿ ಮಿದುಳಿನ ರಕ್ತನಾಳದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕಾರಣಕ್ಕಾಗಿಯೇ ‘ಜನರ ಆರೋಗ್ಯದ ವಿಚಾರವು ನನಗೆ ಆದ್ಯತೆಯದ್ದಾಗಿರುತ್ತದೆ’ ಎಂದು ಅವರು ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು.

ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷ ಎನಿಸಿಕೊಂಡಿದ್ದ ಬರಾಕ್‌ ಒಬಾಮ ಅವರು ಚುನಾವಣೆಗೂ ಮುನ್ನ ಬೈಡನ್‌ ಅವರನ್ನು ಬೆಂಬಲಿಸುತ್ತಾ, ‘ಪ್ರತಿಯೊಬ್ಬರನ್ನೂ ಗೌರವ ಹಾಗೂ ಘನತೆಯಿಂದ ನೋಡುವ ಬೈಡನ್‌ ಅವರು ಅಮೆರಿಕದ ಶ್ರೇಷ್ಠ ಅಧ್ಯಕ್ಷರಾಗಬಲ್ಲರು’ ಎಂದಿದ್ದರು. ಮಾಜಿ ಅಧ್ಯಕ್ಷರ ಈ ಮಾತು ನಿಜವಾಗುವುದೇ ಎಂಬುದನ್ನು ಕಾಲವೇ ಹೇಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು