ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ - ಅಗಲ| ಖಾಲಿಸ್ತಾನ ಹೋರಾಟಕ್ಕೆ ಮರುಜೀವ?

Last Updated 19 ಮಾರ್ಚ್ 2023, 21:33 IST
ಅಕ್ಷರ ಗಾತ್ರ

ತಮಗಾಗಿ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಒತ್ತಾಯಿಸುತ್ತಿರುವ ಸಿಖ್ಖರು, ತಮ್ಮ ಒತ್ತಾಯದ ಪ್ರತ್ಯೇಕ ರಾಷ್ಟ್ರಕ್ಕೆ ಇರಿಸಿಕೊಂಡಿರುವ ಹೆಸರೇ ಖಾಲಿಸ್ತಾನ. ಖಾಲಿಸ್ತಾನ ಹೋರಾಟ ಅಥವಾ ಖಾಲಿಸ್ತಾನ ಚಳವಳಿ ಎಂದ ಕೂಡಲೇ ‘ಆಪರೇಷನ್‌ ಬ್ಲೂಸ್ಟಾರ್‌’, ಇಂದಿರಾ ಗಾಂಧಿ ಹತ್ಯೆ, ಸಿಖ್‌ ಹತ್ಯಾಕಾಂಡಗಳು ನೆನಪಾಗುತ್ತವೆ. ಆದರೆ, ಪ್ರತ್ಯೇಕ ಖಾಲಿಸ್ತಾನ ಹೋರಾಟದ ಇತಿಹಾಸವು 17ನೇ ಶತಮಾನದವರೆಗೂ ಹೋಗುತ್ತದೆ. ಈವರೆಗಿನ ಈ ಹೋರಾಟದ ಬಹುತೇಕ ಅಧ್ಯಾಯಗಳೆಲ್ಲವೂ ರಕ್ತಸಿಕ್ತ ವಾಗಿಯೇ ಇವೆ. ಪ್ರತ್ಯೇಕ ಸಿಖ್‌ ರಾಷ್ಟ್ರಕ್ಕಾಗಿನ ಕೂಗು ಒಂದೆರಡು ದಶಕಗಳಲ್ಲಿ ಗಡಿಯಾಚೆಗಷ್ಟೇ ಸೀಮಿತವಾಗಿತ್ತು. ಆದರೆ, ಈಗ ದೇಶದೊಳಗೆ ಮತ್ತೆ ದೊಡ್ಡಮಟ್ಟದಲ್ಲಿ ಕೇಳುತ್ತಿದೆ.

ಖಾಲಿಸ್ತಾನ ಎಂಬ ಹೆಸರಿನ ಹಿಂದೆ ಇರುವುದು ಪಂಜಾಬಿ ಪದ ‘ಖಾಲ್ಸಾ’. ಖಾಲ್ಸಾ ಎಂದರೆ ಪವಿತ್ರ ನಾಡು. ಸಿಖ್ಖರ 10ನೇ ಮತ್ತು ಕೊನೆಯ ಗುರು, ಗೋವಿಂದ್‌ ಸಿಂಗ್‌ ಖಾಲಿಸ್ತಾನವು ಸಿಖ್ಖರ ಆಳ್ವಿಕೆಯಲ್ಲಿಯೇ ಇರಬೇಕು ಎಂದು ಘೋಷಿಸಿದ್ದರು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ ಎಂದು ಸಂಶೋಧಕಿ ರಾಜಶ್ರೀ ಜೇಟ್ಲಿ ಅವರ ‘ದಿ ಖಾಲಿಸ್ತಾನ್‌ ಮೂವ್‌ಮೆಂಟ್‌ ಇನ್‌ ಇಂಡಿಯಾ’ ಗ್ರಂಥದಲ್ಲಿ ವಿವರಿಸಲಾಗಿದೆ.

ಈಗಿನ ಭಾರತ ಮತ್ತು ಪಾಕಿಸ್ತಾನದಲ್ಲಿ ಹಂಚಿಹೋಗಿರುವ ಪಂಜಾಬ್‌ ಪ್ರದೇಶವು 16ನೇ ಶತಮಾನದ ಸಂದರ್ಭದಲ್ಲಿ ಒಂದೆಡೆ ದೆಹಲಿಯ ಮೊಘಲರು, ಮತ್ತೊಂದೆಡೆ ಅರಬ್ಬರ ಮಧ್ಯೆ ಸಿಲುಕಿತ್ತು. ಎರಡು ಪ್ರಬಲ ಸಾಮ್ರಾಜ್ಯಗಳ ಮಧ್ಯೆ ಪಂಜಾಬ್‌ ಪ್ರಾಂತ್ಯವು ಸ್ವತಂತ್ರವಾಗಿಯೇ ಉಳಿದಿತ್ತು. 17ನೇ ಶತಮಾನದ ಅಂತ್ಯದ ವೇಳೆಗೆ ಈ ಸಂಸ್ಥಾನವು ಪತನವಾಗಿತ್ತು. ಆಗಲೇ (ಕ್ರಿ.ಶ.1699ರಲ್ಲಿ) ಸಿಖ್ಖರ ಪವಿತ್ರನಾಡು, ಸಿಖ್ಖರ ಆಳ್ವಿಕೆಯಲ್ಲಿಯೇ ಇರಬೇಕು ಎಂದು ಗುರು ಗೋವಿಂದ್‌ ಸಿಂಗ್‌ ಕರೆ ನೀಡಿದ್ದು. ಇದಕ್ಕಾಗಿ ಸಿಖ್‌ ಹೋರಾಟಗಾರರ ಒಂದು ಪಡೆಯನ್ನು ಕಟ್ಟಿದ್ದರು. ಪ್ರತ್ಯೇಕ ಸಿಖ್‌ ರಾಷ್ಟ್ರಕ್ಕಾಗಿ ಗುರು ಗೋವಿಂದ್‌ ಸಿಂಗ್‌ ನೇತೃತ್ವದ ಈ ಪಡೆಯು ಸಶಸ್ತ್ರ ಹೋರಾಟವನ್ನೂ ನಡೆಸಿತ್ತು. ಅಂತಹ ಹೋರಾಟದಲ್ಲಿ ಗೋವಿಂದ್ ಸಿಂಗ್‌ ತಮ್ಮ ನಾಲ್ವರು ಮಕ್ಕಳನ್ನು ಕಳೆದುಕೊಂಡರು. ಆದರೆ, ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ರಾಷ್ಟ್ರದ ಕನಸು ನನಸಾಗಲಿಲ್ಲ.

ಕ್ರಿ.ಶ.1710ರಲ್ಲಿ ಬಂದಾ ಸಿಂಗ್‌ ಬಹಾದ್ದೂರ್ ನೇತೃತ್ವದ ಪಡೆಯು, ಮೊಘಲರ ಅಧೀನದಲ್ಲಿದ್ದ ಸರ್‌ಹಿಂದ್‌ ಪಟ್ಟಣವನ್ನು ವಶ ಪಡಿಸಿಕೊಂಡಿತ್ತು. ಇದು ಪ್ರತ್ಯೇಕ ಸಿಖ್‌ ನಾಡು ಸ್ಥಾಪನೆಯ ಮೊದಲ ಹೆಜ್ಜೆಯಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಈ ನಾಡು ಪತನವಾಯಿತು. 1780ರಲ್ಲಿ ಮಹಾರಾಜಾ ರಣಜಿತ್ ಸಿಂಗ್‌ ಸಿಖ್ಖರ ಪವಿತ್ರ ನಾಡನ್ನು ಸ್ಥಾಪಿಸಿದರು. ಇವರ ಆಳ್ವಿಕೆಯ ಅವಧಿಯಲ್ಲಿ ಸಿಖ್ಖರು ಪ್ರತ್ಯೇಕ ನಾಣ್ಯ, ಮುದ್ರೆಗಳನ್ನು ಬಳಸುತ್ತಿದ್ದರು. ಈ ಅವಧಿಯನ್ನು ‘ಖಾಲ್ಸಾ ರಾಜ್‌’ ಎಂದೇ ಕರೆಯಲಾಗುತ್ತಿತ್ತು. ಆದರೆ, ಕಠಿಣ ನಿಯಮಗಳು ಮತ್ತು ವಿವಿಧ ಪಂಗಡಗಳ ನಡುವಣ ಭಿನ್ನಾಭಿಪ್ರಾಯಗಳ ಕಾರಣದಿಂದ ಖಾಲ್ಸಾ ರಾಜ್‌ ದುರ್ಬಲವಾಯಿತು. 1849ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯು ಖಾಲ್ಸಾ ರಾಜ್‌ ಪ್ರದೇಶವನ್ನು ವಶಕ್ಕೆ ಪಡೆಯಿತು. ಆನಂತರದಿಂದ ಪ್ರತ್ಯೇಕ ಸಿಖ್‌ ಪವಿತ್ರ ನಾಡಿನ ಸ್ಥಾಪನೆ ಸಾಧ್ಯವಾಗಿಯೇ ಇಲ್ಲ. ಅದನ್ನು ಸ್ಥಾಪಿಸುವ ಪ್ರಯತ್ನಗಳೂ ನಿಂತಿಲ್ಲ.

ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರ ಸ್ಥಾಪನೆಯ ಬೇಡಿಕೆ ಹೆಚ್ಚಾಯಿತು. ಆದರೆ, ಅದು ಕೈಗೂಡಲಿಲ್ಲ. ಸ್ವತಂತ್ರ ಭಾರತದಲ್ಲಿ ಸಿಖ್ಖರು ಪಂಜಾಬ್‌ ಪ್ರಾಂತ್ಯದಲ್ಲಿಯೇ ಇದ್ದರು. ಪಂಜಾಬ್‌ ಪ್ರಾಂತ್ಯವು ಈಗಿನ ಪಂಜಾಬ್‌ ಮತ್ತು ಹರಿಯಾಣದಲ್ಲಿ ವ್ಯಾಪಿಸಿತ್ತು. ಪಂಜಾಬ್‌ ಪ್ರದೇಶದಲ್ಲಿ ಸಿಖ್ಖರ ಪ್ರಾಬಲ್ಯವಿದ್ದರೆ, ಹರಿಯಾಣದಲ್ಲಿ ಹಿಂದೂಗಳ ಪ್ರಾಬಲ್ಯವಿತ್ತು. ಒಟ್ಟಾರೆ ಸಿಖ್ಖರು ಅಲ್ಪಸಂಖ್ಯಾತ ರಾಗಿದ್ದರು. 1966ರಲ್ಲಿ ಹರಿಯಾಣ ಎಂಬ ರಾಜ್ಯವನ್ನು ಹೊಸದಾಗಿ ರಚಿಸಲಾಯಿತು. ನದಿ ನೀರಿನ ಹಂಚಿಕೆ ಸಂಬಂಧ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಮಧ್ಯೆ ಒಪ್ಪಂದವಾಗಿದ್ದರೂ, ಪಂಜಾಬ್‌ಗೆ ಅನ್ಯಾಯವಾಗಿದೆ ಎಂಬ ಅಸಮಾಧಾನ ಸಿಖ್ಖರಲ್ಲಿ ಇತ್ತು. ಆ ಅಸಮಾಧಾನವೇ ಮತ್ತೆ ಪ್ರತ್ಯೇಕ ಖಾಲಿಸ್ತಾನ ಸ್ಥಾಪನೆ ಹೋರಾಟಕ್ಕೆ ಪ್ರೇರಣೆಯಾಯಿತು ಎನ್ನುತ್ತವೆ ಸಂಶೋಧನಾ ಗ್ರಂಥಗಳು. 1970–80ರ ಅವಧಿಯಲ್ಲಿ ಈ ಹೋರಾಟಕ್ಕೆ ಅಖಿಲ ಭಾರತ ಸಿಖ್‌ ವಿದ್ಯಾರ್ಥಿ ಸಂಘಟನೆ ಬೆಂಬಲ ಸೂಚಿಸಿತು. ವಿದ್ಯಾರ್ಥಿ ನಾಯಕ ಜರ್ನೈಲ್‌ ಸಿಂಗ್‌ ಬಿಂದ್ರನ್‌ವಾಲೆ, ಈ ಹೋರಾಟದ ಮುಂಚೂಣಿ ನಾಯಕನಾದ. ಆನಂತರ ಈ ಆಗ್ರಹವು ಸಶಸ್ತ್ರ ಹೋರಾಟದ ರೂಪ ಪಡೆಯಿತು.

‘ಆಪರೇಷನ್‌ ಬ್ಲೂಸ್ಟಾರ್‌’

ಬಿಂದ್ರನ್‌ವಾಲೆ ನೇತೃತ್ವದಲ್ಲಿ ಸಿಖ್‌ ಹೋರಾಟಗಾರರ ಪಡೆಯನ್ನು ರಚಿಸಲಾಗಿತ್ತು. ಬಿಂದ್ರನ್‌ವಾಲೆ ಮತ್ತು ಆತನ ಅನುಯಾಯಿಗಳು ಸ್ವರ್ಣ ಮಂದಿರವನ್ನು ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದರು. 1982ರಿಂದಲೇ ಇವರು ಸ್ವರ್ಣ ಮಂದಿರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದು–ಗುಂಡುಗಳನ್ನು ಸಂಗ್ರಹಿಸಲು ಆರಂಭಿಸಿದ್ದರು. 1984ರ ಜೂನ್‌ನಲ್ಲಿ ಬಿಂದ್ರನ್‌ವಾಲೆ ನೇತೃತ್ವದ ಹೋರಾಟಗಾರರ ಗುಂಪು ದಾಳಿಗೆ ಮುಂದಾಯಿತು. ಸ್ವರ್ಣ ಮಂದಿರದ ಆವರಣದಲ್ಲಿ ನೂರಾರು ಭಕ್ತರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಪ್ರತ್ಯೇಕತಾವಾದಿಗಳ ಜತೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನಡೆಸಿದ ಮಾತುಕತೆ ವಿಫಲವಾಯಿತು. 1984ರ ಜೂನ್‌ 6ರಂದು ಇಂದಿರಾ ಗಾಂಧಿ ಸೇನಾ ಕಾರ್ಯಾಚರಣೆಗೆ ಆದೇಶಿಸಿದರು. ಆ ಕಾರ್ಯಾಚರಣೆಯನ್ನು ‘ಆಪರೇಷನ್‌ ಬ್ಲೂಸ್ಟಾರ್‌’ ಎಂದು ಕರೆಯಲಾಯಿತು. ಫಿರಂಗಿಗಳನ್ನು ಬಳಸಿಕೊಂಡು ಸ್ವರ್ಣಮಂದಿರದ ಆವರಣದ ಗೋಡೆಯನ್ನು ಕೆಡವಿ, ಸೇನೆಯು ಒಳನುಗ್ಗಿತ್ತು. ಬಿಂದ್ರನ್‌ವಾಲೆ ಮತ್ತು ಸಂಗಡಿಗರನ್ನು ಹತ್ಯೆ ಮಾಡುವವರೆಗೂ ಕಾರ್ಯಾಚರಣೆ ಮುಂದುವರಿಯಿತು. ಜೂನ್‌ 9ರಂದು ಕಾರ್ಯಾಚರಣೆಯನ್ನು ಅಧಿಕೃತವಾಗಿ ನಿಲ್ಲಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ನಾಗರಿಕರು ಮತ್ತು ಸೈನಿಕರೂ ಸೇರಿ ನೂರಾರು ಮಂದಿ ಹತರಾಗಿದ್ದರು.

ಇಂದಿರಾ ಗಾಂಧಿ ಹತ್ಯೆ ಮತ್ತು ಸಿಖ್‌ ಹತ್ಯಾಕಾಂಡ

ಆಪರೇಷನ್‌ ಬ್ಲೂಸ್ಟಾರ್‌ಗೆ ಪ್ರತೀಕಾರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ಖರು ಹತ್ಯೆ ಮಾಡಿದರು. 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಅಂಗರಕ್ಷಕ ಪಡೆಯಲ್ಲಿದ್ದ ಇಬ್ಬರು ಸಿಖ್‌ ಕಮಾಂಡೊಗಳೇ, ಇಂದಿರಾ ಅವರನ್ನು ಗುಂಡಿಟ್ಟು ಕೊಂದಿದ್ದರು. ಈ ಹತ್ಯೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇಂದಿರಾ ಗಾಂಧಿ ಅವರ ಹತ್ಯೆಗೆ ‍ಪ್ರತೀಕಾರವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಿಖ್ಖರನ್ನು ಹತ್ಯೆ ಮಾಡಲಾಯಿತು. ಸಿಖ್ಖರ ಮನೆ, ಅಂಗಡಿ, ಉದ್ಯಮ, ವಾಹನಗಳಿಗೆ ಬೆಂಕಿ ಇಡಲಾಯಿತು. ಹಲವು ದಿನಗಳ ಕಾಲ ನಡೆದ ಈ ಹತ್ಯಾಕಾಂಡದಲ್ಲಿ ಅಂದಾಜು 3,000 ಜನರು ಬಲಿಯಾಗಿದ್ದರು ಎಂದು ಕೆಲವು ಮಾಧ್ಯಮಗಳ ವರದಿಗಳು ಹೇಳುತ್ತವೆ. ಆದರೆ, ಸರ್ಕಾರಿ ದಾಖಲೆಗಳ ಪ್ರಕಾರ ಸತ್ತವರ ಸಂಖ್ಯೆ ಕಡಿಮೆ.

1985ರ ಜೂನ್‌ 23ರಂದು ಟೊರಾಂಟೊದಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ–182 ವಿಮಾನವನ್ನು ಸ್ಫೋಟಿಸಲಾಗಿತ್ತು. ಕೃತ್ಯದಲ್ಲಿ 329 ಮಂದಿ ಮೃತಪಟ್ಟಿದ್ದರು. ಈ ಕೃತ್ಯದ ಹಿಂದೆ ಖಾಲಿಸ್ತಾನ ಹೋರಾಟಗಾರರ ಕೈವಾಡ ಇದೆ ಎನ್ನಲಾಗಿತ್ತು. ಈ ಪ್ರಕರಣದಲ್ಲಿ ಹಲವು ಸಿಖ್ಖರಿಗೆ ಶಿಕ್ಷೆಯಾಗಿದೆ.

ಬೆಂಬಲಕ್ಕಾಗಿ ಜನಮತ ಸಂಗ್ರಹ

1984ರ ಸಿಖ್ ವಿರೋಧಿ ದಂಗೆಯ ಬಳಿಕ ದೇಶದಲ್ಲಿ ನಿಷ್ಕ್ರಿಯವಾಗಿದ್ದ ಖಾಲಿಸ್ತಾನ ಪ್ರತ್ಯೇಕತೆ ಹೋರಾಟ ಎರಡು ವರ್ಷಗಳಿಂದ ಈಚೆಗೆ ಮತ್ತೆ ಚುರುಕಾಗಿದೆ. ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಖಾಲಿಸ್ತಾನ ಪರ ಹೋರಾಟಗಾರರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಭಾರತದಲ್ಲಿ ನಿಷೇಧಿಸಲಾಗಿರುವ ‘ಸಿಖ್ ಫಾರ್ ಜಸ್ಟೀಸ್’ (ಎಸ್‌ಎಫ್‌ಜೆ) ಸಂಘಟನೆಯು ಕೆನಡಾದಿಂದ ಕೆಲಸ ಮಾಡುತ್ತಿದ್ದು, ಭಾರತದಲ್ಲಿ ಪ್ರತ್ಯೇಕತೆ ಚಳವಳಿಯನ್ನು ಮುನ್ನಡೆ ಸುತ್ತಿದೆ. 2020ರಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನಗಳ ಹಾರಾಟಕ್ಕೆ ತಡೆ ಒಡ್ಡುವುದಾಗಿ ಸಂಘಟನೆ ಬೆದರಿಕೆ ಹಾಕಿತ್ತು. ಸಿಖ್ ವಿರೋಧಿ ದಂಗೆಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ನುಗ್ಗುವಂತೆ ಹೋರಾಟಗಾರರಿಗೆ ಕರೆ ನೀಡಿತ್ತು.

ಇದೇ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಿಗದಿಯಾಗಿದ್ದ ಜಿ–20 ದೇಶಗಳ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯ ವೇಳೆ, ಖಾಲಿಸ್ತಾನ ಪ್ರತ್ಯೇಕತೆಯ ಧ್ವಜ ಹಿಡಿದು ದೆಹಲಿ ವಿಮಾನ ನಿಲ್ದಾಣಕ್ಕೆ ನುಗ್ಗುವುದಾಗಿ ಎಸ್‌ಎಫ್‌ಜೆ ಹೇಳಿತ್ತು. ಸಂಘಟನೆಯ ಮುಖ್ಯಸ್ಥ ಹಾಗೂ ಕೆನಡಾದಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಗುರ್‌ಪತವಂತ್‌ ಸಿಂಗ್ ಪನ್ನು ಎಂಬಾತ, ಫೆಬ್ರುವರಿ ಕೊನೆಯ ವಾರದಲ್ಲಿ ವಿಡಿಯೊ ಸಂದೇಶದಲ್ಲಿ ಈ ಬೆದರಿಕೆ ಹಾಕಿದ್ದ. ಮೋಗಾ ಜಿಲ್ಲೆಯ ರೋಡೆ ಗ್ರಾಮದಲ್ಲಿ ‘ಪಂಜಾಬ್ ಭಾರತದಲ್ಲಿ ಇಲ್ಲ’, ‘ಖಾಲಿಸ್ತಾನ ಜಿಂದಾಬಾದ್’ ಎಂಬ ಗೋಡೆ ಬರಹಗಳು ಕಾಣಿಸಿಕೊಂಡವು. ಜಿ–20 ನಾಯಕರಿಗೆ ಸಂದೇಶ ನೀಡುವುದು ಈ ಗೋಡೆಬರಹಗಳ ಉದ್ದೇಶ ಎಂದು ಪನ್ನು ಸ್ಪಷ್ಟವಾಗಿ ಹೇಳಿದ್ದ.

ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆಯನ್ನೂ ಎಸ್‌ಎಫ್‌ಜೆ ಹಾಕಿತ್ತು. ಗುರ್‌ಪತವಂತ್‌ ಸಿಂಗ್ ಪನ್ನು ಹೆಸರಿನಲ್ಲಿ ಧ್ವನಿಸಂದೇಶ ಕಳುಹಿಸಲಾಗಿತ್ತು. ಗುಜರಾತ್‌ನ ಸಾವಿರಾರು ಜನರ ಮೊಬೈಲ್‌ಗಳಿಗೆ ಈ ಸಂದೇಶ ರವಾನೆಯಾಗಿತ್ತು. ಆಸ್ಟ್ರೇಲಿಯಾ ಪ್ರಧಾನಿ ಅಲ್ಬೆನೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಈ ಪಂದ್ಯವನ್ನು ವೀಕ್ಷಿಸಿದ್ದರು.

ಖಾಲಿಸ್ತಾನ ಹೋರಾಟಗಾರರು ವಿದೇಶಗಳಲ್ಲಿ ಇದ್ದುಕೊಂಡು ಜನಮತ ಸಂಗ್ರಹದಲ್ಲಿ ತೊಡಗಿದ್ದಾರೆ. ಇದೇ ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಮತದಾನವನ್ನು
ಆಯೋಜಿಸಲಾಗಿತ್ತು. ಸುಮಾರು 50 ಸಾವಿರ ಜನರು ಮತದಾನದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಅಮೃತ್‌ಪಾಲ್ ಬೆದರಿಕೆ

ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಸಿಂಗ್ ಎಂಬ 29 ವರ್ಷದ ಯುವಕ ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. 2022ರ ಆಗಸ್ಟ್‌ವರೆಗೂ ದುಬೈನಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಸಿಂಗ್, ಭಾರತಕ್ಕೆ ಬಂದು ಪ್ರತ್ಯೇಕತೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಟ ದೀಪ್‌ ಸಿಧು ಅವರು ಸ್ಥಾಪಿಸಿದ್ದ ‘ವಾರಿಸ್‌ ಪಂಜಾಬ್ ದೇ’ ಸಂಘಟನೆಯ ನೇತೃತ್ವ ವಹಿಸಿಕೊಂಡ ಬಳಿಕ ಸಿಂಗ್ ಚಟುವಟಿಕೆಗಳು ಜೋರಾಗಿವೆ.

ಇಂದಿರಾಗಾಂಧಿ ಅವರ ಪರಿಸ್ಥಿತಿಯೇ ಮರುಕಳಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಮೃತ್‌ಪಾಲ್ ಸಿಂಗ್ ಬೆದರಿಸಿ ಸುದ್ದಿಯಾಗಿದ್ದರು. ಅಮೃತ್‌ಪಾಲ್ ಸಿಂಗ್‌ ಅವರನ್ನು ‘ಬಿಂದ್ರನ್‌ವಾಲಾ 2.0’ ಎಂದೂ ಬಣ್ಣಿಸಲಾಗುತ್ತಿದೆ. ಅಮೃತ್‌ಪಾಲ್ ಸಿಂಗ್ ತಮ್ಮ ಬೆಂಬಲಿಗರ ಜೊತೆ ಸ್ವಯಂಚಾಲಿತ ಬಂದೂಕುಗಳನ್ನು ಇಟ್ಟುಕೊಂಡೇ ಓಡಾಡುತ್ತಾರೆ. ತಮ್ಮ ಬೆಂಬಲಿಗನೊಬ್ಬನನ್ನು ಪಂಜಾಬ್ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದಾಗ, ಅಮೃತ್‌ಪಾಲ್ ಸಿಂಗ್ ಹಾಗೂ ಬೆಂಬಲಿಗರು ಅಜನಾಲಾ ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ಎಬ್ಬಿಸಿದ್ದರು. ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಸರ್ಕಾರ ಸಾಕಷ್ಟು ಮುಜುಗರ ಎದುರಿಸಿತು. ರಾಜ್ಯದ ಎಎಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ದುಬೈನಿಂದ ಭಾರತಕ್ಕೆ ಬಂದ ಕೂಡಲೇ ಪ್ರತ್ಯೇಕತೆ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಸಿಖ್ ಮೂಲಭೂತವಾದಿ ಸಿದ್ಧಾಂತದ ಭಾಷಣದಿಂದ ಅಮೃತ್‌ಪಾಲ್ ಸಿಂಗ್, ಪಂಜಾಬ್‌ನ ಯುವಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತ್ತು. ದ್ವೇಷಭಾಷಣ, ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ, ಹಾಗೂ ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡುವ ಸಂಬಂಧ ಅಮೃತ್‌ಪಾಲ್ ಸಿಂಗ್‌ ಹಾಗೂ ಬೆಂಬಲಿಗರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇತ್ತೀಚೆಗೆ ಭೇಟಿಯಾಗಿ, ರಾಜ್ಯದಲ್ಲಿ ಖಾಲಿಸ್ತಾನ ಚಟುವಟಿಕೆಗಳು ಹೆಚ್ಚುತ್ತಿರುವ ಕುರಿತು ಚರ್ಚಿಸಿದ್ದರು. ಈ ಚಟುವಟಿಕೆಗಳನ್ನು ನಿಗ್ರಹಿಸಲು ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ಪಂಜಾಬ್‌ಗೆ ರವಾನಿಸಲಾಗಿದೆ. ಜಿ–20 ನಾಯಕರ ಸಭೆ ಮುಗಿಯುತ್ತಿದ್ದಂತೆಯೇ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಹಾಗೂ ಕೇಂದ್ರದ ಭದ್ರತಾಪಡೆಗಳು ಸಮರ ಸಾರಿವೆ. ಬೆಂಬಲಿಗರನ್ನು ಬೆನ್ನತ್ತಿ ಹಿಡಿಯಲಾಗಿದೆ. ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಅಮೃತ್‌ಪಾಲ್ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಆಧಾರ: ರಾಯಿಟರ್ಸ್‌, ಪಿಟಿಐ, ಬ್ರಿಟಾನಿಕಾ ಎನ್‌ಸೈಕ್ಲೋಪೀಡಿಯ, ರಾಜಶ್ರೀ ಜೇಟ್ಲಿ ಅವರ ‘ದಿ ಖಾಲಿಸ್ತಾನ್‌ ಮೂವ್‌ಮೆಂಟ್‌ ಇನ್‌ ಇಂಡಿಯಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT