ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ| ಬಂಡೆ ಸೀಳುವ ಬಡವರ ಬದುಕೇ ಬರಡು

Last Updated 30 ಜನವರಿ 2021, 20:31 IST
ಅಕ್ಷರ ಗಾತ್ರ

ಬೆಂಗಳೂರು: ಮೇಲೆ ಸುಡುವ ಸೂರ್ಯ, ಕೆಳಗೆ ಕಾದ ಬಾಣಲೆಯಂತಹ ಬಂಡೆಗಳ ಮೇಲೆ ಬಡಕಲು ಹೊಟ್ಟೆ ತುಂಬಿಸಿಕೊಳ್ಳಲು ಬಡ ಜೀವಗಳ ಸೆಣಸಾಟ...

ಇದು ಕಲ್ಲು ಕ್ವಾರಿಗಳಲ್ಲಿ ಅಕ್ಷರಶಃ ಜೀತದಾಳುಗಳಾಗಿ ದುಡಿಯುತ್ತಿರುವ ಜನರ ಬದುಕಿನ ಬವಣೆ. ಬಂಡೆ ಸೀಳುವ ತಾಕತ್ತಿರುವ ಈ ಜನರು ಬರಡಾಗಿರುವ ಬದುಕು ಸೀಳಿ ಮುನ್ನುಗ್ಗಲಾಗದ ಸ್ಥಿತಿಯಲ್ಲಿದ್ದಾರೆ.

ಕ್ವಾರಿಗಳಲ್ಲಿ ಕಲ್ಲು ಒಡೆಯುವ ಕೆಲಸ ಮಾಡುವ ಜನರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ಬಹುತೇಕರು ಎಡಗೈ ಬೆರಳುಗಳು ಮತ್ತು ಅಂಗೈಗೆ ಬಟ್ಟೆಗಳನ್ನು ಕಟ್ಟಿಕೊಂಡಿರುತ್ತಾರೆ. ಇದೇಕೆ ಎಂಬ ಪ್ರಶ್ನೆಗೆ, ‘ನಮ್ಮ ಎಡಗೈ ಮೇಲೆ ಬಲಗೈ ಆಗಾಗ ಸಿಟ್ಟು ಮಾಡಿಕೊಳ್ಳುತ್ತಲೇ ಇರುತ್ತದೆ. ಬಲಗೈನಲ್ಲಿ ಸುತ್ತಿಗೆ, ಎಡಗೈನಲ್ಲಿ ಉಳಿ ಇರುತ್ತದೆ. ಬಲಗೈಗೆ ಸಿಟ್ಟು ಬಂದಾಗ ಉಳಿಯ ಮೇಲೆ ಬೀಳಬೇಕಾದ ಪೆಟ್ಟನ್ನು ಎಡಗೈ ಮೇಲೆ ಕೊಡುತ್ತದೆ. ಹೀಗಾಗಿ ಎಡಗೈ ಸದಾ ಸುತ್ತಿಗೆ ಏಟಿನ ಗಾಯಗಳೊಂದಿಗೇ ತುಂಬಿರುತ್ತದೆ’ ಎನ್ನುತ್ತಾರೆ ಕಲ್ಲು ಒಡೆಯುವ ಮಹಿಳೆಯರು.

ಕ್ವಾರಿಗಳಲ್ಲಿಯೇ ಸಣ್ಣ ಸಣ್ಣ ಟೆಂಟ್‌ಗಳನ್ನು ನಿರ್ಮಿಸಿಕೊಂಡು ಅಲ್ಲೇ ಜೀವನ ನಡೆಯುತ್ತಿದ್ದಾರೆ. ಬಯಲಲ್ಲೇ ಸ್ನಾನ, ಶೌಚಾಲಯ ಎಲ್ಲವೂ. ಕಲ್ಲು ಕ್ವಾರಿಗಳ ನಡುವೆಯೇ ಆರಂಭವಾಗಿರುವ ಮಕ್ಕಳ ಬದುಕು ಈ ಬಂಡೆಗಳನ್ನು ದಾಟಿ ಹೋಗುವ ಲಕ್ಷಣಗಳಿಲ್ಲ.

‘ಕಲ್ಲಿನ ಪುಡಿಯೊಂದಿಗೇ ಇರುವ ದೊಡ್ಡವರಿಗೆ ಅಸ್ತಮ ಕಾಡದೇ ಬಿಡುವುದಿಲ್ಲ. ಸಿಡಿಮದ್ದುಗಳನ್ನು ಇಟ್ಟು ಬಂಡೆಗಳನ್ನು ಸಿಡಿಸುವಾಗ ಅವಘಡವಾದರೆ ಚಿಕಿತ್ಸೆಯ ವೆಚ್ಚವನ್ನು ನಾವೇ ಭರಿಸಿಕೊಳ್ಳಬೇಕು. ಆಸ್ಪತ್ರೆ ಖರ್ಚಿಗೆ ಪಡೆದ ಹಣವೂ ಸಾಲದ ಪುಸ್ತಕದಲ್ಲಿ ದಾಖಲಾಗುತ್ತದೆ. ಅದನ್ನು ತೀರಿಸಲು ಇನ್ನಷ್ಟು ದಿನ ದುಡಿಯಬೇಕಾಗುತ್ತದೆ’ ಎಂದು ನೋವಿನಿಂದ ಹೇಳುತ್ತಾರೆ ಕಾರ್ಮಿಕರು.

ರಾಜ್ಯದ ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಲ್ಲು ಕ್ವಾರಿಗಳಲ್ಲಿ ಈಗ ಕೆಲಸ ಮಾಡುವ ಬಹುತೇಕರು ಉತ್ತರ ಕರ್ನಾಟಕದ ಮತ್ತು ಹೊರ ರಾಜ್ಯಗಳ ವಲಸೆ ಕಾರ್ಮಿಕರು.

ಕ್ವಾರಿ ಕೆಲಸಕ್ಕೆ ಇವರು ನೇರವಾಗಿ ಬಂದವರಲ್ಲ. ಮೇಸ್ತ್ರಿಯೊಬ್ಬನ ನೆರವಿನಿಂದಲೇ ಗುಂಪು–ಗುಂಪಾಗಿ ಬಂದು ಕಲ್ಲು ಒಡೆಯುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಮುಂಗಡ ಹಣ ಪಡೆದು ಅದನ್ನು ತೀರಿಸಲು ವರ್ಷಗಟ್ಟಲೆ ದುಡಿಯುತ್ತಾರೆ. ‘ಊರಿನಲ್ಲಿ ಕೃಷಿ ಮಾಡಲು ಜಮೀನಿಲ್ಲ, ಕೆಲವರಿಗೆ ಜಮೀನಿದ್ದರೂ ನೀರಾವರಿ ಸೌಲಭ್ಯ ಇಲ್ಲ. ಅಲ್ಲಿ ಇದಕ್ಕಿಂತಲೂ ಕಡಿಮೆ ಕೂಲಿ ಇದೆ. ಅದಕ್ಕಾಗಿ ವಲಸೆ ಬಂದಿದ್ದೇವೆ’ ಎನ್ನುತ್ತಾರೆ ಕಾರ್ಮಿಕರು.

‘ದಿನಕ್ಕೆ ₹250ರಿಂದ ₹300 ತನಕ ಕೂಲಿ ಇದೆ. ಇನ್ನೂ ಕೆಲವು ಕ್ವಾರಿಗಳಲ್ಲಿ ಗುತ್ತಿಗೆ ಪದ್ಧತಿಯೂ ಇದೆ. ಈ ದುಡಿಮೆ ಮುಂಗಡವಾಗಿ ಪಡೆದ ಹಣ ತೀರಿಸಲು ಮತ್ತು ಬಡಕಲು ಹೊಟ್ಟೆಯನ್ನು ಅರೆ–ಬರೆಯಾಗಿ ತುಂಬಿಸಿಕೊಳ್ಳಲು ಸಾಲುವುದಿಲ್ಲ. ಕಾರ್ಮಿಕ ಇಲಾಖೆ ನಿಗದಿ ಮಾಡಿರುವ ಕನಿಷ್ಠ ಕೂಲಿಗಿಂತಲೂ ಕಡಿಮೆ ಕೂಲಿ ಇದೆ’ ಎನ್ನುತ್ತಾರೆ ಈ ಕಾರ್ಮಿಕರ ಪರ ಕೆಲಸ ಮಾಡುವ ಹೋರಾಟಗಾರರು.

ಬಂಡೆಗಳಲ್ಲೂ ಈಗ ಕೆಲಸಕ್ಕೆ ಬರ

ಕೋವಿಡ್ ಕಾರಣದಿಂದ ನಿರ್ಮಾಣ ಕಾಮಗಾರಿಗಳು ಕಡಿಮೆ ಆಗಿರುವ ಕಾರಣ ಕಲ್ಲು ಕ್ವಾರಿಗಳಲ್ಲೂ ಕೆಲಸ ಕಡಿಮೆಯಾಗಿದೆ. ಬಂಡೆಗಳನ್ನೇ ನಂಬಿದ್ದ ಕಾರ್ಮಿಕರು ಈಗ ಅಕ್ಕಪಕ್ಕದ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.

‌‘ಲಾಕ್‌ಡೌನ್‌ ಸಂದರ್ಭದಲ್ಲಿ ಊರಿಗೆ ಹೋಗಿದ್ದವರೂ ವಾಪಸ್ ಬಂಡೆಗಳತ್ತ ಬಂದಿದ್ದಾರೆ. ಅದರೆ, ಅಲ್ಲಿ ಸದ್ಯಕ್ಕೆ ಕೆಲಸ ಇಲ್ಲ. ಇರುವ ಕೆಲಸ ಎಲ್ಲರಿಗೂ ಸಾಕಾಗುವುದಿಲ್ಲ. ಹೀಗಾಗಿ, ಅಕ್ಕ–‍ಪಕ್ಕದ ಜಮೀನಿನಲ್ಲಿ ಕೆಲಸಕ್ಕೆ ಕರೆದರೆ ಕೊಟ್ಟಷ್ಟು ಪಡೆದು ದುಡಿಯುತ್ತಿದ್ದಾರೆ’ ಎಂದು ಜೀತ ವಿಮುಕ್ತ ಕರ್ನಾಟಕ ಸಂಘಟನೆಯ ಕಿರಣ್ ಕಮಲ ಪ್ರಸಾದ್ ಹೇಳುತ್ತಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT