ಮಂಗಳವಾರ, ನವೆಂಬರ್ 30, 2021
21 °C
ಕ್ಷೀರಕ್ರಾಂತಿಯ ಹರಿಕಾರನ ಜನ್ಮಶತಮಾನ

ಆಳ-ಅಗಲ | ಹಾಲಿನ ಹೊಳೆ ಹರಿಸಿದ ಕುರಿಯನ್‌

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

1949ರ ಡಿಸೆಂಬರ್‌ನ ಕೊನೆಯ ದಿನಗಳವು. ಗುಜರಾತ್‌ನ ಆನಂದ್‌ ಜಿಲ್ಲೆಯ ಸರ್ಕಾರಿ ಕ್ರೀಮರಿಯಲ್ಲಿ (ಬೆಣ್ಣೆ ಮತ್ತು ಗಿಣ್ಣು ತಯಾರಿ ಕೇಂದ್ರ) ತಮ್ಮ ಒಂಬತ್ತು ತಿಂಗಳ ಪ್ರಭಾರಿ ಸೇವೆಯನ್ನು ಮುಗಿಸಿ, ಆ ವ್ಯಕ್ತಿ ಮುಂಬೈನಲ್ಲಿ ನೆಲೆಸಲು ಸಿದ್ಧತೆ ನಡೆಸಿದ್ದರು. ಒಂಬತ್ತು ತಿಂಗಳ ಸೇವಾವಧಿಯಲ್ಲಿ ಆ ವ್ಯಕ್ತಿಯು ಕಯಾರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ತ್ರಿಭುವನದಾಸ್ ಪಟೇಲ್‌ ಅವರ ಜತೆ ಸ್ನೇಹ ಬೆಳೆಸಿಕೊಂಡಿದ್ದರು. ಸೇವಾವಧಿ ಮುಗಿಯಲಿದ್ದ ಒಂದೆರಡು ದಿನ ಮೊದಲು ಆ ವ್ಯಕ್ತಿಯನ್ನು ಕರೆಸಿಕೊಂಡ ಪಟೇಲರು, ತಮ್ಮ ಓಕ್ಕೂಟದಲ್ಲಿರುವ ಹೊಸ ಹಾಲುಸಂಸ್ಕರಣ ಯಂತ್ರವನ್ನು ಜೋಡಿಸಲು ನೆರವು ನೀಡುವಂತೆ ಕೋರಿಕೊಂಡರು. ಆ ಯಂತ್ರವನ್ನು ಜೋಡಿಸಲು ಒಂದೆರಡು ದಿನ ಅಲ್ಲೇ ಉಳಿಯಲು ಆ ವ್ಯಕ್ತಿ ನಿರ್ಧರಿಸಿದರು.

ಆದರೆ, ನಂತರ ಅವರು ತಮ್ಮ ಇಡೀ ಸೇವಾವಧಿಯನ್ನು ಆನಂದ್‌ ಜಿಲ್ಲೆಯಲ್ಲಿಯೇ ಕಳೆದರು. ಭಾರತದಲ್ಲಿ ಕ್ಷೀರಕ್ರಾಂತಿ ಯಶಸ್ವಿಯಾಗಲು ಆ ನಿರ್ಧಾರವೂ ಕಾರಣವಾಯಿತು. ಅಂದು ಯಂತ್ರ ಜೋಡಿಸಲು ನಿಂತ ವ್ಯಕ್ತಿಯೇ ನಂತರದ ಎರಡು ದಶಕಗಳಲ್ಲಿ ಭಾರತದ ಕ್ಷೀರಕ್ರಾಂತಿಯನ್ನು ಮುನ್ನಡೆಸಿದರು. ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಎನಿಸಿಕೊಂಡರು. ಆ ವ್ಯಕ್ತಿಯೇ ಡಾ.ವರ್ಗೀಸ್ ಕುರಿಯನ್.

ದೇಶ ಮತ್ತು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಒಕ್ಕೂಟವಾದ ಅಮೂಲ್ (ಆನಂದ್ ಮಿಲ್ಕ್‌ ಯೂನಿಯನ್ ಲಿಮಿಟೆಡ್‌) ಅನ್ನು ರೂಪಿಸಿದ್ದು ಕುರಿಯನ್. 1946ರಲ್ಲಿ ದೇಶದ ಮೊದಲ ಹಾಲು ಉತ್ಪಾದಕರ ಸಂಘ ಗುಜರಾತ್‌ನಲ್ಲಿ ಆರಂಭವಾಗಿತ್ತು. 1948ರಲ್ಲಿ ಅದರ ಸದಸ್ಯರ ಸಂಖ್ಯೆ ಹೆಚ್ಚಾಯಿತು. ಜಿಲ್ಲಾಮಟ್ಟದಲ್ಲಿಯೂ ಹಾಲು ಉತ್ಪಾದಕರ ಸಂಘಟಗಳ ಒಕ್ಕೂಟಗಳು ಆರಂಭವಾದವು. ಅದರಲ್ಲಿ ಪ್ರಮುಖವಾದುದು ಕಯಾರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ. ಈ ಎಲ್ಲಾ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳನ್ನು ಒಳಗೊಂಡ ಆನಂದ್ ಮಿಲ್ಕ್‌ ಯೂನಿಯನ್ ಲಿಮಿಟೆಡ್‌ ಅನ್ನು ಕುರಿಯನ್ ಸ್ಥಾಪಿಸಿದರು. 

ಮೌಲ್ಯವರ್ಧನೆಗೆ ಒತ್ತು

ಆರಂಭದ ದಿನಗಳಲ್ಲಿ ಕೆಲವೇ ಆಯ್ದ ಗ್ರಾಮ ಹಾಲು ಉತ್ಪಾದಕರ ಸಂಘಗಳಿಂದ ಖರೀದಿಸಲಾದ ಹಾಲನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಅಮೂಲ್‌ ಮಾಡುತ್ತಿತ್ತು. ಆನಂದ್ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗಷ್ಟೇ ಅಮೂಲ್‌ನ ಹಾಲು ತಲುಪುತ್ತಿತ್ತು. ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಶೀಘ್ರವೇ ವಿತರಣೆ ಮಾಡಬೇಕಿತ್ತು. ತಡವಾದರೆ ಹಾಲು ಹಾಳಾಗುತ್ತಿತ್ತು. ಬಿಕರಿಯಾಗದೇ ಇದ್ದರೂ ಹಾಲು ಹಾಳಾಗುತ್ತಿತ್ತು. ಉಳಿದ ಹಾಲಿನಿಂದ ಬೆಣ್ಣೆ ಮತ್ತು ಗಿಣ್ಣು ತಯಾರಿಸಲು ಕುರಿಯನ್ ಕ್ರಮ ತೆಗೆದುಕೊಂಡರು. ಅದಕ್ಕೆ ಅಗತ್ಯವಿದ್ದ ಸಲಕರಣೆಗಳನ್ನು ಅಮೂಲ್‌ಗಾಗಿ  ಖರೀದಿಸಿದರು. ಅಮೂಲ್‌ನ ಬೆಣ್ಣೆ ಮತ್ತು ಗಿಣ್ಣುವಿಗೆ ಮಾರುಕಟ್ಟೆ ಸೃಷ್ಟಿಸಲು ಕ್ರಮ ತೆಗೆದುಕೊಂಡರು. ಕೆಲವೇ ತಿಂಗಳಿನಲ್ಲಿ ಅವು ಜನಪ್ರಿಯತೆ ಪಡೆದವು, ಜತೆಗೆ ಅಮೂಲ್‌ ಸಹ.

ಅಮೂಲ್‌ನಲ್ಲಿ ಬಿಕರಿಯಾಗದೇ ಉಳಿದ ಹಸುವಿನ ಹಾಲಿನಿಂದ ಪುಡಿ ತಯಾರಿಸಲಾಗುತ್ತಿತ್ತು. ಆದರೆ ಈ ಭಾಗದಲ್ಲಿ ಎಮ್ಮೆಯ ಹಾಲಿನ ಉತ್ಪಾದನೆ ಅಧಿಕವಾಗಿತ್ತು. ಎಮ್ಮೆಯ ಹಾಲನ್ನು ಪುಡಿ ಆಗಿ ಬದಲಿಸುವ ತಂತ್ರಜ್ಞಾನ ಮತ್ತು ವಿಧಾನ ಜಗತ್ತಿನ ಎಲ್ಲಿಯೂ ಲಭ್ಯವಿರಲಿಲ್ಲ. ಸ್ವತಃ ಡೇರಿ ಎಂಜಿನಿಯರ್ ಆಗಿದ್ದ ಕುರಿಯನ್ ಅವರು, ಎಮ್ಮೆಯ ಹಾಲಿನಿಂದ ಪುಡಿ ತಯಾರಿಸುವ ವಿಧಾನವನ್ನು ರೂಪಿಸಿದರು. ಅದು ಯಶಸ್ವಿಯಾಯಿತು ಮತ್ತು ಹಾಲು ವ್ಯರ್ಥವಾಗುವುದನ್ನು ತಡೆದು, ಮೌಲ್ಯವರ್ಧಿಸುವ ಕೆಲಸವಾಯಿತು. ಒಂದೆರಡು ಉತ್ಪನ್ನಗಳಿಗಾಗಿ ಮಾಡಿದ ಈ ಮೌಲ್ಯವರ್ಧನೆ, ಈಗ 25 ಉತ್ಪನ್ನಗಳಿಗೆ ವಿಸ್ತರಿಸಿದೆ.

ಉತ್ಪಾದಕರಿಗೆ ಗರಿಷ್ಠ ಬೆಲೆ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ

ದೇಶದಲ್ಲಿ ಕ್ಷೀರಕ್ರಾಂತಿಯನ್ನು ಆರಂಭಿಸುವ ಮುನ್ನವೇ ಹಾಲು ಉತ್ಪಾದಕರು ಮತ್ತು ಗ್ರಾಹಕರ ನಡುವೆ ಒಂದು ವ್ಯವಸ್ಥಿತವಾದ ಪೂರೈಕೆ ಜಾಲವನ್ನು ಅಮೂಲ್ ರೂಪಿಸಿತ್ತು. ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಹೆಚ್ಚಿನ ಕಾಲ ಸಂಸ್ಕರಿಸಿ ಇಡುವ ಸಲಕರಣೆಗಳು ಮತ್ತು ವಿಧಾನಗಳ ಬಳಕೆಯನ್ನು ಕುರಿಯನ್ ಪ್ರೋತ್ಸಾಹಿಸಿದರು. ಇದರಿಂದ ಹಾಲು ಉತ್ಪಾದಕರ ಸಂಘಗಳು ಮತ್ತು ಒಕ್ಕೂಟಗಳು ಹೆಚ್ಚಿನ ಅವಧಿಯವರೆಗೆ ಹಾಲನ್ನು ಸಂಗ್ರಹಿಸಿ ಇಡಲು ಸಾಧ್ಯವಾಯಿತು. ಜತೆಗೆ ಬಹಳ ದೂರದ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಹಾಲನ್ನು ತಲುಪಿಸಲು ಸಾಧ್ಯವಾಯಿತು. ಇದು ಸಹ ಅಮೂಲ್‌ನ ಜನಪ್ರಿಯತೆಗೆ ಕಾರಣವಾಯಿತು.

ಸಹಕಾರ ತತ್ವಗಳ ಅಡಿ ಗುಜರಾತ್‌ನಲ್ಲಿ ಹಲವು ಹಾಲು ಉತ್ಪಾದಕರ ಒಕ್ಕೂಟಗಳು 1950ಕ್ಕೂ ಮೊದಲೇ ಆರಂಭವಾಗಿದ್ದವು. ಆದರೆ ಉತ್ಪಾದಕರಿಂದ ಕಡಿಮೆ ಬೆಲೆಗೆ ಖರೀದಿಸಿ, ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸಹಕಾರ ಸಂಘಗಳೇ ಲಾಭದ ಹೆಚ್ಚಿನಂಶವನ್ನು ಪಡೆದುಕೊಳ್ಳುತ್ತಿದ್ದವು. ಈ ಸ್ವರೂಪದ ವ್ಯವಹಾರ ಮಾದರಿಗೆ ಅಮೂಲ್ ಕೊನೆ ಹಾಡಿತು. ಗ್ರಾಹಕರಿಗೆ ಮಾರಾಟ ಮಾಡಲಾದ ಹಾಲು ಮತ್ತು ಹಾಲಿನ ಉತ್ಪನ್ನದ ಬೆಲೆಯ ಸಿಂಹಪಾಲು ಉತ್ಪಾದಕರಿಗೆ ತಲುಪುವ ವ್ಯವಸ್ಥೆಯನ್ನು ಕುರಿಯನ್ ರೂಪಿಸಿದರು. ಹೀಗಾಗಿ ಹೆಚ್ಚಿನ ಉತ್ಪಾದಕರು ಅಮೂಲ್‌ಗಷ್ಟೇ ಹಾಲು ಮಾರಾಟ ಮಾಡಲು ಮುಂದಾದರು. ಇದರಿಂದ ಅಮೂಲ್‌ನ ಹಾಲು ಉತ್ಪಾದಕರ ಜಾಲ ವಿಸ್ತೃತವಾಗಿ ಬೆಳೆಯಿತು.

ಇದರ ಜತೆಯಲ್ಲಿಯೇ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವುದರತ್ತಲೂ ಕುರಿಯನ್ ಗಮನ ಕೇಂದ್ರೀಕರಿಸಿದ್ದರು. ನಿಗದಿತ ಗುಣಮಟ್ಟದ ಹಾಲನ್ನಷ್ಟೇ ಖರೀದಿಸಲಾಗುತ್ತಿತ್ತು. ಇದರಿಂದ ಗ್ರಾಹಕರಿಗೆ ತಲುಪುವ ಹಾಲು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಯಿತು. ಇದು ಅಮೂಲ್‌ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿತು. 1973ರಲ್ಲಿ ಇದನ್ನು ಗುಜರಾತ್ ಸಹಕಾರಿ ಹಾಲು ಮಾರಾಟ ಫೆಡರೇಷನ್ ಲಿಮಿಟೆಡ್ ಆಗಿ ಮರುನಾಮಕರಣ ಮಾಡಲಾಯಿತು. ಆದರೆ ಅಮೂಲ್‌ ಬ್ರ್ಯಾಂಡ್‌ ಅನ್ನು ಉಳಿಸಿಕೊಳ್ಳಲಾಯಿತು.

ವಿಶ್ವದ ದೊಡ್ಡ ಹಾಲು ಉತ್ಪಾದಕರ ಸಂಘಟನೆ

ಅಮೂಲ್‌ ಅಥವಾ ಗುಜರಾತ್‌ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಷನ್ ಲಿಮಿಟೆಡ್ ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಂಘಟನೆ ಎನಿಸಿದೆ. ಅಮೂಲ್ ಗುಜರಾತ್‌ನ ಸಂಸ್ಥೆಯಾದರೂ, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಲಿನ ಖರೀದಿ ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಯನ್ನು ನಿರ್ವಹಿಸುತ್ತಿದೆ. ಸಂಘಟನೆಯ ಗುಜರಾತ್‌ನ ಸದಸ್ಯರು, ಹಾಲು ಉತ್ಪಾದಕರ ಸಂಖ್ಯೆಯ ವಿವರ ಇಲ್ಲಿದೆ

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳು: 18
ಗ್ರಾಮಮಟ್ಟದ ಹಾಲು ಉತ್ಪಾದಕರ ಸಂಘಗಳು: 18,600
ಲಕ್ಷ ಹಾಲು ಉತ್ಪಾದಕರು: 36.4
ಕೋಟಿ ಲೀಟರ್‌ ದಿನವೊಂದರಲ್ಲಿ ನಿರ್ವಹಣೆ ಮಾಡಬಹುದಾದ ಹಾಲಿನ ಪ್ರಮಾಣ: 3.9
ಕೋಟಿ ಲೀಟರ್‌ ಪ್ರತಿದಿನ ಸಂಗ್ರಹಿಸಲಾಗುತ್ತಿರುವ ಹಾಲಿನ ಸರಾಸರಿ ಪ್ರಮಾಣ: 2.4
2020–21ನೇ ಸಾಲಿನಲ್ಲಿ ಅಮೂಲ್‌ನ ಒಟ್ಟು ವಹಿವಾಟು: ₹39,248 ಕೋಟಿ

ಆಪರೇಷನ್‌ ಫ್ಲಡ್‌ನಲ್ಲಿ ಕ್ಷೀರ ಕ್ರಾಂತಿ!

ಗುಜರಾತಿನಲ್ಲಿ ವರ್ಗೀಸ್ ಕುರಿಯನ್ ಅವರು ರೂಪಿಸಿದ್ದ ಸಹಕಾರಿ ಹಾಲು ಒಕ್ಕೂಟ ವ್ಯವಸ್ಥೆಯ ಯಶಸ್ಸಿನ ಬಗ್ಗೆ ತಿಳಿದುಕೊಳ್ಳಲು ಅಂದಿನ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರಿಗೆ ತೀವ್ರ ಕುತೂಹಲವಿತ್ತು. 1964ರಲ್ಲಿ ಅಮೂಲ್‌ ಘಟಕಕ್ಕೆ ಭೇಟಿ ನೀಡಿದ ಅವರು, ಹಳ್ಳಿಗರ ಸಾಮಾಜಿಕ–ಮತ್ತು ಆರ್ಥಿಕ ಸ್ಥಿತಿ ಉತ್ತಮಪಡಿಸುವ ಕುರಿಯನ್ ಅವರ ಈ ಮಾದರಿಯನ್ನು ದೇಶದ ಎಲ್ಲಡೆ ವಿಸ್ತರಿಸುವ ಕುರಿತ ಚರ್ಚೆ ನಡೆಸಿದ್ದರು. ಈ ಬಳಿಕ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ರೂಪು ತಾಳಿತು. ಕುರಿಯನ್ ಅದರ ಮೊದಲ ಮುಖ್ಯಸ್ಥರಾದರು. ಮಂಡಳಿಯು 1970ರಲ್ಲಿ ಭಾರತದಲ್ಲಿ ಡೇರಿ ಅಭಿವೃದ್ಧಿ ಯೋಜನೆಯನ್ನು ಶುರು ಮಾಡಿತ್ತು. ಇದು ‘ಆಪರೇಷನ್ ಫ್ಲಡ್’ ಎಂದೇ ಹೆಸರಾಯಿತು.

‘ಆಪರೇಷನ್ ಫ್ಲಡ್’ ಯೋಜನೆಯು ದೇಶದಲ್ಲಿ ಕ್ಷೀರಕ್ರಾಂತಿಗೆ ನಾಂದಿಹಾಡಿತು. ಮಧ್ಯವರ್ತಿಯ ಹಾವಳಿ ತಪ್ಪಿಸಿ, ಹಾಲು ಉತ್ಪಾದಕರಿಂದ ಪ್ರಮುಖ ನಗರ ಮತ್ತು ಪಟ್ಟಣಗಳ ಗ್ರಾಹಕರಿಗೆ ಹಾಲು ಪೂರೈಸುವ ಉದ್ದೇಶವನ್ನು ಇದು ಹೊಂದಿತ್ತು. ಉತ್ಪಾದಕರಿಗೆ ಅರ್ಹ ಬೆಲೆ ದೊರಕಿಸಲು ಆದ್ಯತೆ ನೀಡಲಾಗಿತ್ತು. ಈ ಯೋಜನೆಯು ಡೇರಿ ಉದ್ಯಮಕ್ಕೆ ಸ್ಥಿರತೆ ತರುವುದರ ಜೊತೆಗೆ ಬಡ ರೈತರಿಗೆ ಉದ್ಯೋಗದ ದಾರಿ ಮಾಡಿಕೊಟ್ಟಿತು. ಆಪರೇಷನ್ ಫ್ಲಡ್‌ನ ತಳಹದಿಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ತಲೆ ಎತ್ತಿದವು. ಹಾಲು ಉತ್ಪಾದನೆ, ಸರಬರಾಜು ಸೇರಿದಂತೆ ವಿವಿಧ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು  ಬಳಸಿಕೊಳ್ಳಲಾಯಿತು. ಇದರ ಫಲವಾಗಿ ದೇಶದಲ್ಲಿ ಕ್ಷೀರ ಕ್ರಾಂತಿ ಆಯಿತು. ಆಪರೇಷನ್ ಫ್ಲಡ್ ಯೋಜನೆಯು ಜಗತ್ತಿನ ಅತಿದೊಡ್ಡ ಡೇರಿ ಅಭಿವೃದ್ಧಿ ಕಾರ್ಯಕ್ರಮ ಎಂದು ಹೆಸರಾಯಿತು. ಇದಕ್ಕೆ ಕಾರಣಕರ್ತರಾದ ವರ್ಗೀಸ್ ಕುರಿಯನ್ ಅವರನ್ನು ಕ್ಷೀರ ಕ್ರಾಂತಿಯ ಪಿತಾಮಹ ಎಂದು ಕರೆಯಲಾಯಿತು. 

ಮೂರು ಹಂತಗಳು: 

ಯೋಜನೆಯಲ್ಲಿ ಮೂರು ಹಂತಗಳಿದ್ದವು. 1970ರಲ್ಲಿ ಮೊದಲ ಹಂತದಲ್ಲಿ, 10 ರಾಜ್ಯಗಳಲ್ಲಿ 18 ಹಾಲಿನ ಘಟಕಗಳನ್ನು ಸ್ಥಾಪಿಸಿ ಅದರ ಮೂಲಕ ದೇಶದ ನಾಲ್ಕು ಮಹಾ ನಗರಗಳಿಗೆ ಹಾಲು ಸರಬರಾಜು ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. 1981ರಲ್ಲಿ ಈ ಹಂತ ಪೂರ್ಣಗೊಂಡಾಗ, ದೇಶದಲ್ಲಿ 13 ಸಾವಿರ ಸಹಕಾರಿ ಸಂಘಗಳು ರೂಪುಗೊಂಡಿದ್ದವು. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಎರಡನೇ ಹಂತ ಜಾರಿಯಾಯಿತು. 1985ರ ವೇಳೆಗೆ ದೇಶದಲ್ಲಿ 136 ಘಟಕಗಳು, 34 ಸಾವಿರ ಸಂಘಗಳು ಅಸ್ತಿತ್ವದಲ್ಲಿದ್ದವು. 36 ಲಕ್ಷ ಸದಸ್ಯರು ಡೇರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೂರನೇ ಹಂತದಲ್ಲಿ ಉತ್ಪಾದಕತೆ ಹೆಚ್ಚಿಸುವ ಹಾಗೂ ದೀರ್ಘಾವಧಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶ ಇರಿಸಿಕೊಳ್ಳಲಾಗಿತ್ತು. ಈ ಹಂತ ಪೂರ್ಣಗೊಂಡಾಗ (1996) ದೇಶದಲ್ಲಿ 93 ಸಾವಿರ ಡೇರಿ ಸಂಘಗಳಿದ್ದವು. ಸದಸ್ಯರ ಸಂಖ್ಯೆ 94 ಲಕ್ಷಕ್ಕೆ ಏರಿಕೆಯಾಗಿತ್ತು. ಈ ಉದ್ಯಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಯಿತು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಯಿತು. ಹಾಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಆರಂಭಿಸಲಾಯಿತು. 

ಗುಜರಾತ್‌ನಲ್ಲಿ ಶುರುವಾದ ಅಮೂಲ್‌ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಶುರುವಾದ ಕೆಎಂಎಫ್ ಅತಿ ಹೆಚ್ಚು ಯಶಸ್ಸು ಪಡೆದ ಹಾಲು ಉತ್ಪಾದಕ ಸಂಸ್ಥೆ ಎನಿಸಿತು. ಅಮೂಲ್‌ನಿಂದ ಪಡೆದ ಪ್ರೇರಣೆ ಪಡೆದ ‘ನಂದಿನಿ’ ಉತ್ಪನ್ನಗಳು ಮನೆಮಾತಾದವು. ಉತ್ಪನ್ನಗಳನ್ನು ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಹಾಲು ಉತ್ಪಾದಕರ ಪೈಪೋಟಿಯ ನಡುವೆಯೂ ನಂದಿನಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಶೇ 80ರಷ್ಟು ಪಾಲು ಪಡೆದಿವೆ.  ಚಾಕೋಲೆಟ್, ಐಸ್‌ಕ್ರೀಮ್‌, ಕೊಬ್ಬರಿ ಬರ್ಫಿ ಮೊದಲಾದ ನೂರಾರು ಉತ್ಪನ್ನಗಳನ್ನು ಸಂಸ್ಥೆ ಪರಿಚಯಿಸಿದೆ. ರಾಜ್ಯದ ಲಕ್ಷಾಂತರ ರೈತರು ಹೈನು ಉದ್ಯಮದ ಮೂಲಕ ಆರ್ಥಿಕ ದಾರಿ ಕಂಡುಕೊಂಡಿದ್ದಾರೆ.  

 ವರ್ಗೀಸ್ ಕುರಿಯನ್ ಜೀವನ

1921ರ ನವೆಂಬರ್ 26ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಕ್ರೈಸ್ತ ಕುಟುಂಬದಲ್ಲಿ ಜನಿಸಿದ ವರ್ಗೀಸ್ ಕುರಿಯನ್, 1940ರಲ್ಲಿ ಮದ್ರಾಸ್‌ನ ಲೊಯೋಲಾ ಕಾಲೇಜ್‌ನಿಂದ ಬಿಎಸ್‌ಸಿ ಪದವಿ ಪಡೆದರು. ಅಲ್ಲಿಯೇ 1943ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನೂ ಪಡೆದರು. ಜಮ್‌ಶೆಡ್‌ಪುರದ ಟಾಟಾ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿ, ಬೆಂಗಳೂರಿನ ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯಲ್ಲಿ ಡೇರಿ ವಿಭಾಗದಲ್ಲಿ ಎಂಜಿನಿಯರಿಂಗ್ ಓದಿದರು.

ನಂತರ ಅಮೆರಿಕಕ್ಕೆ ಹೋದ ಅವರು, ಮಿಶಿಗನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಗುಜರಾತ್ ರಾಜ್ಯದ ಆನಂದ್‌ನಲ್ಲಿರುವ ಸರ್ಕಾರಿ ಸಂಶೋಧನಾ ಕ್ರೀಮರಿ ಸಂಸ್ಥೆಯಲ್ಲಿ ಕೆಲಸ ಮಾಡಿದರು. 1965ರಲ್ಲಿ ಅವರು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಮೊದಲ ಅಧ್ಯಕ್ಷರಾಗಿ ನೇಮಕವಾದರು. ಇವರ ನೇತೃತ್ವದಲ್ಲಿ ಆಪರೇಷನ್ ಫ್ಲಡ್ ಕಾರ್ಯರೂಪಕ್ಕೆ ಬಂದಿತು. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಆರಂಭಿಸಿದರು. ರೇಮನ್‌ ಮ್ಯಾಗ್ಸೇಸೆ, ಪದ್ಮ ವಿಭೂಷಣ, ವಿಶ್ವ ಆಹಾರ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರು 2012ರ ಸೆಪ್ಟೆಂಬರ್ 9ರಂದು ನಿಧನರಾದರು.

ಆಧಾರ: ಅಮೂಲ್, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು