ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ | ಸ್ಮಾರಕ ಸಂರಕ್ಷಣೆಗೆ ನಿರ್ಲಕ್ಷ್ಯ: ಕುರುಹು ಪತ್ತೆ ಇಲ್ಲದ 50 ತಾಣಗಳು

Last Updated 8 ಜನವರಿ 2023, 19:31 IST
ಅಕ್ಷರ ಗಾತ್ರ

ದೇಶದ 3,693 ಐತಿಹಾಸಿಕ ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಸಂರಕ್ಷಣೆಯಲ್ಲಿವೆ. ಆದರೆ, ಅವುಗಳ ಪೈಕಿ 50 ಸ್ಮಾರಕಗಳು ಎಲ್ಲಿವೆ ಎಂಬುದರ ಕುರುಹೇ ಪತ್ತೆ ಆಗುತ್ತಿಲ್ಲ ಎಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂಸದೀಯ ಸಮಿತಿಯು ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಸ್ಮಾರಕಗಳ ಸಂರಕ್ಷಣೆಯಲ್ಲಿ ಆಗುತ್ತಿರುವ ಅಸಡ್ಡೆಯ ಕುರಿತು ಸಮಿತಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಮಹಾಲೇಖಪಾಲರು (ಸಿಎಜಿ) 2013ರಲ್ಲಿಯೇ ‘ಸ್ಮಾರಕಗಳು ಮತ್ತು ಪ್ರಾಚೀನ ವಸ್ತುಗಳ ಸಂರಕ್ಷಣೆಯ ಕಾರ್ಯಕ್ಷಮತೆಯ ಪರಿಶೀಲನೆ’ ಎಂಬ ವರದಿಯನ್ನು ಸಿದ್ಧಪಡಿಸಿ ಸರ್ಕಾರದ ಗಮನ ಸೆಳೆದಿದ್ದರು. 92 ಸ್ಮಾರಕಗಳ ಕುರುಹು ಪತ್ತೆಯಾಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತೀಯ ಪುರಾತತ್ವ ಇಲಾಖೆಯು ಎಲ್ಲಿವೆ ಎಂಬುದೇ ಗೊತ್ತಿಲ್ಲದ ಸ್ಮಾರಕಗಳ ಪತ್ತೆಗೆ ಮುಂದಾಗಿತ್ತು. ಹಳೆಯ ದಾಖಲೆಗಳು, ಕಂದಾಯ ನಕ್ಷೆಗಳು ಮತ್ತು ಪ್ರಕಟವಾಗಿದ್ದ ವರದಿಗಳ ಅಧ್ಯಯನ ನಡೆಸಿ 42 ಸ್ಮಾರಕಗಳ ಗುರುತು ಪತ್ತೆ ಮಾಡಿತ್ತು. ತೀವ್ರವಾದ ನಗರೀಕರಣದಿಂದಾಗಿ 14 ಸ್ಮಾರಕಗಳ ಗುರುತು ನಷ್ಟವಾಗಿದೆ, 12 ಸ್ಮಾರಕಗಳು ಅಣೆಕಟ್ಟೆಯೊಳಗೆ ಮುಳುಗಿ ಹೋಗಿವೆ ಮತ್ತು 24 ಸ್ಮಾರಕಗಳು ಎಲ್ಲಿವೆ ಎಂಬುದನ್ನು ಪತ್ತೆ ಮಾಡುವುದಕ್ಕೇ ಸಾಧ್ಯವಾಗಿಲ್ಲ ಎಂಬ ನಿರ್ಧಾರಕ್ಕೆ ಎಎಸ್‌ಐ ಬಂದಿದೆ.

ನಗರೀಕರಣ, ಗಜೆಟ್‌ ಅಧಿಸೂಚನೆಯಲ್ಲಿ ಸಮರ್ಪಕವಾದ ವಿವರಗಳು ಇಲ್ಲದಿರುವುದು, ಪತ್ತೆ ಮಾಡಲು ಸಾಧ್ಯವೇ ಇಲ್ಲದಂತಹ ಸ್ಥಳದಲ್ಲಿ ಸ್ಮಾರಕಗಳು ಇರುವುದು, ದಟ್ಟ ಅರಣ್ಯದೊಳಗೆ ಇರುವುದು ಇತ್ಯಾದಿ ಸ್ಮಾರಕಗಳ ಕುರುಹು ಪತ್ತೆ ಆಗದೇ ಇರುವುದಕ್ಕಿರುವ ಕಾರಣಗಳಾಗಿವೆ ಎಂದು ಎಎಸ್‌ಐ ಹೇಳಿದೆ. ನಿರ್ದಿಷ್ಟ ಅವಧಿಯವರೆಗೆ ಪತ್ತೆಯಾಗದ ಸ್ಮಾರಕಗಳನ್ನು ಕುರುಹು ಪತ್ತೆಯಾಗದ ಸ್ಮಾರಕ ಎಂಬ ವರ್ಗಕ್ಕೆ ಎಎಸ್‌ಐ ಸೇರಿಸುತ್ತದೆ. ವೈಜ್ಞಾನಿಕ ಸಲಕರಣೆಗಳನ್ನು ಬಳಸಿಕೊಂಡು ದಾಖಲೆಗಳ ಪರಿಶೋಧನೆ ಮತ್ತು ಕ್ಷೇತ್ರ ಕಾರ್ಯದ ಮೂಲಕ ಈ ಸ್ಮಾರಕಗಳ ಕುರುಹು ಪತ್ತೆ ಆಗುವ ಸಾಧ್ಯತೆಯನ್ನು ಎಎಸ್‌ಐ ತಳ್ಳಿ ಹಾಕಿಲ್ಲ.

3,693 ಸ್ಮಾರಕಗಳ ಪೈಕಿ 1,655 ಸ್ಮಾರಕಗಳನ್ನು ಭೌತಿಕವಾಗಿ ಪರಿಶೀಲಿಸಿ 50 ಸ್ಮಾರಕಗಳ ಕುರುಹು ಸಿಕ್ಕಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ, ಎಲ್ಲ 3,693 ಸ್ಮಾರಕಗಳನ್ನು ಭೌತಿಕವಾಗಿ ಪರಿಶೀಲನೆಗೆ ಒಳಪಡಿಸಿದರೆ ಕುರುಹು ಇಲ್ಲದ ಸ್ಮಾರಕಗಳ ಸಂಖ್ಯೆಯು ಇನ್ನಷ್ಟು ಹೆಚ್ಚಲೂಬಹುದು. ಭೌತಿಕ ಸಮೀಕ್ಷೆಯಲ್ಲಿ ಸಿಎಜಿ ಜೊತೆಗೆ ಎಎಸ್‌ಐ ಕೂಡ ಕೈಜೋಡಿಸಿತ್ತು. ಮೊದಲ ಸಮೀಕ್ಷೆಯು 2013ರಲ್ಲಿ ನಡೆದಿತ್ತು. ಈಗ 10 ವರ್ಷಗಳು ಕಳೆದಿವೆ. ಆದರೆ, ಉಳಿದ ಸ್ಮಾರಕಗಳ ಭೌತಿಕ ಪರಿಶೀಲನೆಯ ಕೆಲಸವನ್ನು ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ ಎಂಬ ಕುರಿತು ಸಂಸದೀಯ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.

ರಾಜಧಾನಿ ದೆಹಲಿಯ ಹೃದಯಭಾಗದಲ್ಲಿದ್ದ ಬಾರಾಖಂಬಾ ಸ್ಮಶಾನದ ಕುರುಹು ಕೂಡ ಇಲ್ಲ ಎಂಬುದು ಸ್ಮಾರಕಗಳ ರಕ್ಷಣೆಯ ಕುರಿತು ಎಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸೂಚಿಸುತ್ತದೆ. ರಾಜಧಾನಿಯಲ್ಲಿದ್ದ ಸ್ಮಾರಕವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಕುಗ್ರಾಮಗಳಲ್ಲಿ ಇರುವ ಸ್ಮಾರಕಗಳು ಉಳಿಯಲು ಸಾಧ್ಯವೇ ಎಂಬ ಗಂಭೀರ ಪ್ರಶ್ನೆಯನ್ನೂ ಸಂಸದೀಯ ಸಮಿತಿಯು ವರದಿಯಲ್ಲಿ ಕೇಳಿದೆ.

ಕುರುಹು ಪತ್ತೆಯಾಗದ ಸ್ಮಾರಕಗಳನ್ನು ಪತ್ತೆ ಮಾಡಲು ಎಎಸ್‌ಐ ಕೆಲಸ ಮಾಡಿದೆ ಎಂಬುದು ನಿಜ. ಆದರೆ, ಸ್ಮಾರಕಗಳ ಸಂರಕ್ಷಣೆಯು ಸರಿಯಾಗಿಲ್ಲ ಎಂಬ ಕುರಿತು ವರದಿಯಲ್ಲಿ ಅತೃಪ್ತಿ ವ್ಯಕ್ತಪಡಿಸಲಾಗಿದೆ. ತನ್ನ ಅಧೀನದಲ್ಲಿ ಇದ್ದ ಸ್ಮಾರಕಗಳ ಕುರುಹೇ ಇಲ್ಲ ಎಂಬುದು ಕೂಡ ಎಎಸ್‌ಐಗೆ ತಿಳಿದಿರಲಿಲ್ಲ. ಸಿಎಜಿ ವರದಿಯ ಬಳಿಕವಷ್ಟೇ ಈ ವಿಚಾರ ಎಎಸ್‌ಐಗೆ ತಿಳಿಯಿತು ಎಂಬ ಸೋಜಿಗವನ್ನೂ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ.

ಸರ್ಕಾರದ ಅಸಡ್ಡೆ
ಎಎಸ್‌ಐನಿಂದ ಸಂರಕ್ಷಿತವಲ್ಲದ ಸ್ಮಾರಕಗಳು ಅಪಾರ ಸಂಖ್ಯೆಯಲ್ಲಿ ಇವೆ. ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಹಣವನ್ನೂ ನೀಡುತ್ತದೆ. 2022–23ನೇ ಸಾಲಿನಲ್ಲಿ ಸಂರಕ್ಷಿತವಲ್ಲದ ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರವು ₹3.33 ಕೋಟಿ ಹಣ ಮಂಜೂರು ಮಾಡಿದೆ. ಈ ಹಣವು ಎಲ್ಲಿಗೂ ಸಾಲದು ಎಂಬ ಅತೃಪ್ತಿಯನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸಂರಕ್ಷಣೆಯಲ್ಲಿ ಇಲ್ಲದ ಸ್ಮಾರಕಗಳನ್ನೂ ಸಂರಕ್ಷಿಸುವ ದಿಸೆಯಲ್ಲಿ ಗಂಭೀರವಾದ ಕೆಲಸ ಆಗಬೇಕು. ಈ ಸ್ಮಾರಕಗಳನ್ನೂ ಎಎಸ್‌ಐಯೇ ಸಂರಕ್ಷಿಸಬೇಕು. ಇದಕ್ಕೆ ಎಷ್ಟು ಹಣ ಬೇಕಾಗಿದೆಯೋ ಅಷ್ಟನ್ನು ಸರ್ಕಾರವು ಮಂಜೂರು ಮಾಡಬೇಕು ಎಂದೂ ವರದಿಯಲ್ಲಿ ಆಗ್ರಹಿಸಲಾಗಿದೆ.

2500 ಹುದ್ದೆಗಳು ಖಾಲಿ
ಸ್ಮಾರಕಗಳನ್ನು ನೋಡಿಕೊಳ್ಳಲು ‘ಸ್ಮಾರಕ ಪರಿಚಾರಕ’ ಎಂಬ ಹುದ್ದೆಗಳು ಎಎಸ್‌ಐಯಲ್ಲಿ ಇವೆ. ಆದರೆ, ಇಂತಹ 2,500 ಹುದ್ದೆಗಳು ಖಾಲಿ ಇವೆ. ಸ್ಮಾರಕಗಳನ್ನು ನಿತ್ಯವೂ ಸ್ವಚ್ಛಗೊಳಿಸುವುದು ಈ ಪರಿಚಾರಕರ ಕೆಲಸ. ಆದರೆ ಇಷ್ಟೊಂದು ಹುದ್ದೆಗಳು ಖಾಲಿ ಇರುವುದರಿಂದ ಬಹುತೇಕ ಸ್ಮಾರಕಗಳನ್ನು ನಿತ್ಯವೂ ಸ್ವಚ್ಛಗೊಳಿಸುವ ಕೆಲಸ ಆಗುತ್ತಿಲ್ಲ. ಸ್ಮಾರಕಗಳ ಶೋಚನೀಯ ಸ್ಥಿತಿಗೆ ಇದೂ ಒಂದು ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದಿ ಖಾಲಿ ಉಳಿಯುವಂತಹ ಸ್ಥಿತಿ ನಿರ್ಮಾಣ ಆಗಿರುವ ಕುರಿತು ಸಂಸದೀಯ ಸಮಿತಿಯು ಆಶ್ಚರ್ಯವನ್ನೂ ವ್ಯಕ್ತಪಡಿಸಿದೆ. ಮೂರು ವಿಭಾಗೀಯ ಸಂಸ್ಕೃತಿ ಕೇಂದ್ರದ ನಿರ್ದೇಶಕ ಹುದ್ದೆಗಳೂ ಖಾಲಿ ಇವೆ.

ಪಾರಂಪರಿಕ ತಾಣಗಳ ಕೇಂದ್ರ
ಭಾರತದಲ್ಲಿ 40 ಯುನೆಸ್ಕೊ ಪಾರಂಪರಿಕ ತಾಣಗಳು ಇವೆ. ಅವುಗಳ ಪೈಕಿ 32 ಸಾಂಸ್ಕೃತಿಕ ತಾಣಗಳಾಗಿವೆ. ಸ್ಮಾರಕಗಳ ಸಂಖ್ಯೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿಯೇ ಆರನೇ ಸ್ಥಾನ ಇದೆ. ವಿವಿಧ ರಾಜವಂಶಗಳು, ಧರ್ಮ, ಪರಂಪರೆ ಮತ್ತು ಪದ್ಧತಿಗೆ ಸಂಬಂಧಿಸಿದ ಸ್ಮಾರಕಗಳು ಭಾರತದಲ್ಲಿ ಇವೆ. ಶಿಲಾ ರಚನೆಗಳು, ದೇವಾಲಯ ವಾಸ್ತುಶಿಲ್ಪ, ಗೋರಿ, ಕೋಟೆ, ಅರಮನೆ, ಮಿನಾರು, ಸ್ತೂಪಗಳು ಇದರಲ್ಲಿ ಸೇರಿವೆ. ಹಂಪಿ, ಮಹಾಬಲಿಪುರಂ ಮತ್ತು ಖಜುರಾಹೊದಂತಹ ಸ್ಮಾರಕ ಸಂಕೀರ್ಣಗಳೂ ಇವೆ.

ಸ್ಮಾರಕಗಳಿಗೆ ಇಲ್ಲ ಭದ್ರತಾ ಸಿಬ್ಬಂದಿ
3,693 ಸ್ಮಾರಕಗಳ ಪೈಕಿ 248 ಸ್ಮಾರಕ ಸ್ಥಳಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿಯ ಕಾವಲು ಇದೆ. ಎಎಸ್‌ಐ ಸುಪರ್ದಿಯಲ್ಲಿರುವ ಒಟ್ಟು ಸ್ಮಾರಕಗಳ ಪೈಕಿ ಶೇ 6.7ರಷ್ಟು ಮಾತ್ರ ಭದ್ರತೆಗೆ ಒಳಪಟ್ಟಿವೆ. ಶೇ 93.3ರಷ್ಟು ಸ್ಮಾರಕಗಳಿಗೆ ಭದ್ರತಾ ಸಿಬ್ಬಂದಿಯ ರಕ್ಷಣೆ ಇಲ್ಲ ಎಂಬುದರತ್ತ ವರದಿ ಬೊಟ್ಟು ಮಾಡಿದೆ.

ಈ 248 ಸ್ಮಾರಕಗಳ ಸ್ಥಳಗಳಲ್ಲಿ 2,578 ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ಸುಪರ್ದಿಯಲ್ಲಿರುವ ಎಲ್ಲ ಸ್ಮಾರಕಗಳು ಹಾಗೂ ಸ್ಥಳಗಳಿಗೆ ರಕ್ಷಣೆ ಒದಗಿಸಬೇಕಾದರೆ, 7,000 ಭದ್ರತಾ ಸಿಬ್ಬಂದಿ ಅಗತ್ಯವಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಇನ್ನೂ, 4,400ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನೇಮಕಾತಿಯ ಅಗತ್ಯವಿದೆ. ಎಎಸ್‌ಐನಲ್ಲಿ ಖಾಲಿಯಿರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಿಕೊಳ್ಳಬೇಕು. ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಕಾಯ್ದೆ ತಿದ್ದುಪಡಿಗೆ ಶಿಫಾರಸು
‘ಗುರುತು ಸಿಗದ ಸ್ಮಾರಕಗಳು’ ಎಂಬ ಪದಗುಚ್ಛದ ಬಳಕೆಯು ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ವಸ್ತುಗಳ ಕಾಯ್ದೆಯಲ್ಲಿ (ಎಎಂಎಎಸ್‌ಆರ್) ಇಲ್ಲ ಎಂಬುದನ್ನು ಸಚಿವಾಲಯ ಹೇಳಿದೆ. ಆದರೆ, ಸ್ಮಾರಕಗಳ ಗುರುತು ಸಿಗದಂತೆ ಆಗುತ್ತಿರುವುದು ಗಂಭೀರ ವಿಚಾರವಾಗಿದ್ದು, ಇಂತಹ ಪದಗುಚ್ಛದ ಬಳಕೆ ಇಲ್ಲದಿದ್ದರೆ ಕಾಯ್ದೆ ಅಸಮಂಜಸವಾಗುತ್ತದೆ. ‘ಕುರುಹು ಪತ್ತೆಯಾಗದ ಸ್ಮಾರಕಗಳು’ ಎಂದು ಉಲ್ಲೇಖಿಸುವುದರಿಂದ, ಅಪಾಯದ ಸ್ಥಿತಿ ಎದುರಿಸುತ್ತಿರುವ ಸ್ಮಾರಕಗಳ ಗಂಭೀರತೆಯನ್ನು ಸೂಚಿಸಿದಂತಾಗುತ್ತದೆ ಎಂದು ವರದಿ ಹೇಳಿದೆ.

1958ರ ಎಎಂಎಎಸ್‌ಆರ್ ಕಾಯ್ದೆಯ 15ನೇ ಸೆಕ್ಷನ್‌ನಡಿ, ಗುರುತು ಪತ್ತೆಯಾಗದ ಸ್ಮಾರಕಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನಗಳನ್ನು ವರದಿ ಗಂಭೀರವಾಗಿ ಪರಿಗಣಿಸಿದೆ. ಅಂತಹ ಸ್ಥಳಗಳನ್ನು ಪಟ್ಟಿಯಿಂದ ತೆಗೆದುಹಾಕುವುದರಿಂದ ನಷ್ಟವೇ ಹೊರತು ಬೇರೇನೂ ಸಾಧಿಸಿದಂತಾಗುವುದಿಲ್ಲ. ಹೀಗೆ ಘೋಷಣೆ ಮಾಡುವುದರಿಂದ ಅಂತಹ ಸ್ಥಳಗಳನ್ನು ಸಂಪೂರ್ಣ ಕಳೆದುಕೊಂಡಂತಾಗುವ ಅಪಾಯವಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಗುರುತು ಪತ್ತೆಯಾಗದ ಸ್ಮಾರಕಗಳ ಸ್ಥಳ ಮುಂದೊಂದು ದಿನ ಸಿಗುವ ಸಾಧ್ಯತೆಯಿದೆ. ಗುರುತು ಪತ್ತೆಯಾಗದ ಸ್ಮಾರಕ ಸ್ಥಳಗಳನ್ನು ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿರುವ ಸ್ಮಾರಕಗಳ ಪಟ್ಟಿಯಲ್ಲಿ ಮುಂದುವರಿಸುವುದೂ ಸರಿಯಲ್ಲ ಎಂದು ಸಮಿತಿ ತಾಕೀತು ಮಾಡಿದ್ದು, ಅಗತ್ಯಬಿದ್ದರೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದ ಶಿಫಾರಸು ಮಾಡಿದೆ.

ಪ್ರಮುಖ ಶಿಫಾರಸುಗಳು
*ಪುರಾತತ್ವ ಸಂರಕ್ಷಣೆಯ ಪಟ್ಟಿಯಲ್ಲಿ ಇಲ್ಲದ ಆಂಧ್ರದ ಪೆದ್ದತುಂಬಳಂನ ರಾಮ ದೇವಸ್ಥಾನ, ಕೇತವರಂನ ಶಿಲಾಚಿತ್ರಗಳು ಹಾಗೂ ಬೆಲೂಂ ಗುಹೆಯಂತಹ ಸ್ಥಳಗಳು ಐತಿಹಾಸಿಕವಾಗಿ ಮಹತ್ವ ಪಡೆದಿದ್ದು, ಇವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇಲ್ಲಿಗೆ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಭದ್ರತೆ ಒದಗಿಸಲು ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು

*ಪುರಾತತ್ವ ಇಲಾಖೆಯ ಸಂರಕ್ಷಣೆಗೆ ಒಳಪಟ್ಟ ಸ್ಥಳಗಳಲ್ಲಿ ಒತ್ತುವರಿ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಒತ್ತುವರಿ ತಡೆಯಲು ವಿಫಲವಾದ ಅಧಿಕಾರಿಯನ್ನು ಹೊಣೆಗಾರನನ್ನಾಗಿ ಮಾಡಬೇಕು. ಒತ್ತುವರಿ ತಡೆಯುವ ನಿಟ್ಟಿನಲ್ಲಿ, ಎಎಸ್‌ಐ ಅಧಿಕಾರಿಗೆ ಜಿಲ್ಲಾ ಅರಣ್ಯ ಅಧಿಕಾರಿಗೆ ನೀಡಲಾಗಿರುವ ಅಧಿಕಾರಗಳನ್ನು ನೀಡಬೇಕು

*ಸ್ಮಾರಕಗಳ ಒತ್ತುವರಿಯನ್ನು ತಡೆಯಲು ಹಾಗೂ ಸ್ಮಾರಕಗಳ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣವನ್ನು ಗುರುತಿಸಲು, ಉಪಗ್ರಹ ಆಧರಿತ ಚಿತ್ರ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು

*ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಏರ್ಪಡಿಸುವ ಸಮನ್ವಯ ಸಮಿತಿಗಳು ಹೆಚ್ಚಿನ ರಾಜ್ಯಗಳಲ್ಲಿ ಇಲ್ಲ. ಇಂತಹ ಸಮಿತಿ ರಚನೆಗೆ ವೇಗ ನೀಡಬೇಕು

*ಸಂರಕ್ಷಿತ ಹಾಗೂ ಐತಿಹಾಸಿಕ ಮಹತ್ವದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಬಗ್ಗೆ ಎಎಸ್‌ಐ ಗಮನ ಹರಿಸಬಹುದು. ಸ್ಮಾರಕಕ್ಕೆ ಯಾವುದೇ ರೀತಿಯ ಹಾನಿ ಆಗದಂತೆ ಎಚ್ಚರಿಕೆ ವಹಿಸಿ, ಪೂಜೆ, ಉತ್ಸವಗಳಿಗೆ ಅವಕಾಶ ನೀಡಬಹುದು

*‘ಪುರಾತತ್ವ ಸ್ಥಳ ದತ್ತು’ ಯೋಜನೆಯ ಪ್ರಸ್ತಾವ ಸೂಕ್ತವಾಗಿದ್ದು, ಅದನ್ನು ಅನುಷ್ಠಾನಗೊಳಿಸಬಹುದು. ಈ ಯೋಜನೆಯಡಿ ಕಾರ್ಪೊರೇಟ್ ಸಂಸ್ಥೆಗಳು ಸ್ಮಾರಕದ ಅಭಿವೃದ್ಧಿ ಹಾಗೂ ನಿರ್ವಹಣೆ, ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ. ಕೇವಲ ಪ್ರವಾಸೋದ್ಯಮದಿಂದ ಸ್ಮಾರಕಗಳ ಅಭಿವೃದ್ಧಿ ಕಷ್ಟ. ಜನರು ಹಾಗೂ ಕಾರ್ಪೊರೇಟ್ ಸಂಸ್ಥೆಗಳನ್ನು ಈ ದಿಸೆಯಲ್ಲಿ ತೊಡಗಿಸಿಕೊಳ್ಳಬಹುದು.

*ಎನ್‌ಜಿಒ ಹಾಗೂ ಇನ್‌ಟ್ಯಾಕ್‌ನಂತಹ ಸಂಸ್ಥೆಗಳ ಸಹಕಾರದೊಂದಿಗೆ ಕುರುಹು ಸಿಗದ ಸ್ಮಾರಕಗಳನ್ನು ಪತ್ತೆಹಚ್ಚುವ ಕೆಲಸವನ್ನೂ ಮಾಡಬಹುದು. ಪರಿಚಿತವಲ್ಲದ ಐತಿಹಾಸಿಕ ಸ್ಥಳಗಳನ್ನು ಹೊರಜಗತ್ತಿಗೆ ಪರಿಚಯಿಸಲು ‘ಹೆರಿಟೇಜ್ ವಾಕ್ ಅಂಡ್ ಟೂರ್’, ‘ಹೆರಿಟೇಜ್ ಫೆಸ್ಟಿವಲ್’ನಂತಹ ಕಾರ್ಯಕ್ರಮಗಳನ್ನು ಸ್ಥಳೀಯ ಆಡಳಿತಗಳ ಸಹಯೋಗದಲ್ಲಿ ನಡೆಸಬಹುದು

*ಪೇಲವವಾಗಿರುವ ಎಎಸ್ಐ ವೆಬ್‌ಸೈಟ್ ಅನ್ನು ಪರಿಷ್ಕರಿಸಬೇಕು. ದೇಶದ ಎಲ್ಲ ಸ್ಮಾರಕಗಳ ಮಾಹಿತಿ ಸುಲಭವಾಗಿ ಸಿಗುವಂತೆ ಪುನರ್ ವಿನ್ಯಾಸ ಮಾಡಬೇಕು

ಕುರುಹು ಸಿಗದ ಸ್ಮಾರಕ ಸ್ಥಳಗಳು

ಅಸ್ಸಾಂ: ಚಕ್ರವರ್ತಿ ಶೇರ್ ಷಾನ ಬಂದೂಕುಗಳು, ನಾದಿಯಾ, ತಿನ್‌ಸುಕಿಯಾ

ಅರುಣಾಚಲ ಪ್ರದೇಶ: ತಾಮ್ರದ ದೇವಾಲಯದ ಅವಶೇಷಗಳು, ಪಾಯಾ, ಲೋಹಿತ್

ಹರಿಯಾಣ

* ಕೋಸ್ ಮಿನಾರ್, ಮುಜೆಸರ್, ಫರೀದಾಬಾದ್

* ಕೋಸ್ ಮಿನಾರ್, ಶಹಾಬಾದ್, ಕುರುಕ್ಷೇತ್ರ

ಉತ್ತರಾಖಂಡ

ಕುಟುಂಬರಿ ದೇವಸ್ಥಾನ, ದ್ವಾರಹತ್, ಅಲ್ಮೋರಾ

ದೆಹಲಿ

* ಬಾರಾಖಂಬಾ ಸ್ಮಶಾನ, ದೆಹಲಿ

* ಇಂಚ್ಲಾ ವಾಲಿ ಗುಮ್ಟಿ, ಮುಬಾರಕಪುರ ಕೋಟ್ಲಾ

ಮಧ್ಯಪ್ರದೇಶ

ಶಿಲಾಶಾಸನ, ಸತನಾ

ಮಹಾರಾಷ್ಟ್ರ

* ಯುರೋಪಿಯನ್ ಸಮಾಧಿ, ಪುಣೆ

* ಬುರುಜ್, ಅಗರ್‌ಕೋಟ್

ರಾಜಸ್ಥಾನ

* ಕೋಟೆಯಲ್ಲಿರುವ ಶಾಸನ, ಟೊಂಕ್

* 12ನೇ ಶತಮಾನದ ದೇಗುಲ, ಬರಾನ್

ಉತ್ತರ ಪ್ರದೇಶ

* ಲಿಂಗ ದೇವಾಲಯಗಳ ಅವಶೇಷಗಳು, ಮಿರ್ಜಾಪುರ

* ಚಾಂದೌಲಿ ಬೆಟ್ಟದ ಮೂರು ಮಹಾಶಿಲೆಗಳು

* ಖಜಾನೆ ಕಟ್ಟಡದ ಚಾವಣಿ, ವಾರಾಣಸಿ

* ತೇಲಿಯ ನಾಲಾ ಬೌದ್ಧ ಅವಶೇಷಗಳು, ವಾರಾಣಸಿ

* ಪ್ರಾಚೀನ ಕಟ್ಟಡದ ಕುರುಹುಗಳ ಆಲದ ತೋಪು, ಬಲಿಯಾ

* ಸ್ಮಶಾನ, ಕಟರಾ ನಾಕಾ, ಬಂದಾ

* ಗನ್ನರ್ ಬರ್ಕಿಲ್ ಸಮಾಧಿ, ಮೆಹ್ರೋನಿ, ಲಲಿತ್‌ಪುರ

* ಮೂರು ಗೋರಿಗಳು, ಲಖನೌ-ಫೈಜಾಬಾದ್ ರಸ್ತೆ, ಲಖನೌ

* ಸ್ಮಶಾನಗಳು, ಜಹ್ರೈಲಾ ರಸ್ತೆ, ಲಖನೌ

* ಗೌಘಾಟ್‌ನಲ್ಲಿರುವ ಸ್ಮಶಾನ, ಲಖನೌ

* ಪಾಳುಬಿದ್ದಿದ್ದ ಸಂದಿ-ಖೇರಾ, ಶಹಾಬಾದ್, ಹರ್ದೋಯಿ

ಪಶ್ಚಿಮ ಬಂಗಾಳ

* ಕೋಟೆಯ ಅವಶೇಷಗಳು, ನಾದಿಯಾ

ಆಧಾರ: ‘ಭಾರತದಲ್ಲಿ ಕುರುಹು ಪತ್ತೆ ಇಲ್ಲದ ಸ್ಮಾರಕಗಳು ಮತ್ತು ಸ್ಮಾರಕಗಳ ಸಂರಕ್ಷಣೆ’– ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸತ್‌ ಸಮಿತಿಯು ಸಂಸತ್ತಿಗೆ ಸಲ್ಲಿಸಿದ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT