ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸಿದ್ಧಪುರುಷನ ಕೈಗೊಂಬೆಯಾಗಿದ್ದ ಷೇರುಪೇಟೆ ಮುಖ್ಯಸ್ಥೆ!

Last Updated 20 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ದೇಶದ ಅತ್ಯಂತ ಪ್ರಮುಖ ಷೇರುಪೇಟೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಆಗಿ 2013ರ ಏಪ್ರಿಲ್‌ 1ರಿಂದ 2016ರ ಡಿಸೆಂಬರ್‌ 2ರವರೆಗೆ ಕರ್ತವ್ಯ ನಿಭಾಯಿಸಿದ್ದ ಚಿತ್ರಾ ರಾಮಕೃಷ್ಣ ಈಗ ದೇಶದಾದ್ಯಂತ ಸುದ್ದಿಯಾಗಿದ್ದಾರೆ. ‘ಹಿಮಾಲಯದಲ್ಲಿ ಎಲ್ಲೋ ಒಂದು ಕಡೆ ಇರುವ ಯೋಗಿ’ಯೊಬ್ಬರ ಸಲಹೆ ಪಡೆದು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಆರೋಪವು ಅವರ ಮೇಲೆ ಇದೆ. ಆ ‘ಯೋಗಿ’ ಯಾರು ಎಂಬುದು ಬಹುಶಃ ಚಿತ್ರಾ ಅವರಿಗೆ ಮಾತ್ರ ಗೊತ್ತಿರಬಹುದು.

ಚಿತ್ರಾ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಫೆಬ್ರುವರಿ 11ರಂದು ನೀಡಿರುವ ಆದೇಶದಲ್ಲಿ ಈ ‘ಯೋಗಿ’ಯ ಕುರಿತು ಕೆಲವು ಕುತೂಹಲಕರ ಅಂಶಗಳು ಇವೆ. ‘ಚಿತ್ರಾ ಅವರು ಎನ್‌ಎಸ್‌ಇಯ ಆಂತರಿಕ, ಗೋ‍ಪ್ಯ ಮಾಹಿತಿಯನ್ನು ಅನಾಮಧೇಯ ವ್ಯಕ್ತಿಯೊಬ್ಬರ ಜೊತೆ ನಿರಂತರವಾಗಿ ಹಂಚಿಕೊಳ್ಳುತ್ತಿದ್ದರು. ಎನ್‌ಎಸ್‌ಇ ಕಾರ್ಯಗಳಿಗೆ ಸಂಬಂಧಿಸಿದಂತೆ ತಾವು ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ಆ ಅನಾಮಧೇಯ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಕೊಟ್ಟಿದ್ದರು’ ಎಂಬುದು ಅವರ ಮೇಲಿರುವ ಪ್ರಮುಖ ಆರೋಪಗಳಲ್ಲಿ ಒಂದು. ಇದು ಚಿತ್ರಾ ಅವರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ನಲ್ಲಿ ಅಡಕವಾಗಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪ, ಸಂಭಾವನೆ ಹೆಚ್ಚಿಸುವಲ್ಲಿನ ಲೋಪ ಸೇರಿದಂತೆ ಹಲವು ಆರೋಪಗಳ ಬಗ್ಗೆ ವಿಚಾರಣೆ ನಡೆಸಿರುವ ಸೆಬಿಯ ಪೂರ್ಣಾವಧಿ ಸದಸ್ಯ ಅನಂತ ಬರುವಾ ಅವರು ತಮ್ಮ ವರದಿಯಲ್ಲಿ ಚಿತ್ರಾ ಹಾಗೂ ‘ಯೋಗಿ’ ಕುರಿತ ಕೆಲವು ವಿವರಗಳನ್ನು ನೀಡಿದ್ದಾರೆ. ಕೋಟ್ಯಂತರ ಮಂದಿ ಹೂಡಿಕೆದಾರರ ಷೇರು ಹೂಡಿಕೆ ವಹಿವಾಟುಗಳಿಗೆ ವೇದಿಕೆಯಾಗಿರುವ, ಕಂಪನಿಗಳ ಪಾಲಿಗೆ ಬಂಡವಾಳ ಸಂಗ್ರಹಕ್ಕೆ ವೇದಿಕೆ ಆಗಿರುವ ರಾಷ್ಟ್ರೀಯ ಷೇರುಪೇಟೆಯ ಸಿಇಒ, ಅನಾಮಧೇಯ ‘ಯೋಗಿ’ಯೊಬ್ಬರ ಪ್ರಭಾವಕ್ಕೆ ಎಷ್ಟರಮಟ್ಟಿಗೆ ಒಳಗಾಗಿದ್ದರು ಎಂಬುದನ್ನು ಇದು ಚಿತ್ರಿಸುತ್ತದೆ.

‘ಯೋಗಿ’ಯ ಇ–ಮೇಲ್ ವಿಳಾಸ ‘rigyajursama@outlook.com’. ಋಗ್ ವೇದ, ಯಜುರ್ವೇದ ಮತ್ತು ಸಾಮ ವೇದಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಇದೆ ಈ ಇ–ಮೇಲ್ ವಿಳಾಸ!

ಈ ವಿಳಾಸ ಹೊಂದಿರುವ ವ್ಯಕ್ತಿ ಸಿದ್ಧಪುರುಷ/ಯೋಗಿ ಎಂದು ಚಿತ್ರಾ ಹೇಳಿದ್ದಾರೆ. ಅವರು ಒಬ್ಬ ಪರಮಹಂಸ. ಅವರು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುತ್ತಾರೆ. ತಮಗೆ ಕಳೆದ 20 ವರ್ಷಗಳಿಂದ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಅವರು ಆಧ್ಯಾತ್ಮಿಕ ಶಕ್ತಿಯಾಗಿರುವ ಕಾರಣ, ಅವರಿಗೆ ಭೌತಿಕ ವಿಳಾಸವೊಂದು ಇರಲೇಬೇಕು ಎಂದೇನೂ ಇಲ್ಲ. ಅವರು ತಮ್ಮ ಮನಸ್ಸು ಬಯಸಿದಂತೆ ಪ್ರಕಟಗೊಳ್ಳಬಲ್ಲರು ಎಂದು ಚಿತ್ರಾ ವಿವರಿಸಿದ್ದಾರೆ. ‘ಯೋಗಿ’ಯು ಚಿತ್ರಾ ಅವರಿಗೆ ವೈಯಕ್ತಿಕ ಮಟ್ಟದಲ್ಲಿಯೂ, ವೃತ್ತಿಯ ವಿಚಾರಗಳಲ್ಲಿಯೂ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ.‌

‘ಯೋಗಿ’ಯ ಕುರಿತು ಯಾವ ಹೆಚ್ಚಿನ ವಿವರವನ್ನೂ ಒದಗಿಸದ ಚಿತ್ರಾ, ಅವರ ಜೊತೆ ತಾವು ವೃತ್ತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಕೇಳುತ್ತಿದ್ದುದನ್ನು, ಎನ್‌ಎಸ್‌ಇಗೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಎನ್‌ಎಸ್‌ಇಗೆ ಸಂಬಂಧಿಸಿದ ವಿವರಗಳನ್ನು ಅನಾಮಧೇಯ ವ್ಯಕ್ತಿಯ ಜೊತೆ ಹಂಚಿಕೊಂಡಿದ್ದನ್ನು ಚಿತ್ರಾ ಅವರು ಸಮರ್ಥಿಸಿಕೊಂಡಿದ್ದಾರೆ ಸಹ. ‘ದೊಡ್ಡ ಸ್ಥಾನಗಳಲ್ಲಿ ಇರುವವರು ತಮ್ಮ ಮಾರ್ಗದರ್ಶಕರ ಜೊತೆ ಆಗಾಗ ಸಮಾಲೋಚನೆ ನಡೆಸುವುದಿದೆ. ಇದು ಅನೌಪಚಾರಿಕ ಮಾತುಕತೆ ಮಾತ್ರ. ಈ ರೀತಿಯ ಮಾತುಕತೆಯಂತೆಯೇ, ಅವರ ಮಾರ್ಗದರ್ಶನವು ನನಗೆ ನನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಲು ನೆರವಾಗಬಹುದು ಎಂದು ಅನ್ನಿಸಿತು. ಇದು ಆಧ್ಯಾತ್ಮಿಕ ಮಾತುಕತೆಯಾಗಿರುವ ಕಾರಣದಿಂದಾಗಿ, ಗೋಪ್ಯ ಮಾಹಿತಿ ಸೋರಿಕೆಯಾಗುವ ಅಥವಾ ಪ್ರಾಮಾಣಿಕತೆಗೆ ಸಂಬಂಧಿಸಿದ ಪ್ರಶ್ನೆಗಳು ಇಲ್ಲಿ ಮೂಡುವುದೇ ಇಲ್ಲ. ಇಲ್ಲಿ ಹಂಚಿಕೊಂಡಿರುವ ಮಾಹಿತಿಯಿಂದಾಗಿ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲ’ ಎಂದು ಚಿತ್ರಾ ಹೇಳಿದ್ದಾರೆ.

ಆದರೆ, ‘ಆಧ್ಯಾತ್ಮಿಕ ಶಕ್ತಿ’ಯೊಂದರ ಜೊತೆ ಎನ್‌ಎಸ್‌ಇ ಕುರಿತ ಗೋಪ್ಯ ಮಾಹಿತಿಗಳನ್ನು ಹಂಚಿಕೊಳ್ಳಲು ಸೆಬಿ ಕಾಯ್ದೆಯಲ್ಲಾಗಲಿ ಅಥವಾ ಎನ್‌ಎಸ್‌ಇಗೆ ಸಂಬಂಧಿಸಿದ ಇತರ ಕಾಯ್ದೆಗಳಲ್ಲಾಗಲಿ ಅವಕಾಶ ಇಲ್ಲ! ಅಲ್ಲದೆ, ಆನಂದ್ ಸುಬ್ರಮಣಿಯನ್ ಅವರಿಗೆ ಅಧಿಕಾರ ಹಂಚುವಿಕೆಯಲ್ಲಿ, ಅವರಿಗೆ ಹುದ್ದೆ ನೀಡುವಲ್ಲಿ ಹಾಗೂ ಅವರ ಸಂಭಾವನೆಯನ್ನು ಹೆಚ್ಚಿಸುವಲ್ಲಿ ಚಿತ್ರಾ ಅವರು ಯೋಗಿಯಿಂದ ಸಲಹೆ ಪಡೆದಿದ್ದು ಮಾತ್ರವೇ ಅಲ್ಲದೆ, ಅವರ ಸಲಹೆಯಂತೆ ನಡೆದುಕೊಂಡಿದ್ದಾರೆ ಕೂಡ ಎಂದು ಸೆಬಿ ಆದೇಶ ಸ್ಪಷ್ಟಪಡಿಸಿದೆ.

2015ರ ಡಿಸೆಂಬರ್‌ 4ರ ಇ–ಮೇಲ್‌ನಲ್ಲಿ ಚಿತ್ರಾ ಅವರು ‘ಯೋಗಿ’ಯ ಜೊತೆ ಆಡಿರುವ ಮಾತುಗಳನ್ನು ಉಲ್ಲೇಖಿಸಿ ಸೆಬಿ, ‘ಚಿತ್ರಾ ಅವರು ಅನಾಮಧೇಯನ ಕೈಗೊಂಬೆಯಂತೆ ಆಗಿದ್ದರು’ ಎಂದು ಹೇಳಿದೆ. ‘ಕಂಪನಿಯು ನಿಮ್ಮ ಆಶೀರ್ವಾದದಿಂದ ನಡೆಯುತ್ತಿದೆ’ ಎಂದು ಇನ್ನೊಂದು ಇ–ಮೇಲ್‌ನಲ್ಲಿ ಚಿತ್ರಾ ಹೇಳಿದ್ದರು. ‘ಎನ್‌ಎಸ್‌ಇಯನ್ನು ನಡೆಸುತ್ತ ಇದ್ದುದು ಆ ಯೋಗಿ’ ಎಂಬುದನ್ನು ಇದು ಸಾಬೀತುಮಾಡುತ್ತದೆ’ ಎಂದು ಸೆಬಿ ಅಭಿಪ್ರಾಯಪಟ್ಟಿದೆ.

ರಾಷ್ಟ್ರೀಯ ಷೇರುಪೇಟೆಯ ಹಣಕಾಸು ಮತ್ತು ವಹಿವಾಟಿಗೆ ಸಂಬಂಧಿಸಿದ ಯೋಜನೆಗಳನ್ನು ಅನಾಮಧೇಯ ‘ಯೋಗಿ’ಯ ಜೊತೆ ಹಂಚಿಕೊಂಡಿರುವುದು ಕಣ್ಣಿಗೆ ರಾಚುವಂತೆ ಇದೆ. ಈ ಕೃತ್ಯವು ಷೇರು ಮಾರುಕಟ್ಟೆಯ ಅಡಿಪಾಯವನ್ನೇ ಅಲುಗಾಡಿಸಬಲ್ಲದು ಎಂದು ಆದೇಶದಲ್ಲಿ ಹೇಳಲಾಗಿದೆ.

ಚಿತ್ರಾ ಹೇಳಿದ್ದೇನು?

ಚಿತ್ರಾ ಅವರು ‘ಯೋಗಿ’ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ನೀಡಿದ್ದ ಉತ್ತರಗಳನ್ನು ಸೆಬಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಶ್ನೆ: ‘rigyajursama@outlook.com’ ಇ–ಮೇಲ್ ವಿಳಾಸ ಹೊಂದಿರುವ ವ್ಯಕ್ತಿಯ ಗುರುತನ್ನು ತಿಳಿಸಬಹುದೇ?

ಚಿತ್ರಾ ಉತ್ತರ: ನಾನು ಅವರನ್ನು ಹಲವು ಸಂದರ್ಭಗಳಲ್ಲಿ ಪವಿತ್ರ ಸ್ಥಳಗಳಲ್ಲಿ ಭೇಟಿ ಮಾಡಿದ್ದೇನೆ. ಅವರು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರಬಹುದು. ಸ್ಥಳದ ವಿವರ ಕೊಟ್ಟಿಲ್ಲ.

ಪ್ರಶ್ನೆ: ಅವರು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುತ್ತಾರೆ ಎಂದಾದರೆ, ಇ–ಮೇಲ್‌ ಓದಿ ನಿಮ್ಮ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದು ಹೇಗೆ?

ಉತ್ತರ: ನನಗೆ ಗೊತ್ತಿರುವಮಟ್ಟಿಗೆ, ಅವರ ಆಧ್ಯಾತ್ಮಿಕ ಶಕ್ತಿಯ ಕಾರಣದಿಂದಾಗಿ ಅವರಿಗೆ ಭೌತಿಕ ವಿಳಾಸ ಇರಬೇಕು ಎಂದೇನೂ ಇಲ್ಲ.

ಪ್ರಶ್ನೆ: ನೀವು ಅವರನ್ನು ಭೇಟಿ ಮಾಡಿದ್ದು ಯಾವಾಗ? ಅವರನ್ನು ನಿಮಗೆ ಪರಿಚಯಿಸಿದ್ದು ಯಾರು?

ಉತ್ತರ: ಸರಿಸುಮಾರು 20 ವರ್ಷಗಳ ಹಿಂದೆ ಗಂಗಾ ನದಿಯ ತೀರದಲ್ಲಿ ಅವರನ್ನು ನೇರವಾಗಿ ಭೇಟಿಯಾದೆ. ನಂತರದ ವರ್ಷಗಳಲ್ಲಿ ನಾನು ಅವರಿಂದ ವೈಯಕ್ತಿಕ ಬದುಕು ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆದಿದ್ದೇನೆ. ಈ ನಡುವೆ, ಅವರು ತಮ್ಮ ಇಚ್ಛೆಗೆ ಅನುಗುಣವಾಗಿ ರೂಪ ಧರಿಸುತ್ತಿದ್ದುದರಿಂದ ಹಾಗೂ ನನ್ನಲ್ಲಿ ಅವರ ಭೌತಿಕ ವಿಳಾಸ ಇಲ್ಲದಿದ್ದುದರಿಂದ ನನಗೆ ಅಗತ್ಯವೆನಿಸಿದಾಗಲೆಲ್ಲ ಮಾರ್ಗದರ್ಶನ ಪಡೆಯುವ ಬಗೆ ಯಾವುದು ಎಂದು ಅವರಲ್ಲಿ ಕೇಳಿಕೊಂಡೆ. ಆಗ ಅವರು ಇ–ಮೇಲ್ ವಿಳಾಸ ನೀಡಿದರು. ಅಲ್ಲಿಗೆ ನಾನು ನನ್ನ ಕೋರಿಕೆಗಳನ್ನು ಕಳುಹಿಸಬಹುದಿತ್ತು.

ಪ್ರಶ್ನೆ: ಆ ಸಿದ್ಧ‍ಪುರುಷ ಎನ್‌ಎಸ್‌ಇಗೆ ಸೇರಿದವರೇ ಅಥವಾ ಎನ್‌ಎಸ್‌ಇಯ ಆಡಳಿತ ಮಂಡಳಿಯಲ್ಲಿ ಯಾವುದಾದರೂ ಕಾಲಘಟ್ಟದಲ್ಲಿ ಇದ್ದವರೇ?

ಉತ್ತರ: ಇಲ್ಲ. ಅವರು ಒಂದು ಆಧ್ಯಾತ್ಮಿಕ ಶಕ್ತಿ.

ಪ್ರಶ್ನೆ: ಸಿದ್ಧಪುರುಷನಿಗೆ ಎನ್‌ಎಸ್‌ಇ ಕಾರ್ಯಗಳು ಹಾಗೂ ಇಲ್ಲಿನ ಸಿಬ್ಬಂದಿ ಹಂತಗಳ ಕುರಿತ ಸಂಕೀರ್ಣ ವಿವರಗಳು ಗೊತ್ತಿದ್ದುದು ಹೇಗೆ?

ಉತ್ತರ: ಆ ವಿವರಗಳನ್ನು ಬಹುತೇಕ ನಾನೇ ಕೊಟ್ಟಿದ್ದು...

ಎನ್‌ಎಸ್‌ಇ

ಎನ್‌ಎಸ್‌ಇ ಅರ್ಥಾತ್ ನ್ಯಾಷನಲ್ ಸ್ಟಾಕ್‌ ಎಕ್ಸ್‌ಚೇಂಜ್‌ ವಿಶ್ವದ 10 ಅತಿದೊಡ್ಡ ಷೇರುವಿನಿಮಯ ಕೇಂದ್ರಗಳಲ್ಲಿ ಒಂದು ಎನಿಸಿದೆ. 1992ರಲ್ಲಿ ಅಸ್ತಿತ್ವಕ್ಕೆ ಬಂದು, 1994ರಲ್ಲಿ ಕಾರ್ಯಾರಂಭ ಮಾಡಿದ ಎನ್‌ಎಸ್‌ಇಯ ಈಗಿನ ಮಾರುಕಟ್ಟೆ ಮೌಲ್ಯ ₹256.92 ಲಕ್ಷ ಕೋಟಿಗೂ ಹೆಚ್ಚು. ‘ದೇಶದ ಜನರ ಹಣಕಾಸು ಸಮೃದ್ಧಿಯನ್ನು ಹೆಚ್ಚಿಸಬೇಕು’ ಎಂಬ ಧ್ಯೇಯದೊಂದಿಗೆ ಎನ್‌ಎಸ್‌ಇ ಕಾರ್ಯಾರಂಭ ಮಾಡಿತ್ತು. 26 ವರ್ಷಗಳ ದೀರ್ಘ ಪಯಣದಲ್ಲಿ ಇದು ದೇಶದ ಪ್ರಮುಖ ವಿನಿಮಯ ಕೇಂದ್ರವಾಗಿ ಬೆಳೆದಿದೆ.

1994ರಲ್ಲಿ ಡೆಟ್ ಮಾರ್ಕೆಟ್ ಮತ್ತು ಕ್ಯಾಷ್‌ ಮಾರ್ಕೆಟ್‌ನಲ್ಲಿ ಮಾತ್ರ ಎನ್‌ಎಸ್‌ಇ ವಹಿವಾಟು ನಡೆಸುತ್ತಿತ್ತು. ನಂತರದ ವರ್ಷಗಳಲ್ಲಿ ಈಕ್ವಿಟಿ, ಇಂಡಕ್ಸ್‌ ಫ್ಯೂಚರ್ಸ್‌ ಮತ್ತು ಇಂಡೆಕ್ಸ್‌ ಆಪ್ಷನ್ಸ್‌, ಮ್ಯೂಚುವಲ್ ಫಂಡ್‌ ಹೀಗೆ ತನ್ನ ವಹಿವಾಟಿನ ವ್ಯಾಪ್ತಿಯನ್ನು ಎನ್‌ಎಸ್‌ಇ ವಿಸ್ತರಿಸಿಕೊಂಡಿದೆ. ಈಗ ಕರೆನ್ಸಿ ಫ್ಯೂಚರ್ಸ್‌ ಮತ್ತು ಕರೆನ್ಸಿ ಆಪ್ಷನ್ಸ್‌, ಕಮಾಡಿಟಿ ಮಾರ್ಕೆಟ್‌ ಸೇರಿದಂತೆ 10ಕ್ಕೂ ಹೆಚ್ಚು ಮಾರ್ಕೆಟ್‌ಗಳನ್ನು (ಉತ್ಪನ್ನಗಳು) ಎನ್‌ಎಸ್‌ಇ ನಿರ್ವಹಿಸುತ್ತದೆ.

ಎನ್‌ಎಸ್‌ಇಯಲ್ಲಿ ಪ್ರತಿದಿನ ಲಕ್ಷಾಂತರ ಕೋಟಿ ರೂಪಾಯಿಯ ವಹಿವಾಟುಗಳು ನಡೆಯುತ್ತವೆ. ಪ್ರತಿದಿನ 100 ಕೋಟಿಗೂ ಹೆಚ್ಚು ಷೇರುಗಳು ವಿನಿಮಯವಾಗುತ್ತವೆ. ಈ ಕಾರಣದಿಂದಲೇ ಎನ್‌ಎಸ್‌ಇ ಜಗತ್ತಿನ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದು ಎನಿಸಿದೆ. ಫೆಬ್ರುವರಿ 18ರ ಶುಕ್ರವಾರ ಎನ್‌ಎಸ್‌ಇಯಲ್ಲಿ ಒಟ್ಟು ₹2.26 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಇದೇ ಅವಧಿಯಲ್ಲಿ 187.11 ಕೋಟಿ ಷೇರುಗಳು ವಿನಿಮಯವಾಗಿವೆ. ಈ ಎರಡು ದತ್ತಾಂಶಗಳೇ ಎನ್‌ಎಸ್‌ಇಯ ವಹಿವಾಟಿನ ಬೃಹತ್ ಗಾತ್ರವನ್ನು ತೋರಿಸುತ್ತವೆ.

2015ರಲ್ಲಿ ಸಿದ್ಧಪುರುಷನ ಭೇಟಿ

2015ನೆಯ ಇಸವಿಯಲ್ಲಿ ಚಿತ್ರಾ ಮತ್ತು ‘ಸಿದ್ಧಪುರುಷ’ ಹಲವು ಬಾರಿ ಭೇಟಿ ಆಗಿದ್ದರು ಎಂದು ಸೆಬಿ ಆದೇಶ ಹೇಳುತ್ತದೆ.

ಅನಾಮಧೇಯ ‘ಯೋಗಿ’ಯನ್ನು ಚಿತ್ರಾ ಅವರು ದೆಹಲಿಯ ಸ್ವಾಮಿಮಲೈ ದೇವಸ್ಥಾನದಲ್ಲಿ ಭೇಟಿ ಆಗಿದ್ದರು ಎಂದು ಚಿತ್ರಾ ಅವರೇ ಸೆಬಿಗೆ ನೀಡಿರುವ ಹೇಳಿಕೆಯೊಂದರಲ್ಲಿ ವಿವರಿಸಿದ್ದಾರೆ. 2015ರ ಫೆಬ್ರುವರಿ 18ರಂದು ಸಿದ್ಧಪುರುಷನಿಂದ ಬಂದ ಇ–ಮೇಲ್‌ನಲ್ಲಿ ‘ಇಂದು ನೀವು ಅದ್ಭುತವಾಗಿ ಕಾಣಿಸುತ್ತಿದ್ದಿರಿ’ ಎಂಬ ಮಾತು ಇದೆ.

ಇ–ಮೇಲ್‌ಗಳನ್ನು ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗೆ ಭೌತಿಕ ಅಸ್ತಿತ್ವ ಇದೆ ಎಂಬುದು ಗೊತ್ತಾಗುತ್ತದೆ, ಆ ವ್ಯಕ್ತಿ ಚಿತ್ರಾ ಅವರ ಜೊತೆ ಪ್ರವಾಸಕ್ಕೆ ಕೂಡ ಹೋಗಿದ್ದ ಎಂದು ಸೆಬಿ ಆದೇಶದಲ್ಲಿ ಹೇಳಲಾಗಿದೆ. ಆದರೆ, ಆ ವ್ಯಕ್ತಿ ಯಾರು ಎಂಬುದನ್ನು ತಿಳಿಸಲು ಚಿತ್ರಾ ನಿರಾಕರಿಸಿದ್ದಾರೆ. ಹಾಗಾಗಿ, ಆತ ಒಂದು ಆಧ್ಯಾತ್ಮಿಕ ಶಕ್ತಿ ಎನ್ನುತ್ತಿದ್ದಾರೆ ಎಂದು ಆದೇಶವು ವಿವರಿಸಿದೆ.

ಆಧಾರ: ಎನ್‌ಎಸ್‌ಇ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT