ಸೋಮವಾರ, ಅಕ್ಟೋಬರ್ 18, 2021
26 °C

ಆಳ- ಅಗಲ: ಸೂರು ಹುಡುಕುವ ನಿರಾಶ್ರಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರಾಶ್ರಿತರ ಸಮಸ್ಯೆ ಕಳೆದ ಒಂದು ದಶಕದಲ್ಲಿ ತೀವ್ರಗೊಂಡಿದೆ. 2010ಕ್ಕೆ ಹೋಲಿಸಿದರೆ 2020ರ ವೇಳೆಗೆ ವಿಶ್ವದಾದ್ಯಂತ ನಿರಾಶ್ರಿತರ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಈ ಒಂದು ದಶಕದಲ್ಲಿ ವಿಶ್ವದಾದ್ಯಂತ ತಲೆದೋರಿದ ನಿರಾಶ್ರಿತರ ಸಮಸ್ಯೆಗೆ ಆಂತರಿಕ ಕಲಹವೇ ಕಾರಣವಾಗಿದೆ. ನಿರಾಶ್ರಿತರಾಗಿ ತಮ್ಮ ದೇಶದಿಂದ ಹೊರಬಿದ್ದ ಜನರು, ಆಶ್ರಯ ಪಡೆದದ್ದು ನೆರೆಯ ದೇಶಗಳಲ್ಲಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರ ಸಂಖ್ಯೆ ಕಡಿಮೆಯೇ ಇದೆ.

ಅಫ್ಗಾನಿಸ್ತಾನದ ಕಳವಳ

ಅಫ್ಗಾನಿಸ್ತಾನವು ತಾಲಿಬಾನ್‌ ಪ್ರಾಬಲ್ಯಕ್ಕೆ ಒಳಪಟ್ಟ ಒಂದು ವಾರದಲ್ಲಿ ಅಲ್ಲಿನ ನಾಗರಿಕರ ಸ್ಥಿತಿ ಅಯೋಮಯವಾಗಿದೆ. ಮತ್ತೆ ಯುದ್ಧ, ಬಂದೂಕು, ಕ್ರೌರ್ಯ ಮೇಲುಗೈ ಸಾಧಿಸಲಿದೆ ಎಂಬ ಭೀತಿ ಜನರನ್ನು ಕಂಗೆಡಿಸಿದೆ. ದೇಶದಿಂದ ಹೇಗಾದರೂ ಪಲಾಯನ ಮಾಡಿ, ಜೀವ ಉಳಿಸಿಕೊಳ್ಳುವ ಅನಿವಾರ್ಯದಲ್ಲಿ ಅಫ್ಗನ್ನರು ಸಿಲುಕಿದ್ದು ಜಗತ್ತು ಮತ್ತೊಂದು ಸುತ್ತಿನ ನಿರಾಶ್ರಿತರ ಸಮಸ್ಯೆಯನ್ನು ಎದುರಿಸಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಾಬೂಲ್‌ನ ಹಮೀದ್ ಕರ್ಜಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ವಾರದಿಂದ ಸಾಗರೋಪಾದಿಯಲ್ಲಿ  ಜಮಾವಣೆಯಾಗಿರುವ ಜನರನ್ನು ಗಮನಿಸಿದರೆ, ನಿರಾಶ್ರಿತರ ಸಮಸ್ಯೆಯ ತೀವ್ರತೆ ಅರ್ಥವಾಗುತ್ತದೆ. ವಿಮಾನ ಚಾವಣಿಯಿಂದ ಹಿಡಿದು, ಚಕ್ರಗಳ ಮೇಲೂ ಜನರು ಕುಳಿತು ದೇಶ ತೊರೆಯಲು ಹವಣಿಸಿದ್ದನ್ನು ಇಡೀ ಜಗತ್ತು ಗಮನಿಸಿದೆ.

ತಾಲಿಬಾನ್ ಆಡಳಿತಕ್ಕೊಳಪಟ್ಟ ಅಫ್ಗನ್ ಪ್ರಜೆಗಳ ಭವಿಷ್ಯದ ಮೇಲೆ ಅನಿಶ್ಚಿತ ಸ್ಥಿತಿಯ ಕಾರ್ಮೋಡ ಆವರಿಸಿದೆ. ಅಫ್ಗಾನಿಸ್ತಾನದಿಂದ ಬರುವ ‘ವಲಸಿಗರ ಹೆಚ್ಚುವರಿ ಹೊರೆ’ಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವು ದೇಶಗಳು ಟರ್ಕಿ ನಿಲುವನ್ನೇ ತಳೆದಿವೆ. ಆದರೆ, ಇನ್ನಷ್ಟು ರಾಷ್ಟ್ರಗಳು ಅಫ್ಗನ್ ನಿರಾಶ್ರಿತರನ್ನು ತಮ್ಮ ದೇಶಕ್ಕೆ ಸ್ವಾಗತಿಸುವ ಬಗ್ಗೆ ನೀತಿಗಳನ್ನು ಪ್ರಕಟಿಸಿವೆ.

ಅಮೆರಿಕ

ಆಗಸ್ಟ್ 2 ರಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಆದ್ಯತೆ 2 (ಪಿ-2) ಅನ್ನು ಘೋಷಿಸಿತು. ಇದರ ಪ್ರಕಾರ, ಕೆಲವು ಅರ್ಹ ಅಫ್ಗನ್ ಪ್ರಜೆಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ‘ಅಮೆರಿಕ ನಿರಾಶ್ರಿತರ ಪ್ರವೇಶ ಕಾರ್ಯಕ್ರಮ’ದ (ಯುಎಸ್ಆರ್‌ಪಿ) ಮೂಲಕ ಪ್ರವೇಶ ನೀಡಲಾಗುತ್ತದೆ.

ತನ್ನ ಜತೆ ಕಳೆದ 20 ವರ್ಷಗಳಲ್ಲಿ ಕೆಲಸ ಮಾಡಿದ ಕೆಲವು ಅಫ್ಗನ್ನರನ್ನು ರಕ್ಷಿಸುವ ಜವಾಬ್ದಾರಿಯು ಅಮೆರಿಕದ್ದಾಗಿದೆ ಎಂದು  ವಿದೇಶಾಂಗ ಇಲಾಖೆ ತಿಳಿಸಿದೆ. ವರದಿಗಳ ಪ್ರಕಾರ, ಅಮೆರಿಕವು 10,000ಕ್ಕೂ ಹೆಚ್ಚು ಅಫ್ಗನ್ ಪ್ರಜೆಗಳಿಗೆ ಅವಕಾಶ ನೀಡುವ ನಿರೀಕ್ಷೆಯಿದೆ.

ಬ್ರಿಟನ್

ಒತ್ತಾಯಪೂರ್ವಕವಾಗಿ ಪಲಾಯನ ಮಾಡಿದ ಅಥವಾ ತಾಲಿಬಾನ್‌ನಿಂದ ಕಿರುಕುಳ, ಬೆದರಿಕೆ ಎದುರಿಸುತ್ತಿರುವವರಿಗೆ ಬ್ರಿಟನ್‌ನಲ್ಲಿ ಕಾಯಂ ಆಶ್ರಯ ನೀಡಲಾಗುವುದು ಎಂದು ಇದೇ 18ರಂದು ಬ್ರಿಟನ್ ಘೋಷಿಸಿತ್ತು. ಮಹಿಳೆಯರು, ಬಾಲಕಿಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಮಾತು ಕೊಟ್ಟಿತ್ತು. ಪುನರ್ವಸತಿ ಯೋಜನೆಯ ಮೊದಲ ವರ್ಷದಲ್ಲಿ ಪ್ರಸ್ತುತ ಬಿಕ್ಕಟ್ಟಿನಿಂದ ಅಪಾಯದಲ್ಲಿರುವ 5,000 ಅಫ್ಗನ್ ಪ್ರಜೆಗಳಿಗೆ ನೆರವು ನೀಡಲಿದೆ. ಒಟ್ಟು 20,000 ನಿರಾಶ್ರಿತರಿಗೆ ಈ ಯೋಜನೆಯಡಿ ಪುನರ್ವಸತಿ ಕಲ್ಪಿಸುವ ಗುರಿ ಹೊಂದಿದೆ.

ಕೆನಡಾ

20 ಸಾವಿರ ಅಫ್ಗನ್ನರನ್ನು ದೇಶದೊಳಕ್ಕೆ ಬರಮಾಡಿಕೊಳ್ಳುವುದಾಗಿ ಕೆನಡಾ ಘೋಷಿಸಿದೆ. ಅಮೆರಿಕ ಅಥವಾ ಇತರ ಮಿತ್ರರಾಷ್ಟ್ರಗಳು ಬಯಸಿದಲ್ಲಿ, ಹೆಚ್ಚುವರಿ ಅಫ್ಗನ್ ನಿರಾಶ್ರಿತರಿಗೆ ಪ್ರವೇಶ ನೀಡುವುದನ್ನು ಕೆನಡಾ ಪರಿಗಣಿಸಲಿದೆ ಎಂದು ವಲಸೆ ಸಚಿವ ಮಾರ್ಕೊ ಮೆಂಡಿಸಿನೊ ತಿಳಿಸಿದ್ದಾರೆ. 

ಯುರೋಪ್

2015ರ ವಲಸಿಗರ ಬಿಕ್ಕಟ್ಟಿನ ಹೊಡೆತ ಎದುರಿಸಿದ್ದ ಐರೋಪ್ಯ ಒಕ್ಕೂಟದ ರಾಷ್ಟ್ರಗಳು, ಅಫ್ಗನ್ ನಿರಾಶ್ರಿತರಿಗೆ ಆಶ್ರಯ ನೀಡುವ ವಿಚಾರದಲ್ಲಿ ಈ ಬಾರಿ ಜಾಗರೂಕವಾಗಿವೆ.

ಐರೋಪ್ಯ ಒಕ್ಕೂಟದಲ್ಲಿರುವ ಆಸ್ಟ್ರಿಯಾ, ಫ್ರಾನ್ಸ್ ಮತ್ತು ಸ್ವೀಡನ್ ದೇಶಗಳು ಅಫ್ಗನ್ನರ ಪ್ರಮುಖ ನಿರಾಶ್ರಿತ ತಾಣಗಳೆನಿಸಿವೆ. ಐರೋಪ್ಯ ಒಕ್ಕೂಟದ ವರದಿಯ ಪ್ರಕಾರ, 2021ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 7,000 ಅಫ್ಗನ್ನರಿಗೆ ಶಾಶ್ವತ ಅಥವಾ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ. ಈ ಪೈಕಿ ಕನಿಷ್ಠ 2,200 ಮಂದಿ ಗ್ರೀಸ್, 1,800 ಜನರು ಫ್ರಾನ್ಸ್, 1,000 ಜರ್ಮನಿಯಲ್ಲಿ ಮತ್ತು 700 ಜನರು ಇಟಲಿಯಲ್ಲಿ ನೆಲೆಯಾಗಿದ್ದಾರೆ.  

ಉಜ್ಬೇಕಿಸ್ತಾನ

ಅಫ್ಗಾನಿಸ್ತಾನದ ಸುಮಾರು 400 ನಿರಾಶ್ರಿತರನ್ನು ಉಜ್ಬೇಕಿಸ್ತಾನ ಸ್ವಾಗತಿಸಿ, ಅವರನ್ನು ಗಡಿಯ ಬಳಿ ತಾತ್ಕಾಲಿಕ ವಸತಿಗೃಹದಲ್ಲಿ ಇರಿಸಿಕೊಂಡಿದೆ ಎಂಬ ವರದಿಗಳಿವೆ. 

ಭಾರತ

ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಭಾರತವು ಅಫ್ಗನ್ ಪ್ರಜೆಗಳಿಗೆ ದೇಶಕ್ಕೆ ಪ್ರವೇಶ ನೀಡಲು ಹೊಸ ವರ್ಗದ ಇ-ವೀಸಾ ಪರಿಚಯಿಸಿದೆ. ಈ ವೀಸಾಗಳು ಆರು ತಿಂಗಳು ಮಾತ್ರ ಮಾನ್ಯವಾಗಿರುತ್ತವೆ. ಈ ಅವಧಿ ಮುಗಿದ ನಂತರ ಏನಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. 

ಮನಸ್ಸಾಕ್ಷಿ ಕಲಕಿದ ಚಿತ್ರ

2015ರಲ್ಲಿ ಪ್ರಕಟವಾದ ಮೂರು ವರ್ಷದ ಬಾಲಕನ ಚಿತ್ರವೊಂದು ಇಡೀ ಜಗತ್ತಿನ ಮನಸ್ಸಾಕ್ಷಿಯನ್ನು ಕಲಕಿ, ಸಿರಿಯಾ ನಿರಾಶ್ರಿತ ಬಿಕ್ಕಟ್ಟಿನತ್ತ ಗಮನ ಹರಿಸುವಂತೆ ಮಾಡಿತ್ತು. ಟರ್ಕಿಯ ಕಡಲ ಕಿನಾರೆಯಲ್ಲಿ ತಲೆಕೆಳಗಾಗಿ ಬಿದ್ದಿದ್ದ ಅಲನ್‌ ಕುರ್ದಿಯ ನಿರ್ಜೀವ ದೇಹದ ಚಿತ್ರ ಅದು. ಗ್ರೀಸ್‌ನಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಿರಿಯಾ ತೊರೆದು ಹೊರಟಿದ್ದ ಜನರ ರಬ್ಬರ್‌ ದೋಣಿ ಸಮುದ್ರದಲ್ಲಿ ಮುಳುಗಿತ್ತು. ಅದರಲ್ಲಿದ್ದ ಕುರ್ದಿಯ ದೇಹ ಟರ್ಕಿಯಲ್ಲಿ ಕಡಲ ತಡಿಗೆ ಬಂದು ಬಿದ್ದಿತ್ತು. 

ಇದು, ಸಿರಿಯಾ ಆಂತರಿಕ ಯುದ್ಧದ ತೀವ್ರತೆ ಮತ್ತು ನಿರಾಶ್ರಿತ ಬಿಕ್ಕಟ್ಟಿನ ಆಳ ಅಗಲಗಳನ್ನು ಜಗತ್ತಿನ ಮುಂದೆ ತೆರೆದು ಇರಿಸಿತ್ತು. 

ಆಂತರಿಕ ಸಂಘರ್ಷವು ಬಹುದೊಡ್ಡ ನಿರಾಶ್ರಿತ ಬಿಕ್ಕಟ್ಟಿಗೆ ಕಾರಣವಾಯಿತು. 

ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಜನಪ್ರೀತಿ ಗಳಿಸಿದ ‘ಅರಬ್‌ ಸ್ಪ್ರಿಂಗ್ಸ್‌’ ಚಳವಳಿಯ ಭಾಗವಾಗಿಯೇ ಸಿರಿಯಾದಲ್ಲಿಯೂ ಚಳವಳಿ ರೂಪುಗೊಂಡಿತು. ಸಾಮಾಜಿಕ ಜಾಲತಾಣಗಳ ಮೂಲಕ ಆರಂಭವಾದ ಅರಬ್‌ ಸ್ಪ್ರಿಂಗ್ಸ್‌, ಟ್ಯುನೀಷಿಯಾ ಮತ್ತು ಈಜಿಫ್ಟ್‌ನ ನಿರಂಕುಶ ಸರ್ಕಾರಗಳನ್ನು ಕಿತ್ತೊಗೆಯುವಲ್ಲಿ ಯಶಸ್ವಿಯಾಗಿತ್ತು. ಅದರಿಂದ ಪ್ರೇರಣೆ ಪಡೆದ ಸಿರಿಯಾ ಯುವ ಜನರು ಬಷರ್‌ ಅಲ್‌ ಅಸಾದ್‌ ವಿರುದ್ಧ ಬೀದಿಗಿಳಿದರು. 

ಗೋಡೆಬರಹವೊಂದು ಸಿರಿಯಾ ಬಿಕ್ಕಟ್ಟಿನ ಮೂಲ. ಅರಬ್‌ ಸ್ಪ್ರಿಂಗ್ಸ್‌ ಪರವಾಗಿ ಗೋಡೆಬರಹ ಬರೆದ 15 ಬಾಲಕರನ್ನು ಬಷರ್‌ ಅಲ್‌ ಅಸಾದ್‌ ಸರ್ಕಾರವು ಬಂಧಿಸಿ, ಚಿತ್ರಹಿಂಸೆಗೆ ಕೊಟ್ಟಿತು. ಈ ಕ್ರೌರ್ಯ ತಾಳಲಾರದೆ 13 ವರ್ಷದ ಬಾಲಕನೊಬ್ಬ ಮೃತಪಟ್ಟ. ಇದರಿಂದ  ಜನರು ಕೆರಳಿದರು. 2011ರ ಮಾರ್ಚ್‌ನಲ್ಲಿ ಆರಂಭವಾದ ಪ್ರತಿಭಟನೆಯು ಕೆಲವೇ ದಿನಗಳಲ್ಲಿ ಇಡೀ ದೇಶವನ್ನು ವ್ಯಾಪಿಸಿತು. 

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಸಿರಿಯಾ ಆಂತರಿಕ ಯುದ್ಧದಿಂದಾಗಿ ಈವರೆಗೆ 1.2 ಕೋಟಿ ಜನರು ಆಶ್ರಯ ಕಳೆದುಕೊಂಡಿದ್ದಾರೆ. ಸುಮಾರು 1.31 ಕೋಟಿ ಜನರಿಗೆ ನೆರವು ಬೇಕಾಗಿದೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 125ಕ್ಕೂ ಹೆಚ್ಚು ದೇಶಗಳಲ್ಲಿ ಸಿರಿಯಾ ನಿರಾಶ್ರಿತರನ್ನು ಗುರುತಿಸಬಹುದು.  

ಭಾರತದಲ್ಲಿ ನಿರಾಶ್ರಿತ ನೀತಿ ಇಲ್ಲ

ಇಪ್ಪತ್ತು ವರ್ಷಗಳಿಂದ ಅಫ್ಗಾನಿಸ್ತಾನದೊಂದಿಗೆ ಭಾರತವು ಸೌಹಾರ್ದ ಸಂಬಂಧ ಹೊಂದಿತ್ತು. ಇದೀಗ ಅಲ್ಲಿ ತಾಲಿಬಾನ್‌ ನೇತೃತ್ವದ ಸರ್ಕಾರ ರಚನೆಯ ಪ್ರಯತ್ನಗಳು ನಡೆಯುತ್ತಿದ್ದು ಆ ದೇಶಕ್ಕೆ ಪಾಕಿಸ್ತಾನ ಹಾಗೂ ಚೀನಾ ಹತ್ತಿರವಾಗುತ್ತಿವೆ. 

ಬದಲಾದ ಪರಿಸ್ಥಿತಿಯಲ್ಲಿ, ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಮುಸ್ಲಿಂ ರಾಷ್ಟ್ರದಲ್ಲಿ ತಾಲಿಬಾನ್‌ ಆಡಳಿತ ಒಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಅಫ್ಗನ್ನರು ದೇಶ ತೊರೆಯಲು ಸಜ್ಜಾಗಿದ್ದಾರೆ. ಸದ್ಯಕ್ಕೆ ಅಲ್ಲಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದಷ್ಟೇ ಆದ್ಯತೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಹೇಳಿದ್ದಾರೆ. ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನಿಸಿ, ಮುಂದುವರಿಯುವ ಸೂಚನೆ ನೀಡಿದ್ದಾರೆ. ಅಫ್ಗಾನಿಸ್ತಾನದಲ್ಲಿನ ಸ್ಥಿತಿಯ ಬಗ್ಗೆ ಅಮೆರಿಕ ಹಾಗೂ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿಗಳ ಜೊತೆಯೂ ಈಗಾಗಲೇ ಚರ್ಚೆ ನಡೆಸಿದ್ದಾರೆ.

1951ರ ನಿರಾಶ್ರಿತ ಒಪ್ಪಂದ ಮತ್ತು ಶಿಷ್ಟಾಚಾರಗಳಿಗೆ ಭಾರತವು ಸಹಿ ಹಾಕದೇ ಇರುವುದರಿಂದ, ಭಾರತವು ನಿರಾಶ್ರಿತರಿಗಾಗಿನ ನೀತಿಯನ್ನಾಗಲೀ, ನಿರಾಶ್ರಿತರನ್ನು ರಕ್ಷಿಸುವ ಕಾನೂನನ್ನಾಗಲೀ ಹೊಂದಿಲ್ಲ.

ಆಶ್ರಯ ಬಯಸಿ ಬಂದವರೆಲ್ಲ ವಿದೇಶಿಯರು ಎಂದೇ ಪರಿಗಣಿಸಲಾಗುತ್ತಿದೆ. ವಿದೇಶಿಯರು, ನಿರಾಶ್ರಿತರು, ಆಶ್ರಯ ಕೋರಿ ಬಂದವರು ಹಾಗೂ ದೇಶಭ್ರಷ್ಟರಾದವರು ಎಲ್ಲರನ್ನೂ ವಿದೇಶಿಯರ ಕಾಯ್ದೆ–1946, ವಿದೇಶಿಯರ ದಾಖಲಾತಿ ಕಾಯ್ದೆ–1939, ಪಾಸ್‌ಪೋರ್ಟ್‌ ಕಾಯ್ದೆ 1920 ಹಾಗೂ ಪೌರತ್ವ ಕಾಯ್ದೆ–1955ರಲ್ಲಿ ಇರುವ ನಿಬಂಧನೆಗಳ ಅಡಿಯಲ್ಲೇ ಗುರುತಿಸಲಾಗುತ್ತದೆ.

ಸೂಕ್ತ ದಾಖಲಾತಿಗಳಿಲ್ಲದೇ ಭಾರತಕ್ಕೆ ಬಂದ ವಿದೇಶಿಯನ್ನು ಹಾಗೂ ಅವಧಿ ಮುಗಿದ ಬಳಿಕವೂ ಇಲ್ಲಿ ನೆಲೆಸಿದವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ.

‘ನಿರಾಶ್ರಿತರ ವಿಷಯವಾಗಿನ ಕಾರ್ಯತಂತ್ರದ ವಿಷಯದಲ್ಲಿ ಭಾರತದಲ್ಲಿ ಅಸ್ಪಷ್ಟತೆ ಇದೆ. ಟಿಬೆಟಿಯನ್ನರನ್ನು ಹಾಗೂ ಶ್ರೀಲಂಕಾದ ತಮಿಳು ನಿರಾಶ್ರಿತರನ್ನು ಸ್ವಾಗತಿಸಿದ ಭಾರತವು, ಮ್ಯಾನ್ಮಾರ್‌ನಲ್ಲಿ ಕಿರುಕುಳಕ್ಕೀಡಾಗಿ ಬಂದ ರೋಹಿಂಗ್ಯಾ ಸಮುದಾಯದ ಜನರ ವಿರುದ್ಧ ಹಗೆತನದ ವರ್ತನೆ ತೋರಿದೆ. ಭೌಗೋಳಿಕ ರಾಜಕೀಯವನ್ನು ಆಧರಿಸಿ ಕಾಲಕಾಲಕ್ಕೆ ಅದರ ನೀತಿ ಬದಲಾಗುತ್ತದೆ’ ಎನ್ನುತ್ತಾರೆ ತಜ್ಞರು. ಯುಎನ್‌ಎಚ್‌ಸಿಆರ್‌ಯ ಜ.2020ರ ವರದಿಯ ಪ್ರಕಾರ, ಭಾರತದಲ್ಲಿ 2.44 ಲಕ್ಷ ನಿರಾಶ್ರಿತರಿದ್ದಾರೆ. ಅವರ ಪೈಕಿ 2,03,235 ಜನರು ಶ್ರೀಲಂಕಾ ಮತ್ತು ಟಿಬೆಟ್‌ ನವರು. ಇನ್ನುಳಿದವರು ಅಫ್ಗಾನಿಸ್ತಾನ ಹಾಗೂ ಮ್ಯಾನ್ಮಾರ್‌ಗೆ ಸೇರಿದವರು.

ಆಧಾರ: ಎಎಫ್‌ಪಿ, ರಾಯಿಟರ್ಸ್, ಬಿಬಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು